ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಕಚೇರಿಯನ್ನು ಸ್ಫೋಟಿಸುವುದಾಗಿ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಇದರೊಂದಿಗೆ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.
ಬಾಂಬ್ ಬೆದರಿಕೆ ಸಂದೇಶ ಬರುತ್ತಿದ್ದಂತೆಯೇ ತಕ್ಷಣ ಪೊಲೀಸರು, ಬಾಂಬ್ ಪತ್ತೆ ದಳ ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ತೆರಳಿ ಶೋಧ ಕಾರ್ಯಾಚರಣೆ ನಡೆಸಿದೆ. ಡಿಸಿಎಂ ಮನೆ, ಕಚೇರಿ, ವಿಮಾನ ನಿಲ್ದಾನದಲ್ಲಿ ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸಿದ್ದು, ಇದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂದು ತಿಳಿದುಬಂದಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ವಾರಣಾಸಿ-ಬೆಂಗಳೂರು ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ; ಕೆನಡಾ ಪ್ರಜೆ ವಶಕ್ಕೆ
ಶನಿವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿತ್ತು. ವಿಮಾನ ನಿಲ್ದಾಣದ ಎರಡು ಟರ್ಮಿನಲ್‌ಗಳಲ್ಲಿ ನಾಲ್ಕು ಕಚ್ಚಾಬಾಂಬ್‌ಗಳನ್ನು(ಐಇಡಿ) ಇಡಲಾಗಿದೆ ಎಂದು ಇಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು. ಡಿಕೆಶಿ ಕಚೇರಿಯಲ್ಲಿಯೂ ಬಾಂಬ್ ಇಟ್ಟಿರುವುದಾಗಿ ಇಮೇಲ್‌ನಲ್ಲಿ ತಿಳಿಸಲಾಗಿತ್ತು ವರದಿಯಾಗಿದೆ.
ಒಂದು ಇಮೇಲ್ bhagwanthmann@yandex.com ಮೇಲ್‌ನಿಂದ ಬಂದಿದ್ದರೆ, ಮತ್ತೊಂದು ಇಮೇಲ್ ನಟಿಯೊಬ್ಬರ ಹೆಸರಿನ ಇಮೇಲ್ ಮೂಲಕ ಬಂದಿದೆ. ಎರಡೂ ನಕಲಿ ಇಮೇಲ್‌ಗಳು. ಕಿಡಿಗೇಡಿಗಳು ನಕಲಿ ಇಮೇಲ್ ಸೃಷ್ಟಿಸಿ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.





