ತಮಿಳುನಾಡು ಮತ್ತು ತಮಿಳರನ್ನು ಬಿಜೆಪಿ ಇನ್ನೂ ಅರ್ಥಮಾಡಿಕೊಂಡಿಲ್ಲ. ಆರ್ಥಮಾಡಿಕೊಳ್ಳಲು ಪ್ರಯತ್ನವನ್ನೂ ಮಾಡುತ್ತಿಲ್ಲ ಎಂದು ತಮಿಳುನಾಡು ಸಚಿವ ಟಿ.ಆರ್.ಬಿ. ರಾಜಾ ಹೇಳಿದ್ದಾರೆ.
ಗುರುವಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ತಮಿಳುನಾಡಿನ ಜನರಿಗೆ ‘ಪೊಂಗಲ್’ ದಿನದ ಬದಲಿಗೆ ‘ತಿರುವಳ್ಳುವರ್ ದಿನ’ಕ್ಕೆ ಶುಭಾಶಯ ಕೋರಿದ್ದಾರೆ. ಈ ವಿಚಾರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಸಚಿವ ರಾಜಾ, “ದೆಹಲಿ ನಾಯಕರಿಗೆ ತಮಿಳುನಾಡು ಮತ್ತು ತಮಿಳು ಹಬ್ಬಗಳ ಬಗ್ಗೆ ಯಾವುದೇ ಅರಿವಿಲ್ಲ” ಎಂದು ಹೇಳಿದ್ದಾರೆ.
“ತಮಿಳುನಾಡು ವಿಚಾರದಲ್ಲಿ ಬಿಜೆಪಿಗೆ ಇರುವ ಮೂಲಭೂತ ಸಮಸ್ಯೆಯೆಂದರೆ, ಅವರು ತಮಿಳರು ಮತ್ತು ತಮಿಳುನಾಡನ್ನು ಅರ್ಥಮಾಡಿಕೊಳ್ಳುವುದಿಲ್ಲ. ನಮಗೆ ಏನು ಬೇಕು ಮತ್ತು ನಾವು ಏನೆಂದು ಅರ್ಥಮಾಡಿಕೊಳ್ಳಲು ಅವರು ಪ್ರಯತ್ನವನ್ನೂ ಮಾಡುವುದಿಲ್ಲ” ಎಂದು ಹೇಳಿದ್ದಾರೆ.
“ತಮಿಳುನಾಡಿನಲ್ಲಿ, ತಮಿಳು ತಿಂಗಳ ‘ಥಾಯ್’ ಮೊದಲ ದಿನದಂದು ‘ಪೊಂಗಲ್’ ಆಚರಿಸಲಾಗುತ್ತದೆ. ಥಾಯ್ ತಿಂಗಳ ಎರಡನೇ ದಿನದಂದು ‘ತಿರುವಳ್ಳುವರ್ ದಿನ’ ಆಚರಿಸಲಾಗುತ್ತದೆ. ನಮ್ಮ ಕ್ಯಾಲೆಂಡರ್ ಇಂಗ್ಲಿಷ್ ದಿನಾಂಕಗಳನ್ನು ಆಧರಿಸಿಲ್ಲ. ಸೂರ್ಯ ಮತ್ತು ಮಣ್ಣನ್ನು ಆಧರಿಸಿದೆ” ಎಂದು ಅವರು ವಿವರಿಸಿದ್ದಾರೆ.
“ತಮಿಳಿಗೆ ವಿಧ್ಯುಕ್ತ ಹೊಗಳಿಕೆಯ ಅಗತ್ಯವಿಲ್ಲ. ಅದು ಜ್ಞಾನ ಮತ್ತು ತಿಳುವಳಿಕೆಯನ್ನು ಕೇಳುತ್ತದೆ. ದೆಹಲಿ ನಾಯಕರು ತಮಿಳು ಕುರಿತು ತಿಳಿದುಕೊಳ್ಳಲು ಪ್ರಾರಂಭಿಸಬೇಕು” ಎಂದಿದ್ದಾರೆ.




