ಈ ಬಾರಿಯ ಬಿಹಾರ ಚುನಾವಣೆಯಲ್ಲಿ ಮೋದಿ ಅಲೆ, ನಿತೀಶ್ ವರ್ಚಸ್ಸು, ತೇಜಸ್ವಿ ಯಾದವ್ ಪ್ರಭಾವ ಯಾವುದೂ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ. ಬದಲಾಗಿ, ಮುಂದಿನ ಸರ್ಕಾರವನ್ನು ಯಾರು ರಚಿಸುತ್ತಾರೆ ಎಂಬುದನ್ನು 11 ನಿರ್ಣಾಯಕ ಅಂಶಗಳು ನಿರ್ಧರಿಸಲಿವೆ.
ಬಿಹಾರ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಅಧಿಕಾರ ಗದ್ದುಗೆಗಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ನಡುವೆ ಪ್ರಬಲ ಸ್ಪರ್ಧೆ ಇದ್ದರೂ, ಈ ಬಾರಿಯ ಚುನಾವಣಾ ಕಣವು ದ್ವಿಕೋನ ಸ್ಪರ್ಧೆಯಾಗಿ ಉಳಿದಿಲ್ಲ. ಬಹು ಮೈತ್ರಿಗಳು, ಬದಲಾಗುತ್ತಿರುವ ಮತದಾರರ ಚಿತ್ತ, ಕಲ್ಯಾಣ ಯೋಜನೆಗಳ ಘೋಷಣೆಗಳು, ಜಾತಿ ಲೆಕ್ಕಾಚಾರಗಳು ಹಾಗೂ ಹೊಸ ರಾಜಕೀಯ ಮುಖಗಳ ಹೊರಹೊಮ್ಮುವಿಕೆಯು ಬಿಹಾರದಲ್ಲಿ ಬಹುಮುಖಿ ಸ್ಪರ್ಧೆಯನ್ನು ಹುಟ್ಟುಹಾಕಿದೆ. ಸಾಂಪ್ರದಾಯಿಕ ಮತಬ್ಯಾಂಕ್ ಮತ್ತು ಮತದಾನ ಮಾದರಿಯು ಛಿದ್ರವಾಗಿದೆ. ಹೊಸ ಅಲೆ ಬೀಸಲಾರಂಭಿಸಿದೆ. ಜೊತೆಗೆ, ಚುನಾವಣಾ ಆಯೋಗ ಉರುಳಿಸಿದ ‘ಎಸ್‌ಐಆರ್’ ಎಂಬ ಅಡಕತ್ತರಿಯೂ ತೂಗುತ್ತಿದೆ.
ಈ ಬಾರಿಯ ಬಿಹಾರ ಚುನಾವಣೆಯಲ್ಲಿ ಮೋದಿ ಅಲೆ, ನಿತೀಶ್ ವರ್ಚಸ್ಸು, ತೇಜಸ್ವಿ ಯಾದವ್ ಪ್ರಭಾವ ಯಾವುದೂ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ. ಬದಲಾಗಿ, ಮುಂದಿನ ಸರ್ಕಾರವನ್ನು ಯಾರು ರಚಿಸುತ್ತಾರೆ ಎಂಬುದನ್ನು 11 ನಿರ್ಣಾಯಕ ಅಂಶಗಳು ನಿರ್ಧರಿಸಲಿವೆ. ಈ ಅಂಶಗಳೇ ಚುನಾವಣಾ ಫಲಿತಾಂಶದ ದಿಕ್ಕನ್ನು, ಬಿಹಾರದ ಭವಿಷ್ಯವನ್ನು ಬದಲಿಸಲಿವೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
- ಮೈತ್ರಿ ಹೊಂದಾಣಿಕೆ
ದೊಡ್ಡ ಮೈತ್ರಿಕೂಟಗಳಾದ ಎನ್‌ಡಿಎ ಮತ್ತು ಮಹಾಘಟಬಂಧನ್ ತಮ್ಮ ಕೂಟಕ್ಕೆ ಹೊಸ ಪಕ್ಷಗಳನ್ನು ಸೇರಿಸಿಕೊಳ್ಳುತ್ತಿವೆ. ಮೈತ್ರಿಯನ್ನು ವಿಸ್ತರಿಸುತ್ತಿವೆ. ಸೀಟು ಹಂಚಿಕೆಯನ್ನು ವ್ಯವಸ್ಥಿತವಾಗಿ, ಸೂಕ್ಷ್ಮ ಸಮತೋಲನದೊಂದಿಗೆ ನಿರ್ಧರಿಸುತ್ತಿವೆ. ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸಲು ಪ್ರಯತ್ನಿಸುತ್ತಿವೆ.
ಆದರೂ, ಎನ್‌ಡಿಎಯಲ್ಲಿ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಬಂಡಾಯ, ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ) ಸೇರ್ಪಡೆಯು ಹೊಸ ಉದ್ವಿಗ್ನತೆಯನ್ನು ಹುಟ್ಟುಹಾಕಿದೆ. ವಿಶೇಷವಾಗಿ, ಎಲ್‌ಜೆಪಿ ಮತ್ತು ಜೆಡಿಯು ನಡುವಿನ ವಿಶ್ವಾಸದ ಕೊರತೆಯು ಬಿಜೆಪಿಗೆ ತಲೆನೋವಾಗಿದೆ.
2020ರ ಚುನಾವಣೆಯಲ್ಲಿಯೂ ಜೆಡಿಯು ವಿರುದ್ಧ ಎಲ್‌ಜೆಪಿ ಬಂಡಾಯ ಎದ್ದಿತ್ತು. ಪರಿಣಾಮವಾಗಿ, ಜೆಡಿಯುಗೆ ಭಾರೀ ಹಿನ್ನಡೆಯಾಗಿತ್ತು. ಬಿಜೆಪಿಯ ಆಜ್ಞೆಯ ಮೇರೆಗೆ ಜಡಿಯು ವಿರುದ್ಧ ಮಾತ್ರವೇ ಎಲ್‌ಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು ಎಂಬ ಆರೋಪವೂ ಇದೆ. ಆದರೆ, ಈ ಬಾರಿ, ಅಧಿಕಾರ ಉಳಿಸಿಕೊಳ್ಳುವುದೇ ಕಷ್ಟವೆಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ಮೈತ್ರಿಯೊಳಗಿನ ಅಪಸ್ವರವನ್ನು ಶಮನ ಮಾಡುವುದು ಬಿಜೆಪಿಗೆ ಅನಿವಾರ್ಯವಾಗಿದೆ. ಆದರೂ, ಎಲ್‌ಜೆಪಿ ಬಂಡಾಯ ಬಾವುಟವನ್ನು ಮತ್ತೆ ಮೇಲಕ್ಕೆತ್ತಿದೆ. ಎಲ್‌ಜೆಪಿ ಜೊತೆಗೆ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷ (ಜೆಎಸ್‌ಪಿ) ಕೂಡ ಎನ್‌ಡಿಎಗೆ ಸವಾಲಾಗಿ ಪರಿಣಮಿಸುವ ಸಾಧ್ಯತೆಗಳಿವೆ.
ಅಂತೆಯೇ, ವಿಕಾಸಶೀಲ ಇನ್ಸಾನ್ ಪಕ್ಷ (ವಿಐಪಿ), ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಹಾಗೂ ಎಲ್‌ಜೆಪಿಯ ಒಂದು ಬಣವನ್ನು ತನ್ನೊಂದಿಗೆ ಸೇರಿಸಿಕೊಂಡಿರುವ ಮಹಾಘಟಬಂಧನ್ ಕೂಡ ಹೊಸ ತೊಡಕುಗಳಿಗೆ ಸಿಲುಕಿಕೊಂಡಿದೆ. ಮೈತ್ರಿಯ ಮುಖ್ಯ ಪಾಲುದಾರರಾದ ಆರ್‌ಜೆಡಿ ಮತ್ತು ಕಾಂಗ್ರೆಸ್ ಸೀಟು ಹಂಚಿಕೆ ಮಾಡಿಕೊಂಡಿದ್ದರೂ, ಉಳಿದ ಮಿತ್ರ ಪಕ್ಷಗಳಿಗೆ ಸೀಟುಗಳನ್ನು ಹಂಚುವುದು ಎರಡೂ ಪಕ್ಷಗಳನ್ನು ಸಂದಿಗ್ಧ ಪರಿಸ್ಥಿತಿಗೆ ದೂಡಿದೆ.
ಎರಡೂ ಮೈತ್ರಿಕೂಟಗಳು ಒಗ್ಗಟ್ಟನ್ನು ಕಾಪಾಡಿಕೊಳ್ಳುವ, ಏಕತೆಯನ್ನು ಪ್ರತಿಪಾದಿಸುವ, ಪಕ್ಷಾತೀತವಾಗಿ ಮೈತ್ರಿ ಅಭ್ಯರ್ಥಿಗಳಿಗೆ ತಮ್ಮ ಬೆಂಬಲಿಗರು ಮತ ಚಲಾಯಿಸುವಂತೆ ಮಾಡಲು ಹೆಣಗಾಡುತ್ತಿವೆ.
- ನಾಯಕತ್ವ ಮತ್ತು ಮುಂದಾಳುಗಳು
ಬಿಹಾರ ರಾಜಕೀಯದಲ್ಲಿ ಜನರನ್ನು ಹೆಚ್ಚಾಗಿ ಪ್ರಭಾವಿಸುವ ನಾಯಕರ ಪಟ್ಟಿಯಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅಗ್ರಸ್ಥಾನದಲ್ಲಿದ್ದಾರೆ. ಅವರು ಮಹಾಘಟಬಂಧನ್ ಮೈತ್ರಿಕೂಟದ ಮುಖ್ಯಮಂತ್ರಿ ಮುಖವಾಗಿದ್ದು, ಚುನಾವಣೆಯಲ್ಲಿ ಮೈತ್ರಿಕೂಟವನ್ನು ಮುನ್ನಡೆಸುತ್ತಿದ್ದಾರೆ. ಆದಾಗ್ಯೂ, ಅವರ ಪ್ರಭಾವವು ಮುಸ್ಲಿಂ-ಯಾದವ್ ಸಮುದಾಯಗಳ ಮೇಲೆ ಮಾತ್ರವೇ ಹೆಚ್ಚು ಸೀಮಿತವಾಗುತ್ತಿದೆ. ಎನ್‌ಡಿಎಯನ್ನು ಮುನ್ನಡೆಸುತ್ತಿರುವ ನಿತೀಶ್ ಕುಮಾರ್ ಅವರು ದೀರ್ಘಾವಧಿಯ ಅಧಿಕಾರ ನಡೆಸಿದ್ದು, ಅವರ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದಿದೆ. ಪ್ರಭಾವಿಗಳ ಪಟ್ಟಿಯಲ್ಲಿ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಮೂರನೇ ಸ್ಥಾನದಲ್ಲಿದ್ದು, ಚಿರಾಗ್ ಪಾಸ್ವಾನ್ ಮತ್ತು ಸಾಮ್ರಾಟ್ ಚೌಧರಿ ನಂತರ ಸ್ಥಾನಗಳಲ್ಲಿದ್ದಾರೆ.
ಆದಾಗ್ಯೂ, VoteVibe ಸಮೀಕ್ಷೆಯ ಪ್ರಕಾರ, ಕೇವಲ 15% ಮತದಾರರು ಮಾತ್ರ ತಮ್ಮ ಮತ ಯಾರಿಗೆ ಎಂಬುದನ್ನು ಮುಖ್ಯಮಂತ್ರಿ ಅಭ್ಯರ್ಥಿಯ ಆಧಾರದ ಮೇಲೆ ನಿರ್ಧರಿಸುತ್ತಾರೆ. ಸ್ವಲ್ಪ ಹೆಚ್ಚಿನ ಸಂಖ್ಯೆಯ (17%) ಮತದಾರರು ಪ್ರಧಾನಿ ಮೋದಿ ಮುಖವನ್ನು ಪರಿಗಣಿಸುತ್ತಾರೆ. ಆದರೆ, 23% ಜನರು ಅಭಿವೃದ್ಧಿ ಮತ್ತು ಸಮಸ್ಯೆಗಳ ಆಧಾರದ ಮೇಲೆ ತಮ್ಮ ಮತವನ್ನು ನಿರ್ಧರಿಸುತ್ತಾರೆ. ಉಳಿದ ಮತದಾರರು ಜಾತಿ, ಧರ್ಮ, ಉಚಿತ ಯೋಜನೆಗಳು ಹಾಗೂ ಸ್ಥಳೀಯ ಸಮಸ್ಯೆಗಳಂತಹ ಸಂಕೀರ್ಣ ಅಂಶಗಳ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತಾರೆ.
2020ಕ್ಕೆ ಹೋಲಿಸಿದರೆ ನಿತೀಶ್ ಕುಮಾರ್ ಅವರ ಪ್ರಭಾವದ ರೇಟಿಂಗ್ ಕಡಿಮೆಯಾಗಿದೆ. ನಿತೀಶ್ ಕುಮಾರ್ ಕಳೆದುಕೊಂಡ ನೆಲೆಯನ್ನು ಪ್ರಶಾಂತ್ ಕಿಶೋರ್ ಮತ್ತು ಇತರರು ವ್ಯಾಪಿಸಿಕೊಂಡಿದ್ದಾರೆ. ತೇಜಸ್ವಿ ಯಾದವ್ ಕೂಡ ತಮ್ಮ ಜನಪ್ರಿಯತೆಯಲ್ಲಿ ಕೊಂಚ ಕುಸಿತ ಕಂಡಿದ್ದಾರೆ. ಈ ಕುಸಿತಕ್ಕೆ ಅವರು ಪ್ರಶಾಂತ್ ಕಿಶೋರ್ ಅವರ ಶೈಕ್ಷಣಿಕ ಅರ್ಹತೆಗಳ ಮೇಲೆ ನಡೆಸಿದ ದಾಳಿಗಳೇ ಕಾರಣವೆಂದು ಹೇಳಲಾಗುತ್ತಿದೆ.
ಆದಾಗ್ಯೂ, ಮಹಾಘಟಬಂಧನ್‌ನಲ್ಲಿ ತೇಜಸ್ವಿ ಅವರ ಕೇಂದ್ರೀಕೃತ ನಾಯಕತ್ವಕ್ಕೆ ಹೆಚ್ಚು ಒತ್ತುಕೊಡಲಾಗುತ್ತಿದೆ. ಆದರೆ, ಎನ್‌ಡಿಎಯಲ್ಲಿ ಸ್ಥಳೀಯ ನಾಯಕತ್ವದ ಮೇಲೆ ತಂತ್ರ ಹಣೆಯುತ್ತಿದ್ದು, ಪ್ರತಿಯೊಬ್ಬರೂ ತಮ್ಮದೇ ಆದ ಜಾತಿ ಮತ್ತು ಸಮುದಾಯಗಳ ಮತಗಳನ್ನು ಎನ್‌ಡಿಎ ಅಭ್ಯರ್ಥಿಗೆ ತರುವಂತೆ ಸೂಚಿಸಲಾಗುತ್ತಿದೆ.
3. ಆಡಳಿತದ ಪರ vs ವಿರೋಧ
ಬಿಹಾರವು ಒಂದು ವಿಶಿಷ್ಟ ಪರಿಸ್ಥಿತಿಯಲ್ಲಿದೆ. ಅಲ್ಲಿ ಅಧಿಕಾರದಲ್ಲಿರುವ ಸರ್ಕಾರವನ್ನು ಬೆಂಬಲಿಸುವವರು ಮತ್ತು ವಿರೋಧಿಸುವವರ ನಡುವಿನ ಅಂತರವು ಬಹುತೇಕ ಸಮಾನವಾಗಿ ವಿಭಜನೆಯಾಗುತ್ತವೆ. VoteVibe ಸಮೀಕ್ಷೆಯ ದತ್ತಾಂಶವು 48% ಜನರು ಬಲವಾದ ಆಡಳಿತ ವಿರೋಧಿ ಭಾವನೆ ಹೊಂದಿದ್ದರೆ, 32% ಜನರು ಆಡಳಿತದ ಪರವಾದ ನಿಲುವು ಹೊಂದಿದ್ದಾರೆ. 14% ಜನರು ತಟಸ್ಥ ಭಾವನೆಯಲ್ಲಿದ್ದಾರೆ ಎಂಬುದನ್ನು ವಿವರಿಸಿದೆ.
ವಿಶಿಷ್ಟವಾಗಿ, ಸ್ಪಷ್ಟ ಆಡಳಿತ ವಿರೋಧಿ ಅಥವಾ ಆಡಳಿತ ಪರ ಅಲೆಗಳು ಚುನಾವಣಾ ಫಲಿತಾಂಶಗಳನ್ನು ಊಹಿಸಲು ಹೆಚ್ಚು ನೆರವಾಗುತ್ತವೆ. ಆದರೆ, ಪರ-ವಿರೋಧಿ ಅಲೆಯು ಬಹುತೇಕ ಸಮವಾಗಿದ್ದಾಗ, ಮತಗಳನ್ನು ಏರು-ಪೇರು ಮಾಡುವ ಅವಕಾಶವು ಚುನಾವಣೆಯ ಕಡೆಯ ದಿನದವರೆಗೂ ಇರುತ್ತದೆ.
ಪ್ರಸ್ತುತ ಸರ್ಕಾರದ ವಿರುದ್ಧ ಗಮನಾರ್ಹ ಅಸಮಾಧಾನವಿದ್ದರೂ, ಈ ಅಸಮಾಧಾನದ ಮತಗಳು ವಿರೋಧ ಪಕ್ಷಗಳ (ಮಹಾಘಟಬಂಧನ್ ಮತ್ತು ಜನ್ ಸುರಾಜ್) ನಡುವೆ ಛಿದ್ರಗೊಂಡಿರುವಂತೆ ಕಾಣುತ್ತಿದೆ. ಆಡಳಿತ ವಿರೋಧಿ ಭಾವನೆಯನ್ನು ಮಹಾಘಟಬಂಧನ್ ಯಶಸ್ವಿಯಾಗಿ ಕ್ರೋಡೀಕರಿಸಿದರೆ, ಅದು ವಿಜಯದ ಸ್ಪಷ್ಟ ಹಾದಿಯನ್ನು ಕಂಡುಕೊಳ್ಳಲಿದೆ.
ಏತನ್ಮಧ್ಯೆ, ಜುಲೈನಲ್ಲಿ 18% ರಷ್ಟಿದ್ದ ಆಡಳಿತ ಪರವಾದ ಭಾವನೆಯು ಸೆಪ್ಟೆಂಬರ್‌ನಲ್ಲಿ 34%ಗೆ ಏರಿಕೆಯಾಗಿದೆ. ಮುಖ್ಯವಾಗಿ ಇತ್ತೀಚಿನ ತಿಂಗಳುಗಳಲ್ಲಿ ಸರ್ಕಾರ ಜಾರಿಗೆ ತಂದ ಕಲ್ಯಾಣ ಯೋಜನೆಗಳು ಜನರ ಅಭಿಪ್ರಾಯಗಳನ್ನು ಬದಲಾಯಿಸಿವೆ. ಆದರೂ, ಕಳೆದ 20 ವರ್ಷಗಳಲ್ಲಿ ಕಂಡಿದ್ದ ಸಮಸ್ಯೆಗಳಿಗೆ ಚುನಾವಣೆಗೂ ಮುನ್ನ ಜಾರಿಗೊಂಡ ಯೋಜನೆಗಳು ಪರಿಹಾರವಾಗುತ್ತವೆಯೇ ಎಂಬ ಪ್ರಶ್ನೆಯೊಂದಿಗೆ ವಿಪಕ್ಷಗಳು ಜನರನ್ನು ಎಚ್ಚರಿಸಿದರೆ, ಆಡಳಿತ ಪರವಾದ ಅಲೆಯನ್ನು ಬದಲಿಸಲು ಸಾಧ್ಯವಾಗುತ್ತದೆ.
4. ಕಲ್ಯಾಣ ಆರ್ಥಿಕತೆ
ಎನ್‌ಡಿಎ ಸರ್ಕಾರವು ಒಂದು ದೊಡ್ಡ ಅಭಿಯಾನವನ್ನು ಪ್ರಾರಂಭಿಸಿದೆ. ಐದು ಗುರುತಿಸಲಾದ ಸಮೂಹಗಳು- ಯುವಜನರು, ಮಹಿಳೆಯರು, ರೈತರು, ಹಿರಿಯ ನಾಗರಿಕರು ಹಾಗೂ ಕಾರ್ಮಿಕರು. ಪ್ರತಿಯೊಂದು ವರ್ಗಕ್ಕೂ ಹಲವಾರು ಯೋಜನೆಗಳ ಭರವಸೆ ನೀಡಿದೆ. ದೀರ್ಘಾವಧಿಯ ಅಭಿವೃದ್ಧಿ ವೈಫಲ್ಯಗಳನ್ನು ಮರೆಮಾಚಿ, ಅಲ್ಪಾವಧಿಯ ಪರಿಹಾರ ಕ್ರಮಗಳ ಮೂಲಕ ಜನಾಭಿಪ್ರಾಯವನ್ನು ಬದಲಿಸುವ ತಂತ್ರ ಹೆಣೆದಿದೆ.
ಹಿರಿಯ ನಾಗರಿಕರು ಮತ್ತು ವಿಧವೆಯರಿಗೆ ಪಿಂಚಣಿ ಹೆಚ್ಚಳ, ಯುವಜನರಿಗೆ ನಿರುದ್ಯೋಗ ಭತ್ಯೆ, ಸ್ವ-ಉದ್ಯೋಗಕ್ಕಾಗಿ ಮಹಿಳೆಯರಿಗೆ 10,000 ರೂ. ಅನುದಾನ, ಪೊಲೀಸ್ ನೇಮಕಾತಿಯಲ್ಲಿ ಮಹಿಳೆಯರಿಗೆ 35% ಮೀಸಲಾತಿ, ಕಾರ್ಮಿಕರಿಗೆ 5,000 ರೂ. ಸಹಾಯಧನ, ಎಲ್ಲ ಕುಟುಂಬಗಳಿಗೂ 125 ಯೂನಿಟ್ ಉಚಿತ ವಿದ್ಯುತ್ ಹಾಗೂ ಇತರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಭರವಸೆಗಳನ್ನು ನೀಡಿದೆ.
ಈ ಕಲ್ಯಾಣ ಕೇಂದ್ರಿತ ವಿಧಾನವನ್ನು ಬಿಹಾರದ ಜನರು ತಮ್ಮ ರಾಜ್ಯದ ಆರ್ಥಿಕತೆ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು. ರಾಜ್ಯವು ಭಾರತದಲ್ಲಿ ಅತ್ಯಂತ ಕಡಿಮೆ ತಲಾ ಆದಾಯವನ್ನು ಹೊಂದಿದೆ. ಗಮನಾರ್ಹ ಗ್ರಾಮೀಣ ಮತ್ತು ಕೃಷಿ ಸಂಕಷ್ಟವನ್ನು ಎದುರಿಸುತ್ತಿದೆ. ದೀರ್ಘಕಾಲದ ಅಭಿವೃದ್ಧಿಯ ಕೊರತೆಯು ರಾಜ್ಯವನ್ನು ಕಾಡುತ್ತಿದೆ. ಮಾನವ ಅಭಿವೃದ್ಧಿ ಸೂಚ್ಯಂಕ(HDI)ಗಳಲ್ಲಿ ತೀವ್ರವಾಗಿ ಹಿಂದುಳಿದಿದೆ. ಅತ್ಯಂತ ಗಮನಾರ್ಹವಾಗಿ, ರಾಜ್ಯದ ತಲಾ ಆದಾಯವು ರಾಷ್ಟ್ರೀಯ ಸರಾಸರಿಯ ಮೂರನೇ ಒಂದು ಭಾಗದಷ್ಟು ಹಿಂದೆ ಇದೆ.
5. ಮೋದಿ vs ರಾಹುಲ್
ಈ ಬಾರಿಯ ಬಿಹಾರ ಚುನಾವಣೆಯು ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ, ಒಂದು ಪ್ರಮುಖ ಅಂಶದಲ್ಲಿ ಗಮನ ಸೆಳೆಯುತ್ತಿದೆ. ಅದು, ಪ್ರಚಾರದಲ್ಲಿ ರಾಷ್ಟ್ರೀಯ ನಾಯಕರ ಪ್ರಮುಖ ಪ್ರವೇಶ. 2020ಕ್ಕೆ ಹೋಲಿಸಿದರೆ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಅವರ ಜನಪ್ರಿಯತೆಯ ರೇಟಿಂಗ್ ಕುಸಿಯುತ್ತಿದೆ. ಆದ್ದರಿಂದ, ಈ ಚುನಾವಣೆಯು ರಾಷ್ಟ್ರೀಯ ರಾಜಕೀಯ ನಾಯಕರ ನಡುವಿನ ಸ್ಪರ್ಧೆಯಾಗಿ ಮಾರ್ಪಟ್ಟಿದೆ.
ಪ್ರಸ್ತುತ ಚುನಾವಣೆಯನ್ನು ನಿತೀಶ್ ಕುಮಾರ್-ನರೇಂದ್ರ ಮೋದಿ ಮತ್ತು ತೇಜಸ್ವಿ ಯಾದವ್-ರಾಹುಲ್ ಗಾಂಧಿ ಎಂದು ರೂಪಿಸಲಾಗುತ್ತಿದೆ. ಸಿ-ವೋಟರ್ ದತ್ತಾಂಶದ ಪ್ರಕಾರ, ಬಿಹಾರದಲ್ಲಿ ರಾಹುಲ್ ಗಾಂಧಿಯವರ ಜನಪ್ರಿಯತೆ 41% ಇದೆ. ಮೋದಿ ಜನಪ್ರಿಯತೆ ಇನ್ನೂ 52% ಉಳಿದಿದೆ. ಆದಾಗ್ಯೂ, ಬಿಹಾರದಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಮತ್ತು ಮತದಾರರ ಅಧಿಕಾರ ಯಾತ್ರೆಯಿಂದಾಗಿ ರಾಹುಲ್ ಅವರ ರೇಟಿಂಗ್ ಹೆಚ್ಚಿರುವ ಮತ್ತು ಮೋದಿ ರೇಟಿಂಗ್ ಇಳಿದಿರುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.
ವಿಶೇಷವಾಗಿ, ಅಂಚಿನಲ್ಲಿರುವ ಸಮುದಾಯಗಳು, ಯುವಜನರು, ಅಲ್ಪಸಂಖ್ಯಾತರು ಹಾಗೂ ಎಸ್‌ಸಿ/ಎಸ್‌ಟಿ ಮತದಾರರಲ್ಲಿ ರಾಹುಲ್ ಜನಪ್ರಿಯತೆ ಗಮನಾರ್ಹವಾಗಿ ಹೆಚ್ಚಾಗಿದೆ. ತೇಜಸ್ವಿ ಅವರು ಯಾದವರು ಮತ್ತು ಮುಸ್ಲಿಂ ಸಮುದಾಯದಲ್ಲಿ ಬಲವಾದ ಬೆಂಬಲವನ್ನು ಪಡೆದಿದ್ದಾರೆ. ಜೊತೆಗೆ, ಪರಿಶಿಷ್ಟ ಜಾತಿಗಳು, ಒಬಿಸಿ ಮತ್ತು ಇಬಿಸಿ ಮತದಾರರಲ್ಲಿ ಹೆಚ್ಚಿನ ಮತದಾರರು ಕಾಂಗ್ರೆಸ್ ಮೇಲೆ ಒಲವು ಹೊಂದಿದ್ದು, ಇದು ಮಹಾಘಟಬಂಧನ್‌ಗೆ ಶೇಕಡಾವಾರು ಹೆಚ್ಚು ಮತಗಳನ್ನು ತಂದುಕೊಡುವ ಸಾಧ್ಯತೆಗಳಿವೆ.
ಎನ್‌ಡಿಎಯ ಪ್ರತಿಯೊಂದು ತಂತ್ರವೂ ಮೋದಿಯ ಜನಪ್ರಿಯತೆ ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಅವರ ಸರ್ಕಾರದ ಕಲ್ಯಾಣ ಯೋಜನೆಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಮೋದಿ ಅವರ ವರ್ಚಸ್ಸು ಮತ್ತು ಬಿಜೆಪಿಯ ಸಂಘಟನಾ ಶಕ್ತಿಯು ನಿತೀಶ್ ಕುಮಾರ್ ಅವರ ರೇಟಿಂಗ್‌ನಲ್ಲಿನ ಕುಸಿತವನ್ನು ಸರಿದೂಗಿಸಬಹುದು ಎಂದು ಎನ್‌ಡಿಎ ಭಾವಿಸಿದೆ.
6. ಮಹಿಳಾ ಮತದಾರರು
ಭಾರತದಾದ್ಯಂತ ಇತ್ತೀಚಿನ ಚುನಾವಣೆಗಳಲ್ಲಿ ಮಹಿಳೆಯರು ಕಿಂಗ್‌ಮೇಕರ್‌ಗಳಾಗಿ ಹೊರಹೊಮ್ಮಿದ್ದಾರೆ. ಬಿಹಾರವೂ ಇದಕ್ಕೆ ಹೊರತಾಗಿಲ್ಲ. ವಿಭಿನ್ನ ಅಗತ್ಯತೆಗಳು, ಆಕಾಂಕ್ಷೆಗಳು ಹಾಗೂ ಸಾಂಪ್ರದಾಯಿಕ ಜಾತಿ ರೇಖೆಗಳನ್ನು ಮೀರಿದ ಸಮಸ್ಯೆಗಳು ಮಹಿಳೆಯರನ್ನು ವಿಶೇಷವಾಗಿ ಪ್ರಭಾವಶಾಲಿಯನ್ನಾಗಿ ಮಾಡಿವೆ.
ಬಿಹಾರದಲ್ಲಿ ಸುಮಾರು 1.21 ಕೋಟಿ ಮಹಿಳೆಯರು (ಒಟ್ಟು ಮಹಿಳೆಯರಲ್ಲಿ 35%) ಮಹಿಳಾ ರೋಜ್‌ಗಾರ್ ಯೋಜನೆಯಡಿ 10,000 ರೂ. ಫಲಾನುಭವ ಪಡೆದಿದ್ದಾರೆ. ಪ್ರತಿ ಕುಟುಂಬವು ಸಾಮಾನ್ಯವಾಗಿ ಸರಾಸರಿ ಮೂರು ಮತದಾರರನ್ನು ಹೊಂದಿರುವುದರಿಂದ, ಈ ಯೋಜನೆಗಳು 7.42 ಕೋಟಿ ಜನಸಂಖ್ಯೆಯಲ್ಲಿ ಕನಿಷ್ಠ 50% ಮತದಾರರ ಮೇಲೆ ನೇರವಾಗಿ ಮತ್ತು ಪರೋಕ್ಷವಾಗಿ ಪ್ರಭಾವ ಬೀರಿವೆ.
ನಿತೀಶ್ ಕುಮಾರ್ ಬಹಳ ಹಿಂದಿನಿಂದಲೂ ಕಲ್ಯಾಣ ಯೋಜನೆಗಳ ಮೂಲಕ ಈ ಮತಬ್ಯಾಂಕ್ ಅನ್ನು ಬೆಳೆಸಿದ್ದಾರೆ. ಅವರು ತಮ್ಮ ಆಡಳಿತದಲ್ಲಿ ಉಚಿತ ಸೈಕಲ್ ವಿತರಣೆ (ಶಾಲೆಗಳಲ್ಲಿ ಬಾಲಕಿಯರ ಹಾಜರಾತಿ ಹೆಚ್ಚಳಕ್ಕೆ ಕಾರಣವಾಯಿತು), ಮಹಿಳಾ ಸ್ವಸಹಾಯ ಗುಂಪುಗಳಿಗೆ ಪ್ರೋತ್ಸಾಹ ನೀಡುವ ಜೀವಿಕಾ ದೀದಿ ಯೋಜನೆ, ಪಂಚಾಯತ್ ಚುನಾವಣೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಹಾಗೂ ವಿಧವೆಯರಿಗೆ ಪಿಂಚಣಿ ಹೆಚ್ಚಳದಂತಹ ಕ್ರಮಗಳ ಮೂಲಕ ನಿರಂತರವಾಗಿ ಮಹಿಳೆಯರ ವಿಶ್ವಾಸ ಪಡೆದುಕೊಂಡು ಬಂದಿದ್ದಾರೆ. ಈ ವಿಶ್ವಾಸವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಚುನಾವಣೆ ಘೋಷಣೆಗೂ ಮುನ್ನ, ಮಹಿಳಾ ರೋಜ್‌ಗಾರ್ ಯೋಜನೆ ಘೋಷಿಸಿ, ಮಹಿಳೆಯರ ಖಾತೆಗೆ 10,000 ರೂ. ಹಣ ತುಂಬಿದ್ದಾರೆ.
ಇತ್ತೀಚಿನ ಬಿಹಾರ ಚುನಾವಣೆಗಳಲ್ಲಿ, ಮಹಿಳೆಯರ ಮತದಾನವು ಪುರುಷರಿಗಿಂತ ಸುಮಾರು 5% ಹೆಚ್ಚಾಗಿದೆ. 2020ರಲ್ಲಿ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತದಾನ ಮಾಡಿದ್ದ 167 ಕ್ಷೇತ್ರಗಳ ಪೈಕಿ, ಎನ್‌ಡಿಎ 99 ಸ್ಥಾನಗಳನ್ನು ಗೆದ್ದರೆ, ಮಹಾಘಟಬಂಧನ್ 61 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಈಗ, ವಿಪಕ್ಷವು ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಸವಾಲನ್ನು ಎದುರಿಸುತ್ತಿದೆ. ನಿತೀಶ್ ಕುಮಾರ್ ಮತ್ತು ಮಹಿಳಾ ಮತದಾರರ ನಡುವಿನ ಬಾಂಧವ್ಯವನ್ನು ಮುರಿಯಲು ಇತ್ತೀಚೆಗೆ ಜಾರಿಯಾದ ಯೋಜನೆಯ ಉದ್ದೇಶ ಮತ್ತು ರುಜುವಾತುಗಳನ್ನು ಅಪಖ್ಯಾತಿಗೊಳಿಸುವುದು ಅಥವಾ ಅದಕ್ಕಿಂತಲೂ ಹೆಚ್ಚು ಆಕರ್ಷಕವಾದ ಕೊಡುಗೆಯನ್ನು ಘೋಷಿಸುವುದು ಮಹಾಘಟಬಂಧನ್ ಮುಂದಿರುವ ಆಯ್ಕೆಗಳಾಗಿವೆ. ಎನ್‌ಡಿಎಯಂತೆ ವರ್ಷಕ್ಕೆ ಒಮ್ಮೆ ಮಾತ್ರವೇ ಸಹಾಯ ಮಾಡುವ ಬದಲು ಮಹಿಳೆಯರಿಗೆ ತಿಂಗಳಿಗೆ 2,500 ರೂ. ಸಹಾಯಧನ ನೀಡುವ ಭರವಸೆ ಮೂಲಕ ಮಹಿಳೆಯರನ್ನು ಸೆಳೆಯಲು ವಿಪಕ್ಷಗಳು ಯತ್ನಿಸುತ್ತಿವೆ.
7. ಯುವಜನ ಪ್ರಮಾಣ
ಯುವಜನರು ಬಿಹಾರದ ರಾಜಕೀಯದಲ್ಲಿ ಅತ್ಯಂತ ದೊಡ್ಡ ಭರವಸೆ ಮತ್ತು ದೊಡ್ಡ ಸವಾಲನ್ನು ಪ್ರತಿನಿಧಿಸುತ್ತಿದ್ದಾರೆ. ಬಿಹಾರದ ಒಟ್ಟು ಮತಗಳ ಪೈಕಿ, 18-29 ವಯಸ್ಸಿನ ಮತದಾರರು 25% ರಷ್ಟಿದ್ದಾರೆ. 35 ವರ್ಷದವರೆಗಿನ ಮತದಾರರನ್ನು ಸೇರಿಸಿದರೆ, ಈ ಪ್ರಮಾಣವು 35% ಆಗುತ್ತದೆ.
ಈ ಯುವ ಪೀಳಿಗೆಯು ಬಿಹಾರ ರಾಜಕೀಯದ ಬಗ್ಗೆ ಹಳೆಯ ಮತದಾರರಿಗಿಂತ ಭಿನ್ನವಾಗಿ ವಿಭಿನ್ನ ದೃಷ್ಟಿಕೋನವನ್ನು ಹೊಂದಿದೆ. ಈ ಪೀಳಿಗೆಗೆ 1990ರ ದಶಕದಲ್ಲಿ ಲಾಲೂ ಪ್ರಸಾದ್ ಯಾದವ್ ಆಡಳಿತದ ವಿರುದ್ಧ ಕರೆಯಲಾಗುತ್ತಿದ್ದ ‘ಜಂಗಲ್ ರಾಜ್’ ಆರೋಪಗಳ ಅನುಭವವಿಲ್ಲ. ಇವರೆಲ್ಲರೂ, ತಮ್ಮ ತಿಳಿವಳಿಕೆ, ಜ್ಞಾನ ಬಂದಾಗಿನಿಂದಲೂ ನಿತೀಶ್ ಆಡಳಿತವನ್ನು ಮಾತ್ರವೇ ಕಂಡಿದ್ದಾರೆ. ಹೀಗಾಗಿ, ಅವರು ನಿತೀಶ್ ಆಡಳಿತದ ಮೇಲೆ ಹೆಚ್ಚು ಅಸಹನೆ ಹೊಂದಿದ್ದಾರೆ.
ನಿರುದ್ಯೋಗ ಮತ್ತು ವಲಸೆಯು ಈ ಯುವಜನರನ್ನು ಹೆಚ್ಚು ಪ್ರಭಾವಿಸಿವೆ. ಬಿಹಾರವು ಉದ್ಯೋಗಕ್ಕಾಗಿ ಇತರ ರಾಜ್ಯಗಳಿಗೆ ಹೋಗುತ್ತಿರುವ ಯುವಜನರ ಬೃಹತ್ ವಲಸೆಯನ್ನು ಅನುಭವಿಸುತ್ತಲೇ ಇದೆ. 2020ರ ಚುನಾವಣೆಯಲ್ಲಿ ತೇಜಸ್ವಿ ಯಾದವ್ ಅವರು ’10 ಲಕ್ಷ ಉದ್ಯೋಗ ಸೃಷ್ಟಿ’ಯ ಭರವಸೆ ನೀಡಿದ್ದಾಗ, ಯುವಜನರು ತೇಜಸ್ವಿ ಬೆನ್ನಿಗೆ ನಿಂತಿದ್ದರು.
ಸದ್ಯ, ನಿತೀಶ್ ಆಡಳಿತ ಇರುವುದರಿಂದ ಯುವಜನರು ಆಡಳಿತ ವಿರೋಧಿ ಭಾವನೆಯನ್ನು ಹೊಂದಿದ್ದಾರೆ. ಆದರೆ, ಈ ಭಾವನೆಯ ಲಾಭವು ತೇಜಸ್ವಿ ಯಾದವ್ ಮತ್ತು ಪ್ರಶಾಂತ್ ಕಿಶೋರ್ ನಡುವೆ ಹರಿದು ಹಂಚಿಹೋಗುವ ಅಪಾಯವಿದೆ. ಈ ಇಬ್ಬರೂ ಯುವಜನರಲ್ಲಿ ಪ್ರಬಲ ನಾಯಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ, ಈ ಚುನಾವಣೆಯಲ್ಲಿ ತೇಜಸ್ವಿ ಅವರು ‘ಪ್ರತಿ ಮನೆಗೆ ಸರ್ಕಾರಿ ಉದ್ಯೋಗ’ ಒದಗಿಸುವ ಭರವಸೆ ನೀಡಿದ್ದಾರೆ. ಬಿಹಾರದ ಸುಮಾರು 2.5 ಕೋಟಿ ಕುಟುಂಬಗಳಿಗೆ ಸರ್ಕಾರಿ ಉದ್ಯೋಗವನ್ನು ನೀಡುವುದು ಅಪ್ರಾಯೋಗಿಕವಾಗಿ ಕಾಣುತ್ತಿದೆ. ಆದಾಗ್ಯೂ, ಭಾವನಾತ್ಮಕವಾಗಿ ಯುವಜನರು ಮತ್ತು ಅವರ ಪೋಷಕರನ್ನು ಒಟ್ಟುಗೂಡಿಸುವ ಕೂಗಾಗಿ ಮುನ್ನೆಲೆಯಲ್ಲಿದೆ. ಮತದಾರರು ಈ ಭರವಸೆಯನ್ನು ಅದರ ಪ್ರಾಯೋಗಿಕ ಕಾರ್ಯಸಾಧ್ಯತೆಯ ಮೇಲೆ ಅಳೆಯುತ್ತಾರೆಯೇ ಅಥವಾ ಭಾವನಾತ್ಮಕವಾಗಿ ಸ್ಪಂದಿಸುತ್ತಾರೆಯೇ ಎಂಬುದು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ.
8. ಜಾತಿ ಸಮೀಕರಣ
ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ಬಿಹಾರದಲ್ಲಿ 57% ಮತದಾರರು ತಮ್ಮದೇ ಜಾತಿಯ ನಾಯಕನನ್ನು ಆರಿಸಲು ಬಯಸುತ್ತಾರೆ. ಸಾಂಪ್ರದಾಯಿಕ ಹೊಂದಾಣಿಕೆಯು ಮೇಲ್ಜಾತಿಗಳು, ಯಾದವೇತರ ಒಬಿಸಿಗಳು, ಇಬಿಸಿಗಳು, ದಲಿತರು ಹಾಗೂ ಪಾಸ್ವಾನ್‌ಗಳು ಒಟ್ಟುಗೂಡಿದರೆ 68% ಮತದಾರರನ್ನು ಪ್ರತಿನಿಧಿಸುತ್ತಾರೆ. ಈ ಸಮುದಾಯಗಳ ಹೆಚ್ಚಿನವರು ಎನ್‌ಡಿಎಯನ್ನು ಬೆಂಬಲಿಸುತ್ತಾರೆ. ಮುಸ್ಲಿಮರು ಮತ್ತು ಯಾದವರು ಒಟ್ಟು ಮತದಾರರಲ್ಲಿ 32% ರಷ್ಟಿದ್ದಾರೆ. ಇವರೆಲ್ಲರೂ ಮಹಾಘಟಬಂಧನ್ ಜೊತೆ ಗುರುತಿಸಿಕೊಳ್ಳುತ್ತಾರೆ.
ಆದಾಗ್ಯೂ, ಈ ಬಾರಿ ಮುಸ್ಲಿಂ ಮತ್ತು ಯಾದವೇತರ ಮತದಾರರು ಎನ್‌ಡಿಎ ಜೊತೆಗೆ ಪ್ರಬಲವಾಗಿ ನಿಲ್ಲುತ್ತಾರೆ ಎಂಬ ವಿಶ್ವಾಸವಿಲ್ಲ. ಯಾಕೆಂದರೆ, 2020ರ ಚುನಾವಣೆಯಲ್ಲಿ ಆ ಒಟ್ಟು 68% ಮತಗಳಲ್ಲಿ ಎನ್‌ಡಿಎ ಕೇವಲ 37% ಮತಗಳನ್ನು ಮಾತ್ರವೇ ಪಡೆಯಲು ಸಾಧ್ಯವಾಗಿತ್ತು. ಈ ಚುನಾವಣೆಯಲ್ಲಿ, ಅತ್ಯಂತ ಹಿಂದುಳಿದ ವರ್ಗಗಳು (ಇಬಿಸಿಗಳು) ಮತ್ತು ಪರಿಶಿಷ್ಟ ಜಾತಿಗಳು ಕಿಂಗ್‌ಮೇಕರ್‌ಗಳಾಗಿ ಹೊರಹೊಮ್ಮುತ್ತಿದ್ದಾರೆ. ಒಟ್ಟು ಮತದಾರರಲ್ಲಿ ಇಬಿಸಿಗಳು 26% ಇದ್ದರೆ, ಎಸ್‌ಸಿಗಳು 20% ಇದ್ದಾರೆ.
2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮಹಾಘಟಬಂಧನ್ ಎಸ್‌ಸಿ ಮತದಾರರ ವಿಶ್ವಾಸ ಗಳಿಸಿತ್ತು. ಈ ಚುನಾವಣೆಯಲ್ಲಿಯೂ ಮಹಾಘಟಬಂಧನ್ ಮೈತ್ರಿಕೂಟದ ವಿಜಯದ ಹಾದಿಯು ಇಬಿಸಿ ಅಥವಾ ಎಸ್‌ಸಿ ಮತದಾರರನ್ನು ಎಷ್ಟು ಪ್ರಮಾಣದಲ್ಲಿ ಸೆಳೆಯುತ್ತದೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಅದಕ್ಕಾಗಿ ಇಬಿಸಿ ಮತ್ತು ಎಸ್‌ಸಿ ಸಮುದಾಯಗಳ ಮುಖಂಡರಾದ ಮುಖೇಶ್ ಸಾಹ್ನಿ ಮತ್ತು ರಾಜೇಶ್ ರಾಮ್ ಅವರನ್ನು ಉಪಮುಖ್ಯಮಂತ್ರಿಗಳಾಗಿ ಬಿಂಬಿಸುವುದು ಮಹಾಘಟಬಂಧನ್‌ನ ತಂತ್ರಗಳಲ್ಲಿ ಒಂದಾಗಿದೆ.
ಎನ್‌ಡಿಎ ಮೈತ್ರಿಕೂಟವು ಎಲ್ಲ ಜಾತಿಗಳಲ್ಲೂ ಒಬ್ಬೊಬ್ಬ ಪ್ರಮುಖ ನಾಯಕರನ್ನು ಹೊಂದಿದೆ. ಸಾಮ್ರಾಟ್ ಚೌಧರಿ (ಕುಶ್ವಾಹ), ಚಿರಾಗ್ ಪಾಸ್ವಾನ್ (ಪಾಸ್ವಾನ್), ಜಿತನ್ ರಾಮ್ ಮಾಂಝಿ (ಮಾಂಝಿ), ವಿಜಯ್ ಸಿನ್ಹಾ (ಮೇಲ್ಜಾತಿ) ಮತ್ತು ನಿತೀಶ್ ಕುಮಾರ್ (ಕುರ್ಮಿ) ಇವೆಲ್ಲರೆಲೂ ನಿರ್ದಿಷ್ಟ ಸಮುದಾಯಗಳ ಮತಗಳನ್ನು ಎನ್‌ಡಿಎಯತ್ತ ಆಕರ್ಷಿಸಬಹುದು.
9. ದಲಿತ ಮತ
ಬಿಹಾರದ ಮತದಾರರಲ್ಲಿ 20%ರಷ್ಟಿರುವ ದಲಿತರು ಬಹು ಉಪ-ಜಾತಿಗಳನ್ನು ಹೊಂದಿದ್ದಾರೆ. ಪ್ರತಿಯೊಂದೂ ಉಪ ಸಮುದಾಯಗಳೂ ವಿಭಿನ್ನ ರಾಜಕೀಯ ಆದ್ಯತೆಗಳನ್ನು ಹೊಂದಿವೆ. ಪರಸ್ಪರ ವಿರೋಧಾತ್ಮಕ ಸಂಬಂಧಗಳನ್ನು ಒಳಗೊಂಡಿವೆ. ಉದಾಹರಣೆಗೆ, ರವಿದಾಸ್ ಸಮುದಾಯ ಮತ್ತು ಪಾಸ್ವಾನ್‌ಗಳು ತಲಾ 5% ಮತದಾರರನ್ನು ಪ್ರತಿನಿಧಿಸುತ್ತಾರೆ. ಆದರೆ, ಮಾಂಝಿ ಸಮುದಾಯವು ಸರಿಸುಮಾರು 3% ಮತಗಳನ್ನು ಹೊಂದಿದೆ. ಪಾಸ್ವಾನ್ ಮತ್ತು ಮಾಂಝಿ ಸಮುದಾಯಗಳು ಸಾಂಪ್ರದಾಯಿಕವಾಗಿ ಎನ್‌ಡಿಎ ಜೊತೆ ಹೊಂದಾಣಿಕೆ ಮಾಡಿಕೊಂಡಿವೆ. ಈ ಸಮುದಾಯಗಳ ಪ್ರತಿನಿಧಿಗಳಾಗಿ ಚಿರಾಗ್ ಪಾಸ್ವಾನ್ ಮತ್ತು ಜಿತನ್ ರಾಮ್ ಮಾಂಝಿ ಗುರುತಿಸಿಕೊಂಡಿದ್ದಾರೆ.
ರವಿದಾಸ್ ಸಮುದಾಯವು ಮಹಾಘಟಬಂಧನ್ ಜೊತೆಗೆ ಗುರುತಿಸಿಕೊಳ್ಳುವ ಸಾಧ್ಯತೆ ಇದೆ. 2020ರಲ್ಲಿ SC/STಗಳಿಗೆ ಮೀಸಲಾಗಿರುವ 40 ಸ್ಥಾನಗಳ ಪೈಕಿ ಎನ್‌ಡಿಎ 22 ಮತ್ತು ಮಹಾಘಟಬಂಧನ್ 18 ಸ್ಥಾನಗಳನ್ನು ಗೆದ್ದಿದ್ದವು. ಈ ಬಾರಿಯೂ ಈ 40 ಕ್ಷೇತ್ರಗಳಲ್ಲಿ ಹೋರಾಟವು ತೀವ್ರವಾಗಿರುತ್ತದೆ. ಏಕೆಂದರೆ, ಈ ಸ್ಥಾನಗಳು ಒಟ್ಟಾರೆ ಬಹುಮತವನ್ನು ನಿರ್ಧರಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ.
ಕುತೂಹಲಕಾರಿ ಪ್ರವೃತ್ತಿಯೆಂದರೆ, ಕಾಂಗ್ರೆಸ್/ಮಹಾಘಟಬಂಧನ್ ಕಡೆಗೆ ವಿದ್ಯಾವಂತ ಮತ್ತು ಯುವ ದಲಿತ ಮತದಾರರು ಒಲವು ತೋರುತ್ತಿದ್ದಾರೆ. ಸಾಂವಿಧಾನಿಕ ರಕ್ಷಣೆಗಳು, ಮೀಸಲಾತಿ ನೀತಿಗಳು ಹಾಗೂ ಸಾಮಾಜಿಕ ನ್ಯಾಯದ ಮೇಲೆ ಕಾಂಗ್ರೆಸ್ ಒತ್ತುಕೊಡುತ್ತಿರುವುದು ಕಿರಿಯ ಮತ್ತು ವಿದ್ಯಾವಂತ ದಲಿತ ಮತದಾರರಲ್ಲಿ ಕಾಂಗ್ರೆಸ್ ಮೇಲೆ ಭರವಸೆ ಬೆಳೆಸಿದೆ.
ಪ್ರಶಾಂತ್ ಕಿಶೋರ್ ಅವರು ಸಾಂಪ್ರದಾಯಿಕ ಜಾತಿ ಆಧಾರಿತ ಪ್ರಚಾರಕ್ಕಿಂತ ಹೆಚ್ಚಾಗಿ ಸುಧಾರಿತ ಶಿಕ್ಷಣ, ಆರೋಗ್ಯ ರಕ್ಷಣೆ, ಅಭಿವೃದ್ಧಿ ಹಾಗೂ ವರ್ಗ ಆಧಾರಿತ ರಾಜಕೀಯದ ಮೇಲೆ ಹೆಚ್ಚು ಮಾತನಾಡುತ್ತಿದ್ದಾರೆ. ಇದೇ ವಿಚಾರಗಳನ್ನು ಇಟ್ಟುಕೊಂಡು ದಲಿತರ ಗಮನ ಸೆಳೆಯುತ್ತಿದ್ದಾರೆ.
10. ಮುಸ್ಲಿಂ ಮತಗಳು
ಬಿಹಾರದ ಜನಸಂಖ್ಯೆಯಲ್ಲಿ ಮುಸ್ಲಿಮರು ಸರಿಸುಮಾರು 18% ರಷ್ಟಿದ್ದಾರೆ. ಅವರ ಸಾಂದ್ರತೆಯು ಕೆಲವು ಪ್ರದೇಶಗಳಲ್ಲಿ ಗಮನಾರ್ಹವಾಗಿದೆ. ಬಿಹಾರದ ಒಟ್ಟು ಮುಸ್ಲಿಮರ ಪೈಕಿ ಈಶಾನ್ಯ ಪ್ರದೇಶವಾದ ಸೀಮಾಂಚಲ್‌ನಲ್ಲಿಯೇ ಸುಮಾರು 25% ಮುಸ್ಲಿಮರಿದ್ದಾರೆ. ಉಳಿದ 75% ಮುಸ್ಲಿಮರು ಉತ್ತರ ಬಿಹಾರದಲ್ಲಿ ನೆಲೆಸಿದ್ದಾರೆ. ಐತಿಹಾಸಿಕವಾಗಿ, ರಾಜ್ಯದ ಒಟ್ಟು ಮುಸ್ಲಿಮರಲ್ಲಿ ಸುಮಾರು 75% ಮುಸ್ಲಿಂ ಮತದಾರರು ಮಹಾಘಟಬಂಧನ್ ಜೊತೆಗಿದ್ದಾರೆ.
ಆದಾಗ್ಯೂ, ಈ ಬಾರಿಯ ಚುನಾವಣೆಯಲ್ಲಿ ಈ ಮತದಾರರ ಬೆಂಬಲವು ಹಂಚಿಹೊಗುವ ಆತಂಕವು ಮಹಾಘಟಬಂಧನ್‌ನಲ್ಲಿದೆ. ಓವೈಸಿ ಅವರ ಎಐಎಂಐಎಂ ಪಕ್ಷವು ಹಿಂದಿನ ಚುನಾವಣೆಯಲ್ಲಿ ಐದು ಸ್ಥಾನಗಳನ್ನು ಗೆದ್ದಿದೆ. ಮುಸ್ಲಿಂ ಮತದಾರರಲ್ಲಿ ಒಂದು ಭಾಗವು ಸ್ಪಷ್ಟವಾಗಿ ಮುಸ್ಲಿಂ ಕೇಂದ್ರಿತ ಪಕ್ಷಗಳನ್ನು ಬೆಂಬಲಿಸಲು ಮುಂದಾಗಿದೆ ಎಂಬುದನ್ನು ಆ ಗೆಲುವು ಸ್ಪಷ್ಟಪಡಿಸಿದೆ. ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷವು ಈ ಮತ ಬ್ಯಾಂಕ್‌ಗೆ ಪ್ರವೇಶಿಸಲು ಯತ್ನಿಸುತ್ತಿದೆ.
11. ಪ್ರಶಾಂತ್ ಕಿಶೋರ್ ಪ್ರಭಾವ
ಪ್ರಶಾಂತ್ ಕಿಶೋರ್ ಮತ್ತು ಅವರ ಜನ ಸುರಾಜ್ ಪಕ್ಷದ (ಜೆಎಸ್‌ಪಿ) ಪ್ರಭಾವವು ಅನಿರೀಕ್ಷಿತವಾದ ಅಂಶಗಳಲ್ಲಿ ಪ್ರಮುಖ ಅಂಶವಾಗಿದೆ. ರಾಜಕೀಯ ತಂತ್ರಜ್ಞರಾಗಿದ್ದ ಕಿಶೋರ್, ರಾಜಕಾರಣಿಯಾಗಿ ಬದಲಾಗಿದ್ದಾರೆ. ಬಿಹಾರದ ಮತದಾರರಲ್ಲಿ ಒಂದು ಭಾಗವನ್ನು, ವಿಶೇಷವಾಗಿ ವಿದ್ಯಾವಂತ, ಮಧ್ಯಮ ವರ್ಗದ ಮತ್ತು ನಗರ ನಾಗರಿಕರನ್ನು ಸೆಳೆಯುತ್ತಿದ್ದಾರೆ.
ಬಿಹಾರ ರಾಜಕೀಯದಲ್ಲಿ ಮೂರನೇ ಶಕ್ತಿಯಾಗಿ ಹೊರಹೊಮ್ಮುವುದು ಕಿಶೋರ್ ಅವರ ತಂತ್ರವಾಗಿದೆ. ಇತ್ತೀಚಿನ ಉಪಚುನಾವಣೆಗಳಲ್ಲಿ ಜೆಎಸ್‌ಪಿಯ ಪ್ರಭಾವವು ಸ್ಪಷ್ಟವಾಗಿ ಗೋಚರಿಸಿದೆ. ಆ ಚುನಾವಣೆಗಳಲ್ಲಿ ಜೆಎಸ್‌ಪಿ 10% ಮತಗಳನ್ನು ಪಡೆದುಕೊಂಡಿದೆ. ಇದು ಮಹಾಘಟಬಂಧನ್‌ನ ಮತಗಳನ್ನು ಕಸಿದುಕೊಂಡು, ಎನ್‌ಡಿಎಗೆ ಸಹಾಯವಾಗುವಂತೆ ಮಾಡಿದೆ.
2020ರ ಚುನಾವಣಾ ಫಲಿತಾಂಶದ ಮೇಲೆ ಎಲ್‌ಜೆಪಿ ಪರಿಣಾಮ ಬೀರಿದಂತೆ, ಈ ಬಾರಿಯ ಚುನಾವಣೆಯಲ್ಲಿ ಜೆಎಸ್‌ಪಿ ಪರಿಣಾಮ ಬೀರುವ ಸಾಧ್ಯತೆಗಳಿವೆ. ಜೆಎಸ್‌ಪಿ ವಿಧ್ವಂಸಕನಾಗಿ (ಸ್ಪಾಯ್ಲರ್) ಕಾರ್ಯನಿರ್ವಹಿಸುತ್ತದೆಯೇ ಅಥವಾ ನಿಜವಾದ ಮೂರನೇ ಶಕ್ತಿಯಾಗಿ ಹೊರಹೊಮ್ಮುತ್ತದೆಯೇ ಎಂಬುದು ನಿರ್ಣಾಯಕ ಪ್ರಶ್ನೆಯಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಪಕ್ಷವು ‘ಸ್ಪಾಯ್ಲರ್’ ಪಾತ್ರವನ್ನು ನಿಭಾಯಿಸುವ ಸಾಧ್ಯತೆಗಳೇ ಹೆಚ್ಚಿವೆ. ಕಿರೋಶ್ ಅವರ ಪಕ್ಷವು ಹೆಚ್ಚು ಸ್ಥಾನಗಳನ್ನು ಗೆಲ್ಲದೇ ಇದ್ದರೂ, ಮತ ಹಂಚಿಕೆಯನ್ನು ಪಡೆಯುವುದರಿಂದ, ಎನ್‌ಡಿಎ ಮತ್ತು ಮಹಾಘಟಬಂಧನ್ ಗೆಲುವು-ಸೋಲಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಭಾವಿಸಲಾಗಿದೆ.
ಕಿಶೋರ್ ಅವರ ಉದ್ದೇಶವು ಸ್ಪಷ್ಟವಾಗಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವಂತೆ ಮಾಡುವುದೇ ಆಗಿದೆ. ಯಾವುದೇ ಮೈತ್ರಿಕೂಟವು ಸ್ಪಷ್ಟ ಬಹುಮತ ಪಡೆಯದ ಸನ್ನಿವೇಶದಲ್ಲಿ ಜೆಎಸ್‌ಪಿ ಕಿಂಗ್‌ಮೇಕರ್ ಆಗಿ ಹೊರಹೊಮ್ಮಬಹುದು.
ಈ 11 ಅಂಶಗಳು ಬಿಹಾರ ಚುನಾವಣೆಯನ್ನು ಹೇಗೆ ಪ್ರಭಾವಿಸುತ್ತವೆ. ಈ ಪೈಕಿ ಯಾವುದು ಹೆಚ್ಚು ಪರಿಣಾಮಕಾರಿಯಾಗಲಿದೆ. ಗೆಲುವು-ಸೋಲಿನ ಲೆಕ್ಕಾಚಾರದಲ್ಲಿ ಯಾರ ಕೈ ಮೇಲಾಗಲಿದೆ – ಈ ಪ್ರಶ್ನೆಗಳಿಗೆ ಸದ್ಯದಲ್ಲೇ ಚುನಾವಣಾ ಕಣ ಉತ್ತರಿಸಲಿದೆ.
ಮಾಹಿತಿ ಮೂಲ: ಎನ್‌ಡಿಟಿವಿ




