ಚುನಾವಣಾ ಹೊಸ್ತಿಲಿನಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ಪ್ರಕ್ರಿಯೆ ನಡೆಯುತ್ತಿದೆ. ಸುಮಾರು 91.46 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಹೊರಹಾಕಲಾಗಿದೆ ಎಂದು ವರದಿಗಳು ಹೇಳುತ್ತಿವೆ. ಅಂತಿಮ ಪಟ್ಟಿಯಲ್ಲಿ ಒಬ್ಬನೇ ಒಬ್ಬ ನಾಗರಿಕರನ್ನು ಮತಪಟ್ಟಿಯಿಂದ ಹೊರಹಾಕಿದರೆ, ಚುನಾವಣಾ ಆಯೋಗದ ಕಚೇರಿಗೆ ಘೇರಾವ್ ಹಾಕುವುದಾಗಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ವಾದ-ವಿವಾದ, ಚರ್ಚೆಗಳು ನಡೆಯುತ್ತಿರುವ ನಡುವೆಯೇ ಚುನಾವಣಾ ಕಣವು ಸದ್ದು ಮಾಡುತ್ತಿದೆ. ಆಡಳಿತಾರೂಢ ಟಿಎಂಸಿ, ಪ್ರಮುಖ ವಿಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್-ಎಡಪಕ್ಷಗಳ ಮೈತ್ರಿಕೂಟಗಳು ಚುನಾವಣಾ ಸಿದ್ದತೆಯಲ್ಲಿ ತೊಡಗಿವೆ. ತಂತ್ರಗಳನ್ನು ಹೆಣೆಯುತ್ತಿವೆ.
ಬಂಗಾಳದಲ್ಲಿ 15 ವರ್ಷಗಳಿಂದ ಟಿಎಂಸಿ ಆಡಳಿತವಿದೆ. ಮೂರು ಸರ್ಕಾರಗಳನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುನ್ನಡೆಸುತ್ತಿದ್ದಾರೆ. ಮಮತಾ ಆಡಳಿತವನ್ನು ಕೊನೆಗೊಳಿಸಿ, ಅಧಿಕಾರ ಕಸಿದುಕೊಳ್ಳಲು ಬಿಜೆಪಿ ಶತಪ್ರಯತ್ನ ನಡೆಸುತ್ತಿದೆ. ನಾನಾ ತಂತ್ರಗಳನ್ನು ಹೆಣೆಯುತ್ತಿದೆ. 2021ರ ಬಂಗಾಳ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಮಮತಾ ಅವರ ಬಲಗೈ ಭಂಟನಂತಿದ್ದ ಸುವೇಂದ್ರ ಅಧಿಕಾರಿಯನ್ನು ಬಿಜೆಪಿ ಸೆಳೆದುಕೊಂಡಿತು. ಅವರ ಮೂಲಕ ಬಂಗಾಳವನ್ನು ಗೆಲ್ಲಲು ಯತ್ನಿಸಿತ್ತು. ಆದರೂ, ಅಧಿಕಾರ ಪಡೆಯಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಈ ಬಾರಿಯ ಚುನಾವಣೆಯಲ್ಲಾದರೂ ಬಂಗಾಳಿಗರನ್ನು ಗೆಲ್ಲಲೇಬೇಕೆಂಬ ಧಾವಂತಕ್ಕೆ ಬಿಜೆಪಿ ಬಿದ್ದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಖುದ್ದು ಬಂಗಾಳ ಚುನಾವಣಾ ಮೈದಾನಕ್ಕೆ ಇಳಿದಿದ್ದಾರೆ.
ಮಮತಾ ಸರ್ಕಾರವನ್ನು ಮಣಿಸಲು ಬಿಜೆಪಿ ‘ಮಿಷನ್ ಬೆಂಗಾಲ್’ ಅಡಿಯಲ್ಲಿ ತಂತ್ರ ಹೆಣೆಯುತ್ತಿದೆ. ಅಮಿತ್ ಶಾ ಸುಮಾರು 10 ರೀತಿಯ ತಂತ್ರಗಳನ್ನು ಎಣೆದಿದ್ದಾರೆ. ತಂತ್ರಗಾರಿಕೆಯಲ್ಲಿ ಆರ್‌ಎಸ್‌ಎಸ್ ನಾಯಕರ ನೆರವನ್ನೂ ಅಮಿತ್ ಶಾ ಪಡೆದುಕೊಳ್ಳುತ್ತಿದ್ದಾರೆ. ಪಕ್ಷವು ಬಂಗಾಳದಲ್ಲಿ ಆಂತರಿಕ ಜಗಳ, ಬಂಡಾಯ, ಗುಂಪುಗಾರಿಕೆ, ನಾಯಕತ್ವ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟನ್ನು ಶಮನ ಮಾಡಲು ‘ಸಾಂಸ್ಥಿಕ ಸಮೀಕ್ಷೆ’ಗಳನ್ನು ನಡೆಸಲು ಅಮಿತ್ ಶಾ ಮುಂದಾಗಿದ್ದಾರೆ. ನಾಯಕರ ನಡುವೆ ಸಮನ್ವಯ ತರಲು ಯತ್ನಿಸುತ್ತಿದ್ದಾರೆ. ಜೊತೆಗೆ, ತಮ್ಮ ಪಕ್ಷದ ಪ್ರಾಬಲ್ಯ ದುರ್ಬಲವಾಗಿರುವ ಕ್ಷೇತ್ರ ಮತ್ತು ದೌರ್ಬಲ್ಯಗಳನ್ನು ಗುರುತಿಸಲು ಬಿಜೆಪಿಯ ವಿಭಿನ್ನ ಹಂತಗಳ ನಾಯಕರನ್ನು ಭೇಟಿ ಮಾಡಿ, ಪ್ರಕ್ರಿಯೆಗಳನ್ನು ಪಡೆಯುತ್ತಿದ್ದಾರೆ. ಪಕ್ಷವು ಸಾಮೂಹಿಕವಾಗಿ ಚುನಾವಣಾ ಕಣದಲ್ಲಿ ಮುನ್ನಡೆಯುವಂತೆ ಮಾಡುವುದು ಬಿಜೆಪಿ ಹೈಕಮಾಂಡ್‌ನ ತಕ್ಷಣದ ಆಧ್ಯತೆಯಾಗಿದೆ.
ಇದೇ ಸಮಯದಲ್ಲಿ, ಹಿಂದುತ್ವ ಪ್ರತಿಪಾದನೆಯನ್ನೂ ಬಿಜೆಪಿ ಮುನ್ನೆಲೆಗೆ ತಂದಿದೆ. ಹಿಂದು ಗುರುತು, ಮುಸ್ಲಿಂ ದ್ವೇಷವನ್ನು ಪ್ರಚಾರದ ಪ್ರಮುಖ ಅಸ್ತ್ರವಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ. ಬಾಂಗ್ಲಾ ಗಡಿಯಲ್ಲಿರುವ ಬಂಗಾಳದಲ್ಲಿ ‘ಮುಸ್ಲಿಂ ಒಳನುಸುಳುಕೋರ’ರ ವಿರುದ್ಧ ಹೋರಾಟ ಎಂಬ ನಿರೂಪಣೆಯಲ್ಲಿ ಗಟ್ಟಿಯಾಗಿ ಪ್ರತಿಪಾದಿಸುತ್ತಿದೆ. ಬಾಂಗ್ಲಾ ಒಳನುಸುಳುಕೋರರನ್ನು ಹೊರಹಾಕಿ, ಬಂಗಾಳವನ್ನು ಒಳನುಸುಳುವಿಕೆ ಮುಕ್ತಗೊಳಿಸುವ ಗುರಿ ಹೊಂದಿರುವುದಾಗಿ ಪ್ರಚಾರ ಮಾಡುತ್ತಿದೆ. ಮಮತಾ ಸರ್ಕಾರವನ್ನು ಹೀಗಳೆಯುತ್ತಿದೆ.
ಮಮತಾ ಸರ್ಕಾರದ ವಿರುದ್ಧ ಭ್ರಷ್ಟಾಚಾರ, ಮಹಿಳಾ ಅಸುರಕ್ಷತೆಯ ದಾಳ ಉರುಳಿಸುತ್ತಿದೆ. ಬಂಗಾಳದ ಆಕ್ರೋಶಕ್ಕೆ ಕಾರಣವಾಗಿದ್ದ ಕೋಲ್ಕತ್ತಾದಲ್ಲಿ ನಡೆದ ಓರ್ವ ವೈದ್ಯೆ ಮತ್ತು ಮತ್ತೋರ್ವ ಕಾನೂನು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಬಳಸಿಕೊಂಡು, ಮಮತಾ ಸರ್ಕಾರವು ಹೆಣ್ಣುಮಕ್ಕಳಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ ಎಂಬ ಭಾವನೆ ಬಿತ್ತುವ ಪ್ರಯತ್ನದಲ್ಲಿದೆ. ಅಂತೆಯೇ, ಕೇಂದ್ರ ಸರ್ಕಾರದ ಅಣತಿಯಲ್ಲಿ ಕೆಲಸ ಮಾಡುತ್ತಿವೆ ಎಂಬ ಕುಖ್ಯಾತಿ ಪಡೆದಿರುವ ಇಡಿ ಮತ್ತು ಸಿಬಿಐನಿಂದ ಬಂಧನಕ್ಕೊಳಗಾಗಿರುವ ಟಿಎಂಸಿ ಸಚಿವರು, ಶಾಸಕರು, ಸಂಸದರ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಮುನ್ನೆಲೆ ತರುತ್ತಿದೆ.
ಇದೆಲ್ಲದರ ನಡುವೆ, ‘ನವ ಬಂಗಾಳ’ ನಿರ್ಮಾಣದ ಭರವಸೆಯೊಂದಿಗೆ ಭ್ರಷ್ಟಾಚಾರ ಮುಕ್ತ, ಶಾಂತಿಯುತ, ಅಭಿವೃದ್ಧಿ ಹೊಂದಿದ ಪಶ್ಚಿಮ ಬಂಗಾಳವನ್ನು ನಿರ್ಮಿಸುತ್ತೇವೆಂದು ಹೇಳಿಕೊಳ್ಳುತ್ತಿದೆ. ತಾವು ಬಂಗಾಳಿ ಸಂಸ್ಕೃತಿ ಪ್ರತಿಪಾದಕರೆಂದು ತೋರಿಸಿಕೊಳ್ಳಲು ರವೀಂದ್ರನಾಥ ಟ್ಯಾಗೋರ್, ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಹಾಗೂ ಇತರ ಬಂಗಾಳಿ ಐಕಾನ್‌ಗಳ ಹೆಸರನ್ನು ಪಠಿಸುತ್ತಿದೆ. ‘ವಂದೇ ಮಾತರಂ’ ಕುರಿತ ಚರ್ಚೆಯನ್ನೂ ಮುನ್ನೆಲೆಗೆ ತಂದಿದೆ.
ಏತನ್ಮಧ್ಯೆ, ಮುಸ್ಲಿಂ ಮತಗಳನ್ನು ವಿಭಜಿಸಲು ಹುಮಾಯೂನ್ ಕಬೀರ್ ಅವರನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ. ಬಿಜೆಪಿ ತೊರೆದಿರುವ ಕಬೀರ್, ಹೊಸ ಪಕ್ಷ ಕಟ್ಟುವುದಾಗಿ ಘೋಷಿಸಿದ್ದಾರೆ. ಅವರ ಹೊಸ ಪಕ್ಷವು ಮುಸ್ಲಿಂ ಪ್ರಾಬಲ್ಯವಿರುವ ಸುಮಾರು 31 ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳನ್ನು ಚದುರಿಸುತ್ತದೆ. ಮುಸ್ಲಿಂ ಮತಗಳು ಹಿಡಿಯಾಗಿ ಟಿಎಂಸಿಗೆ ಹೋಗುವುದನ್ನು ತಡೆಯುತ್ತದೆ. ಪರಿಣಾಮ, ಆ ಕ್ಷೇತ್ರಗಳಲ್ಲಿ ಟಿಎಂಸಿ ಗೆಲುವಿಗೆ ತೊಡಕಾಗುತ್ತದೆ ಎಂದು ಬಿಜೆಪಿ ಭಾವಿಸಿದೆ. ಅದಕ್ಕಾಗಿ, ಟಿಎಂಸಿ ಮುಸ್ಲಿಂ ಮತಗಳನ್ನು ಪಡೆಯುತ್ತಿದೆ. ಆದರೆ, ಮುಸ್ಲಿಮರ ಮೇಲೆ ಟಿಎಂಸಿಗೆ ಕಾಳಜಿ ಇಲ್ಲವೆಂಬ ನಿರೂಪಣೆಯನ್ನು ಕಬೀರ್ ಬಿತ್ತುವ ಪ್ರಯತ್ನದಲ್ಲಿದ್ದಾರೆ.
ಆದಾಗ್ಯೂ, ಮಮತಾ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಮತ್ತು ಮತದಾರರನ್ನು ತನ್ನತ್ತ ಸೆಳೆಯಲು ಬಿಜೆಪಿಗೆ ಈ ತಂತ್ರಗಳಷ್ಟೇ ಸಾಲುತ್ತಿಲ್ಲ ಎಂಬುದು ನೆಲದಲ್ಲಿ ಕಂಡುಬರುತ್ತಿದೆ. ಬಿಜೆಪಿ ಹೊಸ ತಂತ್ರಗಳ ಹುಡುಕಾಟದಲ್ಲಿದೆ.
ಬಿಜೆಪಿ ತಂತ್ರಕ್ಕೆ ಮಮತಾ ಪ್ರತಿತಂತ್ರ
ಬಿಜೆಪಿಯ ಹಿಂದುತ್ವ ಪ್ರತಿಪಾದನೆ ಮತ್ತು ಟಿಎಂಸಿ ವಿರುದ್ಧ ಬಿಜೆಪಿ ಮಾಡುತ್ತಿರುವ ‘ಮುಸ್ಲಿಂ ಓಲೈಕೆ’ ಆರೋಪವನ್ನು ಬಿಜೆಪಿಯದ್ದೇ ಹಾದಿಯಲ್ಲಿ ಸರಿಗಟ್ಟಲು ಮಮತಾ ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಈವರೆಗೆ ಮಮತಾ ಎಂದಿಗೂ ತಮ್ಮ ಧಾರ್ಮಿಕ ಗುರುತಿನ ಕುರಿತು ಮಾತನಾಡಿರಲಿಲ್ಲ. ಅವರು ಅನೇಕ ಬಂಗಾಳಿ ಹಿಂದು ಮಹಿಳೆಯರಂತೆ ಅವರ ಉಡುಗೆ-ತೊಡುಗೆ ಸಾಧಾರಣವಾಗಿತ್ತು. ಅವರು ವೈಯಕ್ತಿಕವಾಗಿ ಧರ್ಮನಿಷ್ಠರಾಗಿದ್ದರು. ಆದರೆ, ಈಗ ಅವರು ಧಾರ್ಮಿಕತೆಯನ್ನು ಪ್ರತಿಪಾದಿಸುತ್ತಿದ್ದಾರೆ. ಅವರ ಈ ತಂತ್ರವು 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧದ ಹೋರಾಟಕ್ಕೆ ನೆರವಾಗಿತ್ತು. ಈಗಲೂ ನೆರವಿಗೆ ಬರುತ್ತದೆ ಎಂದು ಮಮತಾ ಭಾವಿಸಿದ್ದಾರೆ.
ಜಾತ್ಯತೀತತೆ ಕುರಿತು ಮಾತನಾಡುತ್ತಲೇ, ಧಾರ್ಮಿಕ ಆಚರಣೆಗಳನ್ನು ಆಯೋಜಿಸಿವುದು, ಭಾಗಿಯಾಗುವುದು ಹಾಗೂ ದೇವಾಲಯ ನಿರ್ಮಾಣದ ಘೋಷಣೆಗಳನ್ನು ಮಾಡುತ್ತಿದ್ದಾರೆ. ಕೋಲ್ಕತ್ತಾದ ನ್ಯೂ ಟೌನ್‌ನಲ್ಲಿ ದುರ್ಗಾ ದೇವಸ್ಥಾನವನ್ನು ನಿರ್ಮಿಸುವುದಾಗಿ ಮಮತಾ ಘೋಷಿಸಿದ್ದು, ಯೋಜನೆಗೆ ಅಡಿಪಾಯ ಹಾಕಿದ್ದಾರೆ. ತಮ್ಮ ಆಡಳಿತದಲ್ಲಿ (2021) ‘ದುರ್ಗಾ ಪೂಜೆ’ಯನ್ನು ಯುನೆಸ್ಕೋ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯೆಂದು ಗುರುತಿಸಿದೆ. ಇದು ತಮ್ಮ ಹೆಗ್ಗಳಿಕೆಯೆಂದು ಹೇಳಿಕೊಳ್ಳುತ್ತಿದ್ದಾರೆ.
ಮುಖ್ಯ ಅಂಶವೆಂದರೆ, ಬಂಗಾಳದ ಹಿಂದುಗಳು ಹೆಚ್ಚು ಮಾಂಸಹಾರಿಗಳು. ಅವರ ಸಂಸ್ಕೃತಿಯಲ್ಲಿ ಮೀನುಗಳನ್ನು ಶುಭ ಸಂಕೇತವಾಗಿ ಪರಿಗಣಿಸಲಾಗುತ್ತದೆ. ದೇವಾಲಯಗಳಲ್ಲಿ ಮೀನು ಖಾದ್ಯವನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತಿದೆ. ಆದರೆ, ಮಾಂಸಾಹಾರವನ್ನು ಬಿಜೆಪಿ ‘ಹೊಲಸು’ ಎಂದು ಭಾವಿಸುತ್ತದೆ. ಆದ್ದರಿಂದ, ಬಿಜೆಪಿ ಮಮತಾ ಬಂಗಾಳಿ ಸಂಸ್ಕೃತಿಯಲ್ಲಿ ಉತ್ತರಿಸುತ್ತಿದ್ದಾರೆ. ಮಾಂಸಾಹಾರ ಮತ್ತು ಬಿಜೆಪಿ ರಾಜಕೀಯವನ್ನು ಬಯಲುಗೊಳಿಸುತ್ತಿದ್ದಾರೆ.
ಈ ಲೇಖನ ಓದಿದ್ದೀರಾ?: SIR – ಬಿಜೆಪಿಗಾಗಿ ಚುನಾವಣಾ ಆಯೋಗ ನಡೆಸುತ್ತಿರುವ ರಕ್ತರಹಿತ ನರಮೇಧ
ಮೋದಿ ಮತ್ತು ಅಮಿತ್ ಶಾ ಅವರನ್ನು ಹೊರಗಿನವರು (ದೆಹಲಿ) ಎಂದು ಬಿಂಬಿಸುವ ರಾಜಕೀಯ ನಿರೂಪಣೆಯನ್ನು ಮಮತಾ ನಿರ್ಮಿಸಿದ್ದಾರೆ. ಬಂಗಾಳದ ಮೇಲೆ ಹಿಡಿತ ಸಾಧಿಸಲು ‘ಬಾಹ್ಯ’ ಶಕ್ತಿಗಳನ್ನು ಪ್ರಯತ್ನಿಸುತ್ತಿವೆ. ‘ಅವರು (ಮೋದಿ-ಶಾ) ಬಂಗಾಳಿಗಳಲ್ಲ’ ಎಂದು ಹೇಳುವ ಮೂಲಕ ಪ್ರಾದೇಶಿಕತೆ ಮತ್ತು ಸ್ಥಳೀಯ ಸಂಸ್ಕೃತಿಗಳ ಕುರಿತು ಹೆಚ್ಚು ಮಾತನಾಡುತ್ತಿದ್ದಾರೆ.
ಇನ್ನು, ಚುನಾವಣೆ ಸಮೀಪಿಸುತ್ತಿರುವ ಇದೇ ಸಮಯದಲ್ಲಿ ಮಮತಾ ಅವರ ಸೋದರಳಿಯ, ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ರಾಜ್ಯಾದ್ಯಂತ ಸಂಘಟನಾ ಯಾತ್ರೆ ಕೈಗೊಂಡಿದ್ದಾರೆ. ಅವರು ತಮ್ಮ ಯಾತ್ರೆಗೆ, ‘ಅಬರ್ ಜಿತ್ಬೆ ಬಂಗಾಳ’ (ಬಂಗಾಳ ಮತ್ತೆ ಗೆಲ್ಲುತ್ತದೆ) ಎಂಬ ಹೆಸರಿಟ್ಟುಕೊಂಡಿದ್ದಾರೆ. ರೋಡ್‌ಶೋಗಳು, ಸಾರ್ವಜನಿಕ ಸಭೆಗಳ ಮೂಲಕ ಜನರನ್ನು ತಲುಪುತ್ತಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ. ಮಮತಾ ಸರ್ಕಾರದ ಸಾಧನೆಗಳನ್ನು ಸಾರುತ್ತಿದ್ದಾರೆ.
2023ರ ಸೆಪ್ಟೆಂಬರ್‌ನಲ್ಲಿ ನಡೆದ ಪಂಚಾಯತಿ ಚುನಾವಣೆಗೂ ಮುನ್ನ ಅಭಿಷೇಕ್ ಅವರು ಇಂತಹದ್ದೇ ರ್‍ಯಾಲಿ ನಡೆಸಿದ್ದರು. ಆ ವರ್ಷದ ಫೆಬ್ರವರಿ-ಮಾರ್ಚ್‌ನಲ್ಲಿ ನಡೆದ ‘ನಬೋ ಜೋರ್ ಯಾತ್ರಾ’ (ಹೊಸ ಅಲೆ ಯಾತ್ರೆ) ಸ್ಥಳೀಯ ಚುನಾವಣೆಗಳಲ್ಲಿ ಟಿಎಂಸಿ ಗೆದ್ದು ಬೀಗಲು ಕಾರಣವಾಗಿತ್ತು. ಮಾತ್ರವಲ್ಲದೆ, 2024ರ ಲೋಕಸಭಾ ಚುನಾವಣೆಯ ಮೇಲೂ ಪ್ರಭಾವ ಬೀರಿತ್ತು. ಈಗ, ‘ಅಬರ್ ಜಿತ್ಬೆ ಬಂಗಾಳ’ ರ್‍ಯಾಲಿಯು ವಿಧಾನಸಭಾ ಚುನಾವಣೆಯಲ್ಲಿ ಜನರನ್ನು ಟಿಎಂಸಿಯತ್ತ ಒಗ್ಗೂಡಿಸುತ್ತದೆ ಎಂದು ಪಕ್ಷದ ನಾಯಕರು ನಂಬಿದ್ದಾರೆ.
“ರಾಜ್ಯವನ್ನು ಹತ್ತಿಕ್ಕಲು ಮತ್ತು ಬಂಗಾಳಿಗರ ಹಕ್ಕುಗಳು, ಘನತೆ ಹಾಗೂ ಗುರುತನ್ನು ದುರ್ಬಲಗೊಳಿಸಲು ಬಿಜೆಪಿ ಮಾಡುತ್ತಿರುವ ಪ್ರಯತ್ನಗಳ ವಿರುದ್ಧ ಬಂಗಾಳ ದಂಗೆ ಏಳಲಿದೆ. ಮೋದಿ-ಶಾ ಜೋಡಿಯು ಚುನಾವಣಾ ಆಯೋಗ (ಇಸಿ) ಮತ್ತು ಇಡಿ ಯಂತಹ ಕೇಂದ್ರ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಸಿಕೊಂಡಿದ್ದರೂ, ಬಂಗಾಳವು ವಿಜಯಶಾಲಿಯಾಗಿ ಹೊರಹೊಮ್ಮಲಿದೆ” ಎಂದು ಅಭಿಷೇಕ್ ಹೇಳುತ್ತಿದ್ದಾರೆ. ‘ನೀವು ಎಷ್ಟೇ ದಾಳಿ ಮಾಡಿದರೂ ಬಂಗಾಳ ಮತ್ತೆ ಗೆಲ್ಲುತ್ತದೆ’ ಎಂದು ಘೋಷಣೆ ಮೊಳಗಿಸುತ್ತಿದ್ದಾರೆ.




