ಈ ವರ್ಷದ ಕರ್ನಾಟಕ ಚಳಿಗಾಲದ ಅಧಿವೇಶನವು ಡಿಸೆಂಬರ್ 8ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಅರಂಭವಾಗಲಿದೆ. ಗುರುವಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಅಧಿವೇಶನವನ್ನು 10 ದಿನಗಳ ಕಾಲ ನಡೆಸಲು ನಿರ್ಧರಿಸಲಾಗಿದೆ. ಅಧಿವೇಶನದಲ್ಲಿ ಸುಮಾರು 30 ಮಸೂದೆಗಳು ಚರ್ಚೆಗೆ ಬರಲಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಕಳೆದ ಮುಂಗಾರು ಅಧಿವೇಶನದಲ್ಲಿ ಬರೋಬ್ಬರಿ 39 ಮಸೂದೆಗಳನ್ನು ಸರ್ಕಾರ ಮಂಡಿಸಿ, ಅಂಗೀಕರಿಸಿತ್ತು. ಅತೀ ಹೆಚ್ಚು ಮಸೂದೆಗಳು ಮಂಡನೆಯಾಗಿ, ಅನುಮೋದನೆಗೊಂಡ ಅಧಿವೇಶನವೆಂದು ಕರೆಸಿಕೊಂಡಿತ್ತು. ಈ ಬಾರಿಯ ಅಧಿವೇಶನದಲ್ಲಿ 30 ಮಸೂದೆಗಳನ್ನು ಚರ್ಚೆಗೆ ತರಲು ಸರ್ಕಾರ ಸಿದ್ದತೆ ನಡೆಸಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಮಾಹಿತಿ ಪ್ರಕಾರ, ಅಧಿವೇಶನದಲ್ಲಿ ಸುಮಾರು 33 ವಿವಿಧ ಮಸೂದೆಗಳನ್ನು ಮಂಡಿಸುವ ಸಾಧ್ಯತೆ ಇದೆ. ಸುಮಾರು 16 ಮಸೂದೆಗಳು ಮಂಡಿಸಲು ಸಚಿವ ಸಂಪುಟವು ಅನುಮೋದಿಸಿದೆ. 12 ಮಸೂದೆಗಳ ಕರಡು ಸಿದ್ಧವಾಗಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಸಮ್ಮತಿ ಪಡೆಯುವ ಸಾಧ್ಯತೆಗಳಿವೆ. ಉಳಿದಂತೆ, ಕಳೆದ ಅಧಿವೇಶನದಲ್ಲಿ 2 ಮಸೂದೆಗಳು ಜಂಟಿ ಸದನ ಸಮಿತಿ ಪರಿಶೀಲನೆಗೆ ಕಳುಹಿಸಲಾಗಿದ್ದು, ಆ ಮಸೂದೆಗಳೂ ಈಬಾರಿಯ ಕಲಾಪದಲ್ಲಿ ಮತ್ತೆ ಮಂಡನೆಯಾಗುವ ನಿರೀಕ್ಷೆ ಇದೆ.
ಸರ್ಕಾರ ಸಿದ್ದಪಡಿಸಿ, ಪಟ್ಟಿ ಮಾಡಿರುವ ಮಸೂದೆಗಳು
- ಗ್ರೇಟರ್ ಬೆಂಗಳೂರು (2ನೇ ತಿದ್ದುಪಡಿ) ಮಸೂದೆ
- ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ಮಸೂದೆ-2025
- ಕರ್ನಾಟಕ ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ
- ಕರ್ನಾಟಕ ದಿನಗೂಲಿ ಕಾರ್ಮಿಕ ಕಲ್ಯಾಣ (ತಿದ್ದುಪಡಿ) ಮಸೂದೆ
- ಕರ್ನಾಟಕ ಬಾಡಿಗೆ (ತಿದ್ದುಪಡಿ) ಮಸೂದೆ-2025
- ಔಷಧಗಳು ಮತ್ತು ಸೌಂದರ್ಯವರ್ದಕಗಳು(ಕರ್ನಾಟಕ ತಿದ್ದುಪಡಿ) ಮಸೂದೆ
- ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ (ತಿದ್ದುಪಡಿ) ವಿಧೇಯಕ
- ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ಮಸೂದೆ
- ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ
- ಕರ್ನಾಟಕ ಭೂ ಸುಧಾರಣೆ (ಎರಡನೇ ತಿದ್ದುಪಡಿ) ಮಸೂದೆ
- ಕರ್ನಾಟಕ ಸಂಸ್ಥೆಗಳಲ್ಲಿ ಖಾಸಗಿ ಹೊರಗುತ್ತಿಗೆ ನಿಷೇಧ ಮಸೂದೆ
- ಕರ್ನಾಟಕ ಪರಿಶಿಷ್ಟ ಜಾತಿ (ಮೀಸಲಾತಿ ವರ್ಗೀಕರಣ) ಮಸೂದೆ
- ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ
- ದ್ವೇಷ ಅಪರಾಧಗಳು ಮತ್ತು ದ್ವೇಷ (ಹೋರಾಟ, ತಡೆಯುವಿಕೆ) ವಿಧೇಯಕ
- ಕರ್ನಾಟಕ ಕುಟುಂಬ (ಪ್ರವೇಶ ಮತ್ತು ನಿರ್ವಹಣೆ) ಮಸೂದೆ
- ಕರ್ನಾಟಕ ಕಟ್ಟಡ ಉಲ್ಲಂಘನೆ ನಿಯಂತ್ರಣ ಮಸೂದೆ
- ಕರ್ನಾಟಕ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ (ತಡೆ, ನಿಷೇಧ ಮತ್ತು ಪರಿಹಾರ) ಮಸೂದೆ
- ಕರ್ನಾಟಕ ತಪ್ಪು ಮಾಹಿತಿ ನಿಯಂತ್ರಣ ಮಸೂದೆ
- ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ಮಸೂದೆ
- ಕರ್ನಾಟಕ ಅಪಾರ್ಟ್ಮೆಂಟ್ ಮಾಲಿಕತ್ವ (ನಿಯಂತ್ರಣ) ಮಸೂದೆ
- ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ (ತಿದ್ದುಪಡಿ) ವಿಧೇಯಕ
- ಕರ್ನಾಟಕ ರಾಜ್ಯ ರಸ್ತೆ ಸುರಕ್ಷತೆ ಪ್ರಾಧಿಕಾರ (ತಿದ್ದುಪಡಿ) ಮಸೂದೆ
- ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿಯ ನಿರ್ವಹಣೆ) ವಿಧೇಯಕ
- ನಾಡಪ್ರಭು ಕೆಂಪೇಗೌಡ ಪಾರಂಪರಿಕ ಪ್ರದೇಶಾಭಿವೃದ್ಧಿ (ತಿದ್ದುಪಡಿ) ಮಸೂದೆ
- ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಇತರ ನಿಗದಿತ ನಿಯಮಗಳ (ತಿದ್ದುಪಡಿ) ಮಸೂದೆ
- ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರ ಅಭಿವೃದ್ಧಿ (ತಿದ್ದುಪಡಿ) ಮಸೂದೆ
- ಬಯಲು ಸೀಮೆ ಮಂಡಳಿ ಮಸೂದೆ
- ಮಲೆನಾಡು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಮಸೂದೆ
- ಕರ್ನಾಟಕ ಜಿಲ್ಲಾ ನ್ಯಾಯಾಂಗ ಸುಧಾರಣೆ ಮಸೂದೆ
- ಚಂದ್ರಗುತ್ತಿ ಶ್ರೀ ರೇಣುಕಾಂಬ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಸೂದೆ
- ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ (ಎರಡನೇ ತಿದ್ದಪಡಿ) ಮಸೂದೆ
- ಮಲೈ ಮಾದೇಶ್ವರ ಪ್ರಾಧಿಕಾರ ಮಸೂದೆ




