ಬಿಹಾರ ಚುನಾವಣೆ ಮುಗಿದಿದೆ. ಎನ್‌ಡಿಎ 202 ಸ್ಥಾನಗಳನ್ನು ಗೆದಿದ್ದು, ಸರ್ಕಾರ ರಚನೆಗೆ ಸಿದ್ದತೆ ನಡೆಸುತ್ತಿದೆ. ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ ಎಂಬುದನ್ನು ಎನ್‌ಡಿಎ ಮೂಲಗಳು ದೃಢಪಡಿಸಿವೆ. ಬಿಹಾರದಲ್ಲಿ ಬಿಜೆಪಿ 89 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಮುಖ್ಯಮಂತ್ರಿ ಗಾದಿಯನ್ನು ನಿತೀಶ್ ಅವರಿಗೇ ಬಿಟ್ಟುಕೊಟ್ಟಿದೆ. ಇದು, ಮಹಾರಾಷ್ಟ್ರದಲ್ಲಿ ಬಿಜೆಪಿ ನಡೆಸಿದ್ದ ರಾಜಕೀಯ ಆಟ ನಿತೀಶ್ ಎದುರು ವರ್ಕ್ ಆಗಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
ಬಿಜೆಪಿ, ಶಿವಸೇನೆ (ಶಿಂಧೆ ಬಣ), ಎನ್‌ಸಿಪಿ (ಅಜಿತ್ ಬಣ) ಒಳಗೊಂಡ ಮಹಾಯುತಿ ಮೈತ್ರಿಕೂಟವು ಹಿಂದಿನ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ಚುನಾವಣೆ ಎದುರಿಸಿತ್ತು. ಮಹಾರಾಷ್ಟ್ರದ ಒಟ್ಟು 288 ಸ್ಥಾನಗಳ ಪೈಕಿ ಮಹಾಯುತಿ 235 ಸ್ಥಾನಗಳನ್ನು ಗೆದ್ದಿತು. ಇದರಲ್ಲಿ, ಬಿಜೆಪಿ 132 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊಮ್ಮಿತು. ಚುನಾವಣೆಯನ್ನು ಏಕನಾಥ್ ಶಿಂಧೆ ನೇತೃತ್ವದಲ್ಲಿ ಎದುರಿಸಿದರೂ, ಚುನಾವಣೆ ಬಳಿಕ ಹೆಚ್ಚು ಸ್ಥಾನ ಗೆದ್ದಿದ್ದನ್ನು ಮುಂದಿಟ್ಟುಕೊಂಡು ಬಿಜೆಪಿಯೇ ಮುಖ್ಯಮಂತ್ರಿ ಹುದ್ದೆಯನ್ನು ತನ್ನ ತೆಕ್ಕೆಗೆ ತೆದುಕೊಂಡಿತು. ಬಿಜೆಪಿ ನಾಯಕ ದೇವೇಂದ್ರ ಫಡ್ಣವೀಸ್ ಅವರು ಮುಖ್ಯಮಂತ್ರಿಯಾದರೆ, ಏಕನಾಥ್ ಶಿಂಧೆಗೆ ಉಪ ಮುಖ್ಯಮಂತ್ರಿ ಹುದ್ದೆಯನ್ನು ದಯಪಾಲಿಸಿತು. ಪಾಲಿಗೆ ಬಂದದ್ದೇ ಪೇಪರ್‌ಮೆಂಟ್ ಎಂಬಂತೆ ಶಿಂಧೆ ಉಪಮುಖ್ಯಮಂತ್ರಿ ಹುದ್ದೆಗೆ ತೃಪ್ತಿಪಟ್ಟುಕೊಂಡರು.
ಇದೇ ರೀತಿ ಬಿಹಾರದಲ್ಲಿಯೂ ಮಾಡಲು ಬಿಜೆಪಿ ಬಯಸಿತ್ತು. ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷವು ಕಡಿಮೆ ಸ್ಥಾನಗಳಲ್ಲಿ ಗೆಲ್ಲುವಂತೆ ಮಾಡುವುದು, ಆ ಮೂಲಕ ಮುಖ್ಯಮಂತ್ರಿ ಹುದ್ದೆಯನ್ನು ನಿತೀಶ್ ಅವರಿಂದ ಕಸಿದುಕೊಂಡು, ಬಿಜೆಪಿಯಿಂದ ಹುದ್ದೆಗೆ ಯಾರನ್ನಾದರೂ ಪ್ರತಿಷ್ಠಾಪಿಸುವುದು ಬಿಜೆಪಿಯ ತಂತ್ರವಾಗಿತ್ತು. ಅದರಂತೆ, ಬಿಜೆಪಿಯೇ 89 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೂ, ಬಿಜೆಪಿಯ ಮುಖ್ಯಮಂತ್ರಿ ಹುದ್ದೆ ಕಸಿದುಕೊಳ್ಳುವ ತಂತ್ರ ನಿತೀಶ್ ಎದುರು ಫಲಿಸಿಲ್ಲ.
ಇದಕ್ಕೆ, ಎರಡು ಕಾರಣಗಳು ಮೇಲ್ನೋಟಕ್ಕೆ ಕಂಡುಬರುತ್ತವೆ. 1) ಬಿಜೆಪಿ ಮುಖ್ಯಮಂತ್ರಿ ಹುದ್ದೆಗೆ ಪಟ್ಟುಹಿಡಿದರೆ, ನಿತೀಶ್ ನಿರಾಯಾಸವಾಗಿ ಮೈತ್ರಿ ಬದಲಿಸಬಹುದು. ಅವರು 2022ರಲ್ಲಿ ಮಾಡಿದಂತೆ, ಮಹಾಘಟಬಂಧನ್ ಜೊತೆಗೂಡಿ ಸರ್ಕಾರ ರಚಿಸಬಹುದು. 2) ನಿತೀಶ್ ಎನ್‌ಡಿಎ ತೊರೆದರೆ, ಲೋಕಸಭೆಯಲ್ಲಿ ಮೋದಿ ಸರ್ಕಾರಕ್ಕೆ ಇರುವ ಬೆಂಬಲವನ್ನೂ ಜೆಡಿಯು ಹಿಂಪಡೆಯಬಹುದು. ಆ ಮೂಲಕ, ಕೇಂದ್ರದಲ್ಲಿ ಮೋದಿ ಸರ್ಕಾರವನ್ನೇ ಉರುಳಿಸಬಹುದು. ಇದು, ನಿತೀಶ್ ಅವರಿಂದ ಸಾಧ್ಯವಾಗದ ಕೆಲಸವೇನೂ ಅಲ್ಲ. ಹೀಗಾಗಿಯೇ, ಬಿಜೆಪಿ ನಿತೀಶ್ ಎದುರು ಹೆಚ್ಚು ಆಟವಾಡಲು, ತನ್ನ ತಂತ್ರಗಳನ್ನು ಪ್ರಯೋಗಿಸಲು ಮುಂದಾಗಲಿಲ್ಲ ಎಂಬುದು ಸ್ಪಷ್ಟ.
ಹೀಗಾಗಿಯೇ, ನಿತೀಶ್ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರೆಸಲು ಬಿಜೆಪಿ ಒಪ್ಪಿಕೊಂಡಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ನಿತೀಶ್ ಕುಮಾರ್ ಅವರು ಮುಂದಿನ ಸರ್ಕಾರದ ಸಚಿವ ಸಂಪುಟದಲ್ಲಿ ಯಾರಿರಬೇಕು ಎಂಬುದನ್ನು ಅಂತಿಮಗೊಳಿಸಿದ್ದಾರೆ. ಬಹುಶಃ ಬುಧವಾರ ಅಥವಾ ಗುರುವಾರ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಪ್ರಮಾಣವಚನ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ. ಪ್ರಧಾನಿ ಮೋದಿ ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗಲಿದ್ದು, ಅವರ ಸಮಯದ ಆಧಾರದ ಮೇಲೆ ಪ್ರಮಾನವಚನದ ಸಮಯ ನಿರ್ಧಾರವಾಗಲಿದೆ.
ಈ ಲೇಖನ ಓದಿದ್ದೀರಾ?: ʼವಂದೇ ಮಾತರಂ’ವಿವಾದ; ಪರಿವಾರ- ಪ್ರಧಾನಿ ಪೋಣಿಸಿದ ಸುಳ್ಳುಗಳ ಬೊಂತೆ
ನಿತೀಶ್ ಕುಮಾರ್ ಅವರು ಕಳೆದ 20 ವರ್ಷಗಳಲ್ಲಿ 10ನೇ ಬಾರಿಗೆ ಮುಖ್ಯಮಂತ್ರಿಯಾಗ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನೂತನ ಸರ್ಕಾರದ ಸಂಪುಟದಲ್ಲಿ ಬಿಜೆಪಿ ಸಿಂಹ ಪಾಲು ಪಡೆಯುವ ಸಾಧ್ಯತೆಯಿದೆ. ಬಿಜೆಪಿ ನಂತರ ಜೆಡಿಯುಗೆ ಹೆಚ್ಚಿನ ಸ್ಥಾನಗಳು ಹಾಗೂ ಸಣ್ಣ ಮಿತ್ರಪಕ್ಷಗಳಿಗೆ ಸಮಾಧಾನಕರ ಸ್ಥಾನಗಳು ದೊರೆಯುವ ನಿರೀಕ್ಷೆ ಇದೆ. ಸಂಪುಟ ರಚನೆಯ ಯೋಜನೆಯನ್ನು ಸರಾಗಗೊಳಿಸಲು ‘ಪ್ರತಿ ಆರು ಶಾಸಕರಿಗೆ ಒಬ್ಬ ಸಚಿವ’ ಎಂಬ ಸೂತ್ರವನ್ನು ಎನ್‌ಡಿಎ ಅನುಸರಿಸುತ್ತಿದೆ ಎನ್ನಲಾಗಿದೆ.
ಅದರಂತೆ, ಬಿಜೆಪಿ 15 ಅಥವಾ 16 ಸಚಿವ ಸ್ಥಾನಗಳನ್ನು, ಜೆಡಿಯು 14 ಸಚಿವ ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಜೊತೆಗೆ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಮೂರು ಸ್ಥಾನ, ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ರಾಜ್ಯಸಭಾ ಸಂಸದ ಉಪೇಂದ್ರ ಕುಶ್ವಾಹಾ ಅವರ ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ) ತಲಾ ಒಂದು ಸಚಿವ ಸ್ಥಾನ ಪಡೆದುಕೊಳ್ಳಬಹುದು.
ಪ್ರಮಾಣವಚನ ಸಮಾರಂಭದಲ್ಲಿ ಪ್ರಧಾನಿ ಮೋದಿ ಜೊತೆಗೆ, ಎನ್‌ಡಿಎ ಆಡಳಿತದ ರಾಜ್ಯಗಳ ಹಲವಾರು ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಮೈತ್ರಿಕೂಟಗಳ ಹಿರಿಯ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ. ಈ ಪ್ರಮಾಣವಚನ ಕಾರ್ಯಕ್ರಮವು, ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಎನ್‌ಡಿಎ ಮಿತ್ರಪಕ್ಷಗಳು ತಮ್ಮ ಏಕತೆ ಮತ್ತು ರಾಜಕೀಯ ಶಕ್ತಿಯನ್ನು ಪ್ರದರ್ಶಿಸಲು ವೇದಿಕೆಯಾಗುವ ಸಾಧ್ಯತೆಗಳಿವೆ.




