2026ರಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಬಿಜೆಪಿ ಗೆದ್ದು, ಸರ್ಕಾರ ರಚಿಸಿದರೆ, ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರಗೆಸೆಯುತ್ತೇವೆಂದು ಬಿಜೆಪಿ ನಾಯಕ, ಬಂಗಾಳ ವಿಪಕ್ಷ ನಾಯಕ ಸುವೇಂದು ಅಧಿಕಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಂಗಾಳ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದೆ. ಅಧಿವೇಶನದಲ್ಲಿ ಗದ್ದಲ ಸೃಷ್ಟಿಸಿದ್ದ ಕಾರಣಕ್ಕೆ ಸುವೇಂದು ಅಧಿಕಾರಿ ಅವರನ್ನು ಸದನದಿಂದ ಅಮಾನತು ಮಾಡಲಾಗಿದೆ.
ತಮ್ಮ ಅಮಾನತು ಬಗ್ಗೆ ಮಾತನಾಡಿರುವ ಸುವೇಂದು ಅಧಿಕಾರಿ, “ಬಂಗಾಳದಲ್ಲಿ ಮಮತಾ ಸರ್ಕಾರ ಕೋಮು ಆಡಳಿತ ನಡೆಸುತ್ತಿದೆ. ಮುಸ್ಲಿಂ ಲೀಗ್‌ನ ಎರಡನೇ ಅವತಾರದಂತೆ ವರ್ತಿಸುತ್ತಿದೆ” ಎಂದು ಆರೋಪಿಸಿದ್ದಾರೆ.
“ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಬಂಗಾಳದ ಜನತೆ ಮಮತಾ ಸರ್ಕಾರವನ್ನು ಕಿತ್ತೊಗೆಯಲಿದೆ. ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಸರ್ಕಾರ ರಚಿಸಿದ ಬಳಿಕ, ವಿಧಾನಸಭೆಯಿಂದ ಮುಸ್ಲಿಂ ಶಾಸಕರನ್ನು ಹೊರೆಗೆಸೆಯುತ್ತೇವೆ” ಎಂದು ಹೇಳಿದ್ದಾರೆ.
ಅವರ ಹೇಳಿಕೆಗೆ ಟಿಎಂಸಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುವೇಂದು ಅಧಿಕಾರಿ ದ್ವೇಷ ರಾಜಕಾರಣ ಮತ್ತು ದ್ವೇಷ ಭಾಷಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಸುವೇಂದು ಅಧಿಕಾರಿ ಅವರು ಮಾನಸಿತ ಸ್ಥಿರತೆ ಕಳೆದುಕೊಂಡಿದ್ದಾರೆ. ಅವರ ಮಾನಸಿಕ ಆರೋಗ್ಯದ ಬಗ್ಗೆ ಅನುಮಾನುಗಳು ಮೂಡುತ್ತಿವೆ ಎಂದು ಟಿಎಂಸಿ ಶಾಸಕ ತಪಸಿ ಮಂಡಲ್ ಹೇಳಿದ್ದಾರೆ.
ಸುವೇಂದು ಅಧಿಕಾರಿ ಹೇಳಿಕೆ ಬಗ್ಗೆ ಬಿಜೆಪಿ ಇತರ ಯಾವುದೇ ಮುಖಂಡರು ಪ್ರತಿಕ್ರಿಯೆ ನೀಡದೆ, ಮೌನಕ್ಕೆ ಶರಣಾಗಿದ್ದಾರೆ.
ಸುವೆಂದು ಅಧಿಕಾರಿ ಹೇಳಿಕೆ ಬಿಜೆಪಿಯ ಇತರ ನಾಯಕರಿಗೂ ಮುಜುಗರ ಉಂಟು ಮಾಡಿರುವುದು ಇದೇ ಮೊದಲೇನಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಳಪೆ ಪ್ರದರ್ಶನ ತೋರಿತ್ತು. ಇದಾಗ ಬಳಿಕ ಸುವೆಂದು ಬಿಜೆಪಿಯ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಘೋಷಣೆಯನ್ನು ಕೊನೆಗೊಳಿಸಬೇಕೆಂದು ಕರೆ ನೀಡಿದ್ದರು. “ಜೋ ಹಮಾರೆ ಸಾಥ್, ಹಮ್ ಉನ್‌ಕೆ ಸಾಥ್, (ನಮ್ಮೊಂದಿಗೆ ಯಾರು ಇರುತ್ತಾರೋ ನಾವು ಅವರೊಂದಿಗೆ) ಎಂಬ ಹೇಳಿಕೆಯಿದೆ. ನಮಗೆ ಅಲ್ಪಸಂಖ್ಯಾತ ಮೋರ್ಚಾ ಬೇಕಾಗಿಲ್ಲ” ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು. ಈ ಮೂಲಕ ಬಿಜೆಪಿಯೊಳಗೆ ಬಿರುಕಿಗೆ ಕಾರಣವಾಗಿದ್ದರು.




