ಬಿಜೆಪಿ ಆಡಳಿತದಲ್ಲಿದ್ದ ಪಿಂಪ್ರಿ ಚಿಂಚ್‌ವಾಡ್ ಪುರಸಭೆ ಭ್ರಷ್ಟಾಚಾರ ಮತ್ತು ಸಾಲದ ಆರೋಪ ಮಾಡಿದ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ಮಿತ್ರಪಕ್ಷ ಬಿಜೆಪಿ ವಾಗ್ದಾಳಿ ನಡೆಸಿದೆ. ಅಜಿತ್ ಪವಾರ್ “ಆತ್ಮವಿಮರ್ಶೆ” ಮಾಡಿಕೊಳ್ಳಬೇಕು ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ರವೀಂದ್ರ ಚವಾಣ್ ಶನಿವಾರ ಹೇಳಿದ್ದಾರೆ.
ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ, ಆಡಳಿತಾರೂಢ ಮಹಾಯುತಿ ಸರ್ಕಾರದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿದೆ. ಆದರೆ ಇದೀಗ ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ಎನ್‌ಸಿಪಿ-ಬಿಜೆಪಿ ನಾಯಕರು ತೊಡಗಿದ್ದಾರೆ. ಜನವರಿ 15ರಂದು ನಡೆಯಲಿರುವ ಪುರಸಭೆ ಚುನಾವಣೆಗೂ ಮುನ್ನ ನಡೆದಿರುವ ಈ ಬೆಳವಣಿಗೆಯು ಇದೀಗ ಮಹಾರಾಷ್ಟ್ರ ಸರ್ಕಾರ ಉರುಳುವುದೇ ಎಂಬ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಇದನ್ನು ಓದಿದ್ದೀರಾ? BREAKING NEWS | ತ್ರಿಭಾಷಾ ನೀತಿ ಕುರಿತ ನಿರ್ಣಯ ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರ
ಕಳೆದ ಒಂಬತ್ತು ವರ್ಷಗಳಿಂದ ಪಿಂಪ್ರಿ ಚಿಂಚ್‌ವಾಡ್ ಪುರಸಭೆ ಭ್ರಷ್ಟಾಚಾರದಿಂದ ತುಂಬಿದೆ. ಅದೇ ಅವಧಿಯಲ್ಲಿ ಸಾಲದ ಸುಳಿಯಲ್ಲಿ ಸಿಲುಕಿದೆ ಎಂದು ಅಜಿತ್ ಪವಾರ್ ಹೇಳಿದ್ದಾರೆ. ಈ ವಿಚಾರದಲ್ಲಿ ಅಜಿತ್ ವಿರುದ್ಧ ಆಕ್ರೋಶಗೊಂಡ ಚವಾಣ್ ಪತ್ರಿಕಾಗೋಷ್ಠಿ ನಡೆಸಿದ್ದು, “ಬಿಜೆಪಿ ಆರೋಪಗಳನ್ನು ಮಾಡಲು ಪ್ರಾರಂಭಿಸಿದರೆ, ಅದು ಅವರಿಗೆ (ಪವಾರ್) ಗಂಭೀರ ತೊಂದರೆ ಉಂಟುಮಾಡುತ್ತದೆ. ಆರೋಪಗಳನ್ನು ಮಾಡುವ ಮೊದಲು ‘ಆತ್ಮವಿಮರ್ಶೆ’ ಮಾಡಿಕೊಳ್ಳಿ” ಎಂದಿದ್ದಾರೆ.
“ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಅಜಿತ್ ಪವಾರ್ ಈ ಹೇಳಿಕೆ ನೀಡಿದ್ದಾರೆ. ಆರೋಪಗಳನ್ನು ಮಾಡುವ ಮೊದಲು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅವರು ಯಾವ ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಪಕ್ಷವನ್ನು ಉದ್ದೇಶಿಸಿ ಈ ಹೇಳಿಕೆಯನ್ನು ನೀಡಿದ್ದಾರೆಯೇ” ಎಂದು ಪ್ರಶ್ನಿಸಿದ್ದಾರೆ.
“ಅಜಿತ್ ದಾದಾ ಒಬ್ಬ ಉತ್ತಮ ನಾಯಕ. ಅವರು ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿ ನಮ್ಮೊಂದಿಗೆ ಸಂಬಂಧ ಹೊಂದಿದ್ದಾರೆ. ಆದಾಗ್ಯೂ, ಈ ಚುನಾವಣೆಯಲ್ಲಿ, ಅವರ ಕಾಲಿನ ಕೆಳಗಿರುವ ಮರಳು ಜಾರಿಹೋಗುತ್ತಿದೆ. ಈ ಆರೋಪಗಳನ್ನು ಮಾಡಲು ಅವರಿಗೆ ಯಾವ ಸಂಸ್ಥೆ ಮಾಹಿತಿ ನೀಡಿದೆ ಎಂದು ನಾನು ಕೇಳುತ್ತೇನೆ. ತೀಕ್ಷ್ಣವಾದ ಟೀಕೆ ಮಾಡಿ ಪವಾರ್ ಚುನಾವಣೆಯ ನಂತರ ನಗುತ್ತಾ ಬರುತ್ತಾರೆ. ಅವರ ಹೇಳಿಕೆಗಳು ಚುನಾವಣಾ ಪ್ರಚಾರದ ಭಾಗವಾಗಿದೆ” ಎಂದರು.
2017ರಿಂದ 2022ರವರೆಗೆ ಪಿಂಪ್ರಿ-ಚಿಂಚ್‌ವಾಡ್ ಪುರಸಭೆಯಲ್ಲಿ ಬಿಜೆಪಿ ಆಡಳಿತವಿತ್ತು. ಅದಾದ ಬಳಿಕ ರಾಜ್ಯದಿಂದ ನೇಮಿಸಲ್ಪಟ್ಟ ಆಡಳಿತಾಧಿಕಾರಿಯು ಈ ಪುರಸಭೆಯನ್ನು ನಡೆಸುತ್ತಿದ್ದಾರೆ. ಇತರ 28 ಪುರಸಭೆಗಳು ಸೇರಿದಂತೆ ಪಿಂಪ್ರಿ-ಚಿಂಚ್‌ವಾಡ್ ಪುರಸಭೆಯಲ್ಲಿ ಜನವರಿ 15ರಂದು ಚುನಾವಣೆ ನಡೆಯಲಿದೆ.





