ಬಿಜೆಪಿ ಸಂಸದ ನಾಗೇಂದ್ರ ರಾಯ್ ಅವರು ತಮ್ಮದೇ ಪಕ್ಷ ನಾಯಕ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ ಆನಂದ ಬೋಸ್ ಅವರನ್ನು ‘ಪಾಕಿಸ್ತಾನಿ’ ಮತ್ತು ‘ಬಾಂಗ್ಲಾದೇಶಿ’ ಎಂದು ಕರೆದಿದ್ದಾರೆ. ಅವರ ಹೇಳಿಕೆಯು ಬಿಜೆಪಿಯನ್ನು ಮುಜುಗರಕ್ಕೆ ದೂಡಿದೆ. ಅಲ್ಲದೆ, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
ಪಶ್ಚಿಮ ಬಂಗಾಳದ ಕೂಚ್‌ಬೆಹಾರ್ ಜಿಲ್ಲೆಯ ಸೀತೈನಲ್ಲಿ ಬಿಜೆಪಿ ಸಭೆಯಲ್ಲಿ ಭಾಗವಹಿಸಿದ್ದ ಸಂಸದ ನಾಗೇಂದ್ರ ರಾಯ್ ವಿವಾದಾತ್ಮಕ ಭಾಷಣ ಮಾಡಿದ್ದಾರೆ. ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾಷಣದ ಆವೇಗದಲ್ಲಿ ಮೋದಿ, ಮುರ್ಮು ಅವರನ್ನು ‘ಪಾಕಿಸ್ತಾನಿ’ ಎಂದಿದ್ದಾರೆ.
“ಮತದಾರರ ಪಟ್ಟಿಯಿಂದ ಜನರ ಹೆಸರುಗಳನ್ನು ಅಳಿಸಿದರೆ, ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಮತ್ತು ಕಲ್ಯಾಣ ಸೇವೆಗಳನ್ನು ನಿರಾಕರಿಸಲು ಕಾರಣವಾಗುತ್ತದೆ. ಜನರನ್ನು ಬಂಧನ ಶಿಬಿರಗಳಲ್ಲಿ ಇರಿಸಿ, ಅವರ ಮೂಲ ಸ್ಥಳವನ್ನು ಪರಿಶೀಲಿಸಬಹುದು. ಆದರೆ, ಈ ಪ್ರಕ್ರಿಯೆಯನ್ನು ನಡೆಸುವವರು ಸ್ವತಃ ವಿದೇಶಿಯರೇ ಆಗಿದ್ದಾರೆ. ನಮ್ಮಿಂದ ದಾಖಲೆಗಳನ್ನು ಕೇಳುತ್ತಿರುವವರು ಸ್ವತಃ ಬಾಂಗ್ಲಾದೇಶಿ ಮತ್ತು ಪಾಕಿಸ್ತಾನಿಗಳು. ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಬಂಗಾಳ ಗವರ್ನರ್ ಎಲ್ಲರೂ ಪಾಕಿಸ್ತಾನಿ ಮತ್ತು ಬಾಂಗ್ಲಾದೇಶಿಗಳು. ಆದರೆ, ಇದು ನಮ್ಮ ಭೂಮಿ, ನಮ್ಮಿಂದ ದಾಖಲೆಗಳನ್ನು ಹೇಗೆ ಕೇಳುತ್ತೀರಿ?” ಎಂದು ರಾಯ್ ಹೇಳಿದ್ದಾರೆ.
ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸಮೀಕ್ ಭಟ್ಟಾಚಾರ್ಯ ಅವರು ನಿರಾಕರಿಸಿದ್ದಾರೆ. ಆದಾಗ್ಯೂ, ಎಸ್‌ಐಆರ್ ಪ್ರಕ್ರಿಯೆಗೂ – ಬಂಧನ ಶಿಬಿರಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ರಕ್ಷಣಾ ಕ್ಷೇತ್ರಕ್ಕೂ ‘ಮೋದಿ ಮಿತ್ರ’ನ ಲಗ್ಗೆ: ದೇಶದ ಗಡಿ ಕಾಯುವ ಹೊಣೆ ಇನ್ನು ‘ಅದಾನಿ’ ಪಾಲು!
ಜಿಲ್ಲಾ ಮಟ್ಟದ ಬಿಜೆಪಿ ಉಪಾಧ್ಯಕ್ಷರೊಬ್ಬರು, “ಇದು ನಾಗೇಂದ್ರ ರಾಯ್ ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಪಕ್ಷದ ಅಧಿಕೃತ ನಿಲುವಲ್ಲ” ಎಂದಿದ್ದಾರೆ.
ರಾಯ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಟಿಎಂಸಿ ವಕ್ತಾರ ಕುನಾಲ್ ಘೋಷ್, “ಎಸ್‌ಐಆರ್‌ನ ಭಾಗವಾಗಿ ಹೆಚ್ಚಿನ ಸಂಖ್ಯೆಯ ಮತದಾರರನ್ನು ಅಳಿಸಲು ಬಿಜೆಪಿ ಭಾರೀ ವಿವಾದವನ್ನು ಹುಟ್ಟುಹಾಕುತ್ತಿದೆ. ಯಾವುದೇ ನಾಗರಿಕರು ಮತಪಟ್ಟಿಯಿಂದ ಹೆಸರು ಕಳೆದುಕೊಳ್ಳದಂತೆ ಪ್ರಕ್ರಿಯೆ ನಡೆಸಬೇಕು” ಎಂದು ಹೇಳಿದ್ದಾರೆ.
2025ರ ಜೂನ್‌ನಲ್ಲಿ ಚುನಾವಣಾ ಆಯೋಗವು ಮೊದಲ ಬಾರಿಗೆ ಬಿಹಾರದಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ಆರಂಭಿಸಿತು. ಈಗ, 12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಿದೆ. ಎಸ್‌ಐಆರ್ ಪ್ರಕ್ರಿಯೆ ನಡೆದ ರಾಜ್ಯಗಳಲ್ಲಿ ಈವರೆಗೆ ಒಟ್ಟು 5.23 ಕೋಟಿ ಜನರನ್ನು ಮತಪಟ್ಟಿಯಿಂದ ಹೊರಹಾಕಲಾಗಿದೆ. ಕೇಂದ್ರ ಸರ್ಕಾರವು ಹಿಂಬಾಗಿಲಿನ ಮೂಲಕ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಯನ್ನು ಜಾರಿಗೆ ತಂದಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಈ ಪ್ರಕ್ರಿಯೆ ಆರಂಭವಾದಾಗಿನಿಂದ ಆರು ರಾಜ್ಯಗಳಲ್ಲಿ ಕನಿಷ್ಠ 33 ಬಿಎಲ್‌ಒಗಳು ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎಸ್‌ಐಆರ್ ಕರ್ತವ್ಯಗಳಲ್ಲಿ ಭಾಗಿಯಾಗಿರುವ ಕನಿಷ್ಠ 40 ಸರ್ಕಾರಿ ಅಧಿಕಾರಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.




