ಮಹಿಳಾ ಮೀಸಲಾತಿ ಮಸೂದೆಯನ್ನು ಗೌಪ್ಯವಾಗಿ ತರಲಾಗಿದೆ. ಪಕ್ಷಗಳೊಂದಿಗೆ ಚರ್ಚೆ ನಡೆಸಿಲ್ಲ, ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಒಮ್ಮತದ ಅಭಿಪ್ರಾಯ ರೂಪಿಸಲಾಗಿಲ್ಲ ಎಂದು ಕೇಂದ್ರದ ವಿರುದ್ಧ ಡಿಎಂಕೆ ಸಂಸದೆ ಕನಿಮೊಳಿ ಕರುಣಾನಿಧಿ ಕಿಡಿಕಾರಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಕನಿಮೊಳಿ, “ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಹಲವು ಬಾರಿ ಪ್ರಸ್ತಾಪಿಸಿದ್ದೇನೆ ಮತ್ತು ಸರ್ಕಾರದ ಉತ್ತರವು ತುಂಬಾ ಸ್ಥಿರವಾಗಿದೆ. ಅವರು ಎಲ್ಲ ರಾಜಕೀಯ ಪಕ್ಷಗಳನ್ನು ಒಳಗೊಳ್ಳಬೇಕು ಮತ್ತು ಮಸೂದೆಯನ್ನು ತರುವ ಮೊದಲು ಒಮ್ಮತವನ್ನು ನಿರ್ಮಿಸಬೇಕು. ಆದರೆ, ಕೇಂದ್ರ ಸರ್ಕಾರವು ಯಾವ ಒಮ್ಮತವನ್ನು ನಿರ್ಮಿಸಿದೆ? ಮಸೂದೆ ಬಗ್ಗೆ ಯಾವ ಚರ್ಚೆಗಳು ನಡೆದಿವೆ? ಎಂಬುದರ ಕುರಿತು ತಿಳಿದುಕೊಳ್ಳಲು ನಾನು ಬಯಸುತ್ತೇನೆ. ಈ ಮಸೂದೆಯನ್ನು ಗೌಪ್ಯವಾಗಿ ತರಲಾಗಿದೆ,” ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.
ಕನಿಮೊಳಿ ತಮ್ಮ ಭಾಷಣವನ್ನು ಪ್ರಾರಂಭಿಸಲು ಮುಂದಾದಾಗ ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗಿದರು. ಘೋಷಣೆಗೆ ಪ್ರತಿಕ್ರಿಯಿಸಿದ ಅವರು ಪೆರಿಯಾರ್ ಅವರ ಮಾತನ್ನು ಉಲ್ಲೇಖಿಸಿ, “ತಾವು ಮಹಿಳೆಯರನ್ನು ಗೌರವಿಸುತ್ತೇವೆ ಮತ್ತು ಮಹಿಳೆಯರ ಸ್ವಾತಂತ್ರ್ಯಕ್ಕಾಗಿ ಶ್ರಮಿಸುತ್ತೇವೆ ಎಂದು ಪುರುಷರು ಸೋಗು ಹಾಕುವುದು ಮಹಿಳೆಯರನ್ನು ವಂಚಿಸುವ ತಂತ್ರವಾಗಿದೆ” ಎಂದರು.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ 33% ಮಹಿಳಾ ಮೀಸಲಾತಿಯನ್ನು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ಬಳಿಕ ಜಾರಿಗೆ ತರುತ್ತೇವೆ ಎಂದಿರುವ ಕೇಂದ್ರವನ್ನು ಪ್ರಶ್ನಿಸಿದ ಅವರು, “ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಮರುವಿಂಗಡಣೆಯೊಂದಿಗೆ ಏಕೆ ತಳಕು ಹಾಕಬೇಕು” ಎಂದರು.




