ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಪರವಾಗಿ ಪ್ರಚಾರಕ್ಕೆ ತೆರಳಿರುವ ಕೇಂದ್ರ ಸಚಿವ, ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಅವರು ಮುಸ್ಲಿಮರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದು, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ನಮಗೆ ನಮಕ್ ಹರಾಮ್‌ಗಳ ಮತ ಬೇಡ’ ಎಂದು ದ್ವೇಷ ಭಾಷಣ ಮಾಡಿದ್ದಾರೆ.
ನವೆಂಬರ್ ಮೊದಲ ವಾರದಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದೆ.ಬಿಹಾರದ ಅರ್ವಲ್ ಜಿಲ್ಲೆಯಲ್ಲಿ ಬಿಜೆಪಿ-ಜೆಡಿಯು ಪರವಾಗಿ ಪ್ರಚಾರ ಮಾಡಿದ ಗಿರಿರಾಜ್, “ಒಮ್ಮೆ ‘ನಿಮಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಇದೆಯಾ?’ ಎಂದು ಒಬ್ಬ ಮೌಲ್ವಿಗೆ ಕೇಳಿದೆ. ಅವರು ‘ಹೌದು’ ಇದೆ ಎಂದರು. ಈ ಕಾರ್ಡ್‌ಗಳನ್ನು ಹಿಂದು-ಮುಸ್ಲಿಂ ಆಧಾರದಲ್ಲಿ ಕೊಡಲಾಗುತ್ತದೆಯಾ? ಎಂದು ಕೇಳಿದೆ. ಅವರು ಇಲ್ಲ ಎಂದರು. ನೀವು ನನಗೆ ಮತ ಹಾಕಿದ್ದೀರಾ? ಎಂದು ಕೇಳಿದೆ. ಅವರು ಮೊದಲಿಗೆ ‘ಹೌದು’ ಎಂದರು. ದೇವರ ಮೇಲೆ ಪ್ರಮಾಣ ಮಾಡಿ ಹೇಳಿ ಎಂದು ನಾನು ಹೇಳಿದಾಗ ‘ಇಲ್ಲ’ ಎಂದರು. ಮುಸ್ಲಿಮರು ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವ ಪಡೆಯುತ್ತಾರೆ. ಆದರೆ, ನಮಗೆ ಮತ ಹಾಕುವುದಿಲ್ಲ” ಎಂದಿದ್ದಾರೆ. ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದ ಧೋರಣೆಯಲ್ಲಿ ನಾಲಿಗೆ ಹರಿಬಿಟ್ಟಿದ್ದಾರೆ.
“ನಮ್ಮ ಸರ್ಕಾರ ಜಾರಿಗೆ ತಂದ ಯೋಜನೆಗಳ ಲಾಭ ಪಡೆದು, ಅವರು ನಮಗೆ ಮತ ಹಾಕುವುದಿಲ್ಲ. ಅಂತವರನ್ನು ‘ನಮಕ್ ಹರಾಮ್’ಗಳು ಎನ್ನುತ್ತಾರೆ. ಇಂತಹ ‘ನಮಕ್ ಹರಾಮ್’ಗಳ ಮತ ನಮಗೆ ಬೇಡ,” ಎಂದು ಎಂದಿದ್ದಾರೆ.




