ಬೆಳಗಾವಿ ಅಧಿವೇಶನ: ಬೆತ್ತಲಾಗುತ್ತಿರುವ ಬಿಜೆಪಿ; ನುಣುಚಿಕೊಳ್ಳುತ್ತಿರುವ ಕಾಂಗ್ರೆಸ್

Date:

ರಾಜ್ಯ ಬಿಜೆಪಿ ನಾಯಕರ ಒಳಜಗಳ, ಹೊಂದಾಣಿಕೆ ರಾಜಕಾರಣ ಮತ್ತು ದಿಲ್ಲಿ ನಾಯಕರ ಅವಕೃಪೆಯ ಲಾಭವನ್ನು ರಾಜ್ಯ ಕಾಂಗ್ರೆಸ್ ಪಡೆಯುತ್ತಿದೆ. ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಅಂದರೆ, ಆಳುವ-ಕೇಳುವ ಪಕ್ಷಗಳೆರಡೂ ಒಂದೇ ರೀತಿ ಇವೆ. ರಾಜ್ಯದ ಜನತೆಗೆ ದ್ರೋಹ ಬಗೆಯುತ್ತಿವೆ.

ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆಗಳಿಗೆ ವೇದಿಕೆಯಾಗಬೇಕಾದ, ಆರೋಗ್ಯಕರ ಚರ್ಚೆಗೆ ಒಳಗಾಗಿ ಪರಿಹಾರ ಕಂಡುಕೊಳ್ಳಬೇಕಾದ ಅಧಿವೇಶನ ಮೊದಲೆರಡು ದಿನಗಳಲ್ಲಿಯೇ ದಾರಿ ತಪ್ಪಿದೆ.

ಮೊದಲ ದಿನ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ ನೆಪದಲ್ಲಿ ಅಮೂಲ್ಯ ಸಮಯ ಹಾಳಾಗಿದೆ. ಎರಡನೇ ದಿನ 2 ಸಾವಿರ ರೈತರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಪ್ರತಿಭಟನೆ ಹಮ್ಮಿಕೊಂಡಿದ್ದರು. ವಿರೋಧ ಪಕ್ಷಗಳು ಅಧಿವೇಶನಕ್ಕೆ ಗೈರುಹಾಜರಾಗಿ ರೈತರೊಂದಿಗೆ- ರೈತಪರ ಎಂದು ಬಿಂಬಿಸಿಕೊಳ್ಳಲು ಬೀದಿಗೆ ಇಳಿದವು. ಅಧಿವೇಶನದಲ್ಲಿ ವಿರೋಧ ಪಕ್ಷಗಳ ಧ್ವನಿಯೇ ಇಲ್ಲದಂತಾಯಿತು. ಎರಡನೆ ದಿನದ ಕಲಾಪವೂ ಹಳ್ಳ ಹಿಡಿಯಿತು. ಆಡಳಿತ ಪಕ್ಷಕ್ಕೆ ಹಾದಿ ಸುಗಮವಾಯಿತು.

ಉತ್ತರ ಕರ್ನಾಟಕದ ಭಾಗದ ರೈತರು ಸಮಸ್ಯೆಯಲ್ಲಿ ಸಿಲುಕಿಕೊಂಡಿರುವುದು ನಿಜ. ಕಬ್ಬು, ಮೆಕ್ಕೆಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ ಸಿಕ್ಕಿಲ್ಲ. ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ದೊರಕಿಲ್ಲ. ಆಳುವ ಸರ್ಕಾರದ ಬಗ್ಗೆ ಈ ಭಾಗದ ರೈತರಲ್ಲಿ ಅಸಮಾಧಾನ ಇರುವುದು ಖರೆ. ಅದಕ್ಕೆ ರೈತರು ಬೀದಿಗಿಳಿದು ಪ್ರತಿಭಟಿಸಿದ್ದು ಸರಿಯಾಗಿಯೇ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆದರೆ, ಕಬ್ಬು ಮತ್ತು ಮೆಕ್ಕೆಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕಾದ್ದು ಕೇಂದ್ರ ಸರ್ಕಾರ. ಕೇಂದ್ರದಲ್ಲಿರುವುದು ಎನ್‌ಡಿಎ ಸರ್ಕಾರ- ಅಂದರೆ ಬಿಜೆಪಿಯ ನರೇಂದ್ರ ಮೋದಿಯವರ ಸರ್ಕಾರ. ಹಾಗೆಯೇ ರಾಜ್ಯದಲ್ಲಿ ವಿರೋಧ ಪಕ್ಷದಲ್ಲಿರುವುದು ಎನ್‌ಡಿಎ ಮೈತ್ರಿಕೂಟ- ಬಿಜೆಪಿ ಮತ್ತು ಜೆಡಿಎಸ್. ಅಂದರೆ, ರೈತರ ಬೆಳೆಗೆ ಬೆಲೆ ನಿಗದಿ ಮಾಡಬೇಕಾದ ಕೇಂದ್ರದ ಬಿಜೆಪಿ ವಿರುದ್ಧ ರಾಜ್ಯ ಬಿಜೆಪಿ ಬೀದಿಗಿಳಿದಿದೆ!

ಬೀದಿಗಿಳಿದ ಬಿಜೆಪಿ ನಾಯಕರ ಕೈಯಲ್ಲಿ ಜೋಳ, ತೊಗರಿ, ಕಬ್ಬು ಇತ್ತು. ತಲೆಗೆ ಹಳದಿ ಪೇಟ, ಕುತ್ತಿಗೆಯಲ್ಲಿ ಹಸಿರು ಶಾಲಿತ್ತು. ರೈತಪರ ಘೋಷಣೆ ಮೊಳಗುತ್ತಿತ್ತು. ರೈತ ಪರ ಯಾರು, ವಿರೋಧಿಗಳಾರು ಎಂಬುದು ನಿಜವಾದ ರೈತರಿಗೇ ದಿಗಿಲಾಗಿತ್ತು.

WhatsApp Image 2025 12 09 at 14.36.11

ಇದೇ ಸುಸಂದರ್ಭ ಎಂದು ಭಾವಿಸಿದ ಬಿಜೆಪಿಯ ಅನರ್ಹ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​ ವಿಧಾನ ಸಭೆಯಲ್ಲಿ ನಿಂತು, ‘ಈ ಸದನದಲ್ಲಿ ನಿಜವಾದ ವಿರೋಧ ಪಕ್ಷದ ನಾಯಕ ಎಂದರೆ ನಾನೇ’ ಎಂದು ಘೋಷಿಸಿದರು. ಅಷ್ಟೇ ಅಲ್ಲ, ‘ನಾನು ಅಡ್ಜಸ್ಟ್​ಮೆಂಟ್ ಗಿರಾಕಿ ಅಲ್ಲ, ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಮುಖ್ಯಮಂತ್ರಿಗಳ ಕಚೇರಿಗೂ ಹೋಗಿಲ್ಲ’ ಎಂದು ಪರೋಕ್ಷವಾಗಿ ಬಿಜೆಪಿಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ರನ್ನು ಹೀಯಾಳಿಸಿದರು. ಅದಕ್ಕೆ ಪೂರಕವಾಗಿ ಸೋಮವಾರವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುವರ್ಣಸೌಧದ ಪಡಸಾಲೆಯಲ್ಲಿ, ಎಲ್ಲರೆದುರು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಹೆಗಲ ಮೇಲೆ ಕೈ ಹಾಕಿ, ‘ಯಾಕಯ್ಯ ಸಣ್ಣಗಾಗಿದ್ದೀಯಾ’ ಎಂದು ಕುಶಲೋಪರಿ ವಿಚಾರಿಸಿದ್ದು- ಆ ಚಿತ್ರ ನಾಡಿನಾದ್ಯಂತ ವೈರಲ್ ಆಗಿದ್ದು- ಹೊಂದಾಣಿಕೆಗೆ ಸಾಕ್ಷಿ ಒದಗಿಸಿತ್ತು.

ಇದೆಲ್ಲದರ ಒಟ್ಟು ಮೊತ್ತವೆಂಬಂತೆ, ಬಿಜೆಪಿಯ ಅನರ್ಹ ಶಾಸಕನಿಂದಲೇ ಬಿಜೆಪಿಯ ವಿರೋಧ ಪಕ್ಷದ ನಾಯಕನ ಮಾನ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಹರಾಜಾಗಿತ್ತು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ್ದೇ ಪ್ರಮುಖ ಪಾತ್ರ. ಸರ್ಕಾರವನ್ನು ಅಡಿಗಡಿಗೂ ಪ್ರಶ್ನಿಸುವುದು, ವಿಮರ್ಶಿಸುವುದು, ಸಮಸ್ಯೆಗಳನ್ನು ಎತ್ತಿ ತೋರಿಸಿ ಎಚ್ಚರಿಸುವುದು, ಕಾವಲುಗಾರನಾಗಿ ಕಾರ್ಯನಿರ್ವಹಿಸುವುದು ವಿರೋಧ ಪಕ್ಷದ ಜವಾಬ್ದಾರಿ. ಅದರಲ್ಲೂ ವಿರೋಧ ಪಕ್ಷದ ನಾಯಕನೆಂದರೆ, ಡಿಫ್ಯಾಕ್ಟೋ ಸಿಎಂ ಎಂದೇ ಭಾವಿಸಲಾಗುತ್ತದೆ. ಅಂತಹ ವಿರೋಧ ಪಕ್ಷದ ನಾಯಕನೇ ಅಧಿವೇಶನಕ್ಕೆ ಗೈರಾಗುವುದು, ಅದನ್ನು ಬಿಜೆಪಿಯ ಅನರ್ಹ ಶಾಸಕ ಹೈಜಾಕ್ ಮಾಡಿ ಗೇಲಿ ಮಾಡುವುದು- ಇದೆಲ್ಲವೂ ಬಿಜೆಪಿಯನ್ನು ಬೀದಿಯಲ್ಲಿ ಬೆತ್ತಲು ಮಾಡಿತ್ತು.

ಯತ್ನಾಳರ ಈ ಕಿಡಿಗೇಡಿ ಕೃತ್ಯಕ್ಕೆ ಕೇಂದ್ರ ಬಿಜೆಪಿ ನಾಯಕರು ಕುಮ್ಮಕ್ಕು ನೀಡಿದ್ದರೂ ಆಶ್ಚರ್ಯವಿಲ್ಲ. ಏಕೆಂದರೆ, 2023ರ ಮೇನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆದಾಗ, ಬಿಜೆಪಿ ನೆಲಕಚ್ಚಿದಾಗ ಬಿಜೆಪಿ ಹೈಕಮಾಂಡ್ ನಾಯಕರು ಕರ್ನಾಟಕವೆಂದರೆ ಉರಿದು ಬೀಳುತ್ತಿದ್ದರು.   

ರಾಜ್ಯ ವಿಧಾನಸಭಾ ಚುನಾವಣೆ ಮುಗಿದು, ಫಲಿತಾಂಶ ಬಂದು 60 ದಿನಗಳಾದರೂ, ಬಜೆಟ್ ಅಧಿವೇಶನ ಶುರುವಾಗಿ ಒಂದು ವಾರವಾದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದರೂ- ವಿರೋಧ ಪಕ್ಷದ ನಾಯಕನ ಆಯ್ಕೆ ಆಗಿರಲಿಲ್ಲ. ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಮೊದಲ ಬಾರಿಗೆ- ಮೇಲ್ಮನೆ ಮತ್ತು ಕೆಳಮನೆಯಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೆ ಸದನ ಸೊರಗಿದ್ದೂ ಇದೆ. ಬಿಜೆಪಿಯ ಈ ನಡೆ ಸದನದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ದಾಖಲಾಗಿ, ಭವ್ಯ ಪರಂಪರೆಗೆ ಕಳಂಕ ತಂದಿದ್ದೂ ಇದೆ.

ರಾಜ್ಯ ಬಿಜೆಪಿ ನಾಯಕರಿಗೆ ತಮಗೆ ಬೇಕಾದ ವಿಪಕ್ಷ ನಾಯಕನ ಆಯ್ಕೆ ಮಾಡಿಕೊಳ್ಳುವ ದಮ್ಮೂ ಇಲ್ಲ, ಆ ಬಗ್ಗೆ ಸಮರ್ಥಿಸಿಕೊಂಡು ಮಾತನಾಡುವ ತಾಕತ್ತೂ ಇಲ್ಲವಾಗಿತ್ತು. ಏಕೆಂದರೆ, ಅವರಾರೂ ಶುದ್ಧಹಸ್ತರಲ್ಲ, ಪ್ರಾಮಾಣಿಕರಲ್ಲ, ದಕ್ಷ ಆಡಳಿತಗಾರರಂತೂ ಅಲ್ಲವೇ ಅಲ್ಲ ಎನ್ನುವುದನ್ನು ವಿಧಾನಸಭಾ ಚುನಾವಣೆ ಸಾಬೀತು ಮಾಡಿತ್ತು. ಆ ಸೋಲೇ ಅವರ ಬಾಯಿ ಕಟ್ಟಿಹಾಕಿತ್ತು. ಹೈಕಮಾಂಡಿನ ಮುಂದೆ ಎದೆ ಸೆಟೆಸಿ ನಿಲ್ಲಲಾಗದಂತಹ ಸ್ಥಿತಿಯನ್ನು ಸೃಷ್ಟಿಸಿತ್ತು.

ಈ ಬೆಳವಣಿಗೆಗೆ ವಿರುದ್ಧವಾಗಿ, ಪ್ರತಿಯೊಂದು ಆಯ್ಕೆ, ನೇಮಕದ ಬಗ್ಗೆ ಅಂತಿಮ ನಿರ್ಧಾರ ತಳೆಯುವ ಬಿಜೆಪಿ ಹೈಕಮಾಂಡಿಗೆ, ರಾಜ್ಯ ಬಿಜೆಪಿಯ ಸುದ್ದಿಯೇ ಬೇಡವಾಗಿತ್ತು. ಕರ್ನಾಟಕದ ಸಹವಾಸ ಸಾಕು ಎನಿಸಿಬಿಟ್ಟಿತ್ತು. ದಿಲ್ಲಿ ಮತ್ತು ಇಲ್ಲಿನ ನಾಯಕರ ನಡುವಿನ ಸಂಬಂಧ ಹಳಸಿಕೊಂಡಿತ್ತು. ಜೊತೆಗೆ ಯಾವ ರಾಜ್ಯವೇ ಆಗಲಿ, ಚುನಾವಣೆಯ ಸೋಲಿನ ನಂತರ ಹೈಕಮಾಂಡ್, ಇನ್ನೂ ಹೆಚ್ಚಿನ ಆಸ್ಥೆ ವಹಿಸಿ, ಅಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸಿದ ಉದಾಹರಣೆಗಳಿವೆ. ಆದರೆ ಕರ್ನಾಟಕದ ಬಗೆಗಿನ ಬಿಜೆಪಿ ಹೈಕಮಾಂಡ್‌ ನಾಯಕರ ನಿರ್ಲಕ್ಷ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು.

ಪ್ರಧಾನಿ ಮೋದಿಯವರ ಮರೆಯಲ್ಲಿ ಹಲವು ರಾಜ್ಯಗಳನ್ನು ಗೆದ್ದು ಸಾಮ್ರಾಜ್ಯ ವಿಸ್ತರಿಸಿಕೊಳ್ಳುತ್ತಿದ್ದ ಭಾರತೀಯ ಜನತಾ ಪಕ್ಷಕ್ಕೆ ಕರ್ನಾಟಕದಲ್ಲಾದ ಸೋಲು ಅರಗಿಸಿಕೊಳ್ಳಲಾಗದ ಆಘಾತ ನೀಡಿತ್ತು. ಅದರ ಫಲವಾಗಿ ದಿಲ್ಲಿಯ ನಾಯಕರು ಕರ್ನಾಟಕಕ್ಕೆ ಬರದಂತೆ, ಕರ್ನಾಟಕದ ನಾಯಕರು ದಿಲ್ಲಿಗೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಕಸ್ಮಾತ್ ಹೋದರೂ, ಅದು ಕಾಟಾಚಾರದ ಭೇಟಿಯಾಗಿತ್ತು. ಮಾಧ್ಯಮಗಳ ಫೋಟೋಗಷ್ಟೇ ಸೀಮಿತವಾಗಿತ್ತು. ಅದು ಈ ಕ್ಷಣಕ್ಕೂ ಬಿಜೆಪಿಯಲ್ಲಿ ಚಾಲ್ತಿಯಲ್ಲಿದೆ.

ಕಳೆದ ವಾರ ರಾಜ್ಯ ಆಡಳಿತ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಬಿರುಸಿನ ರಾಜಕೀಯ ಚಟುವಟಿಕೆಗಳಿಗೆ ಕಾರಣವಾಗಿತ್ತು. ಆ ಸಂದರ್ಭದಲ್ಲಿ ದಿಲ್ಲಿಯ ಬಿಜೆಪಿ ಹೈಕಮಾಂಡ್ ಜಾಗೃತವಾಗಿತ್ತು. ಕಿತ್ತಾಟದಲ್ಲಿ ಅಕಸ್ಮಾತ್ ಕಾಂಗ್ರೆಸ್ ಅಧಿಕಾರ ಕಳೆದುಕೊಂಡರೆ, ಅಧಿಕಾರಕ್ಕೇರುವ ಕನಸು ಕಂಡಿತ್ತು. ಕುದುರೆ ವ್ಯಾಪಾರದ ಲೆಕ್ಕಾಚಾರಕ್ಕಿಳಿದಿತ್ತು. ಅಂತಹ ಸಂದರ್ಭದಲ್ಲಿ, ಅಕ್ಟೋಬರ್ 27ರಂದು ಬಿಜೆಪಿಯ ನಂಬರ್ ಟು ನಾಯಕ ಎಂದೇ ಗುರುತಿಸಿಕೊಳ್ಳುವ, ಕೇಂದ್ರದ ಗೃಹ ಸಚಿವರೂ ಆದ ಅಮಿತ್ ಶಾ ಸಂಪರ್ಕಿಸಿದ್ದು ರಾಜ್ಯ ಬಿಜೆಪಿ ನಾಯಕರನ್ನಲ್ಲ; ಬದಲಿಗೆ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರನ್ನು.

WhatsApp Image 2025 12 09 at 22.40.15

ಅಂದರೆ, ರಾಜ್ಯ ಬಿಜೆಪಿ ನಾಯಕರ ಬಗ್ಗೆ ಹೈಕಮಾಂಡಿನ ನಾಯಕರಿಗೆ ನಂಬಿಕೆ ಇಲ್ಲ. ಇವರ ಗುಂಪುಗಾರಿಕೆ, ಬಣ ಬಡಿದಾಟ, ಹೊಂದಾಣಿಕೆ ಕಂಡು ರೋಸಿ ಹೋಗಿರುವ ಬಿಜೆಪಿ ಹೈಕಮಾಂಡ್, ಈಗ ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರನ್ನು ಅವಲಂಬಿಸಿದೆ.

ಇಂತಹ ಸ್ಥಿತಿಯಲ್ಲಿ ರಾಜ್ಯ ಬಿಜೆಪಿ ನಾಯಕರು ಬೆಳಗಾವಿಯ ಬೀದಿಯಲ್ಲಿ ನಿಂತು ಮಹದಾಯಿ, ತುಂಗಭದ್ರಾ, ಕೃಷ್ಣ ಜಲ ಯೋಜನೆಗಳ ಸೂಕ್ತ ಜಾರಿಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕೂಗುತ್ತಿದ್ದಾರೆ.

ಅದು ಮತ್ತೆ ಕೇಂದ್ರ ಸರ್ಕಾರದತ್ತಲೇ ಬೊಟ್ಟು ಮಾಡುತ್ತದೆ. ಮಹದಾಯಿ ಯೋಜನೆಗೆ ಇಷ್ಟು ವರ್ಷಗಳ ಕಾಲ ಅಡ್ಡಗಾಲು ಹಾಕಿರುವುದೇ ಕೇಂದ್ರ ಸರ್ಕಾರ. ಮಹದಾಯಿ ಯೋಜನೆಯಿಂದ ಅನುಕೂಲ ಆಗಬೇಕಿರುವುದು ಧಾರವಾಡ, ಬೆಳಗಾವಿ ಮತ್ತು ಗದಗ ಜಿಲ್ಲೆಗಳ ಜನರಿಗೆ. ಈ ಮೂರೂ ಜಿಲ್ಲೆಗಳಿಂದ ಗೆದ್ದು ಸಂಸದರಾದವರು ಬಿಜೆಪಿಯವರೇ. ಅದರಲ್ಲೂ ಧಾರವಾಡದಿಂದ ಗೆದ್ದಿರುವ ಪ್ರಲ್ಹಾದ್ ಜೋಷಿಯವರು ಕೇಂದ್ರ ಸಚಿವರೂ ಆಗಿದ್ದಾರೆ. ಆದರೆ ಮಹದಾಯಿಗೆ ಪರಿಸರ ಇಲಾಖೆಯ ಅನುಮತಿ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ.

ಹಾಗೆಯೇ ಭದ್ರಾ ಮೇಲ್ಡಂಡೆ ಯೋಜನೆಗೆ ಕೇಂದ್ರ ಸರ್ಕಾರ 2023-24ರ ಬಜೆಟ್‌ನಲ್ಲಿ 5,300 ಕೋಟಿ ನೆರವು ನೀಡುವುದಾಗಿ ಘೋಷಿಸಿತ್ತು. ಆದರೆ ಅದಾಗಿ ಎರಡು ವರ್ಷಗಳೇ ಕಳೆಯಿತು. ನೆರವೂ ಬರಲಿಲ್ಲ, ರೈತರ ಭೂಮಿಗೆ ನೀರೂ ಹರಿಯಲಿಲ್ಲ.

ಇದನ್ನು ಓದಿದ್ದೀರಾ?: ಸರ್ಕಾರಗಳು ಬದಲಾದರೂ ಉತ್ತರ ಕರ್ನಾಟಕದ ಜನರ ಬದುಕು ಬದಲಾಗಲಿಲ್ಲವೇಕೆ?

ಕಬ್ಬು, ಮೆಕ್ಕೆಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ ನೀಡದಿರುವುದು; ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಬಿಡುಗಡೆ ಮಾಡದಿರುವುದು; ಮಹದಾಯಿ ಮತ್ತು ಭದ್ರಾ ಮೇಲ್ಡಂಡೆ ಯೋಜನೆಗಳಿಗೆ ಸಹಕರಿಸದಿರುವುದು, ರಾಜ್ಯದ ತೆರಿಗೆ ಪಾಲನ್ನು ಸರಿಯಾಗಿ ಪಾವತಿಸದಿರುವುದು- ಎಲ್ಲವೂ ಕೇಂದ್ರ ಬಿಜೆಪಿಯ ತಾರತಮ್ಯ ನೀತಿಯಿಂದಾಗಿ ಆಗುತ್ತಿರುವ ಅವಘಡಗಳು. ವಿಪರ್ಯಾಸವೆಂದರೆ, ಈ ಕಾರಣಗಳನ್ನೇ ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ಪ್ರತಿಭಟನೆಗಿಳಿದಿದೆ. ಜನರ ಮುಂದೆ ಬೆತ್ತಲಾಗುತ್ತಿದೆ.

ಹಾಗೆಯೇ ರಾಜ್ಯ ಬಿಜೆಪಿ ನಾಯಕರ ಒಳಜಗಳ, ಹೊಂದಾಣಿಕೆ ರಾಜಕಾರಣ ಮತ್ತು ದಿಲ್ಲಿ ನಾಯಕರ ಅವಕೃಪೆಯ ಲಾಭವನ್ನು ರಾಜ್ಯ ಕಾಂಗ್ರೆಸ್ ಪಡೆಯುತ್ತಿದೆ. ರಾಜ್ಯ ಸರ್ಕಾರದ ಜವಾಬ್ದಾರಿಯನ್ನು ಬಿಜೆಪಿ ಮೇಲೆ ಹೊತ್ತುಹಾಕುತ್ತ ನುಣುಚಿಕೊಳ್ಳುತ್ತಿದೆ. ಅಂದರೆ, ಆಳುವ-ಕೇಳುವ ಪಕ್ಷಗಳೆರಡೂ ಒಂದೇ ರೀತಿ ಇವೆ. ರಾಜ್ಯದ ಜನತೆಗೆ ದ್ರೋಹ ಬಗೆಯುತ್ತಿವೆ. ಇದು ನಾಡಿನ ಜನತೆಗೆ ಅರ್ಥವಾಗಬೇಕಿದೆ.      

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...