ಭಾರತದ ಚಿತ್ತ ಸೆಳೆದಿದ್ದ ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಆಡಳಿತಾರೂಢ ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದೆ. ಕಾಂಗ್ರೆಸ್-ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಭಾರೀ ಹಿನ್ನಡೆ ಅನುಭವಿಸಿ ಸೋಲುಂಡಿದೆ.
ಬಿಹಾರದ ಒಟ್ಟು 243 ವಿಧಾನಸಭಾ ಕ್ಷೇತ್ರಗಳ ಪೈಕಿ ಎನ್‌ಡಿಎ 202 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮಹಾಘಟಬಂಧನ್ 35 ಸ್ಥಾನಗಳನ್ನು ಗೆದ್ದು, ಹೀನಾಯವಾಗಿ ಸೋಲುಂಡಿದೆ. ಸ್ವತಂತ್ರವಾಗಿ ಸ್ಪರ್ಧಿಸಿದ್ದ ಎಐಎಂಐಎಂ 5 ಸ್ಥಾನಗಳನ್ನು ಗೆದ್ದಿದ್ದರೆ, ಬಿಎಸ್‌ಪಿ 1 ಸ್ಥಾನ ಗೆದ್ದಿದೆ. ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜೆಎಸ್‌ಪಿ ತನ್ನ ಖಾತೆ ತೆರೆಯುವಲ್ಲಿ ವಿಫಲವಾಗಿದೆ.
ಎನ್‌ಡಿಎ ಭಾಗವಾಗಿರುವ ಬಿಜೆಪಿ 89, ಜೆಡಿಯು 84, ಎಲ್‌ಜೆಪಿ 19 ಹಾಗೂ ಇತರ ಪಕ್ಷಗಳು 9 ಸ್ಥಾನಗಳನ್ನು ಗೆದ್ದಿವೆ.
ಮಹಾಘಟಬಂಧನ್ ಭಾಗವಾಗಿರುವ ಆರ್‌ಜೆಡಿ 25, ಕಾಂಗ್ರೆಸ್ 6 ಹಾಗೂ ಎಡಪಕ್ಷಗಳು 4 ಕ್ಷೇತ್ರಗಳಲ್ಲಿ ಗೆದ್ದುಕೊಂಡಿವೆ.
ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ ಮತ್ತು ಜೆಡಿಯು ಸಂಭ್ರಮಾಚರಣೆ ನಡೆಸುತ್ತಿವೆ. ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ನವೆಂಬರ್ 18ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಬಿಜೆಪಿ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟುಹಿಡಿಯಬಹುದು ಎಂದು ಹೇಳಲಾಗುತ್ತಿದೆ.
ಎನ್‌ಡಿಎಯ ಈ ಅನಿರೀಕ್ಷಿತ ಗೆಲುವಿಗೆ ‘ವೋಟ್ ಚೋರಿ’ಯೇ ಕಾರಣ. ಬಿಜೆಪಿ ಮತಗಳನ್ನು ಕದ್ದು ಗೆಲುವು ಸಾಧಿಸಿದೆ. ಬಿಜೆಪಿಯ ವೋಟ್ ಚೋರಿಗೆ ಚುನಾವಣಾ ಆಯೋಗ ರಾಜಿ ಮಾಡಿಕೊಂಡು ಸಹಕರಿಸಿದೆ ಎಂದು ವಿಪಕ್ಷಗಳು ಆರೋಪಿಸಿವೆ.




