ಶುಕ್ರವಾರ ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯಲಿದ್ದು ಈ ವೇಳೆ ಯಾವುದೇ ಅಕ್ರಮ ನಡೆದರೂ ನೇಪಾಳ ಮಾದರಿಯ ಪ್ರತಿಭಟನೆ ನಡೆಸಲಾಗುವುದು ಎಂದು ಆರ್‌ಜೆಡಿ ಎಂಎಲ್‌ಸಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಯಾವುದೇ ಅಡಚಣೆಯನ್ನು ತಡೆಗಟ್ಟಲು ಅಧಿಕಾರಿಗಳು ಎಲ್ಲಾ ಶಾಲೆಗಳನ್ನು ಮುಚ್ಚಲು ಮತ್ತು ಭದ್ರತೆ ಬಿಗಿಗೊಳಿಸಲು ಆದೇಶಿಸಿದ್ದಾರೆ.
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಆಪ್ತ ಸಹಾಯಕರಾದ ಎಂಎಲ್‌ಸಿ ಸುನಿಲ್ ಕುಮಾರ್ ಸಿಂಗ್, ಎಣಿಕೆಯ ಸಮಯದಲ್ಲಿ ಅಕ್ರಮಗಳು ಸಂಭವಿಸಿದಲ್ಲಿ ನೇಪಾಳದಂತಹ ಪ್ರತಿಭಟನೆಗಳು ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ಪಟನಾದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ನಿಟ್ಟಿನಲ್ಲಿ ಜಿಲ್ಲಾ ಶಿಕ್ಷಣ ಅಧಿಕಾರಿ ಸಾಕೇತ್ ರಂಜನ್ ಶುಕ್ರವಾರ ಎಲ್ಲಾ ಸರ್ಕಾರಿ, ಸರ್ಕಾರೇತರ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚುವಂತೆ ನಿರ್ದೇಶಿಸಿದ್ದಾರೆ. ಇದಾದ ಬೆನ್ನಲ್ಲೇ ಮುಜಫರ್‌ಪುರ, ನವಾಡಾ, ಕಿಶನ್‌ಗಂಜ್, ಪೂರ್ಣಿಯಾ, ಕತಿಹಾರ್ ಮತ್ತು ಇತರ ಜಿಲ್ಲೆಗಳಲ್ಲಿಯೂ ಇದೇ ರೀತಿ ಶಾಲೆಗಳನ್ನು ಮುಚ್ಚಲು ಸೂಚಿಸಲಾಗಿದೆ.
ಇದನ್ನು ಓದಿದ್ದೀರಾ? ಬಿಹಾರ ವಿಧಾನಸಭೆ ಚುನಾವಣೆ | ಮತ ಎಣಿಕೆ ಆರಂಭ; ಯಾರ ತೆಕ್ಕೆಗೆ ಅಧಿಕಾರ?
ಮುಜಫರ್‌ಪುರದಲ್ಲಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಬ್ರತ್ ಕುಮಾರ್ ಸೇನ್ ಅವರು, “ಮತ ಎಣಿಕೆಯ ಸಮಯದಲ್ಲಿ, ಶಾಲಾ ಬಸ್‌ಗಳು ಮತ್ತು ಕೋಚಿಂಗ್ ಇನ್‌ಸ್ಟಿಟ್ಯೂಟ್ ವಾಹನಗಳ ಕಾರ್ಯಾಚರಣೆಯಲ್ಲಿ ತೊಂದರೆ ಉಂಟಾಗುವ ಸಾಧ್ಯತೆಯಿದೆ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಸುಗಮ ಸಂಚಾರ ವ್ಯವಸ್ಥೆಗಳನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
“ಅಧಿಕಾರಿಗಳು ಎಣಿಕೆಯಲ್ಲಿ ವಂಚನೆಯಲ್ಲಿ ತೊಡಗಿದರೆ, ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಕಂಡುಬರುವಂತೆ ಬಿಹಾರದ ಬೀದಿಗಳಲ್ಲಿ ಪ್ರತಿಭಟನೆಗಳ ದೃಶ್ಯಗಳು ಕಂಡುಬರುತ್ತವೆ. ಒಟ್ಟಾರೆ ಪರಿಸ್ಥಿತಿ ಸರ್ಕಾರದ ನಿಯಂತ್ರಣ ತಪ್ಪುತ್ತದೆ ಎಂದು ನಾನು ಎಚ್ಚರಿಕೆ ನೀಡುತ್ತೇನೆ” ಎಂದು ಎಂಎಲ್‌ಸಿ ಸುನಿಲ್ ಕುಮಾರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
“ಈ ಬಾರಿ ಜನರು ತುಂಬಾ ಜಾಗರೂಕರಾಗಿದ್ದಾರೆ ಮತ್ತು ಸೂಕ್ತವಾಗಿ ಪ್ರತಿಕ್ರಿಯಿಸುತ್ತಾರೆ. 2020ರ ವಿಧಾನಸಭಾ ಚುನಾವಣೆಯಲ್ಲಿ ಎಣಿಕೆ ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ಗಂಟೆಗಳ ಕಾಲ ನಿಲ್ಲಿಸಲಾಗಿತ್ತು. ಇದು ಆರ್‌ಜೆಡಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿತ್ತು” ಎಂದು ಸಿಂಗ್ ಆರೋಪಿಸಿದ್ದಾರೆ.
ಬಿಹಾರದಲ್ಲಿ ಎರಡು ಹಂತದಲ್ಲಿ ನವೆಂಬರ್ 6 ಮತ್ತು 11ರಂದು ಚುನಾವಣೆ ನಡೆದಿದ್ದು ಇಂದು ಮತ ಎಣಿಕೆ ನಡೆಯುತ್ತಿದೆ. ಈ ಬಾರಿ ಬಿಹಾರದಲ್ಲಿ ದಾಖಲೆ ಪ್ರಮಾಣದಲ್ಲಿ ಮತದಾನ ನಡೆದಿದೆ. ಅರ್ಹ ಮತದಾರರಲ್ಲಿ ಸುಮಾರು ಶೇಕಡ 67ರಷ್ಟು ಮತ ಚಲಾಯಿಸಿದ್ದಾರೆ.
ಏನಿದು ‘ನೇಪಾಳ ಮಾದರಿ’ ಪ್ರತಿಭಟನೆ?
ನೇಪಾಳದಲ್ಲಿ ‘Gen Z’ ಯುವಕರು ಭ್ರಷ್ಟಾಚಾರ-ವಿರೋಧಿ ಆಂದೋಲನ ನಡೆಸಿದ್ದು, ಇದು ತೀವ್ರ ರೂಪ ಪಡೆದು ಕೊನೆಗೆ ಸರ್ಕಾರ ಪತನಗೊಂಡಿದೆ. ಸರ್ಕಾರ ಫೇಸ್‌ಬುಕ್, ವಾಟ್ಸಾಪ್ ಮೊದಲಾದ 26 ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ್ದರ ವಿರುದ್ಧ ಆರಂಭವಾದ ಪ್ರತಿಭಟನೆಯು ಆರ್ಥಿಕ ಅಸಮಾನತೆ, ಯುವಕರ ನಿರುದ್ಯೋಗ, ರಾಜಕಾರಣಿಗಳು ಮಾಡುವ ದುಂದುವೆಚ್ಚ, ಭ್ರಷ್ಟಾಚಾರದ ವಿರುದ್ಧದ ಪ್ರತಿಭಟನೆಯಾಗಿ ಮಾರ್ಪಟ್ಟಿತು. ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಕನಿಷ್ಠ 75 ಮಂದಿ ಮೃತಪಟ್ಟಿದ್ದಾರೆ. ಸರ್ಕಾರಿ ಕಚೇರಿಗಳಿಗೆ ಪ್ರತಿಭಟನಾಕಾರರು ಬೆಂಕಿ ಹಾಕಿರುವ ಘಟನೆಗಳೂ ನಡೆದಿದೆ. ಇವೆಲ್ಲವುದರ ನಡುವೆ ಅಂದಿನ ಪ್ರಧಾನಿ ಕೆಪಿ ಶರ್ಮಾ ಓಲಿ ರಾಜೀನಾಮೆ ನೀಡಿದ್ದು, ಮಧ್ಯಂತರ ಸರ್ಕಾರವನ್ನು ರಚಿಸಲಾಗಿದೆ. 2026ರ ಮಾರ್ಚ್‌ನಲ್ಲಿ ಚುನಾವಣೆ ನಡೆಯಲಿದೆ.





