ರಾಘೋಪುರ ಕ್ಷೇತ್ರದ ಜನರು ಈ ಬಾರಿ ಶಾಸಕನನ್ನು ಮಾತ್ರವಲ್ಲ, ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ ತೇಜಸ್ವಿ ಯಾದವ್
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ನವೆಂಬರ್ 6ರಂದು ನಡೆಯಲಿದೆ. ಮೊದಲ ಹಂತದಲ್ಲಿ 121 ಕ್ಷೇತ್ರಗಳ ಮತದಾರರು ಮತಚಲಾಯಿಸಲಿದ್ದಾರೆ. ಈ ಮತದಾನದಲ್ಲಿ ಮಹಾಘಾಟಬಂಧನ್‌ನ ಮುಖ್ಯಮಂತ್ರಿ ಅಭ್ಯರ್ಥಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಹಾಲಿ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿಂಹಾ, ಮಾಜಿ ಉಪಮುಖ್ಯಮಂತ್ರಿ ರೇಣು ದೇವಿ ಹಾಗೂ ಮಾಜಿ ಕೇಂದ್ರ ಸಚಿವ ರಾಮ್ ಕೃಪಾಲ್ ಯಾದವ್ ಸೇರಿದಂತೆ ಪ್ರಮುಖ ನಾಯಕರು ತಮ್ಮ ಸೋಲು-ಗೆಲುವಿನ ಪರೀಕ್ಷೆಯನ್ನು ಎದುರಿಸಲಿದ್ದಾರೆ. ಪ್ರಚಾರಕ್ಕೆ ಇಂದು ಕಡೆಯ ದಿನವಾಗಿದ್ದು, ತಮ್ಮ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ.
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ತಮ್ಮ ಕುಟುಂಬದ ಭದ್ರಕೋಟೆ ರಾಘೋಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಸತತ 3ನೇ ಬಾರಿಗೆ ಗೆದ್ದು ವಿಧಾನಸಭೆ ಪ್ರವೇಶಿಸುವ ಭರವಸೆಯಲ್ಲಿದ್ದಾರೆ.
ಕಳೆದ 7 ಚುನಾವಣೆಯಲ್ಲಿ 2 ಬಾರಿ ಹೊರತುಪಡಿಸಿದರೆ, ಉಳಿದ 5 ಚುನಾವಣೆಯಗಳಲ್ಲಿ ತೇಜಸ್ವಿ ಅವರ ಕುಟುಂಬಸ್ಥರೇ ರಾಘೋಪುರ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಎರಡು ಬಾರಿ ಆರ್‌ಜೆಡಿ ಸಂಸ್ಥಾಪಕ ಲಾಲೂ ಪ್ರಸಾದ್ ಯಾದವ್, ಒಮ್ಮೆ ಅವರ ಪತ್ನಿ – ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಎರಡು ಬಾರಿ ತೇಜಸ್ವಿ ಯಾದವ್ ಕ್ಷೇತ್ರದಿಂದ ಗೆದ್ದಿದ್ದಾರೆ.
ಲಾಲೂ ಪ್ರಸಾದ್ ಯಾದವ್ ಅವರು 1990 ಮತ್ತು 1995ರಲ್ಲಿ ಕ್ಷೇತ್ರದಿಂದ ಗೆದ್ದಿದ್ದರು. ಮಾತ್ರವಲ್ಲದೆ, ಆ ಎರಡೂ ಅವಧಿಯಲ್ಲಿಯೂ ಮುಖ್ಯಮಂತ್ರಿಯಾಗಿದ್ದರು. ಆದಾಗ್ಯೂ, ಮೇವು ಹಗರಣಕ್ಕೆ ಸಿಲುಕಿದ ಲಾಲೂ ಅವರು 1997ರಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ, ತಮ್ಮ ಪತ್ನಿ ರಾಬ್ರಿ ದೇವಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು. ಇದೀಗ, ಇದೇ ಕ್ಷೇತ್ರದಿಂದ ಆಯ್ಕೆಯಾದರೆ, ಬಿಹಾರದಲ್ಲಿ ಮಹಾಘಟಬಂಧನ್ ಬಹುಮತ ಪಡೆದರೆ ಮುಖ್ಯಮಂತ್ರಿಯಾಗಲು ತೇಜಸ್ವಿ ಅಣಿಯಾಗುತ್ತಿದ್ದಾರೆ.
“ಕ್ಷೇತ್ರದ ಜನರು ಈ ಬಾರಿ ಶಾಸಕನನ್ನು ಮಾತ್ರವಲ್ಲ, ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದ್ದಾರೆ. ಮಹಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರಾಘೋಪುರದಲ್ಲಿ ಪದವಿ ಕಾಲೇಜು ಮತ್ತು ಆಧುನಿಕ ಆಸ್ಪತ್ರೆಯನ್ನು ನಿರ್ಮಿಸಲಾಗುವುದು. ರಾಘೋಪುರ ಕ್ಷೇತ್ರದಿಂದ ಆಯ್ಕೆಯಾಗುವ ಆರ್‌ಜೆಡಿ ಮುಖ್ಯಮಂತ್ರಿ ಮಾತ್ರ ಇದನ್ನು ಸಾಧಿಸಲು ಸಾಧ್ಯ” ಎಂದು ತೇಜಸ್ವಿ ಯಾದವ್ ತಮ್ಮ ಕ್ಷೇತ್ರದ ಮತದಾರರಿಗೆ ಮನವಿ ಮಾಡಿದ್ದಾರೆ.
ಬಿಹಾರ ರಾಜಧಾನಿ ಪಾಟ್ನಾದ ನೆರೆಯ ವೈಶಾಲಿ ಜಿಲ್ಲೆಯಲ್ಲಿ ಗಂಗಾ ನದಿ ತೀರದ ಪ್ರದೇಶ ರಾಘೋಪುರ. ಈ ಕ್ಷೇತ್ರವು ವಿಭನ್ನವಾದ ಭೌಗೋಳಿಕ ಲಕ್ಷಣಗಳನ್ನು ಹೊಂದಿದೆ. ಅಂತೆಯೇ, ಈ ಆಯ್ಕೆಯಾಗಲೂ ವಿಭಿನ್ನ ಸವಾಲುಗಳು ಇವೆ. ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರವು ಅಭ್ಯರ್ಥಿಯ ಗೆಲುವು ಸೋಲುಗಳಿಗೆ ನಿರ್ಣಾಯಕವಾಗಿದೆ.
ಕ್ಷೇತ್ರದಲ್ಲಿ, ಯಾದವ್ ಸಮುದಾಯವು ಪ್ರಬಲವಾಗಿದೆ. ಕ್ಷೇತ್ರದ ಒಟ್ಟು 4 ಲಕ್ಷ ಮತದಾರರಲ್ಲಿ ಸುಮಾರು 1.6 ಲಕ್ಷಕ್ಕೂ (31%) ಹೆಚ್ಚು ಯಾದವರು, ಒಬಿಸಿ 25%, ಎಸ್‌ಸಿ 18%, ಮುಸ್ಲಿಂ 15%, ಎಸ್‌ಟಿ 1% ಹಾಗೂ ಪ್ರಬಲ ಜಾತಿಗಳಾದ ರಜಪೂತ್ ಮತ್ತು ಭೂಮಿಹಾರ್ ಸುಮಾರು 10% ಇದ್ದಾರೆ.
ಈ ಸಮುದಾಯಗಳಲ್ಲಿ ಯಾದವ ಸಮುದಾಯವು ಲಾಲೂ ಕುಟುಂಬದೊಂದಿಗೆ ಬಲವಾಗಿ ನಿಂತಿದೆ. ಲೂಲೂ ಕುಟುಂಬದ ಗೆಲುವಿಗೆ ಆಸರೆಯೂ ಆಗಿದೆ. ಅಂತೆಯೇ, ಎಸ್‌ಸಿ ಮತ್ತು ಮುಸ್ಲಿಂ ಸಮುದಾಯವೂ ಆರ್‌ಜೆಡಿ ಪರವಾಗಿವೆ. ಒಬಿಸಿ ಮತಗಳು ಆರ್‌ಜೆಡಿ ಮತ್ತು ಬಿಜೆಪಿ ನಡುವೆ ವಿಭಜನೆಯಾಗಿದ್ದರೆ, ರಜಪೂತ್ ಮತ್ತು ಭೂಮಿಹಾರ್ ಸಮುದಾಯಗಳು ಬಿಜೆಪಿ ಜೊತೆಗಿವೆ.
ಯಾದವ, ದಲಿತ, ಹಿಂದುಳಿದ ಹಾಗೂ ಮುಸ್ಲಿಂ ಸಮುದಾಯದ ಒಲವನ್ನು ಉಳಿಸಿಕೊಂಡಿರುವ ತೇಜಸ್ವಿ ಯಾದವ್ ಕಳೆದ ಎರಡೂ ಚುನಾವಣೆಯಲ್ಲಿ (2015 ಮತ್ತು 2020) ಅಭೂತಪೂರ್ವ ಗೆಲುವು ದಾಖಲಿಸಿದ್ದರು. ಈ ಬಾರಿಯೂ, ಅಂತಹದ್ದೇ ಗೆಲುವು ಸಾಧಿಸಲು ಎದುರು ನೋಡುತ್ತಿದ್ದಾರೆ.
ಆದಾಗ್ಯೂ, ಯಾದವ ಸಮುದಾಯವನ್ನು ಆರ್‌ಜಿಡಿಯಿಂದ ತನ್ನತ್ತ ಸೆಳೆಯಲು ಬಿಜೆಪಿ ನಿರಂತರವಾಗಿ ಯತ್ನಿಸುತ್ತಲೇ ಇದೆ. ಅದಕ್ಕಾಗಿ, ಯಾದವ ಸಮುದಾಯದ ಸತೀಶ್ ಕುಮಾರ್ ಅವರನ್ನು ಕಣಕ್ಕಿಳಿಸಿದೆ. 2010ರಲ್ಲಿ ತೇಜಸ್ವಿ ಅವರ ತಾಯಿ, ಮಾಜಿ ಸಿಎಂ ರಾಬ್ರಿ ದೇವಿ ಅವರನ್ನು ಸತೀಶ್ ಕುಮಾರ್ ಸೋಲಿಸಿ, ಶಾಸಕರಾಗಿದ್ದರು. ಆ ನಂತರ ಎರಡು ಚುನಾವಣೆಗಳಲ್ಲಿ ತೇಜಸ್ವಿ ವಿರುದ್ಧ ಅವರಿಗೆ ಗೆಲ್ಲಲಾಗಿಲ್ಲ. 3ನೇ ಬಾರಿಯೂ ತೇಜಸ್ವಿ ವಿರುದ್ಧ ಬಿಜೆಪಿ ಅವರನ್ನೇ ಕಣಕ್ಕಳಿಸಿದೆ.
ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯು ವಿಭಿನ್ನತೆಯನ್ನು ಒಳಗೊಂಡಿದೆ. ಇದು ಎನ್‌ಡಿಎ ಮತ್ತು ಮಹಾಘಟಬಂಧನ್ ಎರಡೂ ಮೈತ್ರಿಕೂಟಗಳ ಸಮೀಕರಣವನ್ನು ಬದಲಿಸಿದೆ. ಮುಖ್ಯವಾಗಿ, ಚಿರಾಗ್ ಪಾಸ್ವಾನ್ ಕೂಡ ಕ್ಷೇತ್ರದಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿದ್ದಾರೆ. ಅವರು 2020ರ ವಿಧಾನಸಭಾ ಚುನಾವಣೆಯಲ್ಲಿ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷವು (ಎಲ್‌ಜೆಪಿ) ಎನ್‌ಡಿಎ ಜೊತೆ ಇರಲಿಲ್ಲ. ಈ ಬಾರಿ, ಎನ್‌ಡಿಎ ಸೇರಿಕೊಂಡಿದೆ. ಇದು ದಲಿತ ಮತಗಳನ್ನು ಚದುರಿಸುವ ಸಾಧ್ಯತೆಗಳಿವೆ. ಈ ಮತಗಳನ್ನು ಆರ್‌ಜೆಡಿಯಿಂದ ಚದುರಿಹೋಗದಂತೆ ತಡೆಯಲು ಪಕ್ಷದ ದಲಿತ ನಾಯಕ ಶಿವಚಂದ್ರ ರಾಮ್ ಕಸರತ್ತು ನಡೆಸುತ್ತಿದ್ದಾರೆ.
ಅಂತೆಯೇ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಜೆಎಸ್‌ಪಿಯಿಂದ ಚಂಚಲ್ ಕುಮಾರ್ ಕಣಕ್ಕಿಳಿಸಿದ್ದಾರೆ. ಜೆಎಸ್‌ಪಿ ಯುವಜನರ ಮತಗಳನ್ನು ಛಿದ್ರಗೊಳಿಸುವ ನಿರೀಕ್ಷೆ ಇದೆ. ಇದು, ಬಹುಶಃ ಬಿಜೆಪಿಗೆ ಸಹಾಯವಾಗಬಹುದು ಎನ್ನಲಾಗುತ್ತಿದೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಬಿಜೆಪಿ 1 ಕೋಟಿ ಉದ್ಯೋಗದ ಭರವಸೆ; 20 ವರ್ಷದಲ್ಲಿ ಆಗದ್ದು ಈಗ ಸಾಧ್ಯವೇ?
ಇದೆಲ್ಲದರ ನಡುವೆ, ತೇಜಸ್ವಿ ಅವರು ಅಣ್ಣ ತೇಜ್ ಪ್ರತಾಪ್ ಯಾದವ್ ಅವರು ತಮ್ಮದೇ ‘ಜನಶಕ್ತಿ ಜನತಾದಳ’ ಪಕ್ಷವನ್ನು ಕಟ್ಟಿದ್ದು, ಪ್ರೇಮ್ ಕುಮಾರ್ ಅವರನ್ನು ಕಣಕ್ಕಿಳಿಸಿದ್ದಾರೆ. ಪ್ರೇಮ್ ಕುಮಾರ್ ಪರವಾಗಿ ಬೃಹತ್ ಸಮಾವೇಶಗಳನ್ನು ನಡೆಸಿದ್ದಾರೆ. ಯಾದವ್ ಕುಟುಂಬದಲ್ಲಿನ ಬಿರುಕು ಕೂಡ ಮತದಾನದ ಮೇಲೆ ಪ್ರಭಾವ ಬೀರಬಹುದು. ಯಾದವ ಮತಗಳು ವಿಭಜನೆಯಾಗಬಹುದಾದ ಅಪಾಯವಿದೆ.
ಇದೇ ಸಮಯದಲ್ಲಿ, ಎಲ್‌ಜೆಪಿಯಿಂದ ಸ್ಪರ್ಧಿಸಿದ್ದ ರಾಕೇಶ್ ರೋಷನ್ ಅವರು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರು ಕಳೆದ ಚುನಾವಣೆಯಲ್ಲಿ ಎಲ್‌ಜೆಪಿಯಿಂದ ಸ್ಪರ್ಧಿಸಿ 25,000 ಮತಗಳನ್ನು ಪಡೆದಿದ್ದರು. ಈ ಬಾರಿ ಅವರ ಸ್ಪರ್ಧೆ ಮತ ವಿಭಜನೆಯಲ್ಲಿ ಗಮನಾರ್ಹವಾಗಬಹುದು, ಬಿಜೆಪಿಗೆ ಹೊಡೆತ ಬೀಳಬಹುದು ಎಂದು ಭಾವಿಸಲಾಗಿತ್ತು. ಆದರೆ, ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ಬಿಜೆಪಿ ಗೆಲುವಿಗಾಗಿ ಶ್ರಮಿಸಲು ಮುಂದಾಗಿದ್ದಾರೆ.
ಈ ಸವಾಲುಗಳ ನಡುವೆಯೂ, ತೇಜಸ್ವಿ ಯಾದವ್ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದಾರೆ. ಕ್ಷೇತ್ರವು ಮತ್ತೊಬ್ಬ ಮುಖ್ಯಮಂತ್ರಿಯ ಆಯ್ಕೆಗಾಗಿ ಆರ್‌ಜೆಡಿಗೆ ಮತ ಚಲಾಯಿಸಲಿದೆ ಎಂದು ಭರವಸೆ ವ್ಯಕ್ತಪಡಿಸುತ್ತಿದ್ದಾರೆ.
ತೇಜಸ್ವಿ ಅವರ ರಾಘೋಪುರ ಕ್ಷೇತ್ರದಲ್ಲಿ ನವೆಂಬರ್ 6ರಂದು ಮತದಾನ ನಡೆಯಲಿದೆ. ನವೆಂಬರ್ 14ರಂದು ಬಿಹಾರ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.




