ಪ್ರಸ್ತುತ ನಡೆಯುತ್ತಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ‘ಜನ ಸುರಾಜ್ ಪಕ್ಷ’ವು (ಜೆಎಸ್‌ಪಿ) ಪ್ರಮುಖ ಸ್ಪರ್ಧಿಯಾಗಿ ಗುರುತಿಸಿಕೊಂಡಿದೆ. ರಾಜ್ಯದ ಒಟ್ಟು 243 ಕ್ಷೇತ್ರಗಳ ಪೈಕಿ, 239 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದೇ ಮೊದಲ ಬಾರಿಗೆ ಬಿಹಾರ ಚುನಾವಣಾ ಇತಿಹಾಸದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರು ಸ್ಪರ್ಧಿಸಿದ್ದಾರೆ. ಅವರಿಗೆ ಜೆಎಸ್‌ಟಿ ಟಿಕೆಟ್ ನೀಡಿದೆ. ಎನ್‌ಡಿಎ ಮತ್ತು ಮಹಾಘಟಬಂಧನ್ ಮೈತ್ರಿಕೂಟಗಳಿಗೆ ಪ್ರಬಲ ಪೈಪೋಟಿ ಒಡ್ಡುವುದಾಗಿ ಹೇಳಿಕೊಂಡಿದೆ.
ತಮ್ಮ ಅಭ್ಯರ್ಥಿಗಳ ಕುರಿತು ಮಾತನಾಡಿರುವ ಪ್ರಶಾಂತ್ ಕಿಶೋರ್, “ಸಮಾಜಕ್ಕೆ ಕೊಡುಗೆ ನೀಡಿದವರು, ತಮ್ಮದೇ ಆದ ಗುರುತನ್ನು ಹೊಂದಿರುವವರು ಹಾಗೂ ಸ್ಥಳೀಯರಿಗೆ ನಾವು ಟಿಕೆಟ್ ಕೊಟ್ಟಿದ್ದೇವೆ. ಅವರು ರಾಜಕೀಯದಲ್ಲಿ ಮನೆಮಾತಾಗಿಲ್ಲದಿದ್ದರೂ, ಸಮಾಜಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡುವವರು. ನಮ್ಮ 200ಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಹೋರಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಜೆಎಸ್‌ಪಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿರುವ 239 ಅಭ್ಯರ್ಥಿಗಳಲ್ಲಿ ವೈದ್ಯರು, ಎಂಜಿನಿಯರ್‌ಗಳು ಹಾಗೂ ಕೆಲವು ರಾಜಕಾರಣಿಗಳು ಇದ್ದಾರೆ. ಸುಮಾರು 85 ಜೆಎಸ್‌ಪಿ ಅಭ್ಯರ್ಥಿಗಳು ತಮ್ಮ ನಾಮಪತ್ರಗಳಲ್ಲಿ ತಾವು ‘ಕೃಷಿ’ಯಲ್ಲಿ ತೊಡಗಿದ್ದು, ಅದೇ ತಮ್ಮ ಉದ್ಯೋಗವೆಂದು ಘೋಷಿಸಿದ್ದಾರೆ.
ಅಲ್ಲದೆ, ಜೆಎಸ್‌ಪಿಯ 55 ಅಭ್ಯರ್ಥಿಗಳು ಸ್ನಾತಕೋತ್ತರ ಪದವೀಧರರು. 94 ಮಂದಿ ಪದವೀಧರರು ಹಾಗೂ 11 ಮಂದಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. 12ನೇ ತರಗತಿಯಲ್ಲಿ ಉತ್ತೀರ್ಣರಾದ 34 ಅಭ್ಯರ್ಥಿಗಳು ಮತ್ತು ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರುವ 18 ಅಭ್ಯರ್ಥಿಗಳಿದ್ದಾರೆ.
ಈ ಚುನಾವಣೆಯಲ್ಲಿ ಗಮನ ಸೆಳೆವ 7 ಜೆಎಸ್‌ಪಿ ಅಭ್ಯರ್ಥಿಗಳು
1. ಸರ್ಫರಾಜ್ ಆಲಂ – ಜೋಕಿಹತ್ ಕ್ಷೇತ್ರ
ಬಿಹಾರದ 243 ವಿಧಾನಸಭಾ ಕ್ಷೇತ್ರಗಳಲ್ಲಿ ಜೋಕಿಹತ್ ಕೂಡ ಒಂದು. ಕ್ಷೇತ್ರದಲ್ಲಿ ಆರ್‌ಜೆಡಿ ಮತ್ತು ಜೆಡಿಯು ತಮ್ಮ ಪ್ರಾಬಲ್ಯ ಹೊಂದಿವೆ. ಜೋಕಿಹತ್ ಕ್ಷೇತ್ರದಲ್ಲಿ ಜೆಎಸ್‌ಪಿ ಅಭ್ಯರ್ಥಿಯಾಗಿ ಸರ್ಫರಾಜ್ ಆಲಂ ಸ್ಪರ್ಧಿಸಿದ್ದಾರೆ. ಇವರು ಇದೇ ಕ್ಷೇತ್ರದಿಂದ ಈ ಹಿಂದೆ ನಾಲ್ಕು ಬಾರಿ (1996, 2000, 2010 ಹಾಗೂ 2015)ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಪೈಕಿ, ಮೊದಲ ಎರಡು ಬಾರಿ ಆರ್‌ಜೆಡಿಯಿಂದಲೂ ನಂತರದ ಎರಡು ಬಾರಿ ಜೆಡಿಯುನಿಂದಲೂ ಗೆದ್ದಿದ್ದರು.
ಸರ್ಫರಾಜ್ ಆಲಂ ಅವರು 2016ರ ಜನವರಿಯಲ್ಲಿ ರೈಲಿನಲ್ಲಿ ದಂಪತಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ಆ ಕಾರಣದಿಂದ ಅವರನ್ನು ಜೆಡಿಯು ಅಮಾನತುಗೊಳಿಸಿತ್ತು. ಬಳಿಕ, ಆರ್‌ಜೆಡಿ ಸೇರಿದ ಅವರು 2018ರ ಲೋಕಸಭಾ ಉಪಚುನಾವಣೆಯಲ್ಲಿ ಅರಾರಿಯಾದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಆದಾಗ್ಯೂ, 2020ರ ಚುನಾವಣೆಯಲ್ಲಿ ಆರ್‌ಜೆಡಿಯಿಂದ ಸ್ಪರ್ಧಿಸಿದ್ದ ಅವರನ್ನು ಅವರ ಸಹೋದರ, ಎಐಎಂಐಎಂ ಅಭ್ಯರ್ಥಿ ಶಹನವಾಜ್ ಆಲಂ ಸೋಲಿಸಿದ್ದರು. ಶಹನವಾಜ್ ಅವರು ಗೆದ್ದು, ಕ್ಷೇತ್ರದ ಶಾಸಕರಾಗಿದ್ದರು.
ಹಾಲಿ ಚುನಾವಣೆಯಲ್ಲಿಯಲ್ಲಿ ಹನವಾಜ್ ಆಲಂ ಅವರು ಆರ್‌ಜೆಡಿಯಿಂದ ಸ್ಪರ್ಧಿಸಿದ್ದಾರೆ. ಜೆಡಿಯುನಿಂದ ಇಂದ್ರದೇವ್ ಸಿಂಘ್ ಕಣಕ್ಕಿಳಿದಿದ್ದಾರೆ. ನಾಲ್ಕು ಬಾರಿಯ ಶಾಸಕ ಸರ್ಫರಾಜ್ ಆಲಂ ಅವರು ಜೆಎಸ್‌ಪಿಯಿಂದ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
2. ಕೆ.ಸಿ. ಸಿನ್ಹಾ – ಕುಮ್ರಾರ್ ಕ್ಷೇತ್ರ
ಪ್ರಾಧ್ಯಾಪಕ ಮತ್ತು ಪ್ರಸಿದ್ಧ ಲೇಖಕ ಕೆ.ಸಿ. ಸಿನ್ಹಾ ಅವರು ಇದೇ ಮೊದಲ ಬಾರಿಗೆ ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಪಾಟ್ನಾದ ಕುಮ್ರಾರ್ ಕ್ಷೇತ್ರದಿಂದ ಅವರು ಕಣಕ್ಕಿಳಿದಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಂಜಯ್ ಕುಮಾರ್ ಗುಪ್ತಾ ಮತ್ತು ಕಾಂಗ್ರೆಸ್ ಅಭ್ಯರ್ಥಿ ಇಂದ್ರದೀಪ್ ಚಂದ್ರವಂಶಿ ಅವರನ್ನು ಎದುರಿಸುತ್ತಿದ್ದಾರೆ. 2020ರಲ್ಲಿ, ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಸಿನ್ಹಾ ಈ ಕ್ಷೇತ್ರದಿಂದ ಸ್ಪರ್ಧಿಸಿ, ಗೆದ್ದು, ಶಾಸಕರಾಗಿದ್ದರು.
ಸಿನ್ಹಾ ಒಬ್ಬ ಲೇಖಕ, ಗಣಿತಜ್ಞ ಮತ್ತು ಶಿಕ್ಷಣ ತಜ್ಞರಾಗಿ ಪ್ರಸಿದ್ಧರಾಗಿದ್ದಾರೆ. ಅವರು ಗಣಿತಶಾಸ್ತ್ರದಲ್ಲಿ 70 ಪುಸ್ತಕಗಳನ್ನು ಬರೆದಿದ್ದಾರೆ. “ಎಲ್ಲ ಸಮಸ್ಯೆಗಳಿಗೂ ಒಂದೇ ಪರಿಹಾರವೆಂದರೆ ಶಿಕ್ಷಣ, ಗುಣಮಟ್ಟದ ಶಿಕ್ಷಣ. ಬಿಹಾರದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದರೆ, ಅವರು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಬಹುದು. ನಮ್ಮ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಕೊಡುಗೆ ನೀಡಬಹುದು” ಎಂದು ಸಿನ್ಹಾ ಪ್ರತಿಪಾದಿಸಿದ್ದಾರೆ.
ಕುಮ್ರಾರ್ ಕ್ಷೇತ್ರಕ್ಕೆ ನವೆಂಬರ್ 6 ರಂದು ಮತದಾನ ನಡೆಯಲಿದೆ.
3. ಪ್ರೀತಿ ಕಿನ್ನರ್, ಭೋರೆ ಕ್ಷೇತ್ರ
ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ಭೋರೆ ಕ್ಷೇತ್ರದಿಂದ ಜೆಎಸ್‌ಪಿ ಅಭ್ಯರ್ಥಿಯಾಗಿ ಪ್ರೀತಿ ಕಿನ್ನರ್ ಸ್ಪರ್ಧಿಸಿದ್ದಾರೆ. ಇವರು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರು. ಇದೇ ಮೊದಲ ಬಾರಿಗೆ ಬಿಹಾರದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಇವರು 8ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಾರೆ. ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈವರೆಗೆ, 27 ಲಿಂಗತ್ವ ಅಲ್ಪಸಂಖ್ಯಾತ ಜೋಡಿಗೆ ವಿವಾಹ ಮಾಡಿಸಿದ್ದಾರೆ. ಪಶುಪಾಲನೆ ಮತ್ತು ಸಾಂಪ್ರದಾಯಿಕಯ ಗಾಯನ ‘ಬದೈ’ ಸಂಗೀತದಲ್ಲಿ ಗುರುತಿಸಿಕೊಂಡಿದ್ದಾರೆ.
ಪ್ರೀತಿ ಕಿನ್ನರ್ ಅವರು ನಿತೀಶ್ ಕುಮಾರ್ ಸರ್ಕಾರದಲ್ಲಿ ಶಿಕ್ಷಣ ಸಚಿವರೂ ಆಗಿರುವ ಸುನಿಲ್ ಕುಮಾರ್ ವಿರುದ್ಧ ಸ್ಪರ್ಧಿಸಿದ್ದಾರೆ. ಕ್ಷೇತ್ರದಲ್ಲಿ ಸಿಪಿಐ(ಎಂಎಲ್)ಎಲ್‌ನ ಧನಂಜಯ್ ಮತ್ತು ಬಿಎಸ್‌ಪಿ ಅಭ್ಯರ್ಥಿ ಎಸ್‌ಕೆ ರಾಮ್ ಕೂಡ ಸ್ಪರ್ಧೆಯಲ್ಲಿದ್ದಾರೆ. 2020ರ ಚುನಾವಣೆಯಲ್ಲಿ ಜೆಡಿಯುನಿಂದ ಸ್ಪರ್ಧಿಸಿದ್ದ ಸುನಿಲ್ ಕುಮಾರ್ ಗೆದ್ದಿದ್ದರು. ಹಾಲಿ ಸರ್ಕಾರದಲ್ಲಿ ಸಚಿವರೂ ಆಗಿದ್ದಾರೆ.
ಈ ಕ್ಷೇತ್ರಗಳಲ್ಲಿ ನವೆಂಬರ್ 6ರಂದು ಮತದಾನ ನಡೆಯಲಿದೆ.
4. ಅಬು ಅಫ್ಫಾನ್ ಫಾರೂಕ್, ಕೊಚಾಧಮನ್ ಕ್ಷೇತ್ರ
ಕಿಶನ್‌ಗಂಜ್ ಜಿಲ್ಲೆಯ ಕೊಚಧಮನ್ ಕ್ಷೇತ್ರದಲ್ಲಿ ಜೆಎಸ್‌ಪಿ ಅಭ್ಯರ್ಥಿಯಾಗಿ ಅನು ಅಫ್ಘಾನ್ ಫಾರೂಕ್ ಸ್ಪರ್ಧಿಸಿದ್ದಾರೆ. ಅವರು ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಫಾರೂಕ್ ಅವರು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (AMU) ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರೂ ಆಗಿದ್ದಾರೆ.
ಎಐಎಂಐಎಂನ ಸರ್ವರ್ ಆಲಂ ಮತ್ತು ಆರ್‌ಜೆಡಿಯ ಮುಜಾಹಿದ್ ಆಲಂ ವಿರುದ್ಧ ಫಾರೂಕ್ ಕಣಕ್ಕಿಳಿದಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಬೀನಾ ದೇವಿ ಅವರನ್ನು ಕಣಕ್ಕಿಳಿಸಿದೆ.
2020ರಲ್ಲಿ, ಕೊಚಧಮನ್ ಕ್ಷೇತ್ರದಲ್ಲಿ AIMIM ಅಭ್ಯರ್ಥಿ ಇಝಾರ್ ಅಸ್ಫಿ ಅವರು ಸ್ಪರ್ಧಿಸಿ, ಗೆದ್ದಿದ್ದರು. ಆರ್‌ಜೆಡಿಯ ಮುಜಾಹಿದ್ ಆಲಂ 2ನೇ ಸ್ಥಾನ ಪಡೆದಿದ್ದರು.
ಕೊಚಾಧಮನ್ ಕ್ಷೇತ್ರಕ್ಕೆ ಎರಡನೇ ಹಂತದಲ್ಲಿ ನವೆಂಬರ್ 11 ರಂದು ಮತದಾನ ನಡೆಯಲಿದೆ.
5. ಡಾ. ಶಹನವಾಜ್ ಆಲಂ, ಬರ್ಹರಿಯಾ ಕ್ಷೇತ್ರ
ಸಿವಾನ್ ಜಿಲ್ಲೆಯಲ್ಲಿ ಪ್ರಸಿದ್ದ ವೈದ್ಯರೆಂದು ಗುರುತಿಸಿಕೊಂಡಿರುವ ಡಾ. ಶಹನವಾಜ್ ಆಲಂ ಅವರನ್ನು ಬರ್ಹರಿಯಾ ಕ್ಷೇತ್ರದಿಂದ ಜೆಎಸ್‌ಪಿ ಕಣಕ್ಕಿಳಿಸಿದೆ. ಆಲಂ ಅವರು ವೈದ್ಯರಾಗಿದ್ದುಕೊಂಡೇ ಸಾರ್ವಜನಿಕ ಸೇವೆಯಲ್ಲಿ ಹೆಸರುವಾಸಿಯಾಗಿದ್ದಾರೆ.
ಸಮಾಜದಲ್ಲಿನ ಎಲ್ಲ ಸಮಸ್ಯೆಗಳಿಗೆ ಗುಣಮಟ್ಟದ ಶಿಕ್ಷಣವೊಂದೇ ಪರಿಹಾರ ಎಂದು ಆಲಂ ನಂಬಿದ್ದಾರೆ.
ಬರ್ಹರಿಯಾ ಕ್ಷೇತ್ರದಲ್ಲಿ 2020ರಲ್ಲಿ ಆರ್‌ಜೆಡಿಯಿಂದ ಸ್ಪರ್ಧಿಸಿದ್ದ ಬಚ್ಚಾ ಪಾಂಡೆ ಗೆದ್ದು, ಶಾಸಕರಾಗಿದ್ದರು. 2015ರಲ್ಲಿ ಜೆಡಿಯು ಅಭ್ಯರ್ಥಿ ಶ್ಯಾಮ್ ಬಹದ್ದೂರ್ ಸಿಂಗ್ ಈ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಜಾತಿ ಸಮೀಕರಣ, ಮತ ವಿಭಜನೆ ಸವಾಲು; ಹ್ಯಾಟ್ರಿಕ್ ಗೆಲುವಿನತ್ತ ತೇಜಸ್ವಿ ಚಿತ್ತ
ಈ ಬಾರಿಯ ಚುನಾಣೆಯಲ್ಲಿ ಆರ್‌ಜೆಡಿ ಹಾಲಿ ಶಾಸಕ ಬಚ್ಚಾ ಪಾಂಡೆ ಅವರಿಗೆ ಟಿಕೆಟ್ ನೀಡಿಲ್ಲ. ಬದಲಾಗಿ, ಅರುಣ್ ಕುಮಾರ್ ಗುಪ್ತಾ ಅವರನ್ನು ಕಣಕ್ಕಿಳಿಸಿದೆ. ಜೆಡಿಯುನಿಂದ ಇಂದ್ರದೇವ್ ಸಿಂಗ್ ಕಣದಲ್ಲಿದ್ದಾರೆ.
6. ರಿತೇಶ್ ರಂಜನ್ ಪಾಂಡೆ – ಕರ್ಗಹಾರ್ ಕ್ಷೇತ್ರ
ಪ್ರಸಿದ್ಧ ಭೋಜ್‌ಪುರಿ ಗಾಯಕ ರಿತೇಶ್ ರಂಜನ್ ಪಾಂಡೆ ಅವರು ಇದೇ ಮೊದಲ ಬಾರಿಗೆ ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರು ಬಿಹಾರದ ರೋಹ್ತಾಸ್ ಜಿಲ್ಲೆಯ ಕರ್ಗಹಾರ್ ಕ್ಷೇತ್ರದಲ್ಲಿ ಜೆಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಅವರು ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಕುಮಾರ್ ಮಿಶ್ರಾ ಮತ್ತು ಜೆಡಿಯು ಅಭ್ಯರ್ಥಿ ಬಶಿಷ್ಠ ಸಿಂಗ್ ವಿರುದ್ಧ ಸ್ಪರ್ಧಿಯಲ್ಲಿದ್ದಾರೆ. ಸಿಪಿಐ ಕೂಡ ಎಂಪಿ ಗುಪ್ತಾ ಅವರನ್ನು ಕಣಕ್ಕಿಳಿಸಿದೆ.
2020ರ ಚುನಾಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಕುಮಾರ್ ಮಿಶ್ರಾ ಗೆದ್ದು, ಶಾಸಕರಾಗಿದ್ದರು.
7. ವೈಬಿ ಗಿರಿ, ಮಾಂಝಿ ಕ್ಷೇತ್ರ
ಬಿಹಾರದ ಸಾರನ್ ಜಿಲ್ಲೆಯ ಮಾಂಝಿ ಕ್ಷೇತ್ರದಲ್ಲಿ ವೈಬಿ ಗಿರಿ ಜಾನ್ ಅವರು ಜೆಎಸ್‌ಪಿಯಿಂದ ಸ್ಪರ್ಧಿಸಿದ್ದಾರೆ. ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಜಾನ್ ಅವರು ಪಾಟ್ನಾ ಹೈಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿದ್ದಾರೆ. ಅವರು ಹಲವಾರು ಹೈ ಪ್ರೊಫೈಲ್ ಪ್ರಕರಣಗಳಲ್ಲಿ ವಾದಿಸಿ, ಖ್ಯಾತಿ ಪಡೆದಿದ್ದಾರೆ. ಅವರು ಬಿಹಾರ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಮತ್ತು ಪಾಟ್ನಾ ಹೈಕೋರ್ಟ್‌ನಲ್ಲಿ ಕೇಂದ್ರ ಸರ್ಕಾರಿ ಪ್ರಕರಣಗಳಲ್ಲಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
2020ರಲ್ಲಿ, ಮಾಂಝಿ ಕ್ಷೇತ್ರದಿಂದ ಸಿಪಿಐಎಂ ಅಭ್ಯರ್ಥಿ ಸತ್ಯೇಂದ್ರ ಯಾದವ್ ಅವರು ಗೆದ್ದಿದ್ದರು. ಈ ಬಾರಿ, ಯಾದವ್ ಅವರು ಮತ್ತೆ ಸ್ಪರ್ಧೆಯಲ್ಲಿದ್ದಾರೆ. ಜೆಡಿಯುನಿಂದ ರಣಧೀರ್ ಸಿಂಗ್ ಕಣದಲ್ಲಿದ್ದಾರೆ. ಈ ಇಬ್ಬರ ವಿರುದ್ಧ ಹಿರಿಯ ವಕೀಲ ವೈಬಿ ಗಿರಿ ಸ್ಪರ್ಧಿಸಿದ್ದಾರೆ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಬಿಹಾರದಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ಬಿಹಾರವು ಹೈ-ವೋಲ್ಟೇಜ್ ವಿಧಾನಸಭಾ ಚುನಾವಣೆಗೆ ಸಜ್ಜಾಗಿದೆ. ನಾಳೆ (ನ.6) ಮೊದಲ ಹಂತದ ಮತದಾನ ನಡೆಯಲಿದೆ. ಎರಡನೇ ಹಂತದ ಮತದಾನ ನವೆಂಬರ್ 11 ರಂದು ನಡೆಯಲಿದೆ. ನವೆಂಬರ್ 14ರಂದು ಫಲಿತಾಂಶ ಹೊರಬೀಳಲಿದೆ. ಒಂದು ಕಡೆ ಜೆಡಿಯು, ಬಿಜೆಪಿ, ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ ಹಾಗೂ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಒಳಗೊಂಡ ಆಡಳಿತಾರೂಢ ಎನ್‌ಡಿಎ ಅಧಿಕಾರ ಉಳಿಸಿಕೊಳ್ಳಲು ನೋಡುತ್ತಿದೆ. ಮತ್ತೊಂದೆಡೆ ಆರ್‌ಜೆಡಿ, ಕಾಂಗ್ರೆಸ್, ಎಡ ಪಕ್ಷಗಳು ಹಾಗೂ ಮುಖೇಶ್ ಸಹಾನಿ ಅವರ ವಿಕಾಸಶೀಲ ಇನ್ಸಾನ್ ಪಕ್ಷಗಳ ಮಹಾಘಟಬಂಧನ್ ಮೈತ್ರಿಕೂಟವು ಎನ್‌ಡಿಎಯನ್ನು ಸೋಲಿಸಿ ಅಧಿಕಾರ ಪಡೆಯುವ ಉತ್ಸಾಹದಲ್ಲಿದೆ.




