ಛತ್ತೀಸ್‌ಘಡದ ನೂತನ ಮುಖ್ಯಮಂತ್ರಿಯಾಗಿ ಬುಡಕಟ್ಟು ಸಮುದಾಯದ ನಾಯಕ ವಿಷ್ಣುದೇವ್ ಸಾಯಿ ಅವರನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ ಎಂದು ವರದಿಯಾಗಿದೆ.
ರಾಯ್‌ಪುರದಲ್ಲಿ ಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಬಿಜೆಪಿ ನೇಮಿಸಿದ್ದ ವೀಕ್ಷಕರ ಅಭಿಪ್ರಾಯದ ಮೇರೆಗೆ ನೂತನ ಮುಖ್ಯಮಂತ್ರಿಯಾಗಿ ವಿಷ್ಣು ದಿಯೋ ಸಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ರಾಜ್ಯದಲ್ಲಿ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಂತಾಗಿದೆ.
ರಾಯ್‌ಪುರದಲ್ಲಿ ಬಿಜೆಪಿಯಿಂದ ಹೊಸದಾಗಿ ಚುನಾಯಿತರಾದ 54 ಶಾಸಕರ ಪ್ರಮುಖ ಸಭೆಯ ನಂತರ 52 ವರ್ಷದ ವಿಷ್ಣುದೇವ್ ಸಾಯಿ ಅವರ ಹೆಸರನ್ನು ಛತ್ತೀಸ್‌ಘಡ ನೂತನ ಮುಖ್ಯಮಂತ್ರಿಯಾಗಿ ಘೋಷಿಸಲಾಗಿದೆ.
ಇತ್ತೀಚೆಗಷ್ಟೇ ಮುಕ್ತಾಯಕಂಡ ಛತ್ತೀಸ್‌ಘಡ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಿಸದೆಯೇ ಚುನಾವಣೆ ಎದುರಿಸಿತ್ತು. ಒಟ್ಟು 90 ಸ್ಥಾನಗಳ ಪೈಕಿ 54 ಸ್ಥಾನಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.
ವಿಷ್ಣುದೇವ್ ಸಾಯಿ ಅವರು ಈ ಬಾರಿಯ ಚುನಾವಣೆಯಲ್ಲಿ ಕುಂಕುರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ, ಒಟ್ಟು 87,604 ಮತಗಳನ್ನು ಪಡೆದು ಜಯಗಳಿಸಿದ್ದರು. ಈ ಕ್ಷೇತ್ರದಲ್ಲಿ ಹಾಲಿ ಶಾಸಕನಾಗಿದ್ದ ಕಾಂಗ್ರೆಸ್‌ನ ಯು ಡಿ ಮಿಂಜ್ ಅವರನ್ನು ಸೋಲಿಸುವ ಮೂಲಕ ಶಾಸಕರಾಗಿ ಆಯ್ಕೆಯಾಗಿದ್ದರು.
ಮಾಜಿ ಸಿಎಂ ಅಜಿತ್ ಜೋಗಿ ನಂತರ ಅವರು ಛತ್ತೀಸ್‌ಗಢದ ಮೊದಲ ಬುಡಕಟ್ಟು ಸಮುದಾಯದ ಮುಖ್ಯಮಂತ್ರಿಯಾಗಲಿದ್ದಾರೆ. ವಿಷ್ಣುದೇವ್ ಸಾಯಿ 2020ರಿಂದ 2022ರವರೆಗೆ ಛತ್ತೀಸ್‌ಘಡ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನರೇಂದ್ರ ಮೋದಿಯವರ ಮೊದಲ ಅಧಿಕಾರಾವಧಿಯಲ್ಲಿ ಸಂಸದರಾಗಿದ್ದ ಇವರು, ಕೇಂದ್ರದ ಉಕ್ಕಿನ ಖಾತೆಯ ರಾಜ್ಯ ಸಚಿವರಾಗಿದ್ದರು. 16ನೇ ಲೋಕಸಭಾ ಚುನಾವಣೆಯಲ್ಲಿ ಛತ್ತೀಸ್‌ಗಢದ ರಾಯಗಢ ಕ್ಷೇತ್ರದಿಂದ ಗೆದ್ದು, ಲೋಕಸಭಾ ಸದಸ್ಯರಾಗಿದ್ದರು.
आज रायपुर निवास में पत्थलगांव विधायक श्रीमती गोमती साय जी, जशपुर विधायक श्रीमती रायमुनि भगत जी, पूर्व नेता प्रतिपक्ष श्री नारायण चंदेल जी, पार्टी उपाध्यक्ष श्री भूपेंद्र सवन्नी जी, प्रवक्ता श्री नीलू शर्मा जी से मुलाकात की। सभी को ऐतिहासिक जीत के साथ के लिए बधाई दी। pic.twitter.com/RKyPJWX7Cs
— Vishnu Deo Sai (@vishnudsai) December 9, 2023





