ಎಲ್ಗಾರ್ ಪರಿಷತ್ – ಭೀಮಾ ಕೋರೆಗಾಂವ್ ಪ್ರಕರಣದಲ್ಲಿ 2020ರಿಂದ ಸೆರೆವಾಸದಲ್ಲಿದ್ದ ಸಾಮಾಜಿಕ ಕಾರ್ಯಕರ್ತರಾದ ರಮೇಶ್ ಗೈಚೋರ್ ಮತ್ತು ಸಾಗರ್ ಗೋರ್ಖೆಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.
ನ್ಯಾಯಮೂರ್ತಿ ಅಜಯ್ ಗಡ್ಕರಿ ಮತ್ತು ನ್ಯಾಯಮೂರ್ತಿ ಶ್ಯಾಮ್ ಚಂದಕ್ ಅವರ ವಿಭಾಗೀಯ ಪೀಠವು ಜಾಮೀನು ನೀಡಿದ್ದು, ವಿವರವಾದ ಆದೇಶ ಪ್ರತಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಇದನ್ನು ಓದಿದ್ದೀರಾ? ‘ಜೈ ಭೀಮ್’ ಪದದ ಸ್ವಾರಸ್ಯಕರ ಇತಿಹಾಸ ಬಲ್ಲಿರಾ?
ಕಬೀರ್ ಕಲಾ ಮಂಚ್‌ನ ಸದಸ್ಯರಾದ ಗೈಚೋರ್ ಮತ್ತು ಗೋರ್ಖೆ ಇಬ್ಬರನ್ನೂ 2020ರ ಸೆಪ್ಟೆಂಬರ್ 7ರಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿತ್ತು. 2017ರ ಡಿಸೆಂಬರ್ 31ರಂದು ಪುಣೆಯಲ್ಲಿ ನಡೆದ ಎಲ್ಗರ್ ಪರಿಷತ್ ಸಮಾವೇಶವನ್ನು ಆಯೋಜಿಸುವಲ್ಲಿ ಇಬ್ಬರೂ ಪ್ರಮುಖ ಪಾತ್ರ ವಹಿಸಿದ್ದರು. ಮಾವೋವಾದಿ ಸಿದ್ಧಾಂತವನ್ನು ಪ್ರಚಾರ ಮಾಡಲು, ಹಿಂಸಾಚಾರವನ್ನು ಪ್ರಚೋದಿಸಲು ಈ ಕಾರ್ಯಕ್ರಮವನ್ನು ಬಳಸಿಕೊಳ್ಳಲಾಗಿದೆ ಎಂದು ಎನ್‌ಐಎ ಆರೋಪವಾಗಿದೆ.
ಈ ಪ್ರಕರಣದಲ್ಲಿ 16 ಜನರನ್ನು ಬಂಧಿಸಿದ್ದು ಸದ್ಯ ಬಹುತೇಕರಿಗೆ ಜಾಮೀನು ಸಿಕ್ಕಂತಾಗಿದೆ. ಈಗ ವಕೀಲ ಸುರೇಂದ್ರ ಗ್ಯಾಡ್ಲಿಂಗ್ ಮಾತ್ರ ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ 84 ವರ್ಷದ ಮಾನವ ಹಕ್ಕು ಹೋರಾಟಗಾರ ಸ್ಟಾನ್ ಸ್ವಾಮಿ ಅವರು ವಿಚಾರಣಾಧೀನ ಕೈದಿಯಾಗಿದ್ದಾಗಲೇ 2021ರ ಜುಲೈನಲ್ಲಿ ನಿಧನರಾದರು.
ಪ್ರಕರಣದ ಇತರ ಆರೋಪಿಗಳಲ್ಲಿ ಕವಿ ವರವರ ರಾವ್, ಸಾಮಾಜಿಕ ಕಾರ್ಯಕರ್ತರಾದ ಸುಧಾ ಭಾರದ್ವಾಜ್, ಮಹೇಶ್ ರಾವತ್, ವೆರ್ನಾನ್ ಗೊನ್ಸಾಲ್ವೆಸ್, ಜ್ಯೋತಿ ಜಗ್ತಾವೊ, ಅರುಣ್ ಫೆರೇರಾ, ಶೋಮಾ ಸೇನ್, ಗೌತಮ್ ನವಲಖಾ, ರೋನಾ ವಿಲ್ಸನ್, ಆನಂದ್ ತೇಲ್ತುಂಬ್ಡೆ ಮತ್ತು ಸುಧೀರ್ ಧವಲೆ ಸೇರಿದ್ದಾರೆ.
ಈ ಪ್ರಕರಣದಲ್ಲಿ ಬಂಧಿತರಾದ 16 ಮಂದಿಯಲ್ಲಿ ಬಹುತೇಕರು ಏಳು ವರ್ಷಗಳಿಗಿಂತ ಅಧಿಕ ಕಾಲ ವಿಚಾರಣೆಯಿಲ್ಲದೆ ಜೈಲಿನಲ್ಲಿದ್ದರು. ವಿಚಾರಣೆ ನಡೆಸದೆಯೇ ಜೈಲಿನಲ್ಲಿ ಇರಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.





