ಬೆಂಗಳೂರು ಸಿಲಿಕಾನ್ ವ್ಯಾಲಿ ಅಲ್ಲ, ಗುಂಡಿಗಳ ವ್ಯಾಲಿ ಆಗಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿ ಕೆ ಶಿವಕುಮಾರ್ 6 ಪ್ರೆಸ್‌ಮೀಟ್ ಮಾಡಿ ರಸ್ತೆ ಗುಂಡಿ ಮುಚ್ಚುತ್ತೇವೆ ಎಂದಿದ್ದಾರೆ. ಹಣ ಇಲ್ಲದೆ ಗುಂಡಿ ಮುಚ್ಚಿ ಎಂದರೆ ಯಾರೂ ಮುಚ್ಚುವುದಿಲ್ಲ. ಹಿಂದಿನ ಬಿಜೆಪಿ ಸರ್ಕಾರ 8,000 ಕೋಟಿ ರೂ. ಬಿಬಿಎಂಪಿಗೆ ನೀಡಿತ್ತು. ಬಿಡಿಎಯಿಂದ ವಿಶೇಷವಾಗಿ 6,000 ಕೋಟಿ ರೂ. ನೀಡಲಾಗಿತ್ತು. ಎರಡೂವರೆ ವರ್ಷದಲ್ಲಿ ಅನುದಾನ ಬಿಡುಗಡೆ ಮಾಡದೆ ರಸ್ತೆಗಳು ಗುಂಡಿ ಬಿದ್ದಿವೆ. ಅಷ್ಟೂ ಗುಂಡಿಗಳನ್ನು ನವೆಂಬರ್ ಒಳಗೆ ಮುಚ್ಚುತ್ತೇವೆ ಎನ್ನುತ್ತಿದ್ದಾರೆ. ಅಷ್ಟು ದೊಡ್ಡ ಕಾಮಗಾರಿಯನ್ನು ಇಷ್ಟು ಬೇಗ ಮಾಡಲು ಸಾಧ್ಯವೇ ಇಲ್ಲ. ಇದು ಸಿಲಿಕಾನ್ ವ್ಯಾಲಿ ಅಲ್ಲ, ಗುಂಡಿಗಳ ವ್ಯಾಲಿ ಆಗಿದೆ ಎಂದು ದೂರಿದರು.
ರೇರಾ ಈಗ ಕಲೆಕ್ಷನ್ ಸೆಂಟರ್ ಆಗಿದೆ. ಒಂದು ಅಡುಗೆಮನೆಗೆ 15,000 ರೂ. ನಿಗದಿ ಮಾಡಲಾಗಿದೆ. ಅದಕ್ಕೆ ಹೇಳುವವರು ಕೇಳುವವರು ಯಾರೂ ಇಲ್ಲ. ನಿಯಮ ತಂದರೆ ಅದನ್ನು ವಸೂಲಿಗೆ ಬಳಸಿದ್ದಾರೆ ಎಂದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರಸ್ತೆ ಗುಂಡಿ ಮುಚ್ಚುವುದು ಸಚಿವ ಡಿ.ಕೆ. ಶಿವಕುಮಾರ್ ಕೆಲಸವೇ?
ಚುನಾವಣಾ ಅಕ್ರಮಗಳ ಬಗ್ಗೆ ಮಲ್ಲಿಕಾರ್ಜುನ ಖರ್ಗೆಯವರು ಸಂಸತ್ತಿನಲ್ಲೇ ಈ ಬಗ್ಗೆ ಮಾತನಾಡಬೇಕಿತ್ತು. ದಾಖಲೆ ಇಲ್ಲವಾದಾಗ ಮಾಧ್ಯಮಗಳ ಮುಂದೆ ಆರೋಪ ಮಾಡುತ್ತಾರೆ. ಚುನಾವಣಾ ಆಯೋಗದ ಮುಂದೆ ಹೋಗಿ ದಾಖಲೆ ನೀಡಬೇಕಿತ್ತು. ಚುನಾವಣಾ ಆಯೋಗವನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲು ಈ ರೀತಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಸರಿಯಾಗಿ ಉಳಿದಿದೆ. ತೆಲಂಗಾಣದಲ್ಲಿ ಮುಖ್ಯಮಂತ್ರಿಯೇ ಪಾಪರ್ ಆಗಿದ್ದೇವೆಂದು ಹೇಳಿದ್ದಾರೆ. ತಮಿಳುನಾಡಲ್ಲೂ ಸಮೀಕರಣ ಬದಲಾಗಿದೆ. ಇಂಡಿ ಕೂಟ ಮುಳುಗುತ್ತಿರುವ ಹಡಗಾಗಿದೆ ಎಂದರು.
ಮುಸ್ಲಿಮ್ ಸಮುದಾಯದವರು ಅಕ್ರಮ ಮಾಡುತ್ತಿದ್ದಾರೆ. ಬಾಂಗ್ಲಾ ದೇಶದವರು ಇಲ್ಲಿಗೆ ಬಂದು ಮತದಾನ ಮಾಡುತ್ತಾರೆ. ಅಂಥವರಿಗೆ ವೋಟರ್ ಐಡಿ ನೀಡುವುದು ಯಾರು? ದೇಶದ ಭದ್ರತೆಯ ದೃಷ್ಟಿಯಿಂದ ಅಂಥವರನ್ನು ವಾಪಸ್ ಕಳಿಸಬೇಕು. ಆದರೆ ಕಾಂಗ್ರೆಸ್ ದೇಶದ ಭದ್ರತೆಗಿಂತ ಹೆಚ್ಚಾಗಿ ಮತಬ್ಯಾಂಕ್ ಮುಖ್ಯ. ಪಾಕಿಸ್ತಾನ, ಬಾಂಗ್ಲಾದವರು ಆ ದೇಶದಲ್ಲೂ ಮತ ಹಾಕಿ, ಇಲ್ಲೂ ಬಂದು ಮತ ಚಲಾಯಿಸುತ್ತಾರೆ. ಒಬ್ಬರಿಗೆ ಒಂದೇ ಓಟು ಎಂಬ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಜಾರಿ ಮಾಡುತ್ತಿದ್ದಾರೆ ಎಂದರು.





