ಕೇರಳದ ರಾಜಧಾನಿ ತಿರುವನಂತಪುರಂ ಕಾರ್ಪೋರೇಷನ್ ನ್ನು ಗೆದ್ದು ದಾಖಲೆ ಸ್ಥಾಪಿಸಿದೆ ಬಿಜೆಪಿ. ಸತತ 45 ವರ್ಷಗಳ ಎಡರಂಗದ ಆಳ್ವಿಕೆಯನ್ನು ಅಂತ್ಯಗೊಳಿಸಿದೆ. ಈ ಗೆಲುವು ಆಕಸ್ಮಿಕ ಅಲ್ಲ.
101 ವಾರ್ಡುಗಳ ಪೈಕಿ ಬಿಜೆಪಿ ನೇತೃತ್ವದ ಎನ್.ಡಿ.ಎ. 50 ವಾರ್ಡುಗಳನ್ನು ಗೆದ್ದುಕೊಂಡಿದೆ. ಎಡರಂಗಕ್ಕೆ 29 ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ 19 ವಾರ್ಡುಗಳಲ್ಲಿ ಗೆಲುವು ದಕ್ಕಿದೆ. ಎರಡು ಸೀಟುಗಳು ಪಕ್ಷೇತರರ ಪಾಲಾಗಿವೆ. ಹುರಿಯಾಳುವಿನ ನಿಧನದ ಕಾರಣ ಒಂದು ವಾರ್ಡಿನ ಚುನಾವಣೆ ಮುಂದೆ ಹೋಗಿದೆ.
ತಿರುವನಂತಪುರಂ ಜಿಲ್ಲೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಕಳೆದ ನಲವತ್ತು ವರ್ಷಗಳಿಂದ ಸತತ ಶ್ರಮ ಹಾಕುತ್ತ ಬಂದಿದೆ. ಹಿಂದುತ್ವ ಮತಗಳನ್ನು ಸಂಪಾದಿಸಿದೆ.
ರಾಜಧಾನಿಯಲ್ಲಿ ಆರೆಸ್ಸೆಸ್ ಬಲವಾದ ಜಾಲವನ್ನು ಹೆಣೆದಿದೆ. ಕಾಳಕೂಟಂ, ನೆಮೋಮ್ ಹಾಗೂ ಓಲ್ಡ್ ಫೋರ್ಟ್ ಪ್ರದೇಶಗಳು ಆರೆಸ್ಸೆಸ್ ಭದ್ರಕೋಟೆಗಳೇ ಆಗಿ ಪರಿಣಮಿಸಿವೆ.
2009ರ ಲೋಕಸಭಾ ಚುನಾವಣೆಗಳು ನಡೆದಾಗಿನಿಂದ ಬಿಜೆಪಿ ಬೆಂಬಲ ಗಗನಕ್ಕೆ ಜಿಗಿದಿದೆ. 2014ರಲ್ಲಿ ಶೇ.11ರಷ್ಟು ಮತಗಳನ್ನು ಹೊಂದಿದ್ದ ಕೇಸರಿ ಪಕ್ಷ 2009ರಲ್ಲಿ ಈ ಪ್ರಮಾಣವನ್ನು ಶೇ.32ಕ್ಕೆ ಹೆಚ್ಚಿಸಿಕೊಂಡಿತು. 2016ರಲ್ಲಿ ಕೇರಳದಿಂದ ಆಯ್ಕೆಯಾದ ಮೊದಲ ಶಾಸಕರೆನಿಸಿದರು ಓ.ರಾಜಗೋಪಾಲ್. ಸ್ಥಳೀಯ ಸಂಸ್ಥೆಗಳಲ್ಲೂ ಇದೇ ಯಶಸ್ಸು ಕಂಡಿದೆ. 2010ರಲ್ಲಿ ಬಿಜೆಪಿಯ ಆರು ಮಂದಿ ಕೌನ್ಸಿಲರ್ ಗಳಿದ್ದರು. ಈ ಸಂಖ್ಯೆ 2015ರ ಹೊತ್ತಿಗೆ 35 ಮುಟ್ಟಿತು. ಅಧಿಕೃತ ಪ್ರತಿಪಕ್ಷ ಎನಿಸಿಕೊಂಡಿತು.
ತಿರುವನಂತಪುರಂ ಶೇ.60ರಷ್ಟು ಹಿಂದು ಮತಗಳನ್ನು (ಬಹುತೇಕ ನಾಯರ್ ಮತ್ತು ಎಳವಾ -ಈಡಿಗ) ಹೊಂದಿದೆ. ಸರ್ಕಾರಿ ನೌಕರರೇ ಹೆಚ್ಚಾಗಿರುವ ತಿರುವನಂತಪುರದಲ್ಲಿ ಮಧ್ಯಮವರ್ಗವೇ ನಿರ್ಣಾಯಕ. ಈ ವರ್ಗ ಬಿಜೆಪಿಯತ್ತ ಒಲವು ಹೊಂದಿದೆ.
ರಾಜ್ಯ ಬಿಜೆಪಿಯು ಅಭಿವೃದ್ಧಿ ರಾಜಕಾರಣದ ಪ್ರಚಾರವನ್ನೂ, ಈವರೆಗೆ ಮೇಯರ್ ಆಗಿದ್ದ ಸಿಪಿಐಎಂ ನ ಆರ್ಯ ರಾಜೇಂದ್ರನ್ ಭ್ರಷ್ಟರು ಎಂಬ ಅಪಪ್ರಚಾರವನ್ನೂ ಯಶಸ್ವಿಯಾಗಿ ನಡೆಸಿತು.




