“ಯುವ ಬ್ರಿಗೇಡ್ ತಾಲೂಕು ಸಂಚಾಲಕ ವೇಣುಗೋಪಾಲ್ ಕೊಲೆ ಆರೋಪಿಗಳಿಗೆ ಕಾಂಗ್ರೆಸ್ ನಾಯಕರ ನಂಟು ಇದೆ. ಹೀಗಾಗಿ ನ್ಯಾಯಸಮ್ಮತ ತನಿಖೆ ನಡೆಸಬೇಕು” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಆಗ್ರಹಿಸಿದರು.
ಮೈಸೂರು ಜಿಲ್ಲೆ ತಿ. ನರಸೀಪುರದಲ್ಲಿ ಕಳೆದ ಭಾನುವಾರ ಕೊಲೆಯಾಗಿದ್ದ ಯುವ ಬ್ರಿಗೇಡ್ ಸಂಘಟನೆಯ ತಾಲೂಕು ಸಂಚಾಲಕ ವೇಣುಗೋಪಾಲ್ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಸದಸ್ಯರ ತಂಡವು ಮಂಗಳವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಅವರು ಮಾತನಾಡಿದರು.
“ತಾಲಿಬಾನಿ ಮನಸ್ಥಿತಿಯ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಈ ರೀತಿಯ ಹತ್ಯೆಗಳು ಹೆಚ್ಚಾಗಿವೆ. ಹಿಂದುತ್ವದ ಪರವಾಗಿ ಮಾತನಾಡುವವರನ್ನು ಟಾರ್ಗೆಟ್ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.
“ಜೈನಮುನಿ ಕಾಮಕುಮಾರ ನಂದಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸರ್ಕಾರವು ವ್ಯವಸ್ಥಿತವಾಗಿ ದಿಕ್ಕು ತಪ್ಪಿಸುತ್ತಿದೆ. ಜೈನ ಮುನಿ ಸಾಲ ನೀಡಿದ ವಿಚಾರಕ್ಕೆ ಹತ್ಯೆ ನಡೆದಿದೆ ಎಂದು ಬಿಂಬಿಸಲಾಗುತ್ತಿದೆ. ದಿನಕ್ಕೆ ಒಂದು ಹೊತ್ತು ತಿನ್ನುವ, ಅನ್ಯರಿಗೆ ದಾನ ಮಾಡುವ ಮನಸ್ಥಿತಿಯ ಮುನಿಗಳು ಬಡ್ಡಿ ವ್ಯವಹಾರ ಮಾಡಲು ಸಾಧ್ಯವೇ” ಎಂದು ಪ್ರಶ್ನಿಸಿದರು.
ಹತ್ಯೆ ಆರೋಪಿಗಳಲ್ಲಿ ಒಬ್ಬರು ಮೈಸೂರು ಮಹಾನಗರ ಪಾಲಿಕೆಯ ಸದಸ್ಯರ ಸಹೋದರ ಎಂಬ ಮಾಹಿತಿ ಕುರಿತು ಪ್ರತಿಕ್ರಿಯೆ ನೀಡಿ, “ಆರೋಪಿಗಳು ಯಾರೇ ಆಗಿದ್ದರೂ ಅವರನ್ನು ರಕ್ಷಿಸುವ ಪ್ರಶ್ನೆ ಇಲ್ಲ. ಆ ಆರೋಪಿ ತಂದೆ ಕೂಡ ಕಾಂಗ್ರೆಸ್ ಮುಖಂಡರು” ಎಂದು ಸಿ ಟಿ ರವಿ ಹೇಳಿದರು.
ನಿಯೋಗದಲ್ಲಿ ಶಾಸಕ ಡಾ. ಸಿ ಎನ್ ಅಶ್ವತ್ಥನಾರಾಯಣ, ಶ್ರೀವತ್ಸ ಹಾಗೂ ಬಿಜೆಪಿ ಮುಖಂಡರು ಇದ್ದರು.




