ಬಿಗ್ ಬಾಸ್ ತರಹದ psychological traumatic ಶೋಗಳನ್ನು ಮನರಂಜನೆಯ ಹೆಸರಿನಲ್ಲಿ ಸಮ್ಮತಿಸಲಾಗದು. ಅಂತಹ ಪ್ರಮಾದಗಳು ನಮ್ಮ ಟಿವಿ ಪರದೆಗಷ್ಟೇ ಸೀಮಿತವಾಗಿ ಉಳಿಯುವುದಿಲ್ಲ, ಈ ದೇಶದ ಪೀಳಿಗೆಯನ್ನೇ ಪ್ರಭಾವಿಸುತ್ತವೆ.
ಮೊನ್ನೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರ ಪೋಸ್ಟ್ ಕಣ್ಣಿಗೆ ಬಿತ್ತು, ”ಅಯ್ಯೋ ಈ ಭಾನುವಾರಕ್ಕೆ ಬಿಗ್‌ಬಾಸ್ ಮುಗಿದುಹೋಗುತ್ತೆ, ಆಮೇಲೆ ಹೆಂಗಪ್ಪಾ ನಾನು ಸಮಯ ಕಳೆಯೋದು?” ಆ ಪೋಸ್ಟ್‌ನಲ್ಲಿ ವ್ಯಂಗ್ಯವಿತ್ತಾದರೂ, ಸತ್ಯ ನುಡಿಯುತ್ತಿತ್ತು. ಜನರು ‘ಬಿಗ್‌ಬಾಸ್’ ರಿಯಾಲಿಟಿ ಶೋ ಅನ್ನು ಒಂದು ಎಂಟರ್‍ಟೈನ್‌ಮೆಂಟ್ ಕಾರ್ಯಕ್ರಮವಾಗಿ ನೋಡುತ್ತಿಲ್ಲ, ಬದಲಿಗೆ ಅದಕ್ಕೆ ತಮ್ಮನ್ನು ತಾವು ಅಡಿಕ್ಟ್ ಮಾಡಿಕೊಂಡಿದ್ದಾರೆ. Infact, ಹೀಗೆ ಜನರನ್ನು ಅಡಿಕ್ಷನ್‌ಗೆ ಒಳಪಡಿಸುವುದೇ ಅವುಗಳ ಅಜೆಂಡಾ ಮತ್ತು ಅವುಗಳ ಯಶಸ್ಸಿಗಿರುವ ಮಾನದಂಡ. ಯಾವ ರಿಯಾಲಿಟಿ ಶೋ ಹೆಚ್ಚು ನೋಡುಗರನ್ನು ಅಡಿಕ್ಷನ್‌ಗೆ ಒಳಪಡಿಸುತ್ತದೋ ಅದೇ ಸಕ್ಸಸ್‌ಫುಲ್ ಶೋ ಎಂದು ಪರಿಗಣಿಸಲ್ಪಡುತ್ತೆ. ಎಂಟರ್‍ಟೈನ್‌ಮೆಂಟ್ ಹೆಸರಿನ ಈ ಅಡಿಕ್ಷನ್ ಅನ್ನು ಶೈಕ್ಷಣಿಕ ಮನೋತಜ್ಞರಾದ ಡಾ. ವಿಜಯೇಂದ್ರ ಚೌಹಾಣ್ ‘ಗುಲಾಮಿ’ತನ ಎಂದು ಕರೆಯುತ್ತಾರೆ. ಅವರ ಪ್ರಕಾರ ಈ ರೀತಿಯ ರಿಯಾಲಿಟಿ ಶೋಗಳು ಒಂದು ನಿರ್ದಿಷ್ಟ ಅಜೆಂಡಾ ಇಟ್ಟುಕೊಂಡೇ ರೂಪುಗೊಂಡಿರುತ್ತವೆ. ಆರಂಭದಲ್ಲಿ ಕುತೂಹಲದ ಕಾರಣಕ್ಕೆ ಇಷ್ಟವಾಗುವ ಇವು, ಆನಂತರ ನೋಡುಗರು ತಮ್ಮನ್ನು ತಾವು ಆ ಕಾರ್ಯಕ್ರಮದ ಸ್ಪರ್ಧಿಯಂತೆ ಭಾವಿಸಿಕೊಳ್ಳುವಷ್ಟು ಆವರಿಸುತ್ತವೆ. ಭೌತಿಕವಾಗಿ ತಾವು ಅಲ್ಲಿ ಉಪಸ್ಥಿತರಿರಲು ಸಾಧ್ಯವಿಲ್ಲದೇ ಇರುವುದರಿಂದ ‘ನನ್ನ ಫೇವರಿಟ್ ಕಂಟೆಸ್ಟೆಂಟ್’ ಎಂಬ ಹೆಸರಿನಲ್ಲಿ ಯಾವುದೋ ಒಬ್ಬ ಪ್ರತಿಸ್ಪರ್ಧಿಯ ಜೊತೆ ಸಮೀಕರಿಸಿಕೊಂಡುಬಿಡುತ್ತಾರೆ. ಆ ಸ್ಪರ್ಧಿಯ ಸರಿ-ತಪ್ಪುಗಳ ಸಮರ್ಥಕರಾಗುವ ಮೂಲಕ ತಮ್ಮನ್ನು ತಾವೇ ಆ ಆಟದ ಭಾಗವಾಗಿಸಿಕೊಳ್ಳುತ್ತಾರೆ. ಎಷ್ಟರಮಟ್ಟಿಗೆಂದರೆ ಫೇವರಿಟ್ ಸ್ಪರ್ಧಿಯ, ನಿಕಟ ಪ್ರತಿಸ್ಪರ್ಧಿ ಮತ್ತು ಅವರ ಬೆಂಬಲಿಗರ ವಿರುದ್ಧ social bullying (ಸಾಮಾಜಿಕ ಪೀಡನೆ) ಮಾಡುವಷ್ಟು ಪ್ರೇಕ್ಷಕರು ಬದಲಾಗಿಹೋಗುತ್ತಾರೆ. ಇದನ್ನೇ ಚೌಹಾಣ್‌ರವರು ಗುಲಾಮಿತನ ಎಂದದ್ದು. ಈ addictionness ಪ್ರಚೋದಿಸುವುದಕ್ಕೆಂದೇ ‘ವೋಟಿಂಗ್’, ‘ಎಲಿಮಿನೇಷನ್’, ‘ಡೇಂಜರ್ ಝೋನ್’, ‘ವೈಲ್ಡ್‌ಕಾರ್ಡ್ ಎಂಟ್ರಿ’ ಹೆಸರಿನಲ್ಲಿ ಜನರಿಗೆ ಗಾಳ ಬೀಸಲಾಗುತ್ತದೆ.

ಬಿಗ್‌ಬಾಸ್ ತರಹದ ರಿಯಾಲಿಟಿ ಕಾರ್ಯಕ್ರಮಗಳನ್ನು ಎಂಟರ್‍ಟೈನ್‌ಮೆಂಟ್ ಎಂದು ಕರೆಯಲು ಸಾಧ್ಯವೇ? ಹಾಗೆ ಕರೆಯುವ ಮೂಲಕ ಅವು ಸಮಾಜದಲ್ಲಿ ಉಂಟುಮಾಡುತ್ತಿರುವ ಕ್ಷೋಭೆಯನ್ನು normalizeಗೊಳಿಸುವುದು ತರವೇ? ಪ್ರಗತಿಹೀನವೆಂದು ಪರಿಗಣಿಸಲ್ಪಟ್ಟ ‘ಬಲಪಂಥೀಯ’ ರಾಜಕೀಯ ಧೋರಣೆಗಳನ್ನು ವಿಸ್ತರಿಸಲು ಇವು ಹೇಗೆ ಸಹಾಯ ಮಾಡುತ್ತವೆ? ಇಂಥಾ ಪ್ರಶ್ನೆಗಳು ನಮಗಿಲ್ಲಿ ಮುಖ್ಯವಾಗಬೇಕಿದೆ.
ಇದನ್ನು ಓದಿದ್ದೀರಾ?: ಒಕ್ಕೂಟ ವ್ಯವಸ್ಥೆಯು ಭಿಕ್ಷೆಯಲ್ಲ, ಸಾಂವಿಧಾನಿಕ ಹಕ್ಕು: ಸಿಎಂ ಸಿದ್ದರಾಮಯ್ಯ
ಕಲಿಯುವ ಮಕ್ಕಳ ಪಠ್ಯಪುಸ್ತಕದಲ್ಲಿ ಯಾವ ಸಿಲಬಸ್ ಇರಬೇಕು? ಎಷ್ಟು ಇರಬೇಕು? ಎಂಬುದರ ಬಗ್ಗೆ ನಾವು ವಿಪರೀತ ಕಾಳಜಿವಹಿಸುತ್ತೇವೆ. ಅದಕ್ಕೋಸ್ಕರ ಶೈಕ್ಷಣಿಕ ತಜ್ಞರ, ಶಿಶುಮನೋವಿಜ್ಞಾನಿಗಳ, ಮೌಲ್ಯಮಾಪಕರ ಮೂಲಕ ಅಧ್ಯಯನ ನಡೆಸುತ್ತೇವೆ. ಯಾಕೆಂದರೆ, ಆ ಪಠ್ಯ ಕೇವಲ ನಮ್ಮ ಮಕ್ಕಳ ಅಕ್ಷರ ಕಲಿಕೆಯನ್ನಷ್ಟೆ ವಿಸ್ತರಿಸುವುದಿಲ್ಲ, ಬದಲಿಗೆ ಅವರ ಜ್ಞಾನ, ಗ್ರಹಿಕೆ ಮತ್ತು ವ್ಯಕ್ತಿತ್ವವನ್ನೂ ರೂಪಿಸುತ್ತವೆ. ಪಠ್ಯಪುಸ್ತಕಗಳು ಮಾಡುವ ಕೆಲಸವನ್ನೇ ತಮ್ಮ ಮಿತಿಯಲ್ಲಿ ಕಲೆ ಮತ್ತು ಮನರಂಜನೆಗಳು ಕೂಡಾ ಮಾಡುತ್ತವೆ. ಕಲಿಕೆಯ ಹೆಸರಿನಲ್ಲಿ ಹೇಗೆ ನಾವು ಮಕ್ಕಳ ವಿಕಸನಕ್ಕೆ ಪೂರಕವಲ್ಲದ ಸಂಕುಚಿತ ಸಿಲಬಸ್‌ಗಳನ್ನು ವಿರೋಧಿಸುತ್ತೇವೆಯೋ, ಅದೇ ಕಾರಣಕ್ಕೆ ಎಂಟರ್‍ಟೈನ್‌ಮೆಂಟ್ ಹೆಸರಿನಲ್ಲೂ ವಿಕಸನಕ್ಕೆ ಪೂರಕವಲ್ಲದ ಕಾರ್ಯಕ್ರಮಗಳನ್ನು ನಾವು ತಿರಸ್ಕರಿಸಬೇಕಾಗುತ್ತದೆ. ಈ ಉದ್ದೇಶದಿಂದಲೇ ಸಿನಿಮಾಗಳ ಸೆನ್ಸಾರ್‍ಶಿಪ್ ಅಸ್ತಿತ್ವಕ್ಕೆ ಬಂದದ್ದು; ‘ಎ’ ಮತ್ತು ‘ಯು’ ಸರ್ಟಿಫಿಕೇಟ್‌ಗಳೆಂಬ ವಿಂಗಡಣೆ ಜಾರಿಗೆ ಬಂದದ್ದು. ವಿಪರ್ಯಾಸವೆಂದರೆ, ರಿಯಾಲಿಟಿ ಶೋಗಳಿಗೆ ಅಂತಹ ಯಾವ ಸೆನ್ಸಾರ್‍ಶಿಪ್ ಇಲ್ಲ. ಸೆನ್ಸೇಷನಲ್‌ಶಿಪ್ ಹೆಸರಿನಲ್ಲಿ ಎಲ್ಲವೂ ಇಲ್ಲಿ ಖುಲ್ಲಂಖುಲ್ಲಾ!
ಮಗುವೊಂದು ಇಡೀ ದಿನ ಶಾಲೆಯಲ್ಲಿ ವಿಕಸನದ ಪಠ್ಯವನ್ನು ಕಲಿತು, ಸಂಜೆ ಅಪ್ಪ-ಅಮ್ಮ, ಅಜ್ಜಿ-ತಾತನೊಟ್ಟಿಗೆ ಕುಳಿತು ಇಂತಹ ‘ಮನೋವ್ಯಾಕುಲ’ ಮತ್ತು relational aggression (ಆಕ್ರಮಣಶೀಲ ಸಂಬಂಧ – ಗಾಸಿಪ್, ವ್ಯಕ್ತಿಸಂಘರ್ಷ, ಗುಂಪುಗಾರಿಕೆ, ಬೈಗುಳ ಇತ್ಯಾದಿ) ಕಂಟೆಂಟ್‌ಗಳನ್ನು ವೀಕ್ಷಿಸಿದರೆ, ಶಾಲೆಯಲ್ಲಿ ಕಲಿತ ಪಠ್ಯದ ಉದ್ದೇಶವೇನಾಗಬೇಕು? ಇದು ಕೇವಲ ಮಕ್ಕಳಿಗೆ ಸಂಬಂಧಪಟ್ಟ ಸಂಗತಿಯಲ್ಲ. ವಯಸ್ಕರು ಕೂಡಾ ಇಂತಹ ಅಡಿಕ್ಷನ್‌ಗಳಿಂದ ವ್ಯಕ್ತಿತ್ವ ಸಮಸ್ಯೆಗಳಿಗೆ ಈಡಾಗುತ್ತಾರೆ. ಅದು ಸಮಾಜವನ್ನು ಉದ್ವಿಗ್ನಕಾರಿಯಾಗಿ ರೂಪಿಸುತ್ತದೆ.
ಲಂಡನ್‌ನ ಸೇಂಟ್ ಮೇರಿಸ್ ಯೂನಿವರ್ಸಿಟಿಯ ಮನೋತಜ್ಞರಾದ ಡಾ. ಜಾಕೋಬ್ ಜೋಹಾನ್‌ಸೆನ್ ಅವರು ಬಿಗ್‌ಬ್ರದರ್ ತರಹದ (ಬಿಗ್‌ಬಾಸ್ ರೀತಿಯ ಅಂತಾರಾಷ್ಟ್ರೀಯ ಕಾರ್ಯಕ್ರಮ) ರಿಯಾಲಿಟಿ ಶೋಗಳನ್ನು unethical psychological experiments (ಅನೈತಿಕ ಮನೋವೈಜ್ಞಾನಿಕ ಪ್ರಯೋಗಗಳು) ಎಂದು ಕರೆಯುತ್ತಾರೆ. ವೈದ್ಯಕೀಯ ಅಥವಾ ಮನೋವೈದ್ಯಕೀಯ ಅಧ್ಯಯನಕ್ಕಾಗಿ ನೀವು ಯಾವುದೇ ವ್ಯಕ್ತಿಗಳನ್ನು ಪರೀಕ್ಷೆಗೆ ಬಳಸಿಕೊಳ್ಳುವಾಗ ಅವರಿಂದ informed consent (ಮಾಹಿತಿಪೂರ್ಣ ಒಪ್ಪಿಗೆ) ಪಡೆಯುವುದು ಕಡ್ಡಾಯ. ಅಂದರೆ ಆ ಪರೀಕ್ಷೆಯಿಂದ ವ್ಯಕ್ತಿಯಲ್ಲಿ ಆಗಬಹುದಾದ ಬದಲಾವಣೆ ಮತ್ತು ದುಷ್ಪರಿಣಾಮ ಸಾಧ್ಯತೆಗಳನ್ನು ವಿವರಿಸಿ, ಅದಕ್ಕೆ ತಮ್ಮಿಂದ ಸಿಗುವ ಪರಿಹಾರ ಕಾರ್ಯಗಳನ್ನು ಮನವರಿಕೆ ಮಾಡಿಕೊಟ್ಟ ನಂತರ ಆ ವ್ಯಕ್ತಿಯಿಂದ ಪಡೆಯಲಾಗುವ ಸಮ್ಮತಿ. ಆದರೆ ರಿಯಾಲಿಟಿ ಶೋಗಳು informed consent ಪಡೆಯದೆ (ಕೇವಲ ಕಮರ್ಷಿಯಲ್ ಅಗ್ರಿಮೆಂಟ್ ಮಾಡಿಕೊಳ್ಳಲಾಗುತ್ತೆ) ಕಂಟೆಸ್ಟೆಂಟ್‌ಗಳನ್ನು ಟಾಸ್ಕ್ ಹೆಸರಿನಲ್ಲಿ psychologically traumatic (ಮಾನಸಿಕ ಆಘಾತಕಾರಿ) ಪರೀಕ್ಷೆಗಳಿಗೆ ಒಡ್ಡುತ್ತವೆ. ಆ traumaದ ಒತ್ತಡಗಳನ್ನು ನಿಭಾಯಿಸಲು ಬೇಕಾದ moral ಅಥವಾ physical support ಕೂಡಾ ಸ್ಪರ್ಧಿಗಳಿಗೆ ಸಿಗುವುದಿಲ್ಲ. ಟಿಆರ್‍ಪಿ ಹೆಚ್ಚಿಸಿಕೊಳ್ಳುವ ಏಕೈಕ ಕಾರಣಕ್ಕೆ emotional volatility(ಭಾವನಾತ್ಮಕ ಅಸ್ಥಿರತೆ)ಗಳನ್ನು ಹಸಿಹಸಿಯಾಗಿ ಎಕ್ಸ್‌ಪೋಸ್ ಮಾಡಲಾಗುತ್ತೆ.
ಇಲ್ಲಿ ನಾವು ನೆನಪಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ, ಪ್ರತಿ ವ್ಯಕ್ತಿಯು ಸುಪ್ತ ಮತ್ತು ತೋರಿಕೆ ಪ್ರಜ್ಞೆಗಳೊಂದಿಗೆ ಬದುಕುತ್ತಿರುತ್ತಾನೆ. ಸಂಘಜೀವಿಯಾಗಿ, ನಾಗರಿಕತೆ ಚೌಕಟ್ಟಿನ ಪ್ರಾಣಿಯಾಗಿ ಬದುಕಬೇಕೆಂದರೆ ಈ ಹೊಂದಾಣಿಕೆ ಮನುಷ್ಯನಿಗೆ ಅತಿ ಅವಶ್ಯಕ. ಮನುಷ್ಯ ಆಳದಲ್ಲಿ ಕ್ರೌರ್ಯ, ದ್ವೇಷ, ಸ್ವಾರ್ಥಗಳಿಂದ ರಚಿತವಾದರೂ ನಾಗರಿಕತೆಯ ಚೌಕಟ್ಟು ಅವನ ನಡವಳಿಕೆಯಲ್ಲಿ ಅವುಗಳು ಢಾಳಾಗಿ ಗೋಚರಿಸದಂತೆ ಮಿತಿ ಹೇರಿರುತ್ತದೆ. ಹಾಗಾಗಿ ಅವು ಅವ್ಯಕ್ತ ರೂಪದಲ್ಲಿ ಅವಿತಿಟ್ಟುಕೊಂಡಿರುತ್ತವೆ. ಅದನ್ನು ನೀವು ನಾಟಕೀಯತೆ ಎನ್ನಬಹುದು ಅಥವಾ ಮುಖವಾಡ ಎಂದು ಕರೆಯಬಹುದು. ವ್ಯಕ್ತಿ ಎಷ್ಟೇ ಕೆಟ್ಟವನಾಗಿದ್ದರೂ, ಸಮಾಜದ moral standardಗಳು ಅವನು ಗರಿಷ್ಠ ಕೆಟ್ಟವನಾಗಿ ವ್ಯಕ್ತಗೊಳ್ಳದಂತೆ ನಿಯಂತ್ರಣದ compulsion (ಒತ್ತಾಯ) ಹೇರಿರುತ್ತವೆ. ಇಷ್ಟೆಲ್ಲ ಕ್ಷೋಭೆಯ ನಡುವೆಯೂ ನಮ್ಮ ಸಮಾಜ ಕೊಂಚ ಸಹ್ಯವೆನಿಸಿರುವುದು ಇದೇ ಕಾರಣಕ್ಕೆ. ಸ್ನೇಹ, ಸಂಬಂಧಗಳು ಕೊಂಚವಾದರೂ ಮೌಲ್ಯ ಉಳಿಸಿಕೊಂಡಿರುವುದು ಇಂತಹ moral compulsionಗಳಿಂದ. ಈ ಬಗೆಯ compulsionಗಳು ತಮ್ಮ ಎಲ್ಲೆಯನ್ನು ಮೀರಿದಾಗ, ವ್ಯಕ್ತಿ ಮನೋವ್ಯಾಕುಲತೆಗೆ ತುತ್ತಾಗಿ abnormal ಆಗಿ ವರ್ತಿಸುತ್ತಾನೆ. ಅಂತಹ ಸಂದರ್ಭಗಳಲ್ಲಿ ಅವನ ಸುಪ್ತ ಪ್ರಜ್ಞೆಯನ್ನು ಅರ್ಥ ಮಾಡಿಕೊಳ್ಳಲು ಮನೋವಿಜ್ಞಾನಿಗಳು ವೈಜ್ಞಾನಿಕ ರೀತಿಯ ವೈದ್ಯಕೀಯ ಪರೀಕ್ಷೆಗಳ ಮೂಲಕ ವ್ಯಕ್ತಿಗೆ ಶಮನಕಾರಿ ಚಿಕಿತ್ಸೆ ನೀಡುತ್ತಾರೆ. ಆದರೆ ಈ ರಿಯಾಲಿಟಿ ಶೋಗಳು ಅಂತಹ ಯಾವುದೇ ವೈದ್ಯಕೀಯ, ವೈಜ್ಞಾನಿಕ ಅರ್ಹತೆಯಿಲ್ಲದ ಟಾಸ್ಕ್ ಹೆಸರಿನಲ್ಲಿ ವ್ಯಕ್ತಿಗಳ ಸುಪ್ತಪ್ರಜ್ಞೆಯು social compulsionಗಳನ್ನು ಮೀರಿ ವ್ಯಕ್ತವಾಗುವಂತೆ ಪ್ರಚೋದಿಸುತ್ತವೆ. ಇದು ಶಮನಕಾರಿ ಮಾರ್ಗವಲ್ಲ, ಪ್ರಚೋದನಕಾರಿ ಮಾರ್ಗ. ಹಾಗಾಗಿಯೇ ಜಾಕೋಬ್ ಜೋಹಾನ್‌ಸೆನ್ ಇವುಗಳನ್ನು unethical psychological experiment ಗಳೆಂದು ಕರೆದದ್ದು. ಈಗ ನಾವು ಕೇಳಿಕೊಳ್ಳಬೇಕಿರುವ ಪ್ರಶ್ನೆಯೆಂದರೆ, ಇಂತಹ unethical experiment(ಅನೈತಿಕ ಪ್ರಯೋಗ)ಗಳಿಂದ ಸಮಾಜದ ಮೇಲೆ ethical (ನೈತಿಕ) ಪರಿಣಾಮಗಳು ಉಂಟಾಗಲು ಸಾಧ್ಯವೇ? ಖಂಡಿತ ಇಲ್ಲ!

ಇದನ್ನು ಓದಿದ್ದೀರಾ?: ‘ಕೇಂದ್ರವೇ ಶ್ರೇಷ್ಠ-ರಾಜ್ಯಗಳು ಅಧೀನ’ ಎಂಬುದು ಸಂವಿಧಾನ ವಿರೋಧಿ: ಸುಪ್ರೀಂ ನಿ. ನ್ಯಾ. ಸುದರ್ಶನ್ ರೆಡ್ಡಿ
ಮನೋಶಾಸ್ತ್ರೀಯ ಅಧ್ಯಯನಗಳು ಇಂತಹ ರಿಯಾಲಿಟಿ ಶೋಗಳಿಂದ ಆಗಬಹುದಾದ ಹಲವು ದುಷ್ಪರಿಣಾಮಗಳನ್ನು ಪಟ್ಟಿ ಮಾಡುತ್ತವೆ. ಮೊದಲನೆಯದಾಗಿ loss of privacy. ಒಬ್ಬ ವ್ಯಕ್ತಿಯ ಪ್ರತಿ activity ಮತ್ತು emotionಗಳನ್ನು ಕ್ಯಾಮೆರಾ ಇಟ್ಟು capture ಮಾಡಿ ಬಿತ್ತರಿಸುವುದರಿಂದ ಆ ವ್ಯಕ್ತಿಗೆ ಸಿಗುತ್ತಿರುವ ಪ್ರಚಾರವು ನೋಡುಗರಲ್ಲಿ public visibility(ಸಾರ್ವಜನಿಕ ಗೋಚರತೆ)ಯನ್ನು ಪ್ರಚೋದಿಸುತ್ತದೆ. ನಮ್ಮ ಎಮೋಷನ್‌ಗಳನ್ನು ಹೀಗೆ ಕ್ಯಾಮೆರಾ ಮುಂದೆ ತೆರೆದಿಡುವುದರಿಂದ ನಮಗೂ ಪ್ರಚಾರ ಸಿಗಲಿದೆ ಎಂಬ ಲೋಭ ಆವರಿಸುತ್ತದೆ. ಅಸಭ್ಯ ರೀಲ್‌ಗಳು, ಆತ್ಮಹತ್ಯೆಯ ಲೈವ್‌ಗಳು, ಅತ್ಯಾಚಾರದ ಚಿತ್ರೀಕರಣ, ಕೊಲೆಯ ದೃಶ್ಯೀಕರಣದ ಮನಸ್ಥಿತಿಗಳು ಹೆಚ್ಚಾಗುತ್ತಿರುವುದು ಇಂತಹ public visibility ಹುಚ್ಚುತನದಿಂದ. ಇನ್ನು ಈ ಬಗೆಯ ಕಾರ್ಯಕ್ರಮಗಳಲ್ಲಿ induced psychological traumaಗೆ (ಪ್ರೇರೇಪಿತ ಮಾನಸಿಕ ಆಘಾತ) ತುತ್ತಾಗುವ ಸ್ಪರ್ಧಿಗಳು ಪ್ರತಿ ಸಮಸ್ಯೆಗೂ ಸಂಘರ್ಷಕ್ಕೆ ಇಳಿಯುತ್ತಾರೆ. ಇದನ್ನು ನೋಡುವ ಪ್ರೇಕ್ಷಕರು ತಮ್ಮ ಜೀವನದಲ್ಲೂ ಸಮಸ್ಯೆಗಳಿಗೆ ಸಂಘರ್ಷ, ವಾಗ್ವಾದ, ಹೊಡೆದಾಟಗಳೇ ಪರಿಹಾರವೆಂಬ ಮನಸ್ಥಿತಿಗೆ ತಲುಪುತ್ತಾರೆ. ಇದು ಸಮಾಜದಲ್ಲಿ ದ್ವೇಷ, ಹಿಂಸೆ, ಕ್ರೌರ್ಯವನ್ನು ಪ್ರಚೋದಿಸಬಹುದು. ಜಾತಿ ಮತ್ತು ಧಾರ್ಮಿಕ ಅಸಹಿಷ್ಣುತೆಯಿಂದ ಬಳಲುತ್ತಿರುವ ಇವತ್ತಿನ ಭಾರತದ ಸಮಾಜಕ್ಕೆ ಇವು ತುಂಬಾ ಅಪಾಯಕಾರಿ. ಬಲಪಂಥೀಯ ರಾಜಕಾರಣ ಉಲ್ಬಣಿಸಲು ಇವು ನೀಡಬಹುದಾದ ನೆರವನ್ನು ತಳ್ಳಿಹಾಕಲಾಗದು. ಈ ಕುರಿತು ಸಂಶೋಧನೆ ನಡೆಸಿದ Douglas A Gentile, Sarah Coyne, David A Walsh ಮೊದಲಾದ ತಜ್ಞರು Media violence, physical aggression, and relational aggression in school age children ಎಂಬ ತಮ್ಮ ಪ್ರಬಂಧದಲ್ಲಿ ”ಮೀಡಿಯಾ ಶೋಗಳ ಇಂತಹ ಹಸಿ ಬಿತ್ತರಿಸುವಿಕೆಯು ವ್ಯಕ್ತಿಗತ ನಕಾರಾತ್ಮಕ ವರ್ತನೆಗಳ ಬಗ್ಗೆ public normalcy (ಸಾರ್ವಜನಿಕ ಸಹಜತೆ)ಯನ್ನು ಬೆಳೆಸುತ್ತದೆ. Moral standardಗಳನ್ನು ಮೀರಿ ಹೀಗೆ ವ್ಯಗ್ರವಾಗಿ, ಅನುಚಿತವಾಗಿ ವರ್ತಿಸುವುದು ಸಹಜ ಮತ್ತು ಸ್ವೀಕಾರಾರ್ಹ ವೈಖರಿ ಎಂದು ಅನ್ನಿಸುವುದರಿಂದ ತಮ್ಮ ನಿಜ ಜೀವನದಲ್ಲೂ ಜನರು ಹಾಗೆ ವರ್ತಿಸಲು ಇವು ಪ್ರಚೋದನೆ ನೀಡುತ್ತವೆ” ಎನ್ನುತ್ತಾರೆ.
ಬಿಗ್ ಬ್ರದರ್ ತರಹದ ಕಾರ್ಯಕ್ರಮಗಳು ಪ್ರಪಂಚದಾದ್ಯಂತ ಮಾಡಿರುವ ವ್ಯಕ್ತಿಗತ ದುಷ್ಪರಿಣಾಮದ ನಿದರ್ಶನಗಳು ಇದಕ್ಕೆ ಸಾಕ್ಷಿ. 2019 ಆಸ್ಟ್ರೇಲಿಯಾದ ‘ಹೌಸ್‌ರೂಲ್ಸ್’ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸ್ಪರ್ಧಿ ನಿಕೋಲೆ ಪ್ರಿನ್ಸ್, ಅಲ್ಲಿಂದ ಹೊರಬಂದ ನಂತರ ಅಪಾರ psychological injuryಗೆ ತುತ್ತಾದಳು. ತಮ್ಮ ಟಿಆರ್ಪಿಗೋಸ್ಕರ ಕಾರ್ಯಕ್ರಮದ ಆಯೋಜಕರು ಕ್ಲಿಪಿಂಗ್‌ಗಳನ್ನು ಎಡಿಟ್ ಮಾಡಿ ಆಕೆಯನ್ನು ‘ವಿಲನ್’ ರೀತಿ ಬಿಂಬಿಸಿದ್ದರಿಂದ, ಕಾರ್ಯಕ್ರಮ ಮುಗಿದ ನಂತರವೂ ಸಮಾಜ ಆಕೆಯನ್ನು ಅದೇ ರೀತಿಯಲ್ಲಿ ನಡೆಸಿಕೊಂಡಿತು. ಖಿನ್ನತೆಗೆ ಜಾರಿ, ಕೋರ್ಟ್ ಮೆಟ್ಟಲೇರಿದಳು. ಆಕೆಯ Post-Traumatic Stress Disorder (ಆಘಾತೋತ್ತರ ಒತ್ತಡದ ಅಸ್ವಸ್ಥತೆ-PTSD)ಗೆ ಕಾರ್ಯಕ್ರಮವೇ ಹೊಣೆ ಎಂದು ಕೋರ್ಟ್ ತೀರ್ಪು ನೀಡಿತು. ಇಂಗ್ಲೆಂಡ್‌ನ ‘ಲವ್ ಐಲ್ಯಾಂಡ್’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸೋಫಿ ಗ್ರೇಡಾನ್, ಮೈಕ್ ಥೆಲಾಸಿಟೀಸ್ ಮತ್ತು ಸ್ವತಃ ನಿರೂಪಕಿ ಕೆರೋಲಿನ್ ಫ್ಲ್ಯಾಕ್, ಕೇವಲ ಮೂರು ವರ್ಷಗಳ ಅಂತರದಲ್ಲಿ ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡರು. ಈ ಆತ್ಮಹತ್ಯೆಗಳ ಹಿಂದೆ ಕಾರ್ಯಕ್ರಮದ psychological injuryಯ ಪಾತ್ರವಿದೆ ಎಂದು ಸಂಶೋಧಕರು ಹೇಳುತ್ತಾರೆ. ಇನ್ನು ಇಂಡಿಯಾದ ವಿಚಾರಕ್ಕೆ ಬರುವುದಾದರೆ, 2017ರಲ್ಲಿ ಓವಿಯಾ ಹೆಲೆನ್ ಮತ್ತು 2019ರಲ್ಲಿ ಮಧುಮಿತಾ ತಮಿಳು ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಕ್ಯಾಮೆರಾ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ್ದುಂಟು.

ಬಹುಶಃ ಇಂತದ್ದನ್ನೆಲ್ಲ ಗಮನಿಸಿಯೇ ಆಸ್ಪ್ರೇಲಿಯಾದ ಚಿಂತಕಿ ಜರ್ಮೈನ್ ಗ್ರೀರ್ ಈ ಬಗೆಯ ರಿಯಾಲಿಟಿ ಶೋಗಳನ್ನು ‘ಫ್ಯಾಸಿಸ್ಟ್ ಜೈಲುಗಳು’ ಎಂದು ಕರೆದಿದ್ದಾರೆ. ಮಾನವೀಯತೆ, ನೈತಿಕತೆ ಮತ್ತು ಸೋದರತೆಗಳನ್ನು ಧ್ವಂಸಗೊಳಿಸಿ ಸಮಾಜದಲ್ಲಿ ಪ್ರಕ್ಷುಬ್ಧತೆ ಹಾಗೂ ಅಶಾಂತಿಯನ್ನು ಉತ್ಪಾದಿಸುವುದು; ಅಂತಹ ಉತ್ಪಾದನೆಯಿಂದ ಅಧಿಕಾರದ ಫಸಲು ಪಡೆಯುವುದು ಫ್ಯಾಸಿಸಂನ ಅಜೆಂಡಾ. ಟಾಸ್ಕ್ ಅಥವಾ ಆಟಗಳ ಹೆಸರಿನಲ್ಲಿ ಈ ರಿಯಾಲಿಟಿ ಶೋಗಳು ಮಾಡುತ್ತಿರುವುದು ಇದನ್ನೆ. ಇದು ಕೇವಲ ಒಂದು group of contestants ಅಥವಾ ಒಂದು ಸೀಮಿತ ಕಾರ್ಯಕ್ರಮಕ್ಕೆ ಸೀಮಿತವಾದುದಲ್ಲ. ಮೊದಲೇ ಹೇಳಿದಂತೆ ಮನರಂಜನೆಯ ಹೆಸರಿನಲ್ಲಿ ಇವು ನೋಡುಗರನ್ನು ತಮ್ಮ ದಾಸರನ್ನಾಗಿ ಮಾಡಿಕೊಳ್ಳುವುದರಿಂದ ಇದರ ಪರಿಣಾಮ ಸಮಾಜದಲ್ಲೂ ಗೋಚರಿಸುತ್ತದೆ. ಇತ್ತೀಚೆಗೆ ಮುಕ್ತಾಯವಾದ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಜಾತಿಗಳು ಮುನ್ನೆಲೆಗೆ ಬಂದು ನಿಂತದ್ದು, ಅವರ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ aggressive tribalism (ಉಗ್ರ ಗುಂಪುಗಾರಿಕೆ ಮನೋಭಾವ) ಸೃಷ್ಟಿಯಾದದ್ದು ಎಲ್ಲವೂ ಇದಕ್ಕೆ ಸಾಕ್ಷಿ.
ಇದನ್ನು ಓದಿದ್ದೀರಾ?: ಬಿಗ್ ಬಾಸ್ | ರಿಯಾಲಿಟಿ ಶೋಗಳೂ, ಜನಪ್ರಿಯತೆಯ ಭ್ರಮೆಯೂ…
ಅಯ್ಯೋ, ಯಕಶ್ಚಿತ್ ಒಂದು ಟಿವಿ ಕಾರ್ಯಕ್ರಮ. ಇಷ್ಟವಿದ್ದವರು ನೋಡುತ್ತಾರೆ, ಇಲ್ಲದವರು ಬಿಡುತ್ತಾರೆ. ನೋಡಿದವರು ಕೂಡಾ, ಅದು ಮುಗಿದ ಬಳಿಕ ತಮ್ಮ ಬದುಕಿನ ತಾಪತ್ರಯಗಳಲ್ಲೆ ಕಳೆದುಹೋಗುತ್ತಾರೆ. ಅದಕ್ಕೆ ಯಾಕೆ ಇಷ್ಟೆಲ್ಲ ತಲೆಕೆಡಿಸಿಕೊಳ್ಳಬೇಕು? ಎಂದು ನೀವು ಕೇಳಬಹುದು. ಆದರೆ, ಸುದ್ದಿ ಅಥವಾ ಮನರಂಜನೆಯ ಹೆಸರಿನಲ್ಲಿ ಸಾರ್ವಜನಿಕವಾಗಿ ಬಿತ್ತರವಾಗುವ ಯಾವುದೇ ಕಾರ್ಯಕ್ರಮದ ಪ್ರಭಾವವನ್ನು ಇಷ್ಟು ಸಲೀಸಾಗಿ ತಳ್ಳಿಹಾಕಲಾಗದು. ಸಂಶೋಧಕ ಅರವಿಂದ್ ರಾಜಗೋಪಾಲ್ ತಮ್ಮ Politics After Television ಕೃತಿಯಲ್ಲಿ ಎಂಬತ್ತರ ದಶಕದಲ್ಲಿ ಸರ್ಕಾರಿ ಒಡೆತನದ ದೂರದರ್ಶನದಲ್ಲಿ ಬಿತ್ತರವಾದ ರಾಮಾಯಣ, ಮಹಾಭಾರತ, ಚಾಣಕ್ಯದಂತಹ ಧಾರಾವಾಹಿಗಳು ಬಹುಸಂಖ್ಯಾತ ಧಾರ್ಮಿಕ ರಾಜಕಾರಣ ಮುನ್ನೆಲೆಗೆ ಬರುವಲ್ಲಿ ಹೇಗೆ ಜನರನ್ನು ಬೆಸೆದವು ಮತ್ತು ರಾಮಜನ್ಮಭೂಮಿ ಅಭಿಯಾನ, ಬಾಬರಿ ಮಸೀದಿ ಧ್ವಂಸಕ್ಕೆ ಹೇಗೆ ಮನೋಭೂಮಿಕೆ ಸಿದ್ದಪಡಿಸಿದವು ಎಂಬುದನ್ನು ವಿವರಿಸಿದ್ದಾರೆ. ಸಣ್ಣದಾಗಿ ಮುಂಚಲನೆ ಪಡೆದುಕೊಳ್ಳುತ್ತಿದ್ದ ಈ ದೇಶದ scientific ಮತ್ತು secular temperamentಗಳನ್ನು ಹಿಮ್ಮುಖನಾಗಿಸುವಲ್ಲಿ mythology ಹೆಸರಿನ ಈ ಧಾರಾವಾಹಿಗಳ ಪಾತ್ರ ಅಪಾರವಾದುದು. ಕೇವಲ ಧಾರಾವಾಹಿಗಳಷ್ಟೆ ಈ ಪಲ್ಲಟಕ್ಕೆ ಕಾರಣ ಎನ್ನಲಾಗದು. ಆದರೆ ಅವುಗಳ ಕೊಡುಗೆ ಪಲ್ಲಟವನ್ನು ಸುಲಭಗೊಳಿಸಿದವು ಎಂಬುದು ವಾಸ್ತವ. ಹಾಗಾಗಿ ಬಿಗ್‌ಬಾಸ್ ತರಹದ psychological traumatic ಶೋಗಳನ್ನು ಮನರಂಜನೆಯ ಹೆಸರಿನಲ್ಲಿ ಸಮ್ಮತಿಸಲಾಗದು. ಅಂತಹ ಪ್ರಮಾದಗಳು ನಮ್ಮ ಟಿವಿ ಪರದೆಗಷ್ಟೇ ಸೀಮಿತವಾಗಿ ಉಳಿಯುವುದಿಲ್ಲ, ಈ ದೇಶದ ಪೀಳಿಗೆಯನ್ನೇ ಪ್ರಭಾವಿಸುತ್ತವೆ.


ಗಿರೀಶ್ ತಾಳಿಕಟ್ಟೆ
ಪತ್ರಕರ್ತ, ಲೇಖಕ




