ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಗೆಲ್ಲಿಸಲು ಬಿಜೆಪಿಗರೇ ರಾಮಮಂದಿರದ ಮೇಲೆ ಬಾಂಬ್ ಹಾಕಬಹುದು ಎಂದು ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಹೇಳಿದ್ದಾರೆ.
ಬಿ.ಆರ್ ಪಾಟೀಲ್ ಅವರ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, “ಮೋದಿ ಮುಂದಿನ ಲೋಕಸಭಾ ಚುನಾವಣೆ ಗೆಲ್ಲೋದಕ್ಕೆ ರಾಮಮಂದಿರದ ಮೇಲೆ ತಾವೇ ಬಾಂಬ್ ಹಾಕಿ, ಮುಸಲ್ಮಾನರ ಮೇಲೆ ಆರೋಪ ಹೊರಿಸಿ ಹಿಂದುಗಳನ್ನು ಒಂದುಗೋಡಿಸಿ ಚುನಾವಣೆ ಗೆಲ್ಲುವ ಸಾಧ್ಯತೆಗಳಿವೆ. ಇದಕ್ಕೂ ಅವರ ಹೇಸುವುದಿಲ್ಲ” ಎಂದು ಬಿ.ಆರ್ ಪಾಟೀಲ್ ಹೇಳಿದ್ದಾರೆ.
ಆ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ ಕರ್ನಾಟಕ, “ಹಿಂದು ಧರ್ಮದ ಬುನಾದಿಯನ್ನೇ ಪ್ರಶ್ನಿಸಲು ಹೊರಟ ಕಾಂಗ್ರೆಸ್ಸಿಗರು ಈಗಲೇ ರಾಮಮಂದಿರದ ಮೇಲೆ ಕಾಕದೃಷ್ಟಿ ಬೀರಿದ್ದಾರೆ. ರಾಮಮಂದಿರವನ್ನೇ ಅಲುಗಾಡಿಸಿ ಹಿಂದೂ-ಮುಸ್ಲಿಂ ದಂಗೆಯೆಬ್ಬಿಸಿ ಅದನ್ನು ಸರ್ಕಾರದ ತಲೆಗೆ ಕಟ್ಟಲು ಕಾಂಗ್ರೆಸ್ ಈಗಾಗಲೇ ಸಜ್ಜಾಗಿರುವ ವಿಚಾರವನ್ನು ಬಿ.ಆರ್ ಪಾಟೀಲರು ಬಾಯಿ ತಪ್ಪಿ ಹೇಳಿದ್ದಾರೆ” ಎಂದು ಪ್ರತ್ಯಾರೋಪ ಮಾಡಿದೆ.
2024ರ ಮೊಲದ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಅದೇ ವರ್ಷದ ಜನವರಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಉದ್ಘಾಟಿಸುವುದಾಗಿ ಬಿಜೆಪಿ ಹೇಳಿದೆ. “ತನ್ನ ಸರ್ಕಾರದ ವೈಫಲ್ಯಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುವ ತಂತ್ರವಾಗಿ ಬಿಜೆಪಿ ರಾಮಮಂದಿರವನ್ನು ಬಳಸುತ್ತಿದೆ” ಎಂದು ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಆರೋಪಿಸಿವೆ.




