ಬಿಜೆಪಿ, ಆರ್‌ಎಸ್‌ಎಸ್ ಮತ್ತು ಚುನಾವಣಾ ಆಯೋಗ ದೇಶದಲ್ಲಿ ಮತ ಕಳ್ಳತನದಲ್ಲಿ ತೊಡಗಿವೆ. ಬಿಜೆಪಿ ಸರ್ಕಾರ ದಲಿತರು, ಅಲ್ಪಸಂಖ್ಯಾತರ ಮತಗಳನ್ನು ಕದಿಯುತ್ತಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬಿಹಾರದ ಅರಾದಲ್ಲಿ ನಡೆದ ಮತದಾರ ಅಧಿಕಾರ ಯಾತ್ರೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(SIR) ಸಂವಿಧಾನ ಮತ್ತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿ. ಆದರೆ ವಿಪಕ್ಷ ಇಂಡಿಯಾ ಒಕ್ಕೂಟ ಇದಕ್ಕೆ ಅವಕಾಶ ನೀಡಲ್ಲ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಬಿಹಾರದಲ್ಲಿ ಮತದಾರರ ಹಕ್ಕು ಯಾತ್ರೆ | ಬೈಕ್ ಏರಿದ ರಾಹುಲ್ ಗಾಂಧಿ; ಮತ ಕಳವು ವಿರುದ್ಧ ಆಕ್ರೋಶ
“ಮತದಾನವು ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಹಕ್ಕು, ಆದರೆ ನರೇಂದ್ರ ಮೋದಿ ಸರ್ಕಾರವು ಚುನಾವಣೆಯಲ್ಲಿ ಗೆಲುವು ಕಾಣಬೇಕು ಎಂಬ ಉದ್ದೇಶದಿಂದ ಇವರೆಲ್ಲರ ಮತಗಳನ್ನು ಕದಿಯುತ್ತಿದೆ. ಮತದಾನದ ಹಕ್ಕನ್ನು ಸಂವಿಧಾನ ನೀಡಿರುವುದು. ಅದನ್ನು ಯಾರೂ ಜನರಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ” ಎಂದು ಪ್ರತಿಪಾದಿಸಿದರು.
ಇನ್ನು ಎಂದಿನಂತೆ ಸಂವಿಧಾನದ ಪ್ರತಿಯನ್ನು ಹಿಡಿದು ಮಾತನಾಡಿದ ರಾಹುಲ್, “ಈ ಹಿಂದೆ ಬಿಜೆಪಿ ಮಹಾರಾಷ್ಟ್ರ, ಹರಿಯಾಣ ಮತ್ತು ದೇಶದ ಇತರ ಭಾಗಗಳಲ್ಲಿ ಮತಗಳನ್ನು ಕದಿಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಅದನ್ನು ಸ್ಪಷ್ಟವಾಗಿ ಬಹಿರಂಗಪಡಿಸಲು ನಮ್ಮಲ್ಲಿ ಪ್ರಬಲ ಪುರಾವೆಗಳಿಲ್ಲದ ಕಾರಣ ನಾವು ಮೌನವಾಗಿದ್ದೆವು. ಈಗ ಮತ ಕಳ್ಳತನದ ಆರೋಪಗಳನ್ನು ದೃಢೀಕರಿಸಲು ನಮ್ಮ ಬಳಿ ಪುರಾವೆಗಳಿವೆ” ಎಂದು ತಿಳಿಸಿದ್ದಾರೆ.
“ಕೇಂದ್ರದಲ್ಲಿರುವ ಪ್ರಸ್ತುತ ಸರ್ಕಾರವು ದೊಡ್ಡ ಉದ್ಯಮಿಗಳು, ಅದಾನಿ ಮತ್ತು ಅಂಬಾನಿಯಂತಹ ಕಾರ್ಪೊರೇಟ್ ಸಂಸ್ಥೆಗಳಿಗಾಗಿದೆ. ಅದಕ್ಕಾಗಿಯೇ ಸರ್ಕಾರ ಬಡವರ ಧ್ವನಿಯನ್ನು ನಿಗ್ರಹಿಸಲು ಬಯಸುತ್ತದೆ. ಆದರೆ ಇಂಡಿಯಾ ಒಕ್ಕೂಟ ಇದಕ್ಕೆ ಅವಕಾಶ ನೀಡದು” ಎಂದು ರಾಹುಲ್ ಪುನರುಚ್ಚರಿಸಿದರು.





