ಈ ಹಿಂದಿನ ಬಿಆರ್‌ಎಸ್ ಆಡಳಿತವು ಉದ್ಯಮಿಗಳನ್ನು ಬ್ಲ್ಯಾಕ್‌ಮೇಲ್ ಮಾಡಿದೆ. ‘ಫೋನ್ ಟ್ಯಾಪಿಂಗ್’ ಮೂಲಕ ನೂರಾರು ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಭಾನುವಾರ ಆರೋಪಿಸಿದ್ದಾರೆ.
ಫೆಬ್ರವರಿ 11ರ ಪುರಸಭೆ ಚುನಾವಣೆಗೆ ಮುನ್ನ ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆಯ ಚೆಲ್ಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ, ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಅನ್ನು ‘ಬ್ಲ್ಯಾಕ್‌ಮೇಲ್ ರಾಜಕೀಯ ಸಮಿತಿ’ ಎಂದು ಕರೆದಿದ್ದಾರೆ.
ಇದನ್ನು ಓದಿದ್ದೀರಾ? ‘ನಮ್ಮ ಸರ್ಕಾರ ಯಾರ ಫೋನ್ ಟ್ಯಾಪ್ ಮಾಡುವುದಿಲ್ಲ’: ಸಿಎಂ ಸಿದ್ದರಾಮಯ್ಯ
“ಬಿಆರ್‌ಎಸ್ ‘ಫೋನ್ ಟ್ಯಾಪಿಂಗ್’ ಮಾಡುತ್ತಿತ್ತು. ವಿರೋಧ ಪಕ್ಷದ ನಾಯಕರು, ಹೈಕೋರ್ಟ್ ನ್ಯಾಯಾಧೀಶರು ಅಥವಾ ಪತ್ರಕರ್ತರನ್ನು ಸಹ ಬಿಟ್ಟಿಲ್ಲ. ಅವರು ಗಂಡ ಮತ್ತು ಹೆಂಡತಿಯರ ನಡುವಿನ ಖಾಸಗಿ ಸಂಭಾಷಣೆಗಳನ್ನು ಕದ್ದಾಲಿಸಿದ್ದರು. ಚಲನಚಿತ್ರ ತಾರೆಯರ ಮಾತುಗಳನ್ನು ಕದ್ದು ಕೇಳಿಸಿಕೊಂಡಿದ್ದರು. ಉದ್ಯಮಿಗಳನ್ನು ಸಹ ಬ್ಲ್ಯಾಕ್‌ಮೇಲ್ ಮಾಡಿದ್ದರು. ಭೂಮಿಯಲ್ಲಿ ಇದಕ್ಕಿಂತ ದೊಡ್ಡ ಪಾಪಿಗಳು ಯಾರಾದರೂ ಇದ್ದಾರೆಯೇ” ಎಂದು ಪ್ರಶ್ನಿಸಿದ್ದಾರೆ.
ಇನ್ನು ತೆಲಂಗಾಣ ಬಿಜೆಪಿ ಸಂಸದ ಕೊಂಡ ವಿಶ್ವೇಶ್ವರ ರೆಡ್ಡಿ ತಮ್ಮ ಫೋನ್ ಅನ್ನು ಟ್ಯಾಪ್ ಮಾಡಲಾಗಿದೆ ಎಂದು ಆರೋಪಿಸಿದ್ದನ್ನೂ ರೇವಂತ್ ರೆಡ್ಡಿ ಉಲ್ಲೇಖಿಸಿದ್ದಾರೆ. ಫೋನ್‌ಗಳನ್ನು ಕದ್ದಾಲಿಸಿ, ಭೂ ಖರೀದಿದಾರರನ್ನು ಬ್ಲ್ಯಾಕ್‌ಮೇಲ್ ಮಾಡಲಾಗಿತ್ತು. ಚುನಾವಣಾ ಬಾಂಡ್‌ಗಳ ಮೂಲಕ ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸಲಾಗಿತ್ತು ಎಂದು ವಿಶ್ವೇಶ್ವರ ರೆಡ್ಡಿ ಹೇಳಿದ್ದನ್ನು ಸಿಎಂ ಉಲ್ಲೇಖಿಸಿದ್ದಾರೆ.
“ಬಿಆರ್‌ಎಸ್ 1,500 ಕೋಟಿ ರೂಪಾಯಿಗಳನ್ನು ಚುನಾವಣಾ ಬಾಂಡ್‌ಗಳಲ್ಲಿ ಸಂಗ್ರಹಿಸಲು ಫೋನ್ ಟ್ಯಾಪಿಂಗ್ ಬಳಸಿದೆ” ಎಂದೂ ತೆಲಂಗಾಣ ಸಿಎಂ ಹೇಳಿಕೊಂಡಿದ್ದಾರೆ. “ಇದು ಯಾರ ಹಣ? ಸಾವಿರಾರು ಕೋಟಿ ಆಸ್ತಿಗಳು ಮತ್ತು ನೂರಾರು ಎಕರೆ ಭೂಮಿಯನ್ನು ಅಗ್ಗವಾಗಿ ಖರೀದಿಸಿ ಉದ್ಯಮಿಗಳನ್ನು ಬೆದರಿಸುವ ಮೂಲಕ ತೆಗೆದುಕೊಳ್ಳಲಾಗಿದೆ ಎಂಬುದು ನಿಜವಲ್ಲವೇ” ಎಂದು ಪ್ರಶ್ನಿಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಈ ಆರೋಪಿಗನ್ನು ಯಾಕೆ ಜೈಲಿಗಟ್ಟಿಲ್ಲ? ಅವರು ಮಾಡಿದ ಮಾಡಿದ ಪಾಪಗಳಿಗೆ ಶಿಕ್ಷೆಯಾಗುವುದಿಲ್ಲವೇ? ಬಿಆರ್‌ಎಸ್ ಈ ಪಾಪಗಳ ಭಾರದಲ್ಲಿ ಹೂತುಹೋಗುತ್ತದೆ. ಈ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ಬಿಆರ್‌ಎಸ್ 2024ರಲ್ಲಿ ಎಂಟು ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲು ಸಹಾಯ ಮಾಡಿತ್ತು. ಈಗ ಪುರಸಭೆ ಚುನಾವಣೆಯಲ್ಲಿಯೂ ಬಿಜೆಪಿ ಗೆಲ್ಲುವಂತೆ ಬಿಆರ್‌ಎಸ್ ನೋಡಿಕೊಳ್ಳುತ್ತಿದೆ. ಬಿಆರ್‌ಎಸ್, ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು” ಎಂದು ದೂರಿದರು.





