ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶ ಪ್ರಕಟವಾಗುವುದಕ್ಕೂ ಮುನ್ನವೇ ಎನ್‌ಡಿಎ ಸೋಲನ್ನು ಒಪ್ಪಿಕೊಂಡಿದೆ. ಆಡಳಿತ ಪಕ್ಷಗಳ ನಾಯಕರು ತಮ್ಮ ಅಧಿಕೃತ ನಿವಾಸಗಳನ್ನು ಖಾಲಿ ಮಾಡಲು ಆರಂಭಿಸಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪವನ್ ಖೇರಾ ಹೇಳಿದ್ದಾರೆ.
ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಎನ್‌ಡಿಎ ನಾಯಕರ ಸೂಚನೆ ಮೇರೆಗೆ ಅಧಿಕಾರಿಗಳು ‘ಎನ್‌ಡಿಎ ಸೋಲನ್ನು ಗ್ರಹಿಸಿ’ದ್ದಾರೆ. ಪ್ರಮುಖ ಕಡತಗಳನ್ನು ಸ್ಥಳಾಂತರ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಗುರುವಾರ ನಡೆದ ಮೊದಲ ಹಂತದ ಮತದಾನದಲ್ಲಿ ಜನರು ‘ಮಹಾಘಟಬಂಧನ್’ ಪರವಾಗಿ ತೋರಿಸಿದ ಉತ್ಸಾಹವನ್ನು ಕಂಡು ಎನ್‌ಡಿಎ ನಾಯಕರು ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ. ಹಾಲಿ ಸರ್ಕಾರದ ಉಪ ಮುಖ್ಯಮಂತ್ರಿಗಳು ಮತ್ತು ಅನೇಕ ಸಚಿವರು ತಮ್ಮ ನಿವಾಸಗಳು ಖಾಲಿ ಮಾಡಲು ಮುಂದಾಗಿದ್ದಾರೆ” ಎಂದಿದ್ದಾರೆ.
“ಎನ್‌ಡಿಎ ಸರ್ಕಾರದ ಇಬ್ಬರೂ ಉಪಮುಖ್ಯಮಂತ್ರಿಗಳು ಸೇರಿದಂತೆ 12 ಸಚಿವರು ಈ ಬಾರಿಯ ಚುನಾವಣೆಯಲ್ಲಿ ಸೋಲುತ್ತಾರೆ. ಎನ್‌ಡಿಎ ಹೀನಾಯವಾಗಿ ಅಧಿಕಾರ ಕಳೆದುಕೊಳ್ಳುತ್ತದೆ” ಎಂದು ಅವರು ಹೇಳಿದ್ದಾರೆ.




