ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ವಿಪಕ್ಷಗಳ ಮಹಾಘಟಬಂಧನ್ ಸೋತ ಬಳಿಕ ಈ ಮೈತ್ರಿಕೂಟದ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಸಿಪಿಎಂ ನಡುವೆ ಕೇರಳದಲ್ಲಿ ವಾಕ್ಸಮರ ಏರ್ಪಟ್ಟಿದೆ. ಉಭಯ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪ ಆರಂಭಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್ ವಿರುದ್ಧ ವಾಗ್ದಾಳಿ ನಡೆಸಿದ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ ವಿ ಗೋವಿಂದನ್, “ವೇಣುಗೋಪಾಲ್ ಬಿಹಾರದಲ್ಲಿ ತಮ್ಮ ಜವಾಬ್ದಾರಿಯನ್ನು ಪೂರೈಸುವಲ್ಲಿ ವಿಫಲರಾಗಿದ್ದಾರೆ” ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಬಿಹಾರ | ನಿತೀಶ್ ಎದುರು ಫಲಿಸಲಿಲ್ಲ ಬಿಜೆಪಿ ‘ಮಹಾ’ ಆಟ!
“ಬಿಹಾರದಲ್ಲಿ ಬಿಜೆಪಿ ವಿರೋಧಿ ರಂಗವನ್ನು ಬಲಪಡಿಸುವ ಜವಾಬ್ದಾರಿಯನ್ನು ಪೂರೈಸುವ ಬದಲು, ಕಾಂಗ್ರೆಸ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ವೇಣುಗೋಪಾಲ್ ಅವರು ಕೇರಳದಲ್ಲಿ ರಾಜ್ಯ ಕಾಂಗ್ರೆಸ್ ಘಟಕದಲ್ಲಿ ತಮ್ಮ ಅಧಿಕಾರವನ್ನು ಬಲಪಡಿಸಿಕೊಳ್ಳುತ್ತಿದ್ದಾರೆ” ಎಂದು ಗೋವಿಂದನ್ ಟೀಕಿಸಿದ್ದಾರೆ.
“ಮುಂಚೂಣಿಯಲ್ಲಿ ಪ್ರಮುಖ ಪಕ್ಷವಾಗಿ ಕಾಂಗ್ರೆಸ್ ತನ್ನ ಜವಾಬ್ದಾರಿಯನ್ನು ಪೂರೈಸಿದ್ದರೆ, ಫಲಿತಾಂಶ ವಿಭಿನ್ನವಾಗಿರುತ್ತಿತ್ತು. ಕಾಂಗ್ರೆಸ್‌ನಲ್ಲಿ ಬಂಡಾಯ ಎದ್ದವರು ಹಲವಾರು ಸ್ಥಾನಗಳಲ್ಲಿ ಸ್ಪರ್ಧಿಸಿದ್ದರು. ಸಿಪಿಐಗೆ ಹಂಚಿಕೆಯಾದ ನಾಲ್ಕು ಸ್ಥಾನಗಳಲ್ಲಿ, ಕಾಂಗ್ರೆಸ್‌ನ ಬಂಡಾಯ ಎದ್ದ ನಾಯಕರು ಸ್ಪರ್ಧಿಸಿದ್ದರು” ಎಂದು ದೂರಿದ್ದಾರೆ.
“ಒಂದೇ ಸ್ಥಾನದಲ್ಲಿ, ಸಿಪಿಐ ಮತ್ತು ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇವರಿಬ್ಬರ ಮತಗಳನ್ನು ಲೆಕ್ಕಾಚಾರ ಹಾಕಿದರೆ ವಿಜೇತ ಅಭ್ಯರ್ಥಿಯ ಮತಗಳಿಗಿಂತ ಹೆಚ್ಚಿದ್ದವು. ಮತಗಳು ಹಂಚಿಹೋಗಿವೆ. ವಿಶಾಲವಾದ ಬಿಜೆಪಿ ವಿರೋಧಿ ರಂಗವನ್ನು ರಚಿಸುವ ಜವಾಬ್ದಾರಿಯನ್ನು ಕಾಂಗ್ರೆಸ್ ಪೂರೈಸಲು ವಿಫಲವಾಗಿದೆ” ಎಂದು ಆರೋಪಿಸಿದ್ದಾರೆ. ಹಾಗೆಯೇ ಜಾತ್ಯತೀತ ರಾಜಕೀಯ ಪಕ್ಷಗಳು ಬಿಹಾರ ಫಲಿತಾಂಶಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಕರೆ ನೀಡಿದ್ದಾರೆ.
“ಹಿನ್ನಡೆಗೆ ಪ್ರಮುಖ ಕಾರಣ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಾಗಿದ್ದು, ಇದರ ಮೂಲಕ ಸುಮಾರು 65 ಲಕ್ಷ ಮತಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಚುನಾವಣಾ ಆಯೋಗವು ಬಿಹಾರ ಸರ್ಕಾರಕ್ಕೆ ನೀತಿ ಸಂಹಿತೆ ಘೋಷಣೆಯಾದ ನಂತರವೂ ಮಹಿಳೆಯರಿಗೆ 10,000 ರೂ. ಆರ್ಥಿಕ ನೆರವು ಘೋಷಿಸಲು ಅವಕಾಶ ನೀಡಿದೆ” ಎಂದೂ ಈ ಸಂದರ್ಭದಲ್ಲೇ ಸಿಪಿಎಂ ನಾಯಕ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ವಿಶ್ವಬ್ಯಾಂಕ್‌ನಿಂದ ಪಡೆದ 14,000 ಕೋಟಿ ರೂ. ಸಾಲ ಬಿಹಾರ ಚುನಾವಣೆಗೆ ಬಳಕೆ: ಜೆಎಸ್‌ಪಿ ಆರೋಪ
ಕಾಂಗ್ರೆಸ್ ವಿರುದ್ಧದ ಸಿಪಿಎಂ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್, “ಗೋವಿಂದನ್ ಬಿಹಾರದ ವಿಚಾರದಲ್ಲಿ ಬಿಜೆಪಿ ನಿಲುವನ್ನು ಹೊಂದಿದ್ದಾರೆ. ಅದೇ ಮನಸ್ಥಿತಿಯಿಂದಾಗಿ ವೇಣುಗೋಪಾಲ್ ಮೇಲಿನ ವಾಗ್ದಾಳಿ ನಡೆಸಿದ್ದಾರೆ. ಬಿಹಾರದಲ್ಲಿ ಕಾಂಗ್ರೆಸ್ ಅಗತ್ಯವಿರುವ ಎಲ್ಲವನ್ನೂ ಮಾಡಿದೆ” ಎಂದು ಪ್ರತ್ಯುತ್ತರ ನೀಡಿದ್ದಾರೆ.
ಹಾಗೆಯೇ, “ಸಿಪಿಎಂ ಪಾಲಿಟ್ ಬ್ಯುರೋ ಸದಸ್ಯರೂ ಆಗಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಿಹಾರದಲ್ಲಿ ಪ್ರಚಾರಕ್ಕೆ ಹೋಗಿಲ್ಲ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿ ಕೂಡ ಬಿಹಾರದಲ್ಲಿ ಪ್ರಚಾರ ಮಾಡುವುದಕ್ಕಿಂತ ಕೇರಳದಲ್ಲೇ ಅಧಿಕ ಅವಧಿ ಕಳೆದಿದ್ದಾರೆ. ಬಿಹಾರದಲ್ಲಿ ಕಾಂಗ್ರೆಸ್ ಪಾತ್ರವನ್ನು ಟೀಕಿಸುವುದಕ್ಕೆ ಸಿಪಿಎಂ ನಾಯಕತ್ವಕ್ಕೆ ಯಾವುದೇ ನೈತಿಕ ಅಧಿಕಾರವಿಲ್ಲ” ಎಂದು ತಿರುಗೇಟು ನೀಡಿದ್ದಾರೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಎನ್‌ಡಿಎ 202 ಸ್ಥಾನಗಳನ್ನು ಗೆದ್ದುಕೊಂಡಿದೆ. ಆರ್‌ಜೆಡಿ ನೇತೃತ್ವದ ವಿರೋಧ ಪಕ್ಷ ಮಹಾಘಟಬಂಧನ್ 35 ಸ್ಥಾನಗಳನ್ನು ಮಾತ್ರ ಗಳಿಸಲು ಸಾಧ್ಯವಾಗಿದೆ. ಅಸಾದುದ್ದೀನ್ ಓವೈಸಿ ಅವರ AIMIM ಐದು ಸ್ಥಾನಗಳನ್ನು ಗೆದ್ದರೆ, ಮುಖೇಶ್ ಸಹಾನಿ ಅವರ ವಿಕಾಸಶೀಲ ಇನ್ಸಾನ್ ಪಕ್ಷ (VIP) ಯಾವುದೇ ಕ್ಷೇತ್ರದಲ್ಲಿ ಗೆಲುವು ಕಂಡಿಲ್ಲ.
ಬಿಹಾರದಲ್ಲಿ ಸಿಪಿಐ 2 ಸ್ಥಾನ, ಸಿಪಿಐಎ ಒಂದು ಸ್ಥಾನ ಮತ್ತು ಸಿಪಿಐ (ಎಂಎಲ್) ಲಿಬರೇಶನ್ 2 ಸ್ಥಾನಗಳನ್ನು ಗಳಿಸಿದೆ. ಈ ಮೂರೂ ಎಡಪಕ್ಷಗಳು ಮಹಾಘಟಬಂಧನ್ ಮೈತ್ರಿಕೂಟದ ಭಾಗವಾಗಿದೆ.





