ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿಗೆ ಬ್ರೇಕ್ ಹಾಕಲು ಲೋಕಸಭಾ ಚುನಾವಣೆಯ ಸಮಯದಲ್ಲಿ ಒಗ್ಗೂಟಿದ್ದ ಬಿಜೆಪಿ-ಜೆಡಿಎಸ್ ಮೈತ್ರಿಯು ಈಗ ಮತ್ತೆ ಮುರಿದುಬೀಳುವ ಸಾಧ್ಯತೆ ದಟ್ಟವಾಗಿದೆ. ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರು ಸ್ಥಳೀಯ ಚುನಾವಣೆಗಳಲ್ಲಿ ತಮ್ಮ ಪಕ್ಷವು ಬಿಜೆಪಿ ಜೊತೆ ಮೈತ್ರಿಯಲ್ಲಿ ಸ್ಪರ್ಧಿಸುವುದು ಕಷ್ಟವೆಂದು ಹೇಳಿದ್ದಾರೆ. ಈ ಹೇಳಿಕೆ ಬಿಜೆಪಿ ಜೊತೆಗಿನ ಮೈತ್ರಿ ತೊರೆಯುವ ಮುನ್ಸೂಚನೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ.
2026ರಲ್ಲಿ, ಕರ್ನಾಟಕದಲ್ಲಿ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಪ್ರಮುಖ ಪಕ್ಷಗಳಾದ ಆಡಳಿತಾರೂಢ ಕಾಂಗ್ರೆಸ್, ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ತೊಡಗುತ್ತಿವೆ. ಇದೇ ಸಮಯದಲ್ಲಿ, ‘ಈ ಎಲ್ಲ ಸ್ಥಳೀಯ ಚುನಾವಣೆಗಳಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಆದರೆ, ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಮೈತ್ರಿ ಮುಂದುವರಿಯಲಿದೆ’ ಎಂದು ದೇವೇಗೌಡರು ಹೇಳಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಎದುರಾಳಿಗಳಾಗಿ ಸ್ಪರ್ಧಿಸಲಿರುವ ಬಿಜೆಪಿ-ಜೆಡಿಎಸ್ ಮೈತ್ರಿಯು ಈ ಚುನಾವಣೆಗಳ ನಂತರ ಉಳಿಯುವುದು ಸುಲಭವಲ್ಲ ಎಂಬ ಅಭಿಪ್ರಾಯಗಳೂ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಅಂದಹಾಗೆ, ಜೆಡಿಎಸ್ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದು, ನಂತರ ಮುರಿಯುವುದು ಇದೇ ಮೊದಲೇನೂ ಅಲ್ಲ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು 2006ರಲ್ಲಿ ಮೊದಲ ಬಾರಿಗೆ ಮೈತ್ರಿ ಮಾಡಿಕೊಂಡಿದ್ದವು. ಅಂದಿನ ವಿಧಾನಸಭಾ ಚುನಾವಣೆಯ ಫಲಿತಾಂಶವು ಅಂತಂತ್ರ ವಿಧಾನಸಭೆಯನ್ನು ಸೂಚಿಸಿತ್ತು. ಪರಿಣಾಮ, ಎರಡೂ ಪಕ್ಷಗಳು ಸಮಾನ ಅವಧಿಯ (2.5 ವರ್ಷ) ಅಧಿಕಾರದೊಂದಿಗೆ ಸರ್ಕಾರ ರಚಿಸುವ ಒಪ್ಪಂದ ಮಾಡಿಕೊಂಡಿದ್ದವು. ಅದರಂತೆ, ಎಚ್.ಡಿ ಕುಮಾರಸ್ವಾಮಿ ಅವರು ಮೊದಲ 20 ತಿಂಗಳ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ, ತಮ್ಮ ಅವಧಿ ಮುಗಿದ ಬಳಿಕ ಅಧಿಕಾರ ಹಸ್ತಾಂತರ ಮಾಡಲು ನಿರಾಕರಿಸಿದರು. ಪರಿಣಾಮ, 2007ರಲ್ಲಿ ಮೈತ್ರಿ ಮುರಿದುಬಿದ್ದಿತು.
ಕುಮಾರಸ್ವಾಮಿ ಅವರು ಬಿಜೆಪಿಗೆ ಅದರಲ್ಲೂ ಬಿ.ಎಸ್ ಯಡಿಯೂರಪ್ಪ ಅವರಿಗೆ ನಂಬಿಕೆದ್ರೋಹ ಮಾಡಿದರು ಎಂಬುದಾಗಿ ಬಿಜೆಪಿ ರಾಜ್ಯದುದ್ದಗಲಕ್ಕೂ ಪ್ರಚಾರ ಮಾಡಿತು. ಇದು ಬಿಜೆಪಿ ಪರವಾದ ಭಾವನಾತ್ಮಕ ಅಲೆಯನ್ನೂ ಮೂಡಿಸಿತು. 2008ರ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೇರಿತು.
ಆನಂತರ, 2018ರಲ್ಲಿ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿತು. ಆದರೆ, 2019ರಲ್ಲಿ ಅಪರೇಷನ್ ಕಮಲಕ್ಕೆ ಸರ್ಕಾರ ಬಲಿಯಾಯಿತು. ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಹೊತ್ತೊಯ್ದ ಬಿಜೆಪಿ ಅಧಿಕಾರಕ್ಕೇರಿತು. ಅದಕ್ಕೂ ಮುನ್ನ ನಡೆದ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಸ್ಪರ್ಧಿಸಿದವು. ಆದಾಗ್ಯೂ, ಆಂತರಿಕ ತಿಕ್ಕಾಟ ಮತ್ತು ಒಳ ರಾಜಕಾರಣದಿಂದಾಗಿ, ಎರಡೂ ಪಕ್ಷಗಳು ಹೀನಾಯವಾಗಿ ಸೋಲುಂಡವು. ಮೈತ್ರಿ ಅಭ್ಯರ್ಥಿಗಳನ್ನು ಪರಸ್ಪರರೇ ಸೋಲಿಸಿದರು ಎಂಬ ಆರೋಪಗಳೂ ಮುನ್ನೆಲೆಗೆ ಬಂದವು.
ಅಂತಿಮವಾಗಿ, ಮೈತ್ರಿ ಸರ್ಕಾರ ಬೀಳುತ್ತಿದ್ದಂತೆಯೇ, ಮೈತ್ರಿಯೂ ಮುರಿದುಕೊಂಡಿತು. ಎರಡೂ ಪಕ್ಷಗಳ ನಾಯಕರು ಪರಸ್ಪರರ ವಿರುದ್ಧ ಬಹಿರಂಗ ಹೇಳಿಕೆಗಳು, ಆರೋಪಗಳು, ವಾಗ್ದಾಳಿಗಳನ್ನು ನಡೆಸಲಾರಂಭಿಸಿದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 19 ಸ್ಥಾನಗಳೊಂದಿಗೆ ಕಳಪೆ ಪ್ರದರ್ಶನ ತೋರಿದ ಜೆಡಿಎಸ್, ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಜೊತೆ ಕೈಜೋಡಿಸಿತು. ಜೆಡಿಎಸ್‌ನಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ಎಚ್.ಡಿ ಕುಮಾರಸ್ವಾಮಿ ಅವರಿಗೆ ಕೇಂದ್ರ ಸರ್ಕಾರದಲ್ಲಿ ಮಂತ್ರಿಗಿರಿಯನ್ನೂ ಬಿಜೆಪಿ ದಯಪಾಲಿಸಿದೆ. ಕುಮಾರಸ್ವಾಮಿ ಅವರು ಮಂತ್ರಿಗಿರಿ ಅನುಭವಿಸುತ್ತಿದ್ದಾರೆ.
ಇದೀಗ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರು ಮತ್ತೆ ಮೈತ್ರಿಗೆ ಅಲ್ಪವಿರಾಮ ಹಾಕುವ ಮಾತನಾಡುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳೂ ಇವೆ. ಮುಖ್ಯವಾಗಿ, ದೇವೇಗೌಡರ ಪ್ರೀತಿಯ ಮೊಮ್ಮಗ ಪ್ರಜ್ವಲ್ ರೇವಣ್ಣ ಸಂಸದನಾಗಿದ್ದಾಗ ನಡೆಸಿದ ಲೈಂಗಿಕ ಹಗರಣದಲ್ಲಿ ಸಿಕ್ಕಿಬಿದ್ದು, ಜೈಲು ಸೇರಿಸಿದ್ದಾರೆ. ಇನ್ನು, ಕುಮಾರಸ್ವಾಮಿ ಅವರ ವಿರುದ್ಧ ಭೂ ಅತಿಕ್ರಮಣ ಆರೋಪಗಳು ಕೇಳಿಬಂದಾಗಲೂ ಬಿಜೆಪಿ ಮೌನಕ್ಕೆ ಜಾರಿತ್ತು. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಮೈಸೂರಿಗೆ ಬಿಜೆಪಿ ಆಯೋಜಿಸಿದ್ದ ಪಾದಯಾತ್ರೆಯಿಂದ ಅಂತರ ಕಾಯ್ದುಕೊಳ್ಳುವ ಹೇಳಿಕೆ ನೀಡಿದ್ದ ಎಚ್ ಡಿ ಕುಮಾರಸ್ವಾಮಿ, ಬಿಜೆಪಿ ನಾಯಕರ ಮನವೊಲಿಕೆಯ ನಂತರ ಭಾಗಿಯಾಗಿದ್ದರು. ಆನಂತರ ಮೈತ್ರಿ ಪಕ್ಷಗಳು ಜೊತೆಯಾಗಿ ಯಾವುದೇ ಪ್ರತಿಭಟನೆ ನಡೆಸಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಇದೆಲ್ಲವೂ ಮೈತ್ರಿಯಲ್ಲಿ ಬಿರುಕು ಇದೆ ಎಂಬುದನ್ನು ಸೂಚಿಸಿತ್ತು. ಆ ಅನುಮಾನಗಳಿಗೆ ದೇವೇಗೌಡರ ಹೇಳಿಕೆ ಮತ್ತಷ್ಟು ಪುಷ್ಟಿ ಕೊಟ್ಟಿದೆ.
ಈ ಲೇಖನ ಓದಿದ್ದೀರಾ?: ಕಣ್ಣೀರಲ್ಲಿ ಕರಗಿದ ಕುಸ್ತಿಪಟುಗಳ ಕನಸು: ಲೈಂಗಿಕ ಕಿರುಕುಳ ಆರೋಪಿ ಬ್ರಿಜ್‌ಭೂಷಣ್‌ಗೆ ಬಿಜೆಪಿ ‘ರಕ್ಷಾ ಕವಚ’
ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಸ್ಥಳೀಯ ಚುನಾವಣೆಗಳಿಗೆ ಇಳಿದರೆ, ತಮ್ಮ ಪಕ್ಷದ ನಿರ್ನಾಮ ಖಚಿತವೆಂಬುದು ಜೆಡಿಎಸ್ ನಾಯಕರಿಗೆ ಅರಿವಾದಂತಿದೆ. ಸ್ಥಳೀಯ ಮಟ್ಟದಲ್ಲಿ ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳುವ ಮತ್ತು ಪುನರ್‌ಸ್ಥಾಪಿಸಿಕೊಳ್ಳಲು ಜೆಡಿಎಸ್ ಹೆಣಗಾಡುತ್ತಿದೆ. ನಾನಾ ರೀತಿಯ ತಂತ್ರಗಳನ್ನು ರೂಪಿಸುತ್ತಿದೆ. ಒಕ್ಕಲಿಗ ಸಮುದಾಯವು ತಮ್ಮ ಕೈತಪ್ಪಿ ಹೋಗದಂತೆ ಹಿಡಿದಿಟ್ಟುಕೊಳ್ಳಲು ಶತಪ್ರಯತ್ನ ಮಾಡುತ್ತಿದೆ. ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿಮಾಡಿಕೊಂಡರೆ, ಒಕ್ಕಲಿಗರನ್ನು ತಾವೇ ಖುದ್ದು ಬಿಜೆಪಿಯ ಕೈಗಿತ್ತಂತೆ ಆಗುತ್ತದೆ ಎಂಬುದು ಜೆಡಿಎಸ್‌ಗೆ ಮನವರಿಕೆಯಾಗಿದೆ ಎಂಬ ಅಭಿಪ್ರಾಯಗಳಿವೆ.
ಅಲ್ಲದೆ, ಈ ಹಿಂದೆಯೇ, ಜೆಡಿಎಸ್‌ನ ತಳಮಟ್ಟದ ಕಾರ್ಯಕರ್ತರು ಮೈತ್ರಿಯನ್ನು ವಿರೋಧಿಸಿದ್ದರು. ಹೀಗಿರುವಾಗ, ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಸೀಟು ಹಂಚಿಕೆ ಮಾಡಿಕೊಂಡರೆ, ಕಾರ್ಯಕರ್ತರು ಮತ್ತಷ್ಟು ಸಿಟ್ಟಾಗುತ್ತಾರೆ. ಪಕ್ಷದಿಂದ ದೂರವಾಗುತ್ತಾರೆ ಎಂಬ ಆತಂಕವೂ ಜೆಡಿಎಸ್‌ನಲ್ಲಿದೆ.
ಹೀಗಾಗಿ, ಜೆಡಿಎಸ್ ನಾಯಕರು ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ತಮ್ಮ ಪಕ್ಷದ ಗುರುತನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಸ್ಥಳೀಯ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದು ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸಲು ಸಾಧ್ಯವಾಗುತ್ತದೆ ಎಂದು ಜೆಡಿಎಸ್ ನಂಬಿದೆ.
ಅದೇನೇ ಇರಲಿ, ರಾಜ್ಯದಲ್ಲಿ ಜೆಡಿಎಸ್‌ನ ಮೈತ್ರಿ ಎಂದಿಗೂ ನಾಲ್ಕೈದು ವರ್ಷಗಳ ಕಾಲ ಮುಂದುವರೆದ ಇತಿಹಾಸವಿಲ್ಲ. ಮುಂದೆಯೂ ಅದು ಸಾಧ್ಯವಾಗುವ ಯಾವುದೇ ಲಕ್ಷಣಗಳಿಲ್ಲ. 2028ರ ವಿಧಾನಸಭಾ ಚುನಾವಣೆ ವೇಳೆಗೆ, ಜೆಡಿಎಸ್-ಬಿಜೆಪಿ ಮತ್ತೆ ಬದ್ಧವೈರಿಗಳಾಗಿ ಕಣಕ್ಕಿಳಿದರೂ ಆಶ್ಚರ್ಯವಿಲ್ಲ!




