ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಆಡಳಿತ ಮತ್ತು ವಿಪಕ್ಷಗಳು ಚುನಾವಣೆಗೆ ಸಜ್ಜಾಗಿವೆ. ಬಂಗಾಳದ ಪ್ರಮುಖ ವಿಪಕ್ಷ ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ 144 ಅಭ್ಯರ್ಥಿಗಳ ಘೋಷಿಸಿದೆ. ಆಡಳಿತಾರೂಢ ಟಿಎಂಸಿ, 294 ಕ್ಷೇತ್ರಗಳ ಪೈಕಿ 291 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಮಂಗಳವಾರ ಪ್ರಕಟಿಸಿದೆ. ಡಾರ್ಜಿಲಿಂಗ್ ಜಿಲ್ಲೆಯ ಉಳಿದ ಮೂರು ಸ್ಥಾನಗಳನ್ನು ಮಿತ್ರಪಕ್ಷ ‘ಭಾರತೀಯ ಗೂರ್ಖಾ ಪ್ರಜಾಂತ್ರಿಕ ಮೋರ್ಚಾ’ಕ್ಕೆ ಬಿಟ್ಟುಕೊಟ್ಟಿದೆ.
ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪ್ರಬಲ ಹೋರಾಟ ನಡೆಸುತ್ತಿರುವ ಹೊರತಾಗಿಯೂ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಟಿಎಂಸಿ, ಮತದಾನದ ಮೇಲೆ ಈ ಅಲೆ ಪ್ರಭಾವಿಸದಂತೆ ತಡೆಯಲು 74 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ. ಹೊಸಬರಿಗೆ ಮಣೆ ಹಾಕಿದೆ. ಟಿಕೆಟ್ ವಂಚಿತರಾದವರಲ್ಲಿ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ, ವಿವೇಕ್ ಗುಪ್ತಾ, ಸಾವಿತ್ರಿ ಮಿತ್ರಾ, ರತ್ನ ದೆ ನಾಗ್, ಪರೇಶ್ ಪಾಲ್ ಮತ್ತು ಕಾಂಚನ್ ಮಲ್ಲಿಕ್ ಅವರಂತಹ ಪ್ರಮುಖ ಹೆಸರುಗಳಿವೆ. ಕ್ಷೇತ್ರದ ಮಟ್ಟದ ಸಮೀಕ್ಷೆ ಮತ್ತು ಪ್ರತಿಕ್ರಿಯೆಯ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಲ್ಲದೆ, ಕಳೆದ ಚುನಾವಣೆಯಂತೆಯೇ, ಈ ಬಾರಿಯೂ ಮಹಿಳೆಯರಿಗೆ ಮನ್ನಣೆ ನೀಡಲಾಗಿದ್ದು, ಒಟ್ಟು 52 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಭದ್ರಕೋಟಿ ಭವಾನಿಪುರದಲ್ಲಿ ಸ್ಪರ್ಧಿಸಿದ್ದಾರೆ. ಅವರಿಗೆ, ಅವರ ಮಾಜಿ ಭಂಟ – ಹಾಲಿ ಎದುರಾಳಿ ಸುವೇಂದು ಅಧಿಕಾರಿಯೇ ಪೈಪೋಟಿ ನೀಡಲಿದ್ದಾರೆ.
ಬಂಗಾಳದಲ್ಲಿ 2011ರಿಂದ ಮೂರು ಬಾರಿ ಆಡಳಿತ ನಡೆಸಿರುವ ಟಿಎಂಸಿ ಸ್ಥಳೀಯ ಮಟ್ಟದಲ್ಲಿ ಆಡಳಿತ ವಿರೊಧಿ ಅಲೆ ಎದುರಿಸುತ್ತಿದೆ. ಸ್ಥಳೀಯ ಮಟ್ಟದಲ್ಲಿ ಹಲವು ಜಿಲ್ಲೆಗಳಲ್ಲಿ, ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಜನರಲ್ಲಿ ಅಸಮಾಧಾನ ಹೆಚ್ಚಾಗಿದೆ. ಭ್ರಷ್ಟಾಚಾರದ ಆರೋಪಗಳು, ಸ್ಥಳೀಯ ನಾಯಕರ ಅತಿಯಾದ ಆಧಿಪತ್ಯ, ಉದ್ಯೋಗ ಕೊರತೆ, ಕಟ್ಟಡಗಳು ಮತ್ತು ರಸ್ತೆಗಳ ನಿರ್ವಹಣೆಯ ಕೊರತೆ, ಜನರೊಂದಿಗಿನ ಸಂಪರ್ಕ ಕಡಿತದಂತಹ ಮಮತಾ ಸರ್ಕಾರದ ವಿರುದ್ಧ ಹೆಚ್ಚಾಗಿದೆ. ಜೊತೆಗೆ, ಕೋಲ್ಕತ್ತಾದ ಆರ್‌ಜಿ ಕರ್ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ-ಕೊಲೆ ಪ್ರಕರಣ, ಸಂದೇಶ್‌ಖಾಲಿ ಪ್ರಕರಣದಂತಹ ಗಂಭೀರ ವಿಚಾರಗಳು ಜನರಲ್ಲಿ ಸರ್ಕಾರದ ಮೇಲೆ ಅಸಹನೆ ಸೃಷ್ಟಿಸಿದೆ. ಮಮತಾ ಅವರಿಗೆ ಆಡಳಿತ ವಿರೋಧಿ ಅಲೆಯನ್ನು ನಿಭಾಯಿಸಿ, ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟು, ತಾವು ಅಧಿಕಾರ ಉಳಿಸಿಕೊಳ್ಳುವುದು ಅತ್ಯಂತ ನಿರ್ಣಾಯಕವೂ, ಗಂಭೀರ ಸವಾಲೂ ಆಗಿದೆ.
ಈ ಆಡಳಿತ ವಿರೋಧಿ ಅಲೆಯನ್ನು ನಿಯಂತ್ರಿಸಿ, ಜನರ ಮನಸ್ಸು ಗೆಲ್ಲಲು ಮಮತಾ ಹೊಸ ತಂತ್ರ ಹೆಣೆದಿದ್ದಾರೆ. ಜನರ ವಿರೋಧ ಎದುರಿಸುತ್ತಿರುವ 74 ಶಾಸಕರನ್ನು (ಒಟ್ಟು ಶಾಸಕರಲ್ಲಿ 33%) ಕೈಬಿಟ್ಟಿದ್ದಾರೆ. ಹೊಸಬರು, ಯುವಜನರು ಹಾಗೂ ಸಮಾಜದ ವಿವಿಧ ವರ್ಗಗಳಿಂದ ಬಂದವರನ್ನು ಆಯ್ಕೆ ಮಾಡಿದ್ದಾರೆ. ಪಟ್ಟಿಯಲ್ಲಿ ಸುಮಾರು 135 ಹಾಲಿ ಶಾಸಕರನ್ನು ಮಾತ್ರ ಮರುನಾಮಕರಣ ಮಾಡಿದ್ದಾರೆ. ಮಾತ್ರವಲ್ಲದೆ, ಆಯ್ಕೆಯಾದ ಒಟ್ಟು ಅಭ್ಯರ್ಥಿಗಳಲ್ಲಿ 177 ಮಂದಿ ಅಭ್ಯರ್ಥಿಗಳು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಅವರಲ್ಲಿ, 52 ಮಹಿಳೆಯರು, 47 ಮುಸ್ಲಿಂ, 78 SC ಹಾಗೂ 17 ST ಅಭ್ಯರ್ಥಿಗಳಿದ್ದಾರೆ.
ಇದು ಸ್ಪಷ್ಟವಾಗಿ, ಚುನಾವಣೆಯಲ್ಲಿ ಯುವ ಶಕ್ತಿ, ವೈವಿಧ್ಯತೆ ಹಾಗೂ ಎಲ್ಲ ವರ್ಗಗಳನ್ನು ಒಳಗೊಳ್ಳುವ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಪ್ರಯತ್ನದಂತೆ ಕಾಣುತ್ತದೆ.
ಸ್ಥಳೀಯವಾಗಿ ಜನರ ವಿರೋಧ ಎದುರಿಸುತ್ತಿರುವ ಶಾಸಕರನ್ನು ಮಮತಾ ಕೈಬಿಟ್ಟಿದ್ದಾರೆ. ಆದಾಗ್ಯೂ, ಇದಷ್ಟೇ ಬಂಗಾಳವನ್ನು ಮತ್ತೆ ಗೆಲ್ಲಲು ಸಾಧ್ಯವಾಗದು ಎಂದು ಅರಿತಿರುವ ಮಮತಾ, ಮತ್ತೊಂದು ಪ್ರಬಲ ದಾಳ ಉರುಳಿಸುತ್ತಿದ್ದಾರೆ. ಅಂದು, ಬಿಜೆಪಿಯನ್ನು ‘ಹೊರಗಿನವರು’ ಎಂಬುದನ್ನು ಪ್ರಬಲವಾಗಿ ಪ್ರತಿಪಾದಿಸಿ, ‘ಬಂಗಾಳ vs ದೆಹಲಿ ಸರ್ಕಾರ (ಕೇಂದ್ರ ಸರ್ಕಾರ)’ ಎಂದು ಬಿಂಬಿಸಿವುದು. ಆ ಮೂಲಕ, ಚುನಾವಣೆಯನ್ನು ಸ್ಥಳೀಯರು vs ಹೊರಗಿನವರ ನಡುವಿನ ಹೋರಾಟವಾಗಿ ಮಾರ್ಪಡಿಸುತ್ತಿದ್ದಾರೆ.
ಅದರ ಭಾಗಿವಾಗಿಯೇ, ಅಭ್ಯರ್ಥಿಗಳನ್ನು ಘೋಷಿಸಿದ ಸಮಯದಲ್ಲಿಯೂ ಮಮತಾ, “ಇದು ನನ್ನ ಸರ್ಕಾರದ ವಿರುದ್ಧದ ಚುನಾವಣೆಯಲ್ಲ. ಇದು ಬಂಗಾಳದ ಗೌರವ ಮತ್ತು ಸ್ವಾಭಿಮಾನದ ಹೋರಾಟ. ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಶೀಲನೆಯಲ್ಲಿ ಲಕ್ಷಾಂತರ ಹೆಸರುಗಳು ತೆಗೆದುಹಾಕಿದೆ. ಇದು ಬಿಜೆಪಿಗಾಗಿ ಮತಗಳನ್ನು ಅಳಿಸುವ ಷಡ್ಯಂತ್ರ. ಹೊರಗಿನವರು (ಬಿಜೆಪಿ) ಬಂಗಾಳವನ್ನು ಆಕ್ರಮಿಸಿಕೊಳ್ಳಲು ನೋಡುತ್ತಿದ್ದಾರೆ. ಅವರಿಗೆ ಅವಕಾಶ ಕೊಡುವುದಿಲ್ಲ” ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕೇಂದ್ರ ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐಗಳನ್ನು ಬಂಗಾಳದ ಮೇಲೆ ಛೂಬಿಟ್ಟಿದೆ. ಅನುದಾನ ಕಡಿತದೊಂದಿಗೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಹವಣಿಸಿದೆ. ಇದು, ಬಂಗಾಳದ ಸಂಸ್ಕೃತಿ ಮತ್ತು ಸ್ವಾಯತ್ತತೆಯ ಮೇಲಿನ ದಾಳಿಯಾಗಿದೆ ಎಂದು ಮಮತಾ ಪ್ರತಿಪಾದಿಸಿದ್ದಾರೆ. ‘ಮಾ-ಮಾಟಿ-ಮಾನುಷ್’ ಘೋಷಣೆಯನ್ನು ಮೊಳಗಿಸುತ್ತಿದ್ದಾರೆ.
ಈ ಪ್ರತಿಪಾದನೆಗಳು ಬಂಗಾಳದ ಮುಸ್ಲಿಂ, ಮಹಿಳೆಯರು, SC/ST ಸಮುದಾಯಗಳು ಹಾಗೂ ಬಂಗಾಳಿ ಅಭಿಮಾನಿಗಳನ್ನು ಒಗ್ಗೂಡಿಸುವ ಪ್ರಯತ್ನವಾಗಿದೆ.
ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ಮಮತಾ ಬ್ಯಾನರ್ಜಿ vs ಸುವೇಂದು ಅಧಿಕಾರಿ: ಭಂಟನಿಂದ ಎದುರಾಳಿವರೆಗೆ
ಒಂದು ವೇಳೆ, ಅಭ್ಯರ್ಥಿಗಳ ಬದಲಾವಣೆ ಮತ್ತು ‘ಸ್ಥಳೀಯರು vs ಹೊರಗಿನವರು’ – ಈ ಎರಡೂ ತಂತ್ರಗಳು 2021ರ ಚುನಾವಣೆಯಲ್ಲಿ ಯಶಸ್ವಿಯಾಗಿದ್ದವು. ಆಗಲೂ ಆಡಳಿತ ವಿರೋಧಿ ಭಾವನೆ ಇತ್ತು. ಆದರೆ, ಮಮತಾ ಅವರು ಚುನಾವಣೆಯನ್ನು ಬಂಗಾಳದ ಸ್ವಾಭಿಮಾನದ ಹೋರಾಟದ ಪ್ರತಿಪಾದನೆಯನ್ನು ಮುನ್ನೆಲೆಗೆ ತಂದರು, ಹಲವು ಅಭ್ಯರ್ಥಿಗಳನ್ನು ಬದಲಿಸಿದರು. ಪರಿಣಾಮ, 215 ಸ್ಥಾನಗಳನ್ನು ಗೆದ್ದರು. ಈಗಲೂ ಅದೇ ಫಾರ್ಮುಲಾವನ್ನು ಬಳಸುತ್ತಿದ್ದಾರೆ. ಇದು ಕೆಲಸ ಮಾಡಬಹುದು ಎಂಬ ವಿಶ್ವಾಸ ಅವರಿಗಿದೆ. ಅವರು 226ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ, ಈ ಬಾರಿ ಸವಾಲುಗಳು ಭಿನ್ನವಾಗಿಯೂ-ಪ್ರಬಲವಾಗಿಯೂ ಇವೆ. 15 ವರ್ಷಗಳ ಆಡಳಿತದ ನಂತರ ಉದ್ಯೋಗ ಕೊರತೆ, ಭ್ರಷ್ಟಾಚಾರದ ಆರೋಪಗಳು, ಕಾನೂನು ಸುವ್ಯವಸ್ಥೆಯ ಕೊರತೆಯಂತಹ ಗಂಭೀರ ಸಮಸ್ಯೆಗಳು ಜನರಲ್ಲಿ ಅಸಮಾಧಾನವನ್ನು ಹೆಚ್ಚಿಸಿದೆ. ಬಿಜೆಪಿ 2021ರಲ್ಲಿ 77 ಸ್ಥಾನಗಳನ್ನು ಗೆದ್ದು ಈಗ ಬಲವಾದ ವಿರೋಧ ಪಕ್ಷವಾಗಿ ಬೆಳೆದಿದೆ. ಹಿಂದು ಮತದಾರರ ಕ್ರೋಢೀಕರಣ ಮತ್ತು ಮತುವಾ ಸಮುದಾಯದ ಬೆಂಬಲ ಗಳಿಕೆಯಲ್ಲಿ ಬಿಜೆಪಿ ಭಾಗಶಃ ಯಶಸ್ಸು ಕಂಡಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಜೊತೆಗೆ, ಎಸ್‌ಐಆರ್ ಮೂಲಕ ಮತದಾರ ಪಟ್ಟಿಯ ಬದಲಾವಣೆಯೂ ಟಿಎಂಸಿಗೆ ಹೊಡೆತವನ್ನೂ, ಬಿಜೆಪಿಗೆ ಅನುಕೂಲವನ್ನೂ ಮಾಡಿಕೊಡಬಹುದಾದ ಸಾಧ್ಯತೆಗಳೂ ಹೆಚ್ಚಿವೆ.
ಆದರೂ, ಮಮತಾ ಮತ್ತೊಮ್ಮೆ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಮಹಿಳೆಯರು, ಮುಸ್ಲಿಂ ಮತದಾರರು, SC/ST ಸಮುದಾಯಗಳು ಇನ್ನೂ ಟಿಎಂಸಿ ಜೊತೆಗೆ ಬಲವಾಗಿ ನಿಂತಿವೆ. ಪಕ್ಷದ ಗ್ರಾಮೀಣ ಮತ್ತು ನಗರ ಸಂಘಟನೆಯೂ ಬಲವಾಗಿದೆ. ಬಿಜೆಪಿ ಇನ್ನೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ಇರುವುದು ಮತ್ತು ಆಂತರಿಕ ಬಿಕ್ಕಟ್ಟು ಎದುರಿಸುತ್ತಿರುವುದು ಟಿಎಂಸಿಗೆ ಅನುಕೂಲ ಮಾಡಿಕೊಡುವ ಸಾಧ್ಯತೆಗಳಿವೆ.
ಮಮತಾ ಹೊಸ ಮುಖಗಳ ಮೂಲಕ ಆಡಳಿತ ವಿರೋಧಿ ಅಲೆಯನ್ನು ನಿಯಂತ್ರಿಸಿ, ಚುನಾವಣೆಯನ್ನು ಬಂಗಾಳದ ಸ್ವಾಭಿಮಾನದ ಹೋರಾಟವನ್ನಾಗಿ ಬದಲಾಯಿಸಿದರೆ, 4ನೇ ಅವಧಿಯ ಗೆಲುವು ಟಿಎಂಸಿಯದ್ದಾಗುತ್ತದೆ.




