ಬಿಜೆಪಿ ಬಹುಮತವಿಲ್ಲದ ರಾಜ್ಯಗಳಲ್ಲಿ ಅಧಿಕಾರ ಪಡೆಯುವ ಬಿಜೆಪಿ ತಂತ್ರವನ್ನು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ವಿವರಿಸಿದ್ದಾರೆ. “ಇತರ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬರುವುದೇ ಬಿಜೆಪಿಯ ತಂತ್ರ” ಎಂದು ಕಪಿಲ್ ಸಿಬಲ್ ಟೀಕಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಕಪಿಲ್ ಸಿಬಲ್ ಪೋಸ್ಟ್ ಮಾಡಿದ್ದಾರೆ. “ಬಿಜೆಪಿಯ ರಾಜಕೀಯ ತಂತ್ರವೇನೆಂದರೆ, ಅವರು ಅಧಿಕಾರದಲ್ಲಿಲ್ಲದ ಅಥವಾ ಬಹುಮತವಿಲ್ಲದ ರಾಜ್ಯಗಳಲ್ಲಿ ಇತರ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಅಧಿಕಾರಕ್ಕೆ ಬರುವುದು” ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನು ಓದಿದ್ದೀರಾ? ಕೋಮು ಹಿಂಸಾಚಾರ ಬಗ್ಗೆ ಪ್ರಧಾನಿ ಮೋದಿ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್
ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಯಾವ ತಂತ್ರವನ್ನು ಪ್ರಯೋಗಿಸುತ್ತದೆ ಎಂಬುದನ್ನೂ ಕಪಿಲ್ ಸಿಬಲ್ ಹೇಳಿದ್ದಾರೆ. “ಅಧಿಕಾರಕ್ಕೆ ಬಂದ ನಂತರ ಮೈತ್ರಿ ಮಾಡಿಕೊಂಡ ಪಕ್ಷವನ್ನು ಮೂಲೆಗುಂಪು ಮಾಡಲಾಗುತ್ತದೆ. ಈಗಾಗಲೇ ಈ ತಂತ್ರ ಬಿಹಾರದಲ್ಲಿ ಯಶಸ್ವಿಯಾಗಿದೆ. ಈಗ ಈ ಆಟವನ್ನು ಮಹಾರಾಷ್ಟ್ರದಲ್ಲಿ ಆಡಲಾಗುತ್ತಿದೆ” ಎಂದು ಹೇಳಿದೆ.
ಬಿಹಾರದಲ್ಲಿ ಜೆಡಿಯು ಜತೆ ಮೊದಲ ಬಾರಿಗೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಅಧಿಕ ಸ್ಥಾನಗಳನ್ನು ಹೊಂದಿರಲಿಲ್ಲ. ಆದರೆ ಎರಡನೇ ಅವಧಿಯಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯಿತು. ಹರಿಯಾಣದಲ್ಲಿ ಐಎನ್‌ಎಲ್‌ಡಿ ಜತೆ ಮೈತ್ರಿಯಲ್ಲಿಯೂ ಇದೇ ರೀತಿ ನಡೆದಿದೆ. ಇದೀಗ ಮಹಾರಾಷ್ಟ್ರದಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಶಿವಸೇನೆ ಜತೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಸ್ಥಳೀಯ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಮಹಾರಾಷ್ಟ್ರದ 2,869 ಸ್ಥಾನಗಳಲ್ಲಿ 1,425 ಸ್ಥಾನಗಳನ್ನು ಗೆದ್ದು ಬಿಜೆಪಿ, ಮುಂಬೈ ಮತ್ತು ಪುಣೆ ಸೇರಿದಂತೆ 12ಕ್ಕೂ ಅಧಿಕ ಪುರಸಭೆಗಳಲ್ಲಿ ಏಕೈಕ ಅತಿದೊಡ್ಡ ಪಕ್ಷ ಎನಿಸಿಕೊಂಡಿದೆ. ಈ ಹಿಂದೆ ಠಾಕ್ರೆ, ಪವಾರ್ ಭದ್ರಕೋಟೆಯಾಗಿದ್ದ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಅಂದರೆ ಮೊದಲು ಬಹುಮತ ಇಲ್ಲದಾಗ ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದು, ಬಳಿಕ ಆ ಪಕ್ಷಗಳನ್ನೇ ಮೂಲೆಗುಂಪು ಮಾಡುವುದು ಎಂದು ಕಪಿಲ್ ಸಿಬಲ್ ಪೋಸ್ಟ್‌ನ ಅರ್ಥವಾಗಿದೆ.





