ಬಿಹಾರ ಚುನಾವಣೆ | ಆಡಳಿತ ವಿರೋಧಿ ಅಲೆ ದಾಟಿ ದಡ ಸೇರುವರೇ ನಿತೀಶ್-ಮೋದಿ?

Date:

ಬಿಹಾರ ವಿಧಾನಸಭಾ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಬಿಹಾರದಿಂದ ಜಾರ್ಖಂಡ್‌ ಬೇರ್ಪಟ್ಟ ಕಳೆದ 25 ವರ್ಷಗಳಲ್ಲಿ ಬರೋಬ್ಬರಿ 20 ವರ್ಷಗಳ ಕಾಲ ಹಾಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರೇ ಬಿಹಾರದ ಆಡಳಿತ ನಡೆಸಿದ್ದಾರೆ. ವಿಭಜನೆಗೊಂಡ ಬಿಹಾರದ ಏಳು-ಬೀಳಿನಲ್ಲಿ ನಿತೀಶ್‌ ಅವರ ಪಾತ್ರ-ಕೊಡುಗೆಯೇ ಗಹನವಾದದ್ದು. ಹಾಲಿ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟವನ್ನು ಮತ್ತೊಮ್ಮೆ ಅಧಿಕಾರಕ್ಕೇರಿಸುವ ತವಕದಲ್ಲಿದ್ದಾರೆ ಮೋದಿ-ಶಾ- ನಿತೀಶ್‌. ಅಧಿಕಾರ ಉಳಿಸಿಕೊಳ್ಳಲು ಹಾತೊರೆಯುತ್ತಿದ್ದಾರೆ.

2005ರಿಂದ ಇಲ್ಲಿಯವರೆಗೆ ಬಿಹಾರವು ಭಾಗಶಃ ಏಕೈಕ ಮುಖ್ಯಮಂತ್ರಿಯನ್ನು ಕಂಡಿದೆ. (2014ರ ಮೇ ತಿಂಗಳಿನಿಂದ 2015ರ ಫೆಬ್ರವರಿವರೆಗೆ 9 ತಿಂಗಳ ಕಾಲ ಜೀತನ್ ರಾಮ್ ಮಾಂಝಿ ಬಿಹಾರ ಮುಖ್ಯಮಂತ್ರಿಯಾಗಿದ್ದರು. ಅವರನ್ನು ಆ ಸ್ಥಾನದಲ್ಲಿ ಕುಳ್ಳಿರಿಸಿ ಹಂಗಾಮಿಯಾಗಿ ಹಿಂದೆ ಸರಿದಿದ್ದರು ನಿತೀಶ್) ಕಳೆದ 20 ವರ್ಷಗಳಲ್ಲಿ ನಿತೀಶ್‌ ಅವರೇ ಬಿಹಾರದ ಮುಖ್ಯಮಂತ್ರಿಯಾಗಿದ್ದಾರೆ. ಭಾರತದಲ್ಲಿಯೇ ಅತಿ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಸಿಕ್ಕಿಂ ಪವನ್ ಕುಮಾರ್ ಚಾಮ್ಲಿಂಗ್ ನಂತರ 2ನೇ ಸ್ಥಾನದಲ್ಲಿ ನಿತೀಶ್ ಕುಮಾರ್ ಇದ್ದಾರೆ.

ಆ ಪಕ್ಷ – ಈ ಪಕ್ಷವೆನ್ನದೆ ಬಿಹಾರದ ಎಲ್ಲ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು, ದೀರ್ಘ ಕಾಲದವರೆಗೆ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ನಿತೀಶ್‌ ಅವರ ದೀರ್ಘ ಆಡಳಿತದ ಹೊರತಾಗಿಯೂ ಭಾರತದ ಅತ್ಯಂತ ಬಡ ರಾಜ್ಯಗಳ ಪಟ್ಟಿಯಲ್ಲಿ ಬಿಹಾರ ಮೊದಲ ಸಾಲಿನಲ್ಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಡ ರಾಜ್ಯ ಬಿಹಾರದಲ್ಲಿ, ಕಳೆದ 20 ವರ್ಷಗಳ ನಿತೀಶ್‌ ಆಡಳಿತದಲ್ಲಿ ಬಿಹಾರದ ತಲಾ ಆದಾಯವು ನಿರಂತರ ಏರಿಕೆ ಕಂಡಿದ್ದರೂ, ಭಾರತದ ಸರಾಸರಿ ತಲಾ ಆದಾಯಕ್ಕೂ – ಬಿಹಾರದ ತಲಾ ಆದಾಯಕ್ಕೂ ಅಜಗಜಾಂತರ ವ್ಯತ್ಯಸವಿದೆ. 2005ರಲ್ಲಿ, ನಿತೀಶ್‌ ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗ, ಬಿಹಾರದ ತಲಾ ಆದಾಯವು ಸುಮಾರು 7,500-8,500 ರೂ. ಇತ್ತು. ಪ್ರಸ್ತುತ, 66,828 ರೂ.ಗಳಿಗೆ ಏರಿಕೆಯಾಗಿದೆ. ಆದರೆ, ಇದೇ ಅವಧಿಯಲ್ಲಿ ಭಾರತದ ತಲಾ ಆದಾಯವು 28,000 ರೂ. ಇದ್ದದ್ದು, 2,05,324 ರೂ.ಗಳಿಗೆ ಏರಿಕೆಯಾಗಿದೆ. ಕರ್ನಾಟಕದ ತಲಾ ಆದಾಯವೂ ಪ್ರಸ್ತುತ 2,04,605 ರೂ. ಇದೆ. 2010-11ರಲ್ಲಿಯೇ ಕರ್ನಾಟಕದ ತಲಾ ಆದಾಯವು 63,000 ರೂ. ಇತ್ತು. ಅಂದರೆ, ಕರ್ನಾಟಕಕ್ಕೆ ಹೋಲಿಸಿದರೆ, ಬಿಹಾರವು ಸುಮಾರು 15 ವರ್ಷಗಳಷ್ಟು ಹಿಂದುಳಿದಿದೆ.

ಹಾಗಂತ, ನಿತೀಶ್‌ ಆಡಳಿತದಲ್ಲಿ ಮಾತ್ರವೇ ಬಿಹಾರ ಬೆಳವಣಿಗೆ ಸಾಧಿಸಿಲ್ಲ ಎಂದರ್ಥವಲ್ಲ. ಆದರೆ, ಬದಲಾವಣೆಯ ಭರವಸೆಯೊಂದಿಗೆ ಸುದೀರ್ಘ ಆಡಳಿತ ನಡೆಸಿದ ನಿತೀಶ್‌ ಅವರೂ ಬಿಹಾರವನ್ನು ಭದ್ರವಾಗಿ ಕಟ್ಟುವಲ್ಲಿ ವಿಫಲರಾಗಿದ್ದಾರೆ ಎಂಬುದೂ ಸುಳ್ಳಲ್ಲ. ನಿತೀಶ್ ಯುಗದಲ್ಲಿ ಬಿಹಾರದ ಸಾಪೇಕ್ಷ ಆರ್ಥಿಕ ಸ್ಥಿತಿಯು ಹದಗೆಟ್ಟಿದೆ. ಬಡವರು ಮತ್ತಷ್ಟು, ಮಗದಷ್ಟು ಬಡವಾಗಿದ್ದಾರೆ.

ನಿರುದ್ಯೋಗವು ಮಿತಿ ಮೀರಿದೆ. ಯುವಜನರನ್ನು ಕಾಡುತ್ತಿದೆ. ಬಿಹಾರದ ಯುವಜನರು ಬದುಕು ಕಟ್ಟಿಕೊಳ್ಳಲು ಉದ್ಯೋಗ ಅರಸಿ, ದೇಶದ ನಾನಾ ಭಾಗಗಳಿಗೆ ವಲಸೆ ಹೋಗುತ್ತಿದ್ದಾರೆ. ವಲಸಿಗ ರಾಜ್ಯಗಳಲ್ಲಿ ಬಿಹಾರವೂ ಪ್ರಮುಖವಾಗಿದೆ. ಶೈಕ್ಷಣಿಕ ಗುಣಮಟ್ಟವೂ ಕಳಪೆಯಾಗಿದೆ. ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಕಾಡುತ್ತಿದೆ. ರಸ್ತೆಗಳು, ವಿದ್ಯುತ್ ಹಾಗೂ ನೀರು ಸೇರಿದಂತೆ ಮೌಲಭೂತ ಸೌಲಭ್ಯಗಳ ಕೊರತೆ ಹೇರಳವಾಗಿದೆ.

ಭ್ರಷ್ಟಾಚಾರದ ಆರೋಪಗಳೂ ಗಂಭೀರವಾಗಿ ಕೇಳಿಬರುತ್ತಿವೆ. ಈ ಆರೋಪಗಳಿಗೆ ಸಾಕ್ಷಿ ಎಂಬಂತೆ ಬಿಹಾರದ ಹತ್ತಾರು ಸೇತುವೆಗಳು ಕುಸಿದು ಬೀಳುತ್ತಿವೆ. ಇದಕ್ಕೆ ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿಯೇ ಕಾರಣವೆಂದು ಹೇಳಲಾಗುತ್ತಿದೆ. ಈ ಎಲ್ಲ ಸಮಸ್ಯೆ-ಸವಾಲುಗಳು ಬಿಹಾರದಲ್ಲಿ ಆಡಳಿತ ವಿರೋಧಿ ಅಲೆಯನ್ನು ಹುಟ್ಟುಹಾಕಿದೆ. ನಿತೀಶ್‌ ನೇತೃತ್ವದ ಎನ್‌ಡಿಎಗೆ ಅಧಿಕಾರ ಉಳಿಸಿಕೊಳ್ಳುವುದು ತ್ರಾಸದಾಯಕವಾಗಿ ಪರಿಣಮಿಸಿದೆ.

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | 35 ವರ್ಷಗಳಲ್ಲಿ ಲಾಲೂ-ನಿತೀಶ್‌ ದೋಸ್ತಿ-ಕುಸ್ತಿಯದ್ದೇ ಆಡಳಿತ

ಗಮನಾರ್ಹ ವಿಚಾರವೆಂದರೆ, 2000ರಲ್ಲಿ, ಬಿಹಾರವು ಎರಡು ರಾಜ್ಯವಾಗಿ (ಬಿಹಾರ ಮತ್ತು ಜಾರ್ಖಂಡ್‌) ವಿಭಜನೆಯಾದ ಬಳಿಕ ಮೊದಲ ಬಾರಿಗೆ ಚುನಾವಣೆ ನಡೆದಾಗ (2000ರಲ್ಲಿ) ಒಟ್ಟು 243 ಸ್ಥಾನಗಳ ಪೈಕಿ, 124 ಸ್ಥಾನಗಳನ್ನು ಗೆಲ್ಲುವ ಮೂಲಕ ಆರ್‌ಜೆಡಿ ಸರಳ ಬಹುಮತ ಪಡೆದು ಸ್ವಂತ ಬಲದ ಮೇಲೆ ಸರ್ಕಾರ ರಚಿಸಿತ್ತು. ಅದಾದ ಬಳಿಕ, 2005ರಿಂದ ಇಲ್ಲಿಯವರೆಗೆ 20 ವರ್ಷಗಳಲ್ಲಿ ಯಾವುದೇ ಪಕ್ಷವು ಪೂರ್ಣ ಬಹುಮತ ಪಡೆದು, ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ನಿತೀಶ್‌ ಅವರು ಎನ್‌ಡಿಎಯಲ್ಲಿ ಬಿಜೆಪಿ ಮತ್ತು ಮಹಾಮೈತ್ರಿಯ ಆರ್‌ಜೆಡಿ-ಕಾಂಗ್ರೆಸ್‌ ಹಂಗಿನಲ್ಲಿಯೇ ಸರ್ಕಾರ ರಚಿಸಿ, ಅಧಿಕಾರ ನಡೆಸಿದ್ದಾರೆ.

ಈ ಬಾರಿಯಾದರೂ, ನಿತೀಶ್‌ ಅವರನ್ನು ಮೂಲೆಗೊತ್ತಿ, ಸ್ವಂತ ಬಲದ ಮೇಲೆ ಸರ್ಕಾರ ರಚಿಸಬೇಕೆಂದು ಬಿಜೆಪಿ ಹವಣಿಸಿತ್ತು. ಅದಕ್ಕಾಗಿ, ಭಾರೀ ಪ್ರಯತ್ನಗಳನ್ನು ನಡೆಸಿತ್ತು. ಆದರೆ, ಅದು ಸಾಧ್ಯವಿಲ್ಲ ಎಂಬುದನ್ನು ಅರಿತು, ಜೆಡಿಯುಗೆ ಮಣೆ ಹಾಕಲು ಮುಂದಾಗಿದೆ. ಆದಾಗ್ಯೂ, ಸೀಟುಗಳನ್ನು ಜೆಡಿಯು-ಬಿಜೆಪಿ ಸಮನಾಗಿ (100+100) ಹಂಚಿಕೊಂಡು, ಅಳಿದುಳಿದ 43 ಸ್ಥಾನಗಳನ್ನು ಇತರ ಮೂರು ಮೈತ್ರಿ ಪಕ್ಷಗಳಿಗೆ ಕೊಡಲು ಮುಂದಾಗಿವೆ. ಇದು, ಚಿರಾಗ್‌ ಪಾಸ್ವಾನ್ ಅವರ ಎಲ್‌ಜೆಪಿಯ ಬಂಡಾಯಕ್ಕೂ ಕಾರಣವಾಗುವ ಸಾಧ್ಯತೆಗಳಿವೆ.

ಆದರೂ, ಬಿಹಾರದ ಪ್ರಮುಖ ನಾಲ್ಕು ಪಕ್ಷಗಳಾದ ಬಿಜೆಪಿ, ಜೆಡಿಯು, ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಪೈಕಿ, ಜೆಡಿಯು, ಆರ್‌ಜೆಡಿ ತಟಸ್ಥ ಗ್ರಾಫ್‌ ಹೊಂದಿದ್ದರೆ, ಕಾಂಗ್ರೆಸ್‌ ಕುಸಿತ ಕಾಣುತ್ತಿದೆ. ಬಿಜೆಪಿ ಮಾತ್ರವೇ ತನ್ನ ಗ್ರಾಫ್‌ಅನ್ನು ನಿರಂತರವಾಗಿ ಏರಿಸಿಕೊಳ್ಳುತ್ತಿದೆ. 2015ರಲ್ಲಿ ಜೆಡಿಯು ಸಖ್ಯವಿಲ್ಲದೆ ಚುನಾವಣೆ ಎದುರಿಸಿದ್ದ ಬಿಜೆಪಿ, ತೀರಾ ಕಳಪೆ ಸಾಧನೆ ಮಾಡಿತ್ತು. ಆದರೆ, 2020ರ ವೇಳೆಗೆ ಮತ್ತೆ ಜೆಡಿಯು ಜೊತೆಗೂಡಿ ತನ್ನ ಮತ ಹಂಚಿಕೆಯನ್ನು (19.46%) ಗಣನೀಯವಾಗಿ ಹೆಚ್ಚಿಸಿಕೊಂಡಿತು. 2015ರಲ್ಲಿ 157 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಕೇವಲ 24 ಸ್ಥಾನಗಳನ್ನು ಮಾತ್ರವೇ ಗೆದ್ದಿದ್ದ ಕೇಸರಿ ಪಕ್ಷ, 2020ರಲ್ಲಿ 110 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 74 ಸ್ಥಾನಗಳನ್ನು ಗೆದ್ದುಕೊಂಡಿತು. ಇದು, ಅಂದಿನ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದ ಆರ್‌ಜೆಡಿ (75) ಸ್ಥಾನಗಳಿಗೆ ಸಮನಾಗಿತ್ತು.

ಮೋದಿ ಅಲೆ, ವಿಶ್ವಗುರು ಎಂಬಿತ್ಯಾದಿ ಅಬ್ಬರ-ಅಭಿಯಾನಗಳ ಹೊರತಾಗಿಯೂ, ಬಿಹಾರದಲ್ಲಿ ದೊಡ್ಡ ಮಿತ್ರಪಕ್ಷವಿಲ್ಲದೆ ಬಿಜೆಪಿ ಇನ್ನೂ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ಬಿಹಾರದಲ್ಲಿ ಅಧಿಕಾರದಲ್ಲಿರಲು ಬಿಜೆಪಿಗೆ ಜೆಡಿಯು ಒಂದೇ ಆಧಾರ ಪಕ್ಷವಾಗಿದೆ. ಆದರೆ, ಜೆಡಿಯು ಆಗಾಗ್ಗೆ ಬಿಜೆಪಿಯನ್ನು ದೂರವಿಟ್ಟು, ಆರ್‌ಜೆಡಿ ಮತ್ತು ಕಾಂಗ್ರೆಸ್‌ ಜೊತೆಗೂಡಿ ಸರ್ಕಾರ ರಚಿಸುವ ಮೂಲಕ, ಯಾವುದೇ ಮೈತ್ರಿಯಲ್ಲಿಯೂ ತಾನೇ ಚಕ್ರಧಿಪತಿ ಎಂಬುದನ್ನು ಬಿಜೆಪಿಗೆ ನಿತೀಶ್‌ ಕುಮಾರ್ ಅರ್ಥಮಾಡಿಸಿದ್ದಾರೆ.

ಹೀಗಾಗಿ, ಹಾಲಿ ಚುನಾವಣೆಯಲ್ಲಿಯೂ ಎನ್‌ಡಿಎಯಲ್ಲಿ ಜೆಡಿಯು ನಿರ್ಧಾರಕ್ಕೆ ಆದ್ಯತೆ ಹೆಚ್ಚಿದೆ. ಆದ್ದರಿಂದ, ಜೆಡಿಯು ಗೆಲುವಿನ ಓಟಕ್ಕೆ ಬ್ರೇಕ್ ಹಾಕಬೇಕು, ಜೆಡಿಯು ಗೆಲ್ಲುವ ಸಂಖ್ಯೆಯನ್ನು ಕಡಿತಗೊಳಿಸಿ, ಆ ಪಕ್ಷಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು, ಚುನಾವಣಾ ಫಲಿತಾಂಶದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ಮಹಾರಾಷ್ಟ್ರ ಮಾದರಿಯಲ್ಲಿ ನಿತೀಶ್‌ ಅವರಿಂದ ಮುಖ್ಯಮಂತ್ರಿ ಹುದ್ದೆಯನ್ನು ಕಸಿದುಕೊಳ್ಳಬೇಕೆಂದು ಬಿಜೆಪಿ ಹವಣಿಸುತ್ತಿದೆ. ಜೊತೆಗೆ, ನಿತೀಶ್‌ ಅವರಿಗೆ ವಯೋಸಹಜವಾಗಿ ಮರೆವಿನ ಸಮಸ್ಯೆ ಕಾಡುತ್ತಿದೆ. ಇದನ್ನೂ ಬಳಸಿಕೊಂಡು, ಮುಖ್ಯಮಂತ್ರಿ ಹುದ್ದೆಯನ್ನು ಕಿತ್ತುಕೊಳ್ಳುವ ತಂತ್ರ ಹೆಣೆಯುತ್ತಿದೆ.

ಈ ಲೇಖನ ಓದಿದ್ದೀರಾ?: ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಹಲ್ಲೆ ಪ್ರಯತ್ನ- ಭಾರತದ ಆರದ ಗಾಯ

ಆಡಳಿತ ವಿರೊಧಿ ಅಲೆ ಮತ್ತು ಬಿಜೆಪಿ-ಜೆಡಿಯುಗಳ ಈ ಆಂತರಿಕ ಜಂಗಿಕುಸ್ತಿ ಹಾಗೂ ಆದರೆ, ನಿತೀಶ್ ಜೊತೆಗೆ ಜೆಡಿಯು ಜನಪ್ರಿಯತೆಯೂ ಕುಸಿದರೆ, ಪಕ್ಷ ದುರ್ಬಲಗೊಳ್ಳಬಹುದು. ಇದೆಲ್ಲವೂ ಚುನಾವಣಾ ಕಣದಲ್ಲಿ ಗಂಭೀರ ಪರಿಣಾಮ ಬೀರಿದಲ್ಲಿ, ಮಹಾಮೈತ್ರಿಕೂಟಕ್ಕೆ, ಅದರಲ್ಲೂ ಆರ್‌ಜೆಡಿ ಗೆಲುವಿಗೆ ಹೆಚ್ಚು ಅವಕಾಶವಾಗಬಹುದು ಎಂಬ ಅಭಿಪ್ರಾಯಗಳಿವೆ.

ಆದರೆ, ಆರ್‌ಜೆಡಿ ಕೂಡ ತನ್ನದೇ ಆದ ವೈರುಧ್ಯಗಳನ್ನು ಎದುರಿಸುತ್ತಿದೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮತ್ತು ಅವರ ಸಹೋದರ ತೇಜ ಪ್ರತಾಪ್ ಯಾದವ್ ನಡುವೆ ತಿಕ್ಕಾಟವಿದೆ. ತೇಜ ಪ್ರತಾಪ್ ಯಾದವ್ ಅವರು ಇತ್ತೀಚೆಗೆ ಆರ್‌ಜೆಡಿ ತೊರೆದಿದ್ದಾರೆ. ಅವರ ಮುಂದಿನ ನಡೆ ಇಂದಿಗೂ ನಿಗೂಢವಾಗಿದ್ದರೂ, ಅವರು ಆರ್‌ಜೆಡಿ ವಿರುದ್ಧ ಕೆಲಸ ಮಾಡುವ ಸಾಧ್ಯತೆಗಳಿವೆ. ಕಾಂಗ್ರೆಸ್‌ ಜೊತೆಗಿನ ಸೀಟು ಹಂಚಿಕೆಯೂ ಆರ್‌ಜೆಡಿಗೆ ಸವಾಲಿನ ವಿಷಯವಾಗಿದೆ.

ಇದೆಲ್ಲದರ ನಡುವೆ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ‘ಜನ್ ಸುರಾಜ್’ ಪಕ್ಷವನ್ನು ಕಟ್ಟಿದ್ದು, ಬಿಹಾರ ಚುನಾವಣೆಯಲ್ಲಿ ಅವರ ಪಕ್ಷವೂ ಕಣಕ್ಕಿಳಿಯಲಿದೆ. ಎನ್‌ಡಿಎಯಿಂದ ಎಲ್‌ಜೆಪಿ ಹೊರಬಂದರೆ, ಜನ್‌ ಸುರಾಜ್‌ ಜೊತೆ ಮೈತ್ರಿ ಮಾಡಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಇನ್ನು, ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವೂ ಬಿಹಾರ ಸ್ಪರ್ಧೆಯಲ್ಲಿದೆ. ಈ ಸಣ್ಣ ಪಕ್ಷಗಳು ಚುನಾವಣಾ ಕಣದಲ್ಲಿ ಯಾವ ರೀತಿಯಲ್ಲಿ ಪ್ರಭಾವ ಬೀರಲಿವೆ, ಆರ್‌ಜೆಡಿ-ಕಾಂಗ್ರೆಸ್‌-ಎಡಪಕ್ಷಗಳ ಮಹಾಘಟಬಂಧನ್ ಮೈತ್ರಿಕೂಟದ ಪ್ರಬಲ್ಯತೆ ಎಷ್ಟಿರಲಿದೆ, ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಎನ್‌ಡಿಎ (ಬಿಜೆಪಿ-ಜೆಡಿಯು) ಮತ್ತೆ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವೇ? ಇನ್ನೊಂದು ತಿಂಗಳಲ್ಲಿ ಚುನಾವಣಾ ಕಣ ಉತ್ತರ ಕೊಡಲಿದೆ!

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...