ಪಶ್ಚಿಮ ಬಂಗಾಳದಲ್ಲಿ 2019ರ ಲೋಕಸಭಾ ಚುನಾವಣೆ ನಂತರ ಬಿಜೆಪಿ ಗಮನಾರ್ಹವಾಗಿ ಬೆಳೆಯುತ್ತಿದೆ. ಆ ಚುನಾವಣೆಯಲ್ಲಿ ಬಂಗಾಳದಲ್ಲಿ ತನ್ನ ಸ್ಥಾನಗಳನ್ನು 2ರಿಂದ 18ಕ್ಕೆ ಹೆಚ್ಚಿಸಿಕೊಂಡ ಬಿಜೆಪಿ, 2021ರ ವಿಧಾನಸಭಾ ಚುನಾವಣೆಯಲ್ಲಿ 294 ಸ್ಥಾನಗಳಲ್ಲಿ 77 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿತು. ಈ ಬೆಳೆವಣಿಗೆಗೆ ಕಾರಣವಾದದ್ದು, ರಾಜ್ಯದ ಉತ್ತರ ಮತ್ತು ಪೂರ್ವ ಗಡಿ ಭಾಗಗಳಲ್ಲಿ ಹರಡಿರುವ ರಾಜಬಂಶಿ ಮತ್ತು ಮತುವಾ ಸಮುದಾಯಗಳ ಬೆಂಬಲ.
2019ರಲ್ಲಿ ಬಂಗಾಳದ 42 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಟಿಎಂಸಿಗೆ ದೊಡ್ಡ ಆಘಾತವನ್ನೂ, ಭವಿಷ್ಯದ ಸವಾಲನ್ನೂ ಮುಂದಿಟ್ಟಿತು. ಕೂಡಲೇ, ಮಮತಾ ಅವರು ಉತ್ತರ ಬಂಗಾಳ ಭಾಗದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದರು. ಈ ಪ್ರದೇಶದಲ್ಲಿ ಸರ್ಕಾರದ ಯೋಜನೆಗಳು ಮತ್ತು ಪಕ್ಷದ ಸಾಂಘಿಕ ಬಲವನ್ನು ಹೆಚ್ಚಿಸಿದರು. ಈ ಪ್ರಯತ್ನಗಳ ಪರಿಣಾಮ, 2021ರ ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದಲ್ಲಿ ಒಂದಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಆದರೂ, ಬಿಜೆಪಿ 77 ಸ್ಥಾನಗಳನ್ನು ಗೆದ್ದಿತು.
2024ರ ಲೋಕಸಭಾ ಚುನಾವಣೆಯಲ್ಲಿ, ಬಂಗಾಳದಲ್ಲಿ ಬಿಜೆಪಿಯ ಸ್ಥಾನಗಳು 18 ರಿಂದ 12ಕ್ಕೆ ಇಳಿದವು. ಆದರೂ, ರಾಜಬಂಶಿ ಸಮುದಾಯವು ಪ್ರಬಲವಾಗಿರುವ ಉತ್ತರ ಬಂಗಾಳ ಮತ್ತು ಮತುವಾ ಸಮುದಾಯದ ಪ್ರಾಬಲ್ಯವಿರುವ ಪೂರ್ವ ಬಂಗಾಳದಲ್ಲಿ ಬಿಜೆಪಿ ತನ್ನ ಬೆಂಬಲವನ್ನು ಉಳಿಸಿಕೊಂಡಿತು.
ರಾಜಬಂಶಿ ಸಮುದಾಯವು ದಶಕಗಳಿಂದ ಪ್ರತ್ಯೇಕ ‘ಕಾಮತಾಪುರ’ ರಾಜ್ಯಕ್ಕಾಗಿ ಒತ್ತಾಯಿಸುತ್ತಿದೆ. ಜೊತೆಗೆ, ತಮ್ಮ ಭಾಷೆಯನ್ನು ಸಂವಿಧಾನದ 8ನೇ ಅನುಸೂಚಿಗೆ ಸೇರಿಸಲು ಅಗ್ರಹಿಸುತ್ತಿದೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ಇವುಗಳನ್ನು ಈಡೇರಿಸಬಲ್ಲದು ಎಂಬ ಭರವಸೆ ಈ ಸಮುದಾಯದಲ್ಲಿದೆ. ಆದರೆ, ಈ ಸಮಸ್ಯೆಗಳ ಪರಿಹಾರ ಅಷ್ಟು ಸುಲಭವೂ ಅಲ್ಲ, ಬಿಜೆಪಿ ಅದನ್ನು ಮಾಡುವುದೂ ಇಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ.
ಈ ನಡುವೆ ಮಮತಾ ಬ್ಯಾನರ್ಜಿ ಅವರು ರಾಜಬಂಶಿ ಸಮುದಾಯವನ್ನು ಬಿಜೆಪಿಯಿಂದ ದೂರ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಉತ್ತರ ಬಂಗಾಳದ ಒಟ್ಟು 54 ವಿಧಾನಸಭಾ ಸ್ಥಾನಗಳ ಪೈಕಿ 22ಕ್ಕೂ ಹೆಚ್ಚು ಸ್ಥಾನಗಳಲ್ಲಿ ಈ ಸಮುದಾಯದ ಪ್ರಭಾವವಿದೆ. ಬಂಗಾಳದಲ್ಲಿ ಬಿಜೆಪಿ ಬೇರು ಬಿಡುವುದಕ್ಕೂ ಮೊದಲು ಈ ಪ್ರದೇಶವು ಕಾಂಗ್ರೆಸ್ ಮತ್ತು ಸಿಪಿಐ(ಎಂ) ಪಕ್ಷಗಳ ಭದ್ರಕೋಟೆಯಾಗಿತ್ತು. ಆಗಲೂ ಟಿಎಂಸಿ ಇಲ್ಲಿ ಅತಿ ದುರ್ಬಲವಾಗಿತ್ತು.
ಈ ಸಮುದಾಯದ ಪ್ರಭಾವಿಗಳಾಗಿರುವ ಬಿಜೆಪಿಯ ರಾಜ್ಯಸಭಾ ಸಂಸದ ಮತ್ತು ಕೂಚ್ ಬೆಹಾರ್‌ನ ಅನಂತ ಮಹಾರಾಜ್ (ನಾಗೇಂದ್ರ ರಾಯ್) ಅವರಿಗೆ ಮಮತಾ ಸರ್ಕಾರವು ’ಬಂಗಭೂಷಣ’ ಪ್ರಶಸ್ತಿ ನೀಡಿದೆ. ಇದು ಕೂಡ, ಸಮುದಾಯವನ್ನು ಸೆಳೆಯುವ ತಂತ್ರವೆಂದು ವಿಶ್ಲೇಷಕರು ಪರಿಗಣಿಸಿದ್ದಾರೆ. ವಿಶ್ವ ಮಾತೃಭಾಷಾ ದಿನದಂದು ರಾಜಬಂಶಿ ಭಾಷೆಯನ್ನು ಮುಂಚೂಣಿಗೆ ತರುವುದು ತಮ್ಮ ಉದ್ದೇಶವೆಂದು ಸರ್ಕಾರ ಹೇಳಿಕೊಂಡಿದೆ.
ಈ ಲೇಖನ ಓದಿದ್ದೀರಾ?: ಅಫ್ಘಾನ್-ಪಾಕ್ ಸಂಘರ್ಷ | ತಾನೇ ಹುಟ್ಟುಹಾಕಿದ ತಾಲಿಬಾನ್ ಜೊತೆ ಪಾಕ್ ಘರ್ಷಣೆ ಏಕೆ?
ಇನ್ನು, ಮತುವಾ ಸಮುದಾಯದ ಪ್ರಭಾವವಿರುವ ನಾಡಿಯಾ, ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಮಮತಾ ಈಗಾಗಲೇ ತಮ್ಮ ದಾಳ ಉರುಳಿಸಿದ್ದಾರೆ. ಮತುವಾ ಸಮುದಾಯದ ಆಧ್ಯಾತ್ಮಿಕ ನಾಯಕ ಹರಿಚಂದ್ ಠಾಕೂರ್ ಅವರ ಕುಟುಂಬದ ಸದಸ್ಯೆಯಾದ ‘ಮಮತಾ ಠಾಕೂರ್’ ಅವರಿಗೆ ಟಿಎಂಸಿಯಿಂದ ರಾಜ್ಯಸಭಾ ಟಿಕೆಟ್ ನೀಡಿದ್ದು, ಅವರು ಮತುವಾ ಸಮುದಾಯದ ಮತಗಳನ್ನು ವಿಭಜಿಸಿದ್ದಾರೆ. ಇದು ಬಿಜೆಪಿಯ ಶಾಂತನು ಠಾಕೂರ್ ಅವರಿಗೆ ನೀಡಿದ ಪ್ರತ್ಯುತ್ತರವೂ ಆಗಿದೆ. ಅಲ್ಲದೆ, ಪಾಕಿಸ್ತಾನ ವಿಭಜನೆಯ ಸಮಯದಲ್ಲಿ ಬಾಂಗ್ಲಾದಿಂದ ವಲಸೆ ಬಂದಿದ್ದ ಈ ಸಮುದಾಯದಲ್ಲಿ ಸಿಎಎ ಮತ್ತು ಎನ್‌ಆರ್‌ಸಿಗಳಂತಹ ಪೌರತ್ವ ಪ್ರಕ್ರಿಯೆಯ ಆತಂಕಗಳೂ ಇವೆ. ಈ ಆತಂಕವು ಮಮತಾ ಅವರಿಗೆ ಸಮುದಾಯವನ್ನು ಸೆಳೆಯಲು ನೆರವಾಗುತ್ತಿದೆ. ಮಮತಾ ಅವರು, “ಯಾರೂ ಪೌರತ್ವ ಕಳೆದುಕೊಳ್ಳದಂತೆ ನಾನು ನೋಡಿಕೊಳ್ಳುತ್ತೇನೆ” ಎಂದು ಭರವಸೆ ನೀಡಿದ್ದಾರೆ. ಈ ಸಮುದಾಯವು ಮತದಾನದ ಹಕ್ಕು ಕಳೆದುಕೊಳ್ಳುವ ಭೀತಿಯನ್ನು ಹೋಗಲಾಡಿಸಲು ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ ಏನಿದು ಕಾಶ್ಮೀರದ ‘ಕುನನ್ – ಪೋಶ್ಪೋರ ಕಗ್ಗತ್ತಲ ರಾತ್ರಿ’? ಎಬಿವಿಪಿ ತಗಾದೆ ಯಾಕೆ?
2019 ಮತ್ತು 2024ರ ನಡುವೆ, ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಕೂಡ ಪ್ರದೇಶದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಶ್ರಮಿಸಿದ್ದಾರೆ. ಅಲಿಪುರ್ದುವಾರ್‌ನ ಬುಡಕಟ್ಟು ಸಮುದಾಯದ ಪ್ರಕಾಶ್ ಚಿಕ್ ಬರಿಕ್ ಅವರಿಗೆ 2023 ರಲ್ಲಿ ರಾಜ್ಯಸಭಾ ಸದಸ್ಯತ್ವ ನೀಡಿದ್ದಲ್ಲದೆ, 2024ರ ಲೋಕಸಭಾ ಚುನಾವಣೆಯಲ್ಲಿಯೂ ಅವರನ್ನು ಕಣಕ್ಕಿಳಿಸಲಾಗಿತ್ತು. ಆದರೆ, ಅವರು ಬಿಜೆಪಿಯ ಎದುರು ಸೋತರು.
ಈ ಎಲ್ಲಾ ಕ್ರಮಗಳು ಬಿಜೆಪಿ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಟಿಎಂಸಿ ಹಿಡಿತವನ್ನು ಕ್ರಮೇಣ ಸುಧಾರಿಸಿವೆ. ಈ ಪ್ರಯತ್ನಗಳು ಚುನಾವಣಾ ಫಲಿತಾಂಶವಾಗಿ ಬದಲಾಗುತ್ತವೆಯೇ ಎಂಬುದು ಮತದಾನದಲ್ಲಿ ಗೊತ್ತಾಗಲಿದೆ.




