ಬಹಳ ಕುತೂಹಲ ಕೆರಳಿಸಿದ್ದ ರಾಜಸ್ಥಾನ ಸಿಎಂ ಆಯ್ಕೆ ವಿಚಾರದಲ್ಲಿ ಅಚ್ಚರಿಯ ನಿರ್ಧಾರವನ್ನು ತೆಗೆದುಕೊಂಡಿರುವ ಬಿಜೆಪಿ ಹೈಕಮಾಂಡ್, ನೂತನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ.
ರಾಜಸ್ಥಾನದ ಸಂಗನೇರ್ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದರು. ರಾಜಸ್ಥಾನದಲ್ಲಿ ಪಕ್ಷದ ಹಿರಿಯ ಪ್ರಧಾನ ಕಾರ್ಯದರ್ಶಿಯಾಗಿ ಕಳೆದ 25 ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದರು.
#WATCH | BJP names Bhajanlal Sharma as the new Chief Minister of Rajasthan pic.twitter.com/j3awHnmH7k
— ANI (@ANI) December 12, 2023
ರಾಜಸ್ಥಾನದಲ್ಲಿ ಚುನಾವಣಾ ಫಲಿತಾಂಶ ಬಂದ 9 ದಿನಗಳ ನಂತರ ಸಿಎಂ ಹೆಸರನ್ನು ಅಂತಿಮಗೊಳಿಸಲಾಗಿದೆ. ಭಜನ್ ಲಾಲ್ ಶರ್ಮಾ ಭರತ್ಪುರ ನಿವಾಸಿಯಾಗಿದ್ದಾರೆ. ಹೊರಗಿನವರು ಎಂಬ ಆರೋಪವಿದ್ದರೂ ಕೂಡ ಬಿಜೆಪಿಯಿಂದ ಸಂಗನೇರದಿಂದ ಸ್ಪರ್ಧಿಸಿ, ಭಾರೀ ಅಂತರದಿಂದ ಗೆದ್ದಿದ್ದರು.
ಶರ್ಮಾ ಅವರು ಕಾಂಗ್ರೆಸ್ನ ಪುಷ್ಪೇಂದ್ರ ಭಾರದ್ವಾಜ್ ಅವರನ್ನು 48081 ಮತಗಳಿಂದ ಸೋಲಿಸಿದ್ದರು. ಭಜನ್ ಲಾಲ್ ಶರ್ಮಾ ಅವರು ಎಬಿವಿಪಿ ಹಾಗೂ ಆರ್ಎಸ್ಎಸ್ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿದ ರೇಸ್ನಲ್ಲಿ ಮಾಜಿ ಸಿಎಂ, ಹಿರಿಯ ಬಿಜೆಪಿ ನಾಯಕಿ ವಸುಂಧರಾ ರಾಜೆ ಸೇರಿದಂತೆ ಹಲವು ಘಟಾನುಘಟಿ ನಾಯಕರ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿತ್ತಾದರೂ, ಬಿಜೆಪಿ ಹೈಕಮಾಂಡ್ ಭಜನ್ ಲಾಲ್ ಶರ್ಮಾ ಅವರಿಗೆ ಮಣೆ ಹಾಕುವ ಮೂಲಕ ಅಚ್ಚರಿಯ ಆಯ್ಕೆ ಮಾಡಿದೆ.
#WATCH | “Bhajanlal Sharma has been elected as the leader of the Rajasthan BJP Legislature Party. There will be two Deputy CMs- Diya Singh and Dr. Prem Chand Bairwa. Vasudev Devnani to be the Speaker,” says BJP central observer for Rajasthan, Rajnath Singh pic.twitter.com/XyqGKDo40o
— ANI (@ANI) December 12, 2023
ಮುಖ್ಯಮಂತ್ರಿ ಆಯ್ಕೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ರಾಜಸ್ಥಾನದ ಬಿಜೆಪಿ ಕೇಂದ್ರ ವೀಕ್ಷಕ ರಾಜ್ನಾಥ್ ಸಿಂಗ್, “ರಾಜಸ್ಥಾನ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಭಜನ್ಲಾಲ್ ಶರ್ಮಾ ಆಯ್ಕೆಯಾಗಿದ್ದಾರೆ. ದಿಯಾ ಸಿಂಗ್ ಮತ್ತು ಡಾ. ಪ್ರೇಮ್ ಚಂದ್ ಬೈರವ ಅವರು ಇಬ್ಬರು ಉಪ ಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿದ್ದಾರೆ. ವಾಸುದೇವ್ ದೇವ್ನಾನಿ ಸ್ಪೀಕರ್ ಆಗಲಿದ್ದಾರೆ” ಎಂದು ಹೇಳಿದ್ದಾರೆ.





