ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ರಾಜ್ಯ ಬಿಜೆಪಿಯಲ್ಲಿ ತಲೆದೋರಿರುವ ಭಿನ್ನಮತ ಶಮನ ತಮ್ಮಿಂದ ಸಾಧ್ಯವಿಲ್ಲ ಎಂಬುದನ್ನು ಹೈಕಮಾಂಡ್‌ಗೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಪಕ್ಷದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಬಿಕ್ಕಟ್ಟು ಶಮನಕ್ಕೆ ಪ್ರಯತ್ನಿಸುವಂತೆ ಹೈಕಮಾಂಡ್ ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರೂ ಹಲವಾರು ಆಯಾಮಗಳ ಮೂಲಕ ಬಿಕ್ಕಟ್ಟು ಶಮನಕ್ಕೆ ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಹೀಗಾಗಿ “ನೀವೇ ಏನಾದರೂ ಮಾಡಿ.. ನನ್ನಿಂದ ಆಗದು..” ಎಂದು ಹೈಕಮಾಂಡ್‌ಗೆ ಯಡಿಯೂರಪ್ಪ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ತವರು ಕ್ಷೇತ್ರ ಶಿವಮೊಗ್ಗದಲ್ಲಿ ಕಾಣಿಸಿಕೊಂಡ ಭಿನ್ನಮತ ಶಮನ ಯಡಿಯೂರಪ್ಪ ಅವರಿಗೆ ಸವಾಲಾಗಿದೆ. ತಮ್ಮ ಪುತ್ರನ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿರುವ ಹಿರಿಯ ನಾಯಕ ಈಶ್ವರಪ್ಪ ಅವರ ಮನವೊಲಿಸಲು ಯಡಿಯೂರಪ್ಪ ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಹೀಗಾಗಿ “ನಾನು ಈಶ್ವರಪ್ಪ ವಿರುದ್ಧವೇ ಹೋರಾಟಕ್ಕೆ ಧುಮುಕಿದ್ದೇನೆ. ಹೀಗಾಗಿ ಅವರ ಜೊತೆ ಮಾತನಾಡುವ ಪ್ರಶ್ನೆಯೇ ಇಲ್ಲ” ಎಂದು ಸಂಧಾನಕಾರರಿಗೆ ಬಿಎಸ್‌ವೈ ತಿಳಿಸಿದ್ದಾರಂತೆ.
ಹಾಗೆಯೇ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಸಚಿವ ಸೋಮಣ್ಣ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ಮಾಧುಸ್ವಾಮಿ ಅವರ ಮನವೊಲಿಸಲು ಯಡಿಯೂರಪ್ಪ ನಡೆಸಿದ ಪ್ರಯತ್ನ ವಿಫಲವಾಗಿದೆ. ಯಡಿಯೂರಪ್ಪ ಮತ್ತು ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆಗೆ ಮಾತನಾಡಲು ಮಾಧುಸ್ವಾಮಿ ಅವರು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಬೆಳಗಾವಿಯಲ್ಲಿ ಭಿನ್ನಮತದ ಕಹಳೆ ಊದುತ್ತಿರುವ ಸಂಜಯ್ ಪಾಟೀಲ್, ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ, ಅಭಯ ಪಾಟೀಲ್ ಹಾಗೂ ಈರಣ್ಣ ಕಡಾಡಿ ಅವರು ಸಂಧಾನದ ಎಲ್ಲ ಪ್ರಸ್ತಾಪಗಳನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.
ದಾವಣಗೆರೆಯಲ್ಲಿ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡೆದ್ದಿರುವ ಯಡಿಯೂರಪ್ಪ ಅವರ ಆಪ್ತ ರೇಣುಕಾಚಾರ್ಯ ಅವರೇ ಯಡಿಯೂರಪ್ಪ ಅವರ ಮಾತುಗಳನ್ನು ಕೇಳುತ್ತಿಲ್ಲವಂತೆ. ಒಟ್ಟಾರೆ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ರಾಜ್ಯ ಬಿಜೆಪಿ ಘಟಕದ ಎಲ್ಲ ನಾಯಕರು ಬಂಡಾಯ ಸಾರಿರುವ ನಾಯಕರ ಜೊತೆ ಸಂಪರ್ಕ ಸಾಧಿಸಲು ಯತ್ನಿಸಿದ ಎಲ್ಲ ಪ್ರಯತ್ನಗಳು ವಿಫಲವಾಗಿವೆ ಎಂದು ಮೂಲಗಳು ಹೇಳಿವೆ.
ಶಿವಮೊಗ್ಗ, ದಾವಣಗೆರೆ, ಕೊಪ್ಪಳ, ಬೆಳಗಾವಿ, ಬೀದರ್ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಭಿನ್ನಮತ ತಾರಕಕ್ಕೇರಿದೆ. ಟಿಕೆಟ್ ಸಿಗದವರು ಅತೃಪ್ತಿ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಟಿಕೆಟ್ ಕೊಟ್ಟವರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಇದರಿಂದಾಗಿ ರಾಜ್ಯ ನಾಯಕತ್ವ ಆತಂಕಕ್ಕೆ ಸಿಲುಕಿದೆ. ಒಂದು ವೇಳೆ ಭಿನ್ನಮತೀಯರು ಸ್ಪರ್ಧೆ ಮಾಡಿದರೆ ಅಧಿಕೃತ ಅಭ್ಯರ್ಥಿಗೆ ಹಿನ್ನಡೆಯಾಗಬಹುದು. ಹೀಗಾಗಿ ತುರ್ತಾಗಿ ಹೈಕಮಾಂಡ್ ಮಧ್ಯಪ್ರವೇಶಿಸುವಂತೆ ಯಡಿಯೂರಪ್ಪ ಕೋರಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.





