ಬಿಹಾರ ವಿಧಾನಸಭಾ ಚುನಾವಣೆಗೆ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸಲು ವಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಬಣ ಸಮ್ಮತಿಸಿದೆ. ತೇಜಸ್ವಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವಲ್ಲಿ ‘ಇಂಡಿಯಾ’ ಕೂಟದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಆರ್‌ಜೆಡಿ ವಕ್ತಾರ ಶಕ್ತಿ ಸಿಂಗ್ ಯಾದವ್ ತಿಳಿಸಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಅಧಿಕಾರವನ್ನು ಕಸಿದುಕೊಳ್ಳುವ ಗುರಿ ‘ಇಂಡಿಯಾ’ ಬಣಕ್ಕಿದೆ. ಹೀಗಾಗಿ, ಚುನಾವಣೆಗೆ ಸೀಟು ಹಂಚಿಕೆ ಕುರಿತು ಚರ್ಚಿಸಲು ‘ಇಂಡಿಯಾ’ ಬಣ ಸಭೆ ನಡೆಸಿದ್ದು, ತೇಜಸ್ವಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.
ಸಭೆಯ ನಂತರ ಮಾತನಾಡಿದ ತೇಜಸ್ವಿ ಯಾದವ್, “ಬಿಹಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಕೊರತೆ ಇದೆ. ರಾಜ್ಯ ಸರ್ಕಾರವು ಈಗಾಗಲೇ ಜಾರಿಗೆ ತಂದಿರುವ ಕ್ರಮಗಳಲ್ಲಿ ಸ್ಪಷ್ಟ ದೃಷ್ಟಿಕೋನವಿಲ್ಲ” ಎಂದು ಆರೋಪಿಸಿದ್ದಾರೆ.
“ರಾಜ್ಯದ ಸುವ್ಯವಸ್ಥೆ ಮತ್ತು ಅಭಿವೃದ್ಧಿಗಾಗಿ ಮುಂಬರುವ ದಿನಗಳಲ್ಲಿ ನಾವು ದೊಡ್ಡ ಘೋಷಣೆಗಳನ್ನು ಮಾಡುತ್ತೇವೆ. ಮೈತ್ರಿಕೂಟವು ರಾಜ್ಯಕ್ಕಾಗಿ ದೊಡ್ಡ ದೃಷ್ಟಿಕೋನವನ್ನು ಹೊಂದಿದೆ” ಎಂದು ಅವರು ಹೇಳಿದ್ದಾರೆ.
ಬಿಹಾರಲ್ಲಿ ಆರ್‌ಜೆಡಿ, ಕಾಂಗ್ರೆಸ್, ಸಿಪಿಐ(ಎಂಎಲ್), ಸಿಪಿಐ, ಸಿಪಿಎಂ ಮತ್ತು ವಿಐಪಿಗಳು ಇಂಡಿಯಾ ಬಣದ ಭಾಗವಾಗಿವೆ. ಅಲ್ಲದೆ, ಮಾಜಿ ಕೇಂದ್ರ ಸಚಿವ ಪಶುಪತಿ ಕುಮಾರ್ ಪರಾಸ್ ನೇತೃತ್ವದ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷವು ಮೈತ್ರಿಕೂಟಕ್ಕೆ ಪ್ರವೇಶಿಸಲು ಹಸಿರು ನಿಶಾನೆಗಾಗಿ ಕಾಯುತ್ತಿದೆ.
ಇಂಡಿಯಾ ಬಣವು ಚುನಾವಣೆಯಲ್ಲಿ ಮಹಿಳೆಯರು, ಯುವಕರು, ರೈತರು, ಉದ್ಯೋಗಗಳು ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಹೆಚ್ಚು ಚರ್ಚಿಸಲು ನಿರ್ಧರಿಸಿವೆ. ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ರಾಜ್ಯ ಸರ್ಕಾರವನ್ನು ಹೆಚ್ಚು ಆಕ್ರಮಣಕಾರಿಯಾಗಿ ತರಾಟೆಗೆ ತೆಗೆದುಕೊಳ್ಳಲು ಮತ್ತು ರಾಜ್ಯಾದ್ಯಂತ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ ವಿರುದ್ಧ ಅಭಿಯಾನ ಆರಂಭಿಸಲು ಮುಂದಾಗಿವೆ.




