ರಾಜ್ಯದಲ್ಲಿ ಯಾವುದೇ ಮತದಾರರ ಹೆಸರುಗಳನ್ನು ಅಳಿಸಲು ಅಥವಾ ಯಾವುದೇ ನಕಲಿ ಹೆಸರುಗಳನ್ನು ಸೇರಿಸಲು ಪ್ರಯತ್ನಿಸಿದರೆ ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ಸಾರ್ವಜನಿಕವಾಗಿ ಥಳಿಸಲಾಗುವುದು ಎಂದು ತ್ರಿಪುರಾ ಕಾಂಗ್ರೆಸ್ ಶಾಸಕ ಸುದೀಪ್ ರಾಯ್ ಬರ್ಮನ್ ಭಾನುವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತ್ರಿಪುರಾದ ಅಗರ್ತಲಾದ ಇಂದ್ರಾನಗರದಲ್ಲಿ ಕಾಂಗ್ರೆಸ್‌ನ ಬೂತ್ ಮಟ್ಟದ ಏಜೆಂಟ್‌ಗಳಿಗೆ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಯ್ ಬರ್ಮನ್, “ಕಾಂಗ್ರೆಸ್ ಪಾರದರ್ಶಕ ಮತ್ತು ದೋಷ-ಮುಕ್ತ ಮತದಾರರ ಪಟ್ಟಿಯನ್ನು ಬಯಸುತ್ತದೆ. ಮಹಾರಾಷ್ಟ್ರ, ಬಿಹಾರ ಮತ್ತು ಹರಿಯಾಣದಲ್ಲಿ ನಡೆದ ಅಕ್ರಮವನ್ನು ತ್ರಿಪುರಾದಲ್ಲಿ ನಡೆಯಲು ಅವಕಾಶ ನೀಡುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ರಾಜ್ಯದಲ್ಲಿ 2026ಕ್ಕೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ: ಚುನಾವಣಾ ಆಯೋಗ
“ಮೃತ ಮತದಾರರು ಅಥವಾ ವಿದೇಶಿ ನಾಗರಿಕರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿದರೆ ಕಾಂಗ್ರೆಸ್‌ಗೆ ಯಾವುದೇ ಆಕ್ಷೇಪವಿಲ್ಲ. ನಕಲಿ ಹೆಸರು ಸೇರ್ಪಡೆ ಮಾಡುವ ಯಾವುದೇ ಅಕ್ರಮಗಳಿಗೆ ಅವಕಾಶ ನೀಡುವುದಿಲ್ಲ. ದೋಷ-ಮುಕ್ತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಚುನಾವಣಾ ಆಯೋಗದ ಕರ್ತವ್ಯ. ನಕಲಿ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಪ್ರಯತ್ನ ಮಾಡಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ರಾಯ್ ಬರ್ಮನ್ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ವಿಧಾನಸಭೆ ಚುನಾವಣೆ ನಡೆದ ಬಿಹಾರದಲ್ಲಿ ಈಗಾಗಲೇ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯನ್ನು ಚುನಾವಣಾ ಆಯೋಗ ನಡೆಸಿದ್ದು, 65 ಲಕ್ಷಕ್ಕೂ ಅಧಿಕ ಮಂದಿಯ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದೀಗ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಸದ್ಯ ಈ ಪ್ರಕ್ರಿಯೆ ವೇಳೆ ಒತ್ತಡಕ್ಕೆ ಒಳಗಾಗಿ ಹಲವು ಬಿಎಲ್‌ಒಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಹೃದಾಯಾಘಾತಕ್ಕೆ ಒಳಗಾಗಿದ್ದಾರೆ.





