ಗ್ಯಾರಂಟಿ ಯೋಜನೆಗಳು ಮುಂದುವರೆಯಬೇಕು. ಅದಕ್ಕೆ ಬೇಕಿರುವ ಸಂಪನ್ಮೂಲಗಳನ್ನು ನೀವು ಸರ್ಕಾರದ ಭ್ರಷ್ಟಾಚಾರ ನಿಗ್ರಹ, ಐಷಾರಾಮಿ ವೆಚ್ಚಗಳ ಕಡಿತ, ಶ್ರೀಮಂತ ವರ್ಗಗಳ ವಿಲಾಸಿ ವೆಚ್ಚಗಳ ಮೇಲೆ ತೆರಿಗೆ, ಶುಲ್ಕ ದಂಡಗಳ ಮೂಲಕ ಸಂಗ್ರಹಿಸಬೇಕೇ ವಿನಾ ಮೋದಿ ಮಾಡಿದಂತೇ… ಬಡವರು ಕಡಿಮೆಯಾಗಿದ್ದಾರೆ. ಬಡತನ ಕಡಿಮೆಯಾಗಿದೆ ಎಂದು ಸುಳ್ಳು ಹೇಳಬಾರದಲ್ಲವೇ?
ಮುಖ್ಯಮಂತ್ರಿಗಳೇ, ದೇಶದಲ್ಲಿ ಬಡತನ ಕಡಿಮೆಯಾಗಿದೆ ಎಂಬ ಮೋದಿ ಸರ್ಕಾರದ NiTi ಆಯೋಗದ ಸುಳ್ಳನ್ನು ನೀವು ಸಮರ್ಥಿಸುತ್ತಿರುವುದೇಕೆ? ಅಥವಾ ಇದು ಗ್ಯಾರಂಟಿ ವೆಚ್ಚ ಕಡಿತದ ಮತ್ತೊಂದು ಹುನ್ನಾರವೇ?
ಮಾನ್ಯ ಮುಖ್ಯಮಂತ್ರಿಗಳೇ, ನಿನ್ನೆ ಅನರ್ಹರ BPL ಕಾರ್ಡು ರದ್ದು ಮಾಡಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟು ಆದೇಶ ಕೊಟ್ಟಿದ್ದೀರಿ. ಆ ಆದೇಶ ಕೊಡುವಾಗ, NiTi ಆಯೋಗದ ಪ್ರಕಾರ ರಾಜ್ಯದಲ್ಲಿ ಬಡತನ ಕಡಿಮೆಯಾಗಿದ್ದರೂ BPL ಕಾರ್ಡುಗಳ ಪ್ರಮಾಣ ಕಡಿಮೆಯಾಗದಿರಲು ಕಾರಣವೇನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದೀರಿ.
ಹಾಗಿದ್ದಲ್ಲಿ ಮೋದಿ ಅವಧಿಯಲ್ಲಿ ದೇಶದಲ್ಲಿ ಬಡತನವು ಶೇ. 25ರಿಂದ ಶೇ. 8ಕ್ಕೆ ಇಳಿದಿದೆ ಎಂಬ NiTi ಆಯೋಗದ ಹಾಗೂ ಕೇಂದ್ರ ಸರ್ಕಾರದ ದುರುದ್ದೇಶದ ಸುಳ್ಳು ಪ್ರಚಾರವನ್ನು ನೀವು ಒಪ್ಪಿಕೊಳ್ಳುತ್ತೀರಾ ಮುಖ್ಯಮಂತ್ರಿಗಳೇ?
ದೇಶದಲ್ಲಿ ಬಡತನ ಕಡಿಮೆಯಾಗಿದೆ ಎಂಬ ಬಿಜೆಪಿಯ ಪ್ರಚಾರ ಹಸಿಹಸಿ ಸುಳ್ಳು ಎಂಬುದಕ್ಕೆ ಯಾವ ಹೊಸ ನಿದರ್ಶನವೂ ಬೇಕಿಲ್ಲ. ದೇಶದಲ್ಲಿ ಆ ಪ್ರಮಾಣದಲ್ಲಿ ಬಡತನ ಕಡಿಮೆ ಆಗಿದ್ದರೆ ಮೋದಿ ಸರ್ಕಾರ ದೇಶದ 80 ಕೋಟಿ ಬಡವರಿಗೆ ಮುಂದಿನ ಐದು ವರ್ಷಗಳವರೆಗೆ ತಿಂಗಳಿಗೆ 5 ಕೆಜಿ ಆಹಾರ ಧಾನ್ಯ ಕೊಡುವ ಗರೀಬ್ ಕಲ್ಯಾಣ ಯೋಜನೆ ಮುಂದುವರೆಸುತ್ತಿರುವುದೇಕೆ ಎಂದು ದೇಶದ ಪ್ರಜ್ಞಾವಂತರು ಕೇಳುತ್ತಲೇ ಇದ್ದಾರೆ. ಕಾಂಗ್ರೆಸ್ ಕೂಡ ಕೇಳುತ್ತಾ ಬಂದಿದೆ.
ಆದರೆ ನಿನ್ನೆ ನೀವು ಅದಕ್ಕೆ ವ್ಯತಿರಿಕ್ತವಾಗಿ NiTi ಆಯೋಗದ ಹೇಳಿಕೆಯನ್ನು ಎತ್ತಿಹಿಡಿದಿದ್ದು ಏಕೆ?
ಅದೇ ಉಸಿರಿನಲ್ಲಿ ತಮಿಳುನಾಡಿನಲ್ಲಿ ಶೇ. 40 ರಷ್ಟು ಮಾತ್ರ BPL ಫಲಾನುಭವಿಗಳಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಶೇ. 80 ರಷ್ಟು BPL ಫಲಾನುಭವಿಗಳೇಕೆ? ಎಂದು ಅಧಿಕಾರಿಗಳನ್ನು ಕೇಳಿದ್ದೀರಿ. ಇದು BPL ಫಲಾನುಭವಿಗಳ ಪ್ರಮಾಣವನ್ನು ರಾಜ್ಯದಲ್ಲಿ ಅರ್ಧಕ್ಕರ್ಧ ಇಳಿಸಬೇಕೆಂದು ಅಧಿಕಾರಿಗಳಿಗೆ ಕೊಟ್ಟಿರುವ ಪರೋಕ್ಷ ಸೂಚನೆಯೇ? ಇದರ ಹಿಂದೆ ಗ್ಯಾರಂಟಿ ವೆಚ್ಚಗಳನ್ನು ಶತಾಯ ಗತಾಯ ಕಡಿಮೆ ಮಾಡಿಕೊಳ್ಳುವ ಉದ್ದೇಶವಿದೆಯೇ?
ಏಕೆಂದರೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳು BPL ಫಲಾನುಭವಿಗಳಿಗೆ ಮಾತ್ರ ದಕ್ಕುತ್ತದೆ. ಹೀಗಾಗಿ ನಿನ್ನೆಯ ನಿಮ್ಮ ಸೂಚನೆ BPL ಸಂಖ್ಯೆಯನ್ನು ಅರ್ಧಕ್ಕರ್ಧ ಇಳಿಸುವ ಮೂಲಕ ಗ್ಯಾರಂಟಿ ವೆಚ್ಚಗಳನ್ನು ಕಡಿಮೆಮಾಡಿಕೊಳ್ಳುವ ಮತ್ತೊಂದು ಪ್ರಯತ್ನವೇ?
ಹಾಗಿದ್ದಲ್ಲಿ ಇದು ಲೋಕಸಭಾ ಚುನಾವಣೆಯ ಅನಂತರ ನಿಮ್ಮ ಸರ್ಕಾರ ಗ್ಯಾರಂಟಿ ಯೋಜನೆಯನ್ನು ಅಥವಾ ಅದರ ಮೇಲಿನ ವೆಚ್ಚವನ್ನು ಕಡಿತಗೊಳಿಸಲು ಬಡಜನರ ಮೇಲೆ ಸಿಹಿಮಾತಿನ ಮೂಲಕ ನಡೆಸಿರುವ ಸಮರದ (ಪೆಟ್ರೋಲ್ ಬೆಲೆ ಏರಿಕೆ, ಹಾಲಿನ ದರ ಏರಿಕೆ, SC-TSP ನಿಧಿಯ diversion ಇತ್ಯಾದಿ) ಮುಂದುವರೆದ ಭಾಗವೇ?
ಇದರ ಅರ್ಥ ಬಿಪಿಎಲ್ ಯೋಜನೆಯ ಫಲವನ್ನು ಕೆಲವು ಅನರ್ಹರು ಪಡೆದುಕೊಳ್ಳುತ್ತಿಲ್ಲ ಎಂದಲ್ಲ. ಆದರೆ ಸೋರಿಕೆಯನ್ನು ತಡೆಯುವ ದೃಷ್ಟಿಯಿಂದ ಜನಕಲ್ಯಾಣ ಯೋಜನೆಗಳನ್ನು Targetted ಮಾಡಿದಾಗ ಹಾಗೂ ತಂತ್ರಜ್ಞಾಧಾರಿತ ಷರತ್ತುಗಳನ್ನು ವಿಧಿಸಿದಾಗ ನೈಜ ಫಲಾನುಭವಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಹೊರದೂಡಲ್ಪಡುತ್ತಾರೆ. ಯೋಜನೆಗಳನ್ನು Universal ಮಾಡಿದಾಗ ಅನರ್ಹರೂ ಅದರ ಲಾಭವನ್ನು ಪಡೆದುಕೊಂಡರೂ ಅರ್ಹರು ಯಾರೂ ಹೊರಗುಳಿಯುವುದಿಲ್ಲ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹಳಿ ತಪ್ಪುತ್ತಿದೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ?
ಹೀಗಾಗಿ ಅನರ್ಹರಿದ್ದರೂ ನೈಜ ಫಲಾನುಭವಿಗಳಿಗೆ ಷರತ್ತುಗಳನ್ನು ವಿಧಿಸದೆ ಸೌಕರ್ಯ ಒದಗಿಸುವ Universal ವ್ಯವಸ್ಥೆಯನ್ನು ಅನುಸರಿಸಬೇಕೆಂದು ಈ ಹಿಂದೆ ಪ್ರಗತಿಪರರು ಸಕಾರಣವಾಗಿ ಮೋದಿ ಸರ್ಕಾರಕ್ಕೆ ಒತ್ತಾಯಿಸಿದ್ದರು.
ಈಗ ಸಿದ್ದರಾಮಯ್ಯನವರ ಸರ್ಕಾರ ಮತ್ತೊಮ್ಮೆ ಮೋದಿ ಮಾರ್ಗ ಹಿಡಿದು ಮೋದಿಯಂತೆ ಬಡತನ ಕಡಿಮೆಯಾಗಿದೆ ಎಂಬ ರಾಗ ಹಾಡುತ್ತಿದ್ದಾರೆ.
ಕಾಂಗ್ರೆಸ್ ಹಿತವನ್ನಲ್ಲದೆ, ಜನ ಹಿತವನ್ನು ಕಾಳಜಿಯನ್ನಾಗಿಸಿಕೊಂಡಿರುವ ಪ್ರಗತಿಪರರು ಈಗ ಸಿದ್ಧು ಸರ್ಕಾರದ ಈ ಧೋರಣೆಯನ್ನು ವಿರೋಧಿಸಬೇಕಲ್ಲವೇ? ಇದೆ ನೀತಿ ಮತ್ತು ತರ್ಕಗಳನ್ನು ಬಿಜೆಪಿ ಮಾಡಿದಾಗ ಮಾತ್ರ ವಿರೋಧಿಸಿ ಕಾಂಗ್ರೆಸ್ ಮಾಡಿದಾಗ ಮೌನವಾಗುಳಿಯುವುದರಿಂದ ಪ್ರಗತಿಪರರ ನೈತಿಕತೆ ಪ್ರಶ್ನಾರ್ಹವಾಗುವುದಿಲ್ಲವೇ? ಆಗ ವಂಚಿತ ಜನರಿಗೆ ಬಿಜೆಪಿಯ ಸೋಗಲಾಡಿ ಮತ್ತು ದುರುದ್ದೇಶದ ವಿರೋಧವೇ ಆಪ್ತವೆನಿಸತೊಡಗುವುದಿಲ್ಲವೇ? ಆಗ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ಸಿಗೆ ಬೆಂಬಲವೆಂಬ ಪ್ರಗತಿಪರರ ನೈಜ ಉದ್ದೇಶಕ್ಕೂ ಭಂಗ ಬರುವುದಿಲ್ಲವೇ?
ಮುಖ್ಯಮಂತ್ರಿಗಳೇ, ಗ್ಯಾರಂಟಿ ಯೋಜನೆಗಳು ಮುಂದುವರೆಯಬೇಕು. ಅದಕ್ಕೆ ಬೇಕಿರುವ ಸಂಪನ್ಮೂಲಗಳನ್ನು ನೀವು ಸರ್ಕಾರದ ಭ್ರಷ್ಟಾಚಾರ ನಿಗ್ರಹ, ಐಷಾರಾಮಿ ವೆಚ್ಚಗಳ ಕಡಿತ, ಶ್ರೀಮಂತ ವರ್ಗಗಳ ವಿಲಾಸಿ ವೆಚ್ಚಗಳ ಮೇಲೆ ತೆರಿಗೆ, ಶುಲ್ಕ ದಂಡಗಳ ಮೂಲಕ ಸಂಗ್ರಹಿಸಬೇಕೇ ವಿನಾ ಮೋದಿ ಮಾಡಿದಂತೇ… ಬಡವರು ಕಡಿಮೆಯಾಗಿದ್ದಾರೆ. ಬಡತನ ಕಡಿಮೆಯಾಗಿದೆ ಎಂದು ಸುಳ್ಳು ಹೇಳಬಾರದಲ್ಲವೇ?
-ಶಿವಸುಂದರ್





