ಬಿಹಾರ ವಿಧಾನಸಭಾ ಚುನಾವಣೆಯ ಅಂತಿಮ ಫಲಿತಾಂಶ ಇಂದು (ನ.14) ಸಂಜೆಯೊಳಗೆ ಪ್ರಕಟವಾಗಲಿದೆ. ಎತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಆಡಳಿತಾರೂಢ ಎನ್‌ಡಿಎ 190 ಮತ್ತು ವಿಪಕ್ಷಗಳ ಮಹಾಘಟಬಂಧನ್ 50 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಮಹಾಘಟಬಂಧನ್ ಮೈತ್ರಿಕೂಟದ ಭಾಗವಾಗಿರುವ ಎಡಪಕ್ಷಗಳು ಒಟ್ಟು 9 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಆರ್‌ಜೆಡಿ 36 ಕ್ಷೇತ್ರಗಳಲ್ಲಿಯೂ, ಕಾಂಗ್ರೆಸ್ 6 ಕ್ಷೇತ್ರಗಳಲ್ಲಿ ಮುಂದಿವೆ. ಸ್ವತಂತ್ರವಾಗಿ ಸ್ಪರ್ಧಿಸಿದ್ದ ಎಐಎಂಐಎಂ 3 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
ಎಡಪಕ್ಷಗಳು ಈ ಬಾರಿಯ ಬಿಹಾರ ಚುನಾವಣೆಯಲ್ಲಿ 33 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಈ ಪೈಕಿ, 9 ಸ್ಥಾನಗಳಲ್ಲಿ ಮುನ್ನಡೆಯಲ್ಲಿವೆ. ಅದರಲ್ಲಿ, ಸಿಪಿಐ(ಎಂಎಲ್) ಲಿಬರೇಶನ್ – 7, ಸಿಪಿಐ(ಎಂ) – 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ದರೌಂಡಾ, ಪಾಲಿಗಂಜ್, ಅರ್ರಾ, ಡುಮ್ರಾನ್, ಕರಕಟ್, ಅರ್ವಾಲ್ ಹಾಗೂ ಘೋಸಿ ಕ್ಷೇತ್ರಗಳಲ್ಲಿ ಸಿಪಿಐ(ಎಂಎಲ್) ಲಿಬರೇಶನ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಮತ್ತೊಂದೆಡೆ, ಹಯಾಘಾಟ್ ಮತ್ತು ಬಿಭೂತಿಪುರ ಸ್ಥಾನಗಳಲ್ಲಿ ಸಿಪಿಐ(ಎಂ) ಮುನ್ನಡೆ ಸಾಧಿಸಿದೆ.
ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಮೂರು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕೊಚಧಮನ್, ಅಮೌರ್ ಹಾಗೂ ಬೈಸಿ ಕ್ಷೇತ್ರಗಳಲ್ಲಿ ಎಐಎಂಐಎಂ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ.
2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಡ ಪಕ್ಷಗಳು ಒಟ್ಟು 16 ಸ್ಥಾನಗಳಲ್ಲಿ ಗೆದಿದ್ದವು. ಎಐಎಂಐಎಂ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.




