ನಿಮ್ಮ ಮನೆಯ ಹೆಣ್ಣು ಮಕ್ಕಳು ಹಿಂದೂಯೇತರರ ಮನೆಗೆ ಹೋದರೆ, ನಿಮ್ಮ ಮಾತು ಕೇಳದಿದ್ದರೆ ಅವರ ಕಾಲು ಮುರಿಯಿರಿ ಎಂದು ಭೋಪಾಲ್‌ನ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಈ ನಡುವೆ ಭಾರತೀಯ ಜನತಾ ಪಕ್ಷ(ಬಿಜೆಪಿ) ದ್ವೇಷ ಹರಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ತಿಂಗಳ ಆರಂಭದಲ್ಲಿ ಭೋಪಾಲ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಠಾಕೂರ್, ಹೆಣ್ಣುಮಕ್ಕಳು ತಮ್ಮ (ಪೋಷಕರ) ಇಚ್ಛೆಗೆ ವಿರುದ್ಧವಾಗಿ ವರ್ತಿಸಿದರೆ ದೈಹಿಕವಾಗಿ ಶಿಕ್ಷಿಸುವಂತೆ ಪೋಷಕರಿಗೆ ಕರೆ ನೀಡಿದ್ದಾರೆ. ಇದರ ವಿಡಿಯೋ ಸದ್ಯ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಸದ್ಯ ವೈರಲ್ ಆಗುತ್ತಿದೆ.
ಇದನ್ನು ಓದಿದ್ದೀರಾ? ಪಹಲ್ಗಾಮ್ ದಾಳಿಯನ್ನು ‘ಹಿಂದೂಗಳ ಮೇಲೆ ಮುಸ್ಲಿಮರ ದಾಳಿ’ ಎಂದು ಕರೆಯಬೇಕು: ಪ್ರಗ್ಯಾ ಠಾಕೂರ್
“ನಿಮ್ಮ ಮನಸ್ಸನ್ನು ಬಲಪಡಿಸಿಕೊಳ್ಳಿ. ನಮ್ಮ ಹೆಣ್ಣು ಮಕ್ಕಳು ನಮ್ಮ ಮಾತನ್ನು ಕೇಳದಿದ್ದರೆ, ಆಕೆ ಹಿಂದೂಯೇತರರ ಮನೆಗೆ ಹೋದರೆ, ಆಕೆಯ ಕಾಲುಗಳನ್ನು ಮುರಿಯಿರಿ. ಈ ಬಗ್ಗೆ ಯೋಚಿಸುವಾಗ ಹಿಂದೆ ಮುಂದೆ ನೋಡಬೇಡಿ” ಎಂದು ಹೇಳಿದ್ದಾರೆ.
“ಪೋಷಕರ ಮಾತು ಕೇಳದವರ, ವಿಧೇಯರಾಗಿರವರಿಗೆ ಶಿಕ್ಷೆ ನೀಡಬೇಕು. ಮಕ್ಕಳ ಒಳಿತಿಗಾಗಿ ಅವರಿಗೆ ಹೊಡೆಯುವುದರಲ್ಲಿ ತಪ್ಪೇನಿಲ್ಲ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ನಾವು ಕೆಲವೊಮ್ಮೆ ಅವರನ್ನು ಶಿಕ್ಷಿಸಬೇಕಾಗುತ್ತದೆ. ನಮ್ಮ ಹೆಣ್ಣು ಮಕ್ಕಳ ದೇಹ ತುಂಡು ತುಂಡಾಗಿ ಸಾಯುವಂತಾಗುವುದನ್ನು ತಡೆಯಲಾಗದು” ಎಂದಿದ್ದಾರೆ.
“ಮೌಲ್ಯಗಳನ್ನು ಅನುಸರಿಸದ, ಪೋಷಕರ ಮಾತನ್ನು ಕೇಳದ, ಹಿರಿಯರನ್ನು ಗೌರವಿಸದ ಮತ್ತು ಮನೆಯಿಂದ ಓಡಿಹೋಗಲು ಸಿದ್ಧರಾಗಿರುವ ಅಂತಹ ಹುಡುಗಿಯರ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ಅವರನ್ನು ಮನೆಯಿಂದ ಹೊರಗೆ ಹೋಗಲು ಬಿಡಬೇಡಿ. ಅವರಿಗೆ ಹೊಡೆಯುವ ಮೂಲಕ, ಅವರಿಗೆ ಬುದ್ಧಿ ಹೇಳುವ ಮೂಲಕ, ಅವರನ್ನು ಪ್ರೀತಿಸುವ ಅಥವಾ ಬೈಯುವ ಮೂಲಕ ಅವರನ್ನು ತಡೆಯಿರಿ” ಎಂದು ಹೇಳಿದ್ದಾರೆ.
ಪ್ರಜ್ಞಾ ಠಾಕೂರ್ ಅವರ ಈ ಹೇಳಿಕೆಯು ತೀವ್ರ ವಿವಾದಕ್ಕೆ ಕಾರಣವಾಗಿದೆ. “ಮಧ್ಯಪ್ರದೇಶದಲ್ಲಿ ಏಳು ಧಾರ್ಮಿಕ ಮತಾಂತರ ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದ್ದಾಗ ಇಷ್ಟೊಂದು ಸದ್ದು ಮತ್ತು ದ್ವೇಷ ಹರಡುತ್ತಿರುವುದು ಏಕೆ” ಎಂದು ಕಾಂಗ್ರೆಸ್ ವಕ್ತಾರ ಭೂಪೇಂದ್ರ ಗುಪ್ತಾ ಪ್ರಶ್ನಿಸಿದ್ದಾರೆ. ಈ ಹಿಂದೆಯೂ ಹಲವು ಬಾರಿ ಪ್ರಜ್ಞಾ ಅವರು ವಿವಾದಾತ್ಮಕ, ಧ್ವೇಷ ಭಾಷಣ ಮಾಡಿದ್ದಾರೆ.





