ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಬಾಕಿ ಇರುವಾಗ, ಚುನಾವಣಾ ಕಣ ರಕ್ತಪಾತಕ್ಕೆ ತಿರುಗಿದೆ. ಜನ ಸುರಾಜ್ ಪಕ್ಷದ (ಜೆಎಸ್‌ಪಿ) ನಾಯಕ ದುಲಾರ್‌ಚಂದ್ ಯಾದವ್ ಅವರ ಹತ್ಯೆಯಾಗಿದೆ. ಈ ಹತ್ಯೆಯ ಹಿಂದೆ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ಅನಂತ್ ಸಿಂಗ್ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಅನಂತ್ ಸಿಂಗ್ ಸೇರಿದಂತೆ ಐವರು ಆರೋಪಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಬಿಹಾರದ ಮೋಕಾಮಾ ವಿಧಾನಸಭಾ ಕ್ಷೇತ್ರದಲ್ಲಿ ಜೆಎಸ್‌ಪಿ ಅಭ್ಯರ್ಥಿ ಪಿಯೂಷ್ ಪ್ರಿಯದರ್ಶಿ ಪರವಾಗಿ ಗುರುವಾರ ಸಂಜೆ ದುಲಾರ್‌ಚಂದ್ ಪ್ರಚಾರ ಮಾಡುತ್ತಿದ್ದರು. ಈ ವೇಳೆ, ತಾಲ್ ಪ್ರದೇಶದಲ್ಲಿ ತೆರಳುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆಸಿ, ಹತ್ಯೆಗೈಯಲಾಗಿದೆ. ವಿಧಾನಸಭಾ ಚುನಾವಣೆಯನ್ನು ರಕ್ತಸಿಕ್ತಗೊಳಿಸಲಾಗಿದೆ. ಮೋಕಾಮಾ ಕ್ಷೇತ್ರದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಪೊಲೀಸರು ಹಳ್ಳಿಗಳಲ್ಲಿ ಮೊಕ್ಕಾಂ ಹೂಡಿದ್ದಾರೆ.
ದುಲಾರ್‌ಚಂದ್ ಯಾದವ್ ಅವರ ಮೊಮ್ಮಗನ ಹೇಳಿಕೆಯ ಆಧಾರದ ಮೇಲೆ, ಪೊಲೀಸರು ಅನಂತ್ ಸಿಂಗ್ ಮತ್ತು ಅವರ ಇಬ್ಬರು ಸೋದರಳಿಯರಾದ ರಣವೀರ್ ಮತ್ತು ಕರ್ಮವೀರ್ ಹಾಗೂ ಇತರ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆದಾಗ್ಯೂ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ
”ಪ್ರಚಾರದ ವೇಳೆ ಅನಂತ್ ಸಿಂಗ್ ಅವರ ಬೆಂಬಲಿಗರು ಮೊದಲು ಗುಂಡು ಹಾರಿಸಿದರು. ನಂತರ, ತಮ್ಮ ವಾಹನದಿಂದ ದುಲಾರ್‌ಚಂದ್ ಅವರಿಗೆ ಡಿಕ್ಕಿ ಹೊಡೆದು ಕೊಂದರು” ಎಂದು ಮೃತ ದುಲಾರ್‌ಚಂದ್ ಅವರು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ರೀಲ್ಸ್ ಮಾಡುವುದೂ ಉದ್ಯೋಗ – ರೈಲು ಬಿಟ್ಟ ಮೋದಿ
ಜೆಡಿಯು ಅಭ್ಯರ್ಥಿ ಅನಂತ್ ಸಿಂಗ್ ತಮ್ಮ ವಿರುದ್ಧದ ಕೊಲೆ ಆರೋಪಗಳನ್ನು ನಿರಾಕರಿಸಿದ್ದಾರೆ. ಚುನಾವಣಾ ಪ್ರಚಾರದಿಂದ ಹಿಂತಿರುಗುವಾಗ ದುಲಾರ್‌ಚಂದ್ ಅವರ ವಾಹನವನ್ನು ಹಿಂದಿಕ್ಕಿರುವುದಾಗಿ (ಓವರ್‌ಟೇಕ್) ಅವರು ಹೇಳಿದ್ದಾರೆ. ತಮ್ಮ ಬೆಂಗಾವಲು ಪಡೆಯ ವಾಹನಗಳನ್ನು ಜೆಎಸ್‌ಪಿ ಬೆಂಬಲಿಗರು ಸುತ್ತುವರೆದು ಇಟ್ಟಿಗೆ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಈ ಕೃತ್ಯವು ಆರ್‌ಜೆಡಿ ನಾಯಕ ಸೂರಜ್ ಭನ್ ಸಿಂಗ್ ಅವರ ಪಿತೂರಿ ಎಂದು ಅನಂತ್ ಸಿಂಗ್ ಆರೋಪಿಸಿದ್ದಾರೆ. ಅನಂತ್ ಸಿಂಗ್ ಅವರ ಆರೋಪಗಳಿಗೆ ಪ್ರತಿಕ್ರಿಯಿಸಲು ಸೂರಜ್ ಭನ್ ನಿರಾಕರಿಸಿದ್ದಾರೆ.
ಪ್ರಕರಣ ಸಂಬಂಧ ಆಡಳಿತಾರೂಢ ಎನ್‌ಡಿಎ ಮತ್ತು ಪ್ರಧಾನಿ ಮೋದಿ ವಿರುದ್ಧ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ವಾಗ್ದಾಳಿ ನಡೆಸಿದ್ದಾರೆ. “ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ, ಪ್ರಧಾನಿ ಮೋದಿ ಅವರು ಹಿಂದಿನ ಕಾಲದ (ಜಂಗಲ್ ರಾಜ್) ಬಗ್ಗೆ ಮಾತನಾಡುತ್ತಲೇ ಇರುವಾಗ, ಜನರು ಇನ್ನೂ ‘ಬಂದೂಕು ಮತ್ತು ಗುಂಡು’ಗಳೊಂದಿಗೆ ಹೇಗೆ ತಿರುಗಾಡುತ್ತಿದ್ದಾರೆ. ಆಡಳಿತವು ಅಪರಾಧಿಗಳನ್ನು ರಕ್ಷಿಸುತ್ತಿದೆ. ಸಾರ್ವಜನಿಕ ಭದ್ರತೆಗಿಂತ ತಮ್ಮ ಸ್ವಂತ ಸುರಕ್ಷತೆಗೆ ಆದ್ಯತೆ ನೀಡುತ್ತಿದೆ. ಇವರು ಸೋಲಿನ ಭಯದಲ್ಲಿದ್ದಾರೆ. ಇಂತಹ ಕೃತ್ಯಗಳಿಗೆ ಬಿಹಾರದ ಜನರು ಸೂಕ್ತ ಉತ್ತರ ನೀಡುತ್ತಾರೆ” ಎಂದು ಹೇಳಿದ್ದಾರೆ.




