ಬಿಹಾರ ಚುನಾವಣಾ ಕಣ ರಂಗೇರಿದೆ. ಮತದಾನಕ್ಕೆ ದಿನಗಣನೆ ಶುರುವಾಗಿದೆ. ಎನ್‌ಡಿಎ, ಮಹಾಘಟಬಂಧನ್ ಮೈತ್ರಿಕೂಟಗಳಲ್ಲಿ ಸೀಟು ಹಂಚಿಕೆಯ ಕಸರತ್ತು ಮುಗಿದಿದೆ. ಎರಡೂ ಮೈತ್ರಿಯಿಂದ ಹೊರಗಿರುವ ಎಎಪಿ, ಎಐಎಂಐಎಂ ಹಾಗೂ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಿವೆ. ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಸಿವೆ. ಪ್ರಚಾರ ಬಿರುಸುಗೊಂಡಿದೆ. ಇದೆಲ್ಲದರ ನಡುವೆ, ಪ್ರಶಾಂತ್ ಕಿಶೋರ್ ಅವರು ತಾವು ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ. ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನಷ್ಟೇ ಮಾಡುತ್ತೇನೆಂದು ಘೋಷಿಸಿದ್ದಾರೆ.
ಚುನಾವಣಾ ಕಣದಿಂದ ದೂರ ಉಳಿದಿರುವ ಪ್ರಶಾಂತ್ ಕಿಶೋರ್, ಎನ್‌ಡಿಎಯನ್ನು ಸೋಲಿಸುವುದೇ ತಮ್ಮ ಗುರಿ ಎಂದು ಹೇಳಿಕೊಂಡಿದ್ದರೂ, ಈ ಬಾರಿ ಅತಂತ್ರ ವಿಧಾನಸಭೆ ಸೃಷ್ಠಿಯಾಗಬೇಕು ಎಂಬುದೇ ಅವರ ಆದ್ಯತೆಯಾಗಿದೆ. ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ನಡುವಿನ ದೀರ್ಘಕಾಲದ ಅಧಿಕಾರ ಸಮೀಕರಣವನ್ನು ‘ಅಸ್ತವ್ಯಸ್ತಗೊಳಿಸಲು’ ಅವರು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳಿವೆ.
ಈ ಹಿಂದೆ, ಎನ್‌ಡಿಎ ಮತ್ತು ಮಹಾಘಟಬಂಧನ್ – ಎರಡೂ ಮೈತ್ರಿಕೂಟಗಳಿಗೆ ರಾಜಕೀಯ ತಂತ್ರಜ್ಞರಾಗಿ ಪ್ರಶಾಂತ್ ಕಿಶೋರ್ ಕೆಲಸ ಮಾಡಿದ್ದಾರೆ. ಇದೀಗ, ತಮ್ಮದೇ ಪಕ್ಷ ಕಟ್ಟಿಕೊಂಡು ಮಹತ್ವಾಕಾಂಕ್ಷೆಯ ಗುರಿ ಹಾಕಿಕೊಂಡಿದ್ದಾರೆ. ಬಿಹಾರದ ಜಾತಿ ಆಧಾರಿತ ರಾಜಕೀಯದಲ್ಲಿ ನಿತೀಶ್ ಮತ್ತು ಲಾಲೂ ಅವರಿಗೆ ಪರ್ಯಾಯವಾಗಿ ಹೊಸ ನಾಯಕರಾಗಿ ಬೆಳೆಯಬೇಕು ಎಂಬ ಹುಮ್ಮಸ್ಸಿನಲ್ಲಿದ್ದಾರೆ.
ಲಾಲೂ ಪರಿವಾರದ ಸಾಂಪ್ರದಾಯಿಕ ಭದ್ರಕೋಟೆ ಆಗಿರುವ ರಾಘೋಪೂರ್ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ವಿರುದ್ಧ ಕಿಶೋರ್ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿದ್ದವು. ಕಿಶೋರ್ ಅವರು ಹಲವು ಬಾರಿ ತಮ್ಮ ಮಾತಿನಲ್ಲಿ ನಿತೀಶ್ ಅಥವಾ ತೇಜಸ್ವಿಗೆ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸುವ ಸುಳಿವುಗಳನ್ನು ನೀಡಿದ್ದರು. ಅವರ ಮಾತುಗಳೇ ಈ ವದಂತಿಗಳಿಗೆ ಪೂರಕವೂ ಆಗಿದ್ದವು.
ಆದರೆ, ತೇಜಸ್ವಿ ವಿರುದ್ಧ ತಮ್ಮ ಜೆಎಸ್‌ಪಿಯಿಂದ ಚಂಚಲ್ ಸಿಂಗ್ ಅವರನ್ನು ಕಿಶೋರ್ ಕಣಕ್ಕಿಸುವುದಾಗಿ ಮಂಗಳವಾರ ಘೋಷಿಸಿದರು. ಪರಿಣಾಮ, ಕಿಶೋರ್ ಸ್ಪರ್ಧೆಯ ವದಂತಿಗಳು ಗೌಣವಾದವು. ಮರುದಿನವೇ, ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದೇ ಇಲ್ಲವೆಂದು ಘೋಷಿಸಿದರು.
ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು, ತಮ್ಮ ಪಕ್ಷದ ಕಾರ್ಯಕರ್ತರು ಜೆಎಸ್‌ಪಿ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುವುದನ್ನು ಖಾತ್ರಿಪಡಿಸಿಕೊಳ್ಳಲು, ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಚಾರದ ಮೇಲೆ ಗಮನ ಹರಿಸಬೇಕು. ಅದಕ್ಕಾಗಿ, ತಾವು ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಿಲ್ಲ ಎಂದು ಕಿಶೋರ್ ಕಾರಣಗಳನ್ನು ನೀಡಿದರು.
ಕಿಶೋರ್ ಅವರು ಸ್ಪರ್ಧೆಯಿಂದ ಹೊರಗುಳಿಯುವುದಾಗಿ ಘೋಷಿಸಿದ ಕೂಡಲೇ, ಅವರು ವಿರುದ್ಧ ಪ್ರತಿಸ್ಪರ್ಧಿಗಳ ದಾಳಿಗಳು ನಡೆದವು. ‘ಯುದ್ಧಕ್ಕೂ ಮೊದಲು ಸೋಲನ್ನು ಒಪ್ಪಿಕೊಂಡು, ಶಸ್ತ್ರ ತ್ಯಾಗ ಮಾಡಿದ್ದಾರೆ’ ಎಂದು ಬಿಜೆಪಿ, ಆರ್‌ಜೆಡಿ ಟೀಕಿಸಿದವು.
“ತಾವು ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬುದು ಅವರಿಗೆ ಅರಿವಾಗಿದೆ. ಅದಕ್ಕಾಗಿಯೇ ಅವರು ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವುದಾಗಿ ಘೋಷಿಸಿದ್ದಾರೆ. ಜೆಎಸ್‌ಪಿ ಕಟ್ಟಲು ಅವರು ಹೂಡಿಕೆ ಮಾಡಿದ್ದೆಲ್ಲವೂ ಮರಳಿಬಂದಿದೆ. ಅವರ ಪಕ್ಷದ ಉದ್ದೇಶ ‘ವೋಟ್ ಕಟ್ವಾ’ (ಇತರರ ಮತಗಳನ್ನು ಒಡೆಯುವುದು) ಹೊರತು ಬೇರೇನೂ ಅಲ್ಲ. ಈ ಪಕ್ಷವು ‘ಆರ್‌ಜೆಡಿ’ಯ ‘ಬಿ ಟೀಮ್’ ಆಗಿದೆ” ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಆರೋಪಿಸಿದರು.
ಅಂತೆಯೇ, ಆರ್‌ಜೆಡಿ ಕೂಡ ವಾಗ್ದಾಳಿ ನಡೆಸಿತು. “ಚುನಾವಣೆಯಲ್ಲಿ ತಾವು ಮತ್ತು ತಮ್ಮ ಪಕ್ಷವು ಹೀನಾಯ ಸೋಲನ್ನು ಎದುರಿಸಲಿದೆ ಎಂಬುದು ಕಿಶೋರ್‌ಗೆ ಗೊತ್ತಾಗಿದೆ. ಅದಕ್ಕಾಗಿಯೇ ಅವರು ಸ್ಪರ್ಧೆಯಿಂದ ದೂರ ಉಳಿದಿದ್ದಾರೆ. ಯುದ್ಧಭೂಮಿಗೆ ಹೋಗುವ ಮೊದಲೇ ಅವರು ಸೋಲನ್ನು ಒಪ್ಪಿಕೊಂಡಿದ್ದಾರೆ” ಎಂದು ಆರ್‌ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ ಟೀಕಿಸಿದ್ದಾರೆ.
ರಾಜಕೀಯ ಟೀಕೆಗಳು ಮತ್ತು ವಾಗ್ದಾಳಿಗಳಿಂದ ದೂರವಿರುವ ಕಿಶೋರ್, ತಾವು ಹೇಳುತ್ತಿರುವಂತೆ, ಚುನಾವಣೆಯಲ್ಲಿ ಜೆಎಸ್‌ಪಿಯನ್ನು ಬಲಪಡಿಸುವುದು ಮತ್ತು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ಉದ್ದೇಶದಿಂದಲೇ ಈ ನಿರ್ಧಾರ ತೆಗೆದುಕೊಂಡಿದ್ದಾರೆಯೇ? ಅಥವಾ ಬೇರೆ ಇನ್ನೂ ಏನಾದರೂ ತಂತ್ರ ಇದೆಯೇ? ಈ ನಿರ್ಧಾರವು ಅವರ ಹೊಸ ಲೆಕ್ಕಾಚಾರದ ತಂತ್ರವಾಗಿ ಅವರ ಕೈಹಿಡಿಯುವುದೇ ಅಥವಾ ಕಾರ್ಯತಂತ್ರ ತಪ್ಪು ಹೆಜ್ಜೆಯಾಗಲಿದೆಯೇ?
ಕಿಶೋರ್ ನಿರ್ಧಾರವನ್ನು ರಾಜಕೀಯ ವಿಶ್ಲೇಷಕ ಕುಮಾರ್ ವಿಜಯ್ ಅವರು ‘ವಿವೇಕಯುತ’ ಎಂದು ಕರೆದಿದ್ದಾರೆ. “ಕಿಶೋರ್ ಚುನಾವಣೆಯಲ್ಲಿ ಸ್ಪರ್ಧಿಸಿ, ಒಂದೇ ಕ್ಷೇತ್ರದ ಮೇಲೆ ಗಮನವನ್ನು ಕೇಂದ್ರೀಕರಿಸಿದರೆ, ಪಕ್ಷದ ಅಭ್ಯರ್ಥಿಗಳಿಗಾಗಿ ಸಮಯ ನೀಡಲು ಸಾಧ್ಯವಿಲ್ಲ. ಅವರು ಸ್ಪರ್ಧೆಯಿಂದ ಹೊರಗುಳಿದಿವುದು ವಿವೇಚನೆಯಿಂದ ಕೂಡಿದೆ” ಎಂದು ವಿಜಯ್ ಹೇಳಿರುವುದಾಗಿ ‘TOI’ ವರದಿ ಮಾಡಿದೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಶಿಕ್ಷಣ, ನಿರುದ್ಯೋಗ – ಬಿಹಾರಿ ಯುವಜನರು ಬಯಸುತ್ತಿರುವುದೇನು?
“ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಎಂಎಲ್‌ಸಿ ಆಗಿದ್ದಾರೆ. ಅವರೂ ಕೂಡ ಚುನಾವಣಾ ಕಣದಲ್ಲಿ ಸ್ಪರ್ಧೆಯಲ್ಲಿಲ್ಲ. ಹೀಗಿರುವಾಗ ಕಿಶೋರ್ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಪಕ್ಷವನ್ನು ಮುನ್ನಡೆಸುವವರಿಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಅವರು ಒಂದು ಕ್ಷೇತ್ರದ ಮೇಲೆ ಕೇಂದ್ರೀಕರಿಸಿದರೆ, ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪ್ರಚಾರ ಮತ್ತು ಗೆಲುವಿಗಾಗಿ ದುಡಿಯಲು ಸಾಕಷ್ಟು ಸಮಯ ನೀಡಲು ಸಾಧ್ಯವಿಲ್ಲ. ಅವರ ಪಕ್ಷವು ಮೊದಲ ಬಾರಿಗೆ ಬಿಹಾರದಾದ್ಯಂತ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಜೆಎಸ್‌ಪಿಗೆ ಕಿಶೋರ್ ಏಕೈಕ ಸ್ಟಾರ್ ಪ್ರಚಾರಕರಾಗಿದ್ದಾರೆ” ಎಂದು ವಿಜಯ್ ಹೇಳಿದ್ದಾರೆ.
ಪ್ರಶಾಂತ್ ಕಿಶೋರ್ ಅವರು ತಮ್ಮ ಪಕ್ಷದ ಏಕೈಕ ಮುಖವಾಗಿರುವುದರಿಂದ, ಚುನಾವಣೆಯಲ್ಲಿ ಅವರು ಸ್ಪರ್ಧಿಸದೇ ಇರುವುದು, ಜೆಎಸ್‌ಪಿ ಅಭ್ಯರ್ಥಿಗಳ ನೈತಿಕತೆಯನ್ನು ಕುಗ್ಗಿಸಬಹುದೇ ಎಂಬ ಪ್ರಶ್ನೆಗಳೂ ಇವೆ.
ಪ್ರಸ್ತುತ ಸನ್ನಿವೇಶದಲ್ಲಿ ಪ್ರಶಾಂತ್ ಕಿಶೋರ್ ಅವರು ದೈತ್ಯ ನಾಯಕನಾಗಿ, ರಾಜಕೀಯ ಸ್ಪರ್ಧಿಯಾಗಿ ಹೊರಹೊಮ್ಮುವುದೇ ಇರಬಹುದು. ಆದರೂ, ಅವರು ಬಿಹಾರದ 243 ಸ್ಥಾನಗಳಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯ ಗುರಿ ಹೊಂದಿದ್ದಾರೆ. ಆದಾಗ್ಯೂ, ಅವರ ಪಕ್ಷವು ಒಂದೇ ಒಂದು ಸ್ಥಾನವನ್ನೂ ಗೆಲ್ಲುವುದಿಲ್ಲವೆಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
ಸದ್ಯ, ಬಿಹಾರದಲ್ಲಿ ಚುನಾವಣಾ ಪ್ರಚಾರ ತೀವ್ರಗೊಂಡಿದೆ. ಕಿಶೋರ್ ಕೂಡ ಪ್ರಚಾರದಲ್ಲಿ ತೊಡಗಿದ್ದಾರೆ. ಕಿಶೋರ್ ಅವರು ರಾಜಕೀಯ ಜೂಜಾಟದಲ್ಲಿ ತಮ್ಮ ರಾಜಕೀಯ ತಂತ್ರವನ್ನು ಹೇಗೆ ಪ್ರಯೋಗಿಸುತ್ತಾರೆ? ಮೊದಲ ಬಾರಿಗೆ ನೇರವಾಗಿ ಚುನಾವಣಾ ಕಣಕ್ಕಿಳಿದಿರುವ ಕಿಶೋರ್ ಅವರ ರಾಜಕೀಯ ತಂತ್ರವು ಫಲಿಸುವುದೇ? ಅಥವಾ ರಾಜಕೀಯ ತಂತ್ರಜ್ಞನೆಂಬ ಅವರ ಹಿರಿಮೆ ಚುನಾವಣಾ ಕಣದಲ್ಲಿ ಸೋಲುವುದೇ? ಚುನಾವಣಾ ಫಲಿತಾಂಶ ಉತ್ತರಿಸಲಿದೆ.




