ಕಳೆದ 20 ವರ್ಷಗಳಲ್ಲಿ ಇತರ ರಾಜ್ಯಗಳು ಸಾಧಿಸಿರುವ ಅಭಿವೃದ್ಧಿಗೆ ಹೋಲಿಸಿದರೆ, ಬಿಹಾರವು ಮಾಡಬೇಕಾದ್ದು, ಸಾಧಿಸಬೇಕಾದ್ದು ಬಹಳಷ್ಟಿದೆ. ಇದು ಆಡಳಿತಾರೂಢ ಎನ್‌ಡಿಎ ಮತ್ತು ಆಡಳಿತ ನಡೆಸಲು ಆಶಿಸುತ್ತಿರುವ ಮಹಾಘಟಬಂಧನ್ – ಎರಡೂ ಕೂಟಗಳಿಗೂ ಗೊತ್ತಿದೆ.
ಬಿಹಾರ ಮತದಾನಕ್ಕೆ ಇನ್ನೈದು ದಿನಗಳು ಮಾತ್ರವೇ ಉಳಿದಿವೆ. ಸ್ಪರ್ಧಿತ ಎಲ್ಲ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ನಡೆಸಿವೆ. ಪ್ರಚಾರದ ಸಮಯದಲ್ಲಿ ಎನ್‌ಡಿಎ ಮೈತ್ರಿಕೂಟದ ಪಕ್ಷಗಳು ‘ಉತ್ತಮ ಆಡಳಿತ’, ‘ಜಂಗಲ್ ರಾಜ್’ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದರೆ, ಮಹಾಘಟಬಂಧನ್ ಮೈತ್ರಿ ಪಕ್ಷಗಳು ‘ಸಾಮಾಜಿಕ ನ್ಯಾಯ’ ಮತ್ತು ‘ಆರ್ಥಿಕ ಅಭಿವೃದ್ಧಿ’ ಮೇಲೆ ಹೆಚ್ಚು ಗಮನ ಹರಿಸಿವೆ. ಆದಾಗ್ಯೂ, ಎನ್‌ಡಿಎ-ಮಹಾಘಟಬಂಧನ್ ನಡುವಿನ ಚುನಾವಣಾ ಫಲವು ಬಿಹಾರ ನೆಲದಲ್ಲಿ ದಶಕಗಳ ಆಡಳಿತ, ಸಾಮಾಜಿಕ-ಆರ್ಥಿಕ ಪರಿಸ್ಥಿತಿ, ಅಭಿವೃದ್ಧಿ ಹಾಗೂ ಮೂಲಸೌಕರ್ಯಗಳನ್ನೇ ಆಧರಿಸಿದೆ.
ಆಡಳಿತಾರೂಢ ಎನ್‌ಡಿಎ ಮತ್ತು ವಿರೋಧ ಪಕ್ಷಗಳ ಮಹಾಘಟಬಂಧನ್ – ಎರಡೂ ಮೈತ್ರಿಕೂಟಗಳು ಬಿಹಾರವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯುವುದಾಗಿ ಭರವಸೆ ನೀಡುತ್ತಿವೆ. ಬಿಹಾರವನ್ನು ದೇಶದ ನಂ.1 ರಾಜ್ಯ ಮಾಡುತ್ತೇವೆ. ಅಭಿವೃದ್ಧಿ ಪಡಿಸುತ್ತೇವೆ. ಕೋಟಿ-ಕೋಟಿ ಉದ್ಯೋಗ ಸೃಷ್ಟಿಸಿ, ಒದಗಿಸುತ್ತೇವೆ ಎಂದು ಭರವಸೆ ನೀಡುತ್ತಿವೆ.
ಬಿಹಾರ ಜನರು ಉದ್ಯೋಗಾವಕಾಶ ಮತ್ತು ಕೈಗಾರಿಕಾ ಅಭಿವೃದ್ಧಿಯ ಕೊರತೆಯನ್ನು ಎದುರಿಸುತ್ತಿದ್ದಾರೆ. ಅಲ್ಲಿನ ಯುವಜನರು ಉದ್ಯೋಗ ಹರಸಿ, ಜೀವನೋಪಾಯ ಹುಡುಕುತ್ತಾ ಇತರ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಬಡವರು ಬದುಕು ಕಟ್ಟಿಕೊಳ್ಳಲು ಬಿಹಾರದಿಂದ ವಲಸೆ ಹೋಗುತ್ತಿದ್ದಾರೆ, ಶ್ರೀಮಂತರು ಉತ್ತಮ ಶಿಕ್ಷಣ ಮತ್ತು ವೈದ್ಯಕೀಯ ಆರೈಕೆಗಾಗಿ ರಾಜ್ಯ ತೊರೆಯುತ್ತಿದ್ದಾರೆ.
ಆ ರಾಜ್ಯದ ಜನರು ಮೂಲಸೌಕರ್ಯಕ್ಕಾಗಿ ಹಂಬಲಿಸುತ್ತಿದ್ದಾರೆ. ಆರ್ಥಿಕ ಸಬಲೀಕರಣಕ್ಕಾಗಿ ಎದುರು ನೋಡುತ್ತಿದ್ದಾರೆ. ಆದರೆ, ಮೂಲಸೌಕರ್ಯ ಅಭಿವೃದ್ಧಿಯು ಇನ್ನೂ ನಗರ ಕೇಂದ್ರಗಳಲ್ಲಿಯೇ ತೆವಳುತ್ತಿದ್ದು, ಗ್ರಾಮೀಣ ಭಾಗವನ್ನು ಸಮೀಪಿಸಿಯೂ ಇಲ್ಲ. ಗ್ರಾಮೀಣ ಜನರು ಸಣ್ಣ-ಪುಟ್ಟ ಅಗತ್ಯಗಳಿಗೂ ದೂರದ ನಗರಗಳನ್ನೇ ಆಶ್ರಯಿಸುವ ಪರಿಸ್ಥಿತಿಯಲ್ಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ಪ್ರಬಲ ನಾಯಕರು ‘ಒಳನುಸುಳುವವರ’ ಬಗ್ಗೆ ಮಾತನಾಡುತ್ತಿದ್ದಾರೆ. ವಿಪಕ್ಷಗಳು ‘ಮತ ಕಳವು’ ಕುರಿತು ಹೆಚ್ಚು ಮಾತನಾಡುತ್ತಿವೆ. ಜೊತೆಗೆ, ಜಾತಿ ಸಮೀಕರಣದ ಲೆಕ್ಕಾಚಾರಗಳೂ ನಡೆಯುತ್ತಿವೆ. ಆದರೆ, ಈ ಎಲ್ಲ ಅಂಶಗಳು ಚುನಾವಣಾ ಕಣ ಮತ್ತು ಪ್ರಚಾರದಲ್ಲಿ ಹೆಚ್ಚು ಪ್ರಾಮುಖ್ಯತೆ ಗಳಿಸುತ್ತಿಲ್ಲ. ಈ ಬಾರಿಯ ಪ್ರಮುಖ ಚರ್ಚಾ ವಿಷಯವಾಗಿ ಉದ್ಯೋಗ ಮತ್ತು ಮೂಲಸೌಕರ್ಯಗಳು ಮುನ್ನೆಲೆಯಲ್ಲಿವೆ.
ಕಳೆದ 20 ವರ್ಷಗಳಿಂದ ನಿತೀಶ್ ಕುಮಾರ್ ಅವರೇ ಬಿಹಾರದ ಆಡಳಿತ ನಡೆಸಿದ್ದಾರೆ. ಈ ಅವಧಿಯಲ್ಲಿ ಬಹುತೇಕ ಅವರು ಎನ್‌ಡಿಎ ಮೈತ್ರಿಕೂಟದಲ್ಲಿ ಸರ್ಕಾರ ನಡೆಸಿದ್ದಾರೆ. ಈ ಎರಡು ದಶಕಗಳಲ್ಲಿ (20 ವರ್ಷ) ಬಿಹಾರ ಅಂತಹ ಗಮನಾರ್ಹ ಪ್ರಗತಿ ಕಂಡಿಲ್ಲವೆಂದು ರಾಜಕೀಯ ವಿಮರ್ಶಕ ಅಮಿತಾಭ್ ತಿವಾರಿ ಹೇಳುತ್ತಾರೆ. ಈ ಅವಧಿಯಲ್ಲಿ ಇತರ ರಾಜ್ಯಗಳು ಸಾಧಿಸಿರುವ ಅಭಿವೃದ್ಧಿಗೆ ಹೋಲಿಸಿದರೆ, ಬಿಹಾರವು ಮಾಡಬೇಕಾದ್ದು, ಸಾಧಿಸಬೇಕಾದ್ದು ಬಹಳಷ್ಟಿದೆ ಎಂದು ಅವರು ಪ್ರತಿಪಾದಿಸುತ್ತಾರೆ.
ಬಿಹಾರ ಎಷ್ಟು ಹಿಂದುಳಿದಿದೆ ಮತ್ತು ಮಾಡಬೇಕಿರುವುದು ಸಾಕಷ್ಟಿದೆ ಎಂಬುದು ಆಡಳಿತಾರೂಢ ಎನ್‌ಡಿಎ ಮತ್ತು ಆಡಳಿತ ನಡೆಸಲು ಆಶಿಸುತ್ತಿರುವ ಮಹಾಘಟಬಂಧನ್ – ಎರಡೂ ಕೂಟಗಳಿಗೂ ಗೊತ್ತಿದೆ. ಹೀಗಾಗಿಯೇ, ಪ್ರತಿ ಐದು ವರ್ಷಗಳಿಗೊಮ್ಮೆ ಹೊಸ ಭರವಸೆಗಳನ್ನು ಜನರ ಮುಂದಿಡುತ್ತಿವೆ. ದೂರದ ಬೆಟ್ಟವನ್ನು ತೋರಿಸುತ್ತಿವೆ.
ಆದರೆ, ಬಿಹಾರದ ಯುವಜನರು ನಿರುದ್ಯೋಗದಿಂದಾಗಿ ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಯಾವುದೇ ಸರ್ಕಾರವು ತಮ್ಮ ಭವಿಷ್ಯವನ್ನ ರೂಪಿಸುತ್ತವೆ ಎಂಬ ಭರವಸೆಯನ್ನೇ ಕಳೆದುಕೊಂಡಿದ್ದಾರೆ. ಅವರು ಉದ್ಯೋಗಾವಕಾಶಗಳು, ಅಭಿವೃದ್ಧಿಗಾಗಿ ಅಸಹನೆಯಿಂದ ಕಾಯುತ್ತಿದ್ದಾರೆ. ಎದುರು ನೋಡುತ್ತಿದ್ದಾರೆ.
ಈ ಯುವಜನರು ಮತ್ತು ಮಹಿಳೆಯರು ಚುನಾವಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಗೆಲುವು-ಸೋಲನ್ನು ನಿರ್ಧರಿಸಲಿದ್ದಾರೆ. ಹೀಗಾಗಿಯೇ, ಹಾಲಿ ಚುನಾವಣೆಯಲ್ಲಿ ಜಾತಿ ಓಲೈಕೆಗಳು ಮತ್ತು ಮತ ಬ್ಯಾಂಕ್‌ನ ಹೊರತಾಗಿಯೂ ಎಲ್ಲ ರಾಜಕೀಯ ಪಕ್ಷಗಳು ಯುವಜನರು ಮತ್ತು ಮಹಿಳೆಯರನ್ನು ಸೆಳೆಯುವ ಪ್ರಯತ್ನದಲ್ಲಿವೆ.
ಬಿಹಾರದ ಒಟ್ಟು 7.45 ಕೋಟಿ ಮತದಾರರಲ್ಲಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು 3.93 ಕೋಟಿ ಅಥವಾ ಸುಮಾರು 53% ರಷ್ಟಿದ್ದಾರೆ. ಅಂತೆಯೇ, ಮಹಿಳೆಯರು 3.5 ಕೋಟಿ ಅಥವಾ 47% ಇದ್ದಾರೆ. ಪ್ರತಿ 1,000 ಪುರುಷ ಮತದಾರರಿಗೆ ಕೇವಲ 891 (ಹಂತ 1) ಮತ್ತು 894 (ಹಂತ 2) ಮಹಿಳಾ ಮತದಾರರು ಇದ್ದರೂ, ಪುರುಷರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಮತದಾನದ ಹಕ್ಕನ್ನು ಚಲಾಯಿಸುತ್ತಾರೆ.
ಇದನ್ನು ಗಮನದಲ್ಲಿಟ್ಟುಕೊಂಡು, ಪಕ್ಷಗಳು ಮತ್ತು ಮೈತ್ರಿಕೂಟಗಳು ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಹೆಚ್ಚಿಸುವುದರಿಂದ ಹಿಡಿದು ಉದ್ಯೋಗಗಳು ಮತ್ತು ಮಹಿಳಾ ಕೇಂದ್ರಿತ ಭತ್ಯೆಗಳವರೆಗೆ ಹಲವಾರು ಭರವಸೆಗಳನ್ನು ನೀಡಿವೆ. ಮಹಾಘಟಬಂಧನ್ ಮಹಿಳೆಯರಿಗೆ ಮಾಸಿಕ 2,500 ರೂ. ಸಹಾಯಧನ ಮತ್ತು ‘ಜೀವಿಕಾ ದಿದೀಸ್’ರನ್ನು ಖಾಯಂಗೊಳಿಸುವ ಭರವಸೆ ನೀಡಿದ್ದರೆ, ಎನ್‌ಡಿಎ, ವಾರ್ಷಿಕ 10,000 ರೂ. ಸಹಾಯಧನ ನೀಡುವುದಾಗಿಯೂ, ಇದು ಸ್ವಂತ ವ್ಯವಹಾರ (ಬ್ಯುಸಿನೆಸ್) ಆರಂಭಿಸಲು ನೆರವಾಗುತ್ತದೆ ಎಂದೂ ಹೇಳುತ್ತಿದೆ.
“ಮಹಿಳೆಯರಿಗೆ ಮಾಸಿಕ ಸಹಾಯಧನ ನೀಡುವ ಭರವಸೆಗಳು ಹೊಸದೇನಲ್ಲ. ಆದರೆ, ಅದರಲ್ಲಿ ಮೊತ್ತವು ಆಗಾಗ್ಗೆ ಹುಸಿಗೊಳ್ಳುತ್ತದೆ. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಮಹಿಳೆಯರಿಗೆ ಸಹಾಯಧನ ಪಾವತಿಸಲು ಸರ್ಕಾರಗಳು ಹೆಣಗಾಡುತ್ತಿರುವುದು ಕಾಣುತ್ತಿದೆ. ಇಂತಹ ಸಮಯದಲ್ಲಿ, ತೀರಾ ಹಿಂದುಳಿದ ಬಿಹಾರದಂತಹ ರಾಜ್ಯದಲ್ಲಿ ಇದು ಮತ್ತಷ್ಟು ಕಠಿಣವಾಗುತ್ತದೆ. ಹೀಗಾಗಿಯೇ, ನಿತೀಶ್ ಮಾಸಿಕ ಭತ್ಯೆಯ ಬಗ್ಗೆ ಮಾತನಾಡದೆ, ವಾರ್ಷಿಕ ಠೇವಣಿ ತೋರುತ್ತಿದ್ದಾರೆ” ಎಂದು ಅಮಿತಾಬ್ ತಿವಾರಿ ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಬಿಜೆಪಿ 1 ಕೋಟಿ ಉದ್ಯೋಗದ ಭರವಸೆ; 20 ವರ್ಷದಲ್ಲಿ ಆಗದ್ದು ಈಗ ಸಾಧ್ಯವೇ?
ಇನ್ನು, ಯುವಜನರ ವಿಚಾರದಲ್ಲಿ, ಮಹಾಘಟಬಂಧನ್ ಬಿಹಾರದ ಪ್ರತಿಯೊಂದು ಕುಟುಂಬಕ್ಕೂ ಸರ್ಕಾರಿ ಉದ್ಯೋಗ ಒದಗಿಸುವುದಾಗಿ ಭರವಸೆ ನೀಡಿದ್ದರೆ, ಆಡಳಿತಾರೂಢ ಎನ್‌ಡಿಎ ಒಂದು ಕೋಟಿ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿದೆ. ಆದರೆ, ಬಿಹಾರದಲ್ಲಿರುವ 1.78 ಕೋಟಿ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡುವುದಾಗಲೀ ಅಥವಾ ಈಗಾಗಲೇ 20 ವರ್ಷ ಅಧಿಕಾರ ನಡೆಸಿರುವ ಎನ್‌ಡಿಎ ಇಷ್ಟು ವರ್ಷ ಒದಗಿಸದ 1 ಕೋಟಿ ಸರ್ಕಾರಿ ಉದ್ಯೋಗವನ್ನು ಈಗ ಒದಗಿಸುವುದಾಗಲೀ ಸಾಧ್ಯವೇ ಎಂಬ ಪ್ರಶ್ನೆ ಹೆಚ್ಚು ಚರ್ಚೆಯಲ್ಲಿದೆ.
ಈ ಹಿಂದೆ, 2020ರ ಚುನವಣೆಯಲ್ಲಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಉದ್ಯೋಗವನ್ನು ಚರ್ಚಾ ವಿಷಯವನ್ನಾಗಿ ಮುನ್ನೆಲೆಗೆ ತಂದಿದ್ದರು. ಅವರು ಈ ಬಾರಿಯೂ ಉದ್ಯೋಗದ ವಿಚಾರವಾಗಿಯೇ ಹೆಚ್ಚು ಮಾತನಾಡುತ್ತಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಖಾನೆಗಳನ್ನು ಗುಜರಾತ್‌ಗೆ ಕೊಂಡೊಯ್ದು, ಬಿಹಾರದಲ್ಲಿ ಗೆಲ್ಲಲು ಬಯಸುತ್ತಿದ್ದಾರೆ’ ಎಂದು ತೇಜಸ್ವಿ ಆರೋಪಿಸಿದ್ದಾರೆ.
‘ಬಿಹಾರದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಸಾಕಷ್ಟು ಭೂಮಿ ಲಭ್ಯವಿಲ್ಲ’ ಎಂದು ಗೃಹ ಸಚಿವ ಅಮಿತ್ ಶಾ ವಾದಿಸುತ್ತಿದ್ದಾರೆ. ಅವರಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಭೂಮಿ ಇಲ್ಲ ಎನ್ನುವ ಎನ್‌ಡಿಎ ಸರ್ಕಾರವು ಅದಾನಿ ಗ್ರೂಪ್‌ಗೆ ಕೇವಲ 1 ರೂಪಾಯಿಗೆ ಎಕರೆ ಭೂಮಿ ನೀಡುತ್ತಿದೆ’ ಎಂದು ಕಿಡಿಕಾರಿದ್ದಾರೆ.
“ಎಲ್ಲ ಪಕ್ಷಗಳು ನಿರುದ್ಯೋಗವನ್ನು ನಿಭಾಯಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಅವರೆಲ್ಲರೂ ಉದ್ಯೋಗವನ್ನು ಹೇಗೆ ಸೃಷ್ಟಿಸುತ್ತಾರೆ ಮತ್ತು ನಿರುದ್ಯೋಗವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದರ ಬಗ್ಗೆ ಹೇಳುತ್ತಿಲ್ಲ. ಇದು ಅರ್ಥವೂ ಆಗುತ್ತಿಲ್ಲ. ಎನ್‌ಡಿಎ ಅಥವಾ ಮಹಾಘಟಬಂಧನ್ – ನಿರುದ್ಯೋಗ ಹೋಗಲಾಡಿಸಲು ಸ್ಪಷ್ಟವಾದ ಮಾರ್ಗಸೂಚಿ ಹೊಂದಿಲ್ಲ” ಎಂದು ತಿವಾರಿ ಹೇಳಿದ್ದಾರೆ.
ಆದ್ದರಿಂದ, ಎರಡೂ ಮೈತ್ರಿಕೂಟಗಳ ಎಲ್ಲ ಭರವಸೆಗಳು ಕೇವಲ ಚುನಾವಣಾ ಸಮಯದ ವಾಕ್ಚಾತುರ್ಯವಾಗಿ ಉಳಿಯುತ್ತವೆಯೇ ಅಥವಾ ನಿಜವಾಗಿಯೂ ಬದಲಾವಣೆ ತರುತ್ತವೆಯೇ ಎಂಬ ಪ್ರಶ್ನೆ ಬಿಹಾರ ನೆಲದಲ್ಲಿ ಗಾಢವಾಗಿ ಬೇರೂರಿದೆ.




