ಬಿಹಾರದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ(PMGSY) ಅಡಿಯಲ್ಲಿ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಸೇತುವೆಯೊಂದನ್ನು ನಿರ್ಮಿಸಲಾಗಿದ್ದರೂ ಬಳಸಲಾಗದ ಸ್ಥಿತಿಯಲ್ಲಿದೆ. ಸೇತುವೆ ನಿರ್ಮಾಣ ಆರಂಭವಾಗಿ ನಾಲ್ಕು ವರ್ಷಗಳು ಕಳೆದರೂ ಸ್ಥಳೀಯ ರಸ್ತೆಗೆ ಇನ್ನೂ ಸಂಪರ್ಕ ಕಲ್ಪಿಸದ ಕಾರಣದಿಂದಾಗಿ ಸೇತುವೆಯನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದಾಗಿ ಸೇತುವೆ ನಿಷ್ಪ್ರಯೋಜಕವಾಗಿದೆ.
ಬಿಹಾರದ ಕತಿಹಾರ್ ಜಿಲ್ಲೆಯ ದಂಡಖೋಡಾ ಬ್ಲಾಕ್‌ನಲ್ಲಿರುವ ಪಸಂತ ಸೇತುವೆಗೆ ನಾಲ್ಕು ಕೋಟಿ ರೂಪಾಯಿ ವೆಚ್ಚವಾಗಿದ್ದರೂ ಇದು ತಾತ್ಕಾಲಿಕ ಸೇತುವೆಯಂತೆ ಭಾಸವಾಗುತ್ತದೆ. ಯಾವುದೇ ಸಂಪರ್ಕ ರಸ್ತೆಯಿಲ್ಲದೆ, ಹೊಲಗಳ ದಂಡೆ ಮತ್ತು ಸೇತುವೆಯ ಒಂದು ಕಂಬ ಮಾತ್ರ ಇದೆ. ಸೇತುವೆಯ ಆಧಾರ ಸ್ತಂಭ ಖಾಸಗಿ ಒಡೆತನದ ಭೂಮಿಯಲ್ಲಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಬಿಹಾರ | ಮತ್ತೊಂದು ಸೇತುವೆ ಕುಸಿತ; ಮೂರು ವಾರಗಳಲ್ಲಿ 13ನೇ ಪ್ರಕರಣ!
ಈ ಸೇತುವೆಯು ಸಮೀಪದ 10-12 ಹಳ್ಳಿಗಳನ್ನು ಜಿಲ್ಲಾ ಕೇಂದ್ರಕ್ಕೆ ಸಂಪರ್ಕಿಸುವ ನಿಟ್ಟಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಹಾಗೆಯೇ ದೀರ್ಘ ಪ್ರಯಾಣವನ್ನು ಕಡಿತಗೊಳಿಸುವ ಉದ್ದೇಶವೂ ಈ ಸೇತುವೆ ನಿರ್ಮಾಣದ ಹಿಂದಿತ್ತು. ಆದರೆ ನಾಲ್ಕು ವರ್ಷವಾದರೂ ಸೇತುವೆ ಬಳಕೆಯ ಲಭ್ಯವಿಲ್ಲದಂತಾಗಿದೆ.
2020ರ ಸೆಪ್ಟೆಂಬರ್ 3ರಂದು ಸೇತುವೆಯ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಈ ಯೋಜನೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ 2021ರ ಸೆಪ್ಟೆಂಬರ್ 2ರವರೆಗೆ ಅಂದರೆ ಒಂದು ವರ್ಷದ ಕಾಲಾವಕಾಶ ನೀಡಲಾಗಿತ್ತು. ಸೇತುವೆಯೇನೋ ಪೂರ್ಣವಾಗಿದೆ. ಆದರೆ ಭೂಸ್ವಾಧೀನ ಪ್ರಕ್ರಿಯೆ ಮುಗಿಯದೆ ನಾಲ್ಕು ವರ್ಷವಾದರೂ ಬಳಕೆಗೆ ಅವಕಾಶವಿಲ್ಲದಂತಾಗಿದೆ. ಸದ್ಯ ಬಿಹಾರದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಇಂತಹ ಲೋಪಗಳು ಹೆಚ್ಚು ಮುನ್ನೆಲೆಗೆ ಬರುತ್ತಿವೆ.





