ಗುತ್ತಿಗೆದಾರನಿಂದ 5 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗೆ ‘ರೆಡ್‌ಹ್ಯಾಡ್’ಆಗಿ ಸಿಕ್ಕಿಬಿದ್ದ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಲಮಾಣಿ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿದೆ.
ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಶಾಸಕನಾಗಿರುವ ಚಂದ್ರು ಲಮಾಣಿ ಅವರು ಚಿಂಚೋಳಿಯ ಕ್ಲಾಸ್-1 ಗುತ್ತಿಗೆದಾರ ವಿಜಯ್ ಪೂಜಾರ್ ಬಳಿ 11 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಗುತ್ತಿಗೆದಾರ ವಿಜಯ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆಯಡಿ ದೂರು ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು, ಶನಿವಾರ, ಲಕ್ಷ್ಮೀಶ್ವರ ಪಟ್ಟಣದಲ್ಲಿ ವಿಜಯ್ ಬಳಿ ಚಂದ್ರು ಲಮಾಣಿ ಲಂಚ ಪಡೆಯುವಾಗ ದಾಳಿ ನಡೆಸಿದ್ದು, ‘ರೆಡ್‌ಹ್ಯಾಂಡ್’ಆಗಿ ಹಿಡಿದಿದ್ದರು.
ಶಾಸಕ ಚಂದ್ರ ಲಮಾಣಿ, ಅವರ ಪಿಎ ಮಂಜುನಾಥ್ ಹಾಗೂ ಸಿಬ್ಬಂದಿ ಗುರುನಾಯಕ್ ಎಂಬಾತನನ್ನು ಬಂಧಿಸಿದ್ದರು. ಮೂವರನ್ನೂ ಬೆಂಗಳೂರಿನ ಯಲಹಂಕದಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಧೀಶರು ಮೂವರಿಗೂ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.




