'ಬಜೆಟ್ ಬರುತ್ತದೆ, ಹೋಗುತ್ತದೆ; ನಮ್ಮ ಜೀವನದಲ್ಲಿ ಏನೂ ಬದಲಾಗುವುದಿಲ್ಲ' ಎಂಬ ಮಾತು ಹೆಚ್ಚಾಗಿ ಕೇಳಿ ಬರುತ್ತಿದೆ. ಇದು ಕೇವಲ ನಿರಾಸೆಯ ಮಾತಲ್ಲ; ಸರ್ಕಾರ ತರುತ್ತಿರುವ ಆರ್ಥಿಕ ನೀತಿಗಳ ಮೇಲಿನ ನಂಬಿಕೆಯ ಕ್ಷೀಣತೆ ಮತ್ತು ಸಾರ್ವಜನಿಕ ಹಣಕಾಸು ಪ್ರಕ್ರಿಯೆಯಿಂದ ಜನರು ಕ್ರಮೇಣ ದೂರವಾಗುತ್ತಿರುವ ವಾಸ್ತವದ ಪ್ರತಿಬಿಂಬ
ಹಲವು ವರ್ಷಗಳ ಹಿಂದೆ ಕೇಂದ್ರ ಬಜೆಟ್ ಮಂಡನೆಯ ದಿನವೆಂದರೆ, ಅದು ಕೇವಲ ಹಣಕಾಸು ಘೋಷಣೆಯ ದಿನವಾಗಿರಲಿಲ್ಲ, ಅದು ಜನ ಸಾಮಾನ್ಯರ ಬದುಕಿನ ನಿರೀಕ್ಷೆಗಳ ದಿನವಾಗಿತ್ತು. ಸಂಬಳದ ವರ್ಗ, ರೈತರು, ಸಣ್ಣ ಉದ್ಯಮಿಗಳು, ಉದ್ಯೋಗಾರ್ಥಿಗಳು, ವಿದ್ಯಾರ್ಥಿಗಳು, ಮಹಿಳೆಯರು – ಹೀಗೆ ಸಮಾಜದ ಎಲ್ಲ ವರ್ಗಗಳೂ ಬಜೆಟ್‌ನಲ್ಲಿ ತಮ್ಮ ಬದುಕಿಗೆ ಏನಾದರೂ ಸಕಾರಾತ್ಮಕ ಬದಲಾವಣೆ ಬರಬಹುದು ಎಂಬ ನಿರೀಕ್ಷೆಯೊಂದಿಗೆ ಕಾಯುತ್ತಿದ್ದರು.
ಮಾಧ್ಯಮಗಳು ಅಂಗಡಿ–ಉದ್ಯಮಿಗಳ ಬಳಿ ಹೋಗಿ, ‘ಈ ಬಾರಿ ನಿಮ್ಮ ನಿರೀಕ್ಷೆ ಏನು?’ ಎಂದು ಕೇಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ತೆರಿಗೆ ಕಡಿತವಾಗುತ್ತದೆಯೇ? ಉದ್ಯೋಗ ಅವಕಾಶಗಳು ಹೆಚ್ಚುತ್ತವೆಯೇ? ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಹೂಡಿಕೆ ಆಗುತ್ತದೆಯೇ? ಬೆಲೆ ಏರಿಕೆಗೆ ನಿಯಂತ್ರಣ ಸಿಗುತ್ತದೆಯೇ? ಇಂತಹ ಪ್ರಶ್ನೆಗಳೊಂದಿಗೆ ಬಜೆಟ್ ದಿನವು ಸಾರ್ವಜನಿಕ ಚರ್ಚೆಯ ಕೇಂದ್ರವಾಗುತ್ತಿತ್ತು. ಟಿವಿ, ರೇಡಿಯೋ, ದಿನ ಪತ್ರಿಕೆ ಹೀಗೆ ಎಲ್ಲ ಕಡೆ ಬಜೆಟ್ ಬಗ್ಗೆಯೇ ಭರ್ಜರಿ ಚರ್ಚೆ.
ಆದರೆ, ಕಳೆದ ಕೆಲವು ವರ್ಷಗಳಲ್ಲಿ ಈ ಚಿತ್ರಣ ಮೂಲಭೂತವಾಗಿ ಬದಲಾಗಿದೆ. ಇಂದು ಜನಸಾಮಾನ್ಯರಲ್ಲಿ ಹೆಚ್ಚಾಗಿ ಕೇಳಿಬರುವ ಮಾತು: ‘ಬಜೆಟ್ ಬರುತ್ತದೆ, ಹೋಗುತ್ತದೆ; ನಮ್ಮ ಜೀವನದಲ್ಲಿ ಏನೂ ಬದಲಾಗುವುದಿಲ್ಲ.’ ಇದು ಕೇವಲ ನಿರಾಸೆಯ ಮಾತಲ್ಲ; ಇದು ಜನ ಚುನಾಯಿಸಿದ ಸರ್ಕಾರ ತರುತ್ತಿರುವ ಆರ್ಥಿಕ ನೀತಿಗಳ ಮೇಲಿನ ನಂಬಿಕೆಯ ಕ್ಷೀಣತೆ ಮತ್ತು ಸಾರ್ವಜನಿಕ ಹಣಕಾಸು ಪ್ರಕ್ರಿಯೆಯಿಂದ ಜನರು ಕ್ರಮೇಣ ದೂರವಾಗುತ್ತಿರುವ ವಾಸ್ತವದ ಪ್ರತಿಬಿಂಬ. ಬಜೆಟ್ ಎಂಬುದು ಇಂದು ತಜ್ಞರ, ದೊಡ್ಡ ಕಾರ್ಪೊರೇಟ್ ವಲಯಗಳ, ಮಾರುಕಟ್ಟೆಗಳ ಹಾಗೂ ದೇಶದ ಕೆಲವೇ ಬಿಲಿಯನೇರ್ ಸಮೂಹದ ಭಾಷೆಯಾಗಿ ಪರಿವರ್ತನೆಯಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.
ಈ ಹಿನ್ನೆಲೆಯಲ್ಲೇ ಫೆಬ್ರವರಿ 1, 2026ರಂದು ಮಂಡಿಸಲಾದ ಕೇಂದ್ರ ಬಜೆಟ್ 2026–27 ಜನಸಾಮಾನ್ಯರಲ್ಲಿ ಹೆಚ್ಚಿನ ಕುತೂಹಲವನ್ನು ಹುಟ್ಟುಹಾಕಲಿಲ್ಲ ಎನ್ನುವುದು ವಿಷಾದಕರವಾದರೂ ಸತ್ಯ. ಷೇರು ಮಾರುಕಟ್ಟೆಗಳ ಪ್ರತಿಕ್ರಿಯೆಯಲ್ಲಿಯೂ ಈ ನಿರಾಶೆಯ ಛಾಯೆ ಸ್ಪಷ್ಟವಾಗಿತ್ತು. ‘ಈ ಬಜೆಟ್‌ನಿಂದಲೂ ಏನೂ ಬದಲಾಗುವುದಿಲ್ಲ’ ಎಂಬ ದೃಢವಾದ ಭಾವನೆ ಅಥವಾ ನಿರಾಶಾವಾದ – ಸಾರ್ವಜನಿಕ ಮನಸ್ಸಿನಲ್ಲಿ ಆಳವಾಗಿ ನೆಲೆಸಿರುವುದನ್ನು ಕಾಣಬಹುದು. ಆರ್ಥಿಕ ಬೆಳವಣಿಗೆಯ ಅಂಕಿಅಂಶಗಳು, ಬೃಹತ್ ಮೂಲಸೌಕರ್ಯ ಘೋಷಣೆಗಳು ಮತ್ತು ದೀರ್ಘಕಾಲೀನ ತಂತ್ರಗಳ ನಡುವೆಯೂ, ಉದ್ಯೋಗ ಭದ್ರತೆ, ಜೀವನ ವೆಚ್ಚದ ಒತ್ತಡ, ಮಧ್ಯಮ ವರ್ಗದ ತೆರಿಗೆ ಹೊರೆ ಹಾಗೂ ಪರಿಸರ ಹಾನಿಯಂತಹ ಮೂಲಭೂತ ಪ್ರಶ್ನೆಗಳು ಉತ್ತರರಹಿತವಾಗಿಯೇ ಉಳಿದಿವೆ ಎಂಬ ಭಾವನೆ ಜನರಲ್ಲಿ ಗಟ್ಟಿಯಾಗುತ್ತಿದೆ. ಒಂದು ಮಟ್ಟಕ್ಕೆ ಇವು ಸತ್ಯವೂ ಕೂಡ.
ಈ ಕಾರಣದಿಂದಲೇ ಬಜೆಟ್ 2026ಅನ್ನು ಕೇವಲ ಹಣಕಾಸಿನ ಘೋಷಣೆಗಳ ಪಟ್ಟಿಯಾಗಿ ಅಲ್ಲ; ಅದರ ಆಂತರಿಕ ತತ್ವ, ಆದ್ಯತೆಗಳು ಹಾಗೂ ಸಾಮಾಜಿಕ–ಆರ್ಥಿಕ ಪರಿಣಾಮಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸುವ ಅಗತ್ಯ ಇದೆ. ಈ ಲೇಖನವು ಬಜೆಟ್ 2026ಅನ್ನು ಜನಪರ ದೃಷ್ಟಿಕೋನದಿಂದ – ಸಾಮಾನ್ಯ ವರ್ಗ -ಮಧ್ಯಮ ವರ್ಗ, ಉದ್ಯೋಗ ಸೃಷ್ಟಿ, ಕೈಗಾರಿಕಾ ವಿಕಾಸ, ಪರಿಸರ ಮತ್ತು ದೀರ್ಘಕಾಲೀನ ಆರ್ಥಿಕ ಸ್ಥಿರತೆಯ ಚೌಕಟ್ಟಿನಲ್ಲಿ – ಪರಿಶೀಲಿಸುವ ಒಂದು ಸಣ್ಣ ಪ್ರಯತ್ನ. ಪ್ರಜಾಪ್ರಭುತ್ವದಲ್ಲಿ ಇಂತಹ ವಿಶ್ಲೇಷಣೆ ಅಗತ್ಯ ಕೂಡ.

ಬಜೆಟ್ 2026–27ರ ಭಾಷಣವನ್ನು ಗಮನಿಸಿದರೆ, ‘robust growth’, ‘sustainable development’, ‘global competitiveness’, ‘long-term vision’ ಎಂಬ ಪದಗಳು ನಿರಂತರವಾಗಿ ಕೇಳಿಬರುವುದನ್ನು ನೋಡಬಹುದು. ಇವು ನಮ್ಮ ವಿತ್ತ ಸಚಿವರ ನುಡಿ, ಕಾರ್ಪೊರೇಟ್ ವಲಯಗಳ ನುಡಿ, ಹಾಗೆಯೇ ಸರ್ಕಾರದ ನುಡಿ ಕೂಡ. ಇವು ಮಾರುಕಟ್ಟೆ ಮತ್ತು ಹೂಡಿಕೆದಾರರ ಭಾಷೆಗೆ ಹೊಂದಿಕೊಳ್ಳಬಹುದು; ಆದರೆ ಜನಸಾಮಾನ್ಯರ ದೈನಂದಿನ ಅನುಭವಗಳಿಗೆ ಇವು ಎಷ್ಟು ಸಮೀಪವಾಗಿವೆ ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಸರ್ಕಾರ GDP ವೃದ್ಧಿದರವನ್ನು ಸುಮಾರು 7 ಶೇಕಡಾ ಎಂದು ಬಿಂಬಿಸುತ್ತಿದ್ದರೂ, IMF ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳು ಇತ್ತೀಚೆಗೆ ಈ ಅಂದಾಜನ್ನು 6.4 ಶೇಕಡಾಗೆ ಇಳಿಸಿರುವುದು ಗಮನಾರ್ಹ. ಇದು ಕೇವಲ ಅಂಕಿಅಂಶಗಳ ವ್ಯತ್ಯಾಸವಲ್ಲ; ಇದು ಆರ್ಥಿಕ ಬೆಳವಣಿಗೆಯ ಗುಣಮಟ್ಟದ ಬಗ್ಗೆ ಎಚ್ಚರಿಕೆಯ ಸೂಚನೆ. ವೃದ್ಧಿ ಇದ್ದರೂ ಅದು ಉದ್ಯೋಗ ಸೃಷ್ಟಿ, ವೇತನ ಏರಿಕೆ ಮತ್ತು ಖರೀದಿ ಶಕ್ತಿಗೆ ಪರಿವರ್ತನೆಯಾಗುತ್ತಿಲ್ಲ ಎಂಬ ಆತಂಕ ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.
ಈ ಲೇಖನ ಓದಿದ್ದೀರಾ?: ಕೇಂದ್ರ ಬಜೆಟ್ | ಶ್ರೀಗಂಧ ಬೆಳೆಗೆ ಪ್ರೋತ್ಸಾಹ; ಕೃಷಿ ಉತ್ಪನ್ನ ಎಂದು ಪರಿಗಣಿಸಲು ಶ್ರೀಗಂಧ ಕೃಷಿಕರ ಸಂಘ ಒತ್ತಾಯ
ಬಜೆಟ್ 2026–27ರ ಪ್ರಮುಖ ಅಂಶವೆಂದರೆ ಬಂಡವಾಳ ವೆಚ್ಚವನ್ನು ₹12.2 ಲಕ್ಷ ಕೋಟಿಗೆ ಹೆಚ್ಚಿಸಿರುವುದು. ನಮ್ಮ ದೇಶದ GDPಯ ಸುಮಾರು 4.4 ಶೇಕಡಕ್ಕೆ ಸಮಾನ. ರಸ್ತೆ, ರೈಲು, ಬಂದರು, ಸೆಮಿಕಂಡಕ್ಟರ್ ಪಾರ್ಕ್‌ಗಳು, ಡೇಟಾ ಸೆಂಟರ್‌ಗಳು- ಇವೆಲ್ಲವನ್ನು ಸರ್ಕಾರ “ವೃದ್ಧಿಯ ಎಂಜಿನ್” ಎಂದು ಬಿಂಬಿಸುತ್ತದೆ. ಆದರೆ ಇಲ್ಲಿ ಪ್ರಶ್ನೆ ಏನೆಂದರೆ: ಈ ವೃದ್ಧಿಯ ಲಾಭಗಳು ಯಾರಿಗೆ ತಲುಪುತ್ತಿವೆ? ಬಹುತೇಕ ಅಧ್ಯಯನಗಳು ಸೂಚಿಸುವಂತೆ, ಈ ಯೋಜನೆಗಳಿಂದ ಸೃಷ್ಟಿಯಾಗುವ ಉದ್ಯೋಗಗಳ ದೊಡ್ಡ ಭಾಗ ತಾತ್ಕಾಲಿಕ, ಗುತ್ತಿಗೆ ಆಧಾರಿತ ಮತ್ತು ಕಡಿಮೆ ವೇತನದವು. ಇನ್ನೊಂದು ಅಂಶವೆಂದರೆ – ದಿನೇದಿನೇ ಹೆಚ್ಚುತ್ತಿರುವ AI ಮತ್ತು ಸ್ವಯಂಚಾಲಿತ ತಂತ್ರಜ್ಞಾನಗಳ ಅಳವಡಿಕೆಯಿಂದ, ದೊಡ್ಡ ಯೋಜನೆಗಳಲ್ಲಿ ಉದ್ಯೋಗ ಸೃಷ್ಟಿಗಿಂತ ಉದ್ಯೋಗ ನಾಶದ ಅಪಾಯವೂ ಹೆಚ್ಚುತ್ತಿದೆ. ಹಾಗೆಂದು ಇವ್ಯಾವುದೂ ಬೇಡವೆಂದಲ್ಲ, ಆದರೆ ಇಂತಹ ಬೆಳವಣಿಗೆಯ ಜೊತೆಗೆ ಉದ್ಯೋಗ ಸೃಷ್ಟಿಯ ಬಗ್ಗೆ ಆಲೋಚಿಸಬೇಕಾದುದು ಅತೀ ಅವಶ್ಯ. ಇಲ್ಲವಾದಲ್ಲಿ, ಇಂತಹ ಬೆಳವಣಿಗೆಯಿಂದ, ಸಮಾಜದಲ್ಲಿ ಅಸಮಾನತೆ ಇನ್ನಷ್ಟು ಗಟ್ಟಿಯಾಗುವ ಸಾಧ್ಯತೆ ಇದೆ. ಆದರೆ ಈ ದೊಡ್ಡ ಪ್ರಮಾಣದ ಪ್ರಾಜೆಕ್ಟ್ ಗಳಲ್ಲಿ ಸೃಷ್ಟಿಯಾಗುವ ಉದ್ಯೋಗಗಳ ಬಗ್ಗೆ ಸರ್ಕಾರ ಅಷ್ಟು ಗಮನ ಹರಿಸಿರುವ ಹಾಗೆ ಇಲ್ಲ.
ಬಜೆಟ್ 2026–27ರ ಮತ್ತೊಂದು ಗಂಭೀರ ನ್ಯೂನತೆ ಎಂದರೆ ಕಾರ್ಮಿಕರು, ಕೃಷಿಕರು, ರೈತರು, ಯುವಕರು ಮತ್ತು ಮಹಿಳೆಯರ ನಿರ್ಲಕ್ಷ್ಯ ಮುಂದುವರೆದಿರುವುದು. ಭಾರತದ ಸುಮಾರು 42 ಶೇಕಡಾ ಕಾರ್ಮಿಕ ಬಲವು ಕೃಷಿಯಲ್ಲಿ ತೊಡಗಿರುವಾಗ, ಬಜೆಟ್ 2026–27ರಲ್ಲಿ ಕೃಷಿ ಮತ್ತು ಸಂಬಂಧಿತ ವಲಯಗಳಿಗೆ ಮೀಸಲಾದ ಹಣವು ಒಟ್ಟು ಬಜೆಟ್‌ನ ಕೇವಲ 3 ರಿಂದ 3.5 ಶೇಕಡಾ ಮಾತ್ರ. ಈ ಅಸಮತೋಲನ ಸ್ವತಃ ಸರ್ಕಾರದ ಆದ್ಯತೆಗಳನ್ನು ಸ್ಪಷ್ಟಪಡಿಸುತ್ತದೆ. ರೈತರ ಆತ್ಮಹತ್ಯೆಗಳು ನಿಲ್ಲದಿರುವ ನಮ್ಮ ದೇಶದಲ್ಲಿ, MSP ಗ್ಯಾರಂಟಿ ಕಾನೂನು, ಸಾಲ ಮನ್ನಾ, ಬೆಳೆ ವಿಮೆ ಸುಧಾರಣೆ – ಇವೆಲ್ಲವೂ ಮತ್ತೆ ಕೇವಲ ಘೋಷಣೆಗಳಾಗಿಯೇ ಉಳಿದಿವೆ. ದಿನ ಬೆಳಗಾದರೆ ಹೊಸ ಹೊಸ ರೀತಿಯ ಟ್ರಂಪ್ tariff, ಅಮೆರಿಕಾದ ಜೊತೆಗಿನ ಅನಿಶ್ಚಿತ ಆರ್ಥಿಕ ವ್ಯವಹಾರ, ವಿವಿಧ ರಾಜ್ಯಗಳಲ್ಲಿ ಕಂಡು ಬರುತ್ತಿರುವ ಬೆಲೆ ಕುಸಿತ ಮತ್ತು ಮಾರುಕಟ್ಟೆ ಅನಿಶ್ಚಿತತೆಯಿಂದ ಸಾವಿರಾರು ರೈತ ಕುಟುಂಬಗಳು ತೀವ್ರ ಸಂಕಷ್ಟದಲ್ಲಿವೆ, ಆದರೆ ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದಂತೆ ಇಲ್ಲ. ಅಥವಾ ಇದನ್ನು ಯಾವ ರೀತಿ ನಿಭಾಯಿಸಬೇಕು ಎನ್ನುವ ಚಾಕಚಕ್ಯತೆ ಸರ್ಕಾರದಲ್ಲಿ ಎದ್ದು ಕಾಣುತ್ತಿಲ್ಲ.

ಭಾರತದ ಮತ್ತೊಂದು ಅತಿದೊಡ್ಡ ಆರ್ಥಿಕ ಸವಾಲು ನಿರುದ್ಯೋಗ ಮತ್ತು ಅರೆ ಉದ್ಯೋಗ. ಯುವಜನಸಂಖ್ಯೆ ಹೆಚ್ಚುತ್ತಿರುವ ದೇಶದಲ್ಲಿ, ಉದ್ಯೋಗ ಸೃಷ್ಟಿ ಕೇವಲ ಸಾಮಾಜಿಕ ಸಮಸ್ಯೆಯಲ್ಲ; ಅದು ಆರ್ಥಿಕ ಮತ್ತು ರಾಜಕೀಯ ಸ್ಥಿರತೆಯ ಪ್ರಶ್ನೆ. ಆದರೆ ಬಜೆಟ್ 2026–27ರಲ್ಲಿ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಸ್ಪಷ್ಟ, ಗುರಿಯುಕ್ತ ಕಾರ್ಯಕ್ರಮಗಳ ಕೊರತೆ ಗೋಚರಿಸುತ್ತದೆ. MSME ವಲಯಕ್ಕೆ ನೀಡಿರುವ ಘೋಷಣೆಗಳು ಸಾಮಾನ್ಯ ಸ್ವರೂಪದ್ದಾಗಿದ್ದು, ಇನ್‌ಪುಟ್ ವೆಚ್ಚ, ಮಾರುಕಟ್ಟೆ ಪ್ರವೇಶ ಮತ್ತು ತಂತ್ರಜ್ಞಾನ ವರ್ಗಾವಣೆಯಂತಹ ಮೂಲಭೂತ ಸಮಸ್ಯೆಗಳಿಗೆ ಸಮಗ್ರ ಪರಿಹಾರ ನೀಡುವುದಿಲ್ಲ.
ತೆರಿಗೆ ನೀತಿಯ ದೃಷ್ಟಿಯಿಂದ, ಬಜೆಟ್ 2026–27 ಮಧ್ಯಮ ವರ್ಗಕ್ಕೆ ನಿಜವಾದ ರಿಲೀಫ್ ನೀಡುತ್ತದೆಯೇ ಎಂಬ ಪ್ರಶ್ನೆ ಇನ್ನೂ ಉತ್ತರ ಕಂಡಿಲ್ಲ. ನೇರ ತೆರಿಗೆ ರಿಯಾಯಿತಿಗಳು ಸೀಮಿತವಾಗಿದ್ದರೆ, ಪರೋಕ್ಷ ತೆರಿಗೆಗಳ ಅವಲಂಬನೆ ಮುಂದುವರಿದಿದೆ. GST, ಇಂಧನ ತೆರಿಗೆಗಳು ಮತ್ತು ಸೇವಾ ಶುಲ್ಕಗಳು ಜನಸಾಮಾನ್ಯರ ಖರ್ಚಿನ ಮೇಲೆ ನೇರ ಬಾಧೆ ಉಂಟುಮಾಡುತ್ತವೆ. ಇದನ್ನು ರೆಗ್ರೆಸಿವ್ ತೆರಿಗೆ ರಚನೆ ಎಂದು ಕರೆಯಬಹುದು, ಏಕೆಂದರೆ ಕಡಿಮೆ ಆದಾಯದ ವರ್ಗದವರು ತಮ್ಮ ಆದಾಯದ ಹೆಚ್ಚಿನ ಭಾಗವನ್ನು ತೆರಿಗೆಯಾಗಿ ಖರ್ಚು ಮಾಡುತ್ತಾರೆ. ಸಂಪತ್ತಿನ ಮೇಲೆ ಅಥವಾ ಅತಿದೊಡ್ಡ ಲಾಭಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಧೈರ್ಯ ಸರ್ಕಾರದಲ್ಲಿ ಕಾಣಿಸುವುದಿಲ್ಲ. ಸರ್ಕಾರ ₹17 ಲಕ್ಷ ಕೋಟಿಗೂ ಅಧಿಕ ಮೊತ್ತವನ್ನು ಮಾರುಕಟ್ಟೆಯಿಂದ ಸಾಲವಾಗಿ ಪಡೆಯಲು ಉದ್ದೇಶಿಸಿರುವುದು ಮತ್ತೊಂದು ಆತಂಕಕಾರಿ ಅಂಶ. ಬಡ್ಡಿ ಪಾವತಿಗಳೇ ಬಜೆಟ್‌ನ ದೊಡ್ಡ ಭಾಗವನ್ನು ತೆಗೆದುಕೊಳ್ಳುತ್ತಿರುವುದು, ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆಗೆ ಲಭ್ಯವಿರುವ ಹಣವನ್ನು ಕಡಿಮೆ ಮಾಡುತ್ತಿದೆ. ಇದು ಕೇವಲ ಇಂದಿನ ಸಮಸ್ಯೆಯಲ್ಲ; ಮುಂದಿನ ಪೀಳಿಗೆಗಳಿಗೆ ವರ್ಗಾಯಿಸುವ ಆರ್ಥಿಕ ಭಾರ ಎಂದು ಹಲವು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಈ ಲೇಖನ ಓದಿದ್ದೀರಾ?: ಗಂಭೀರತೆ ಕಳೆದುಕೊಂಡು ಮೀಮ್ಸ್ ಮಟ್ಟಕ್ಕಿಳಿಯಿತೇ ಕೇಂದ್ರ ಬಜೆಟ್!
ಕೋವಿಡ್-19 ಸಾಂಕ್ರಾಮಿಕ ರೋಗವು ಭಾರತದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಕುಸಿತವನ್ನು ಬೆತ್ತಲೆ ಮಾಡಿದ ನಂತರವೂ, ಆರೋಗ್ಯ ವಲಯಕ್ಕೆ GDP ಯ ಕೇವಲ 1.9 ಶೇಕಡಾ ಮೀಸಲಿಡುವುದು ತೀರಾ ಆತಂಕಕಾರಿ. ಭಾರತದಂತಹ ಅತೀ ಜನಸಂಖ್ಯೆ ಉಳ್ಳ ದೇಶದಲ್ಲಿ – WHO ಶಿಫಾರಸು ಮಾಡುವ 5 ಶೇಕಡಾಕ್ಕೆ ಇದು ಬಹಳ ದೂರ. ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ 70 ಶೇಕಡಾವನ್ನು ಮೀರಿದೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. ಆದರೆ ಈ ಸಮಸ್ಯೆಗೆ ಪ್ರಸ್ತುತ ಬಜೆಟಿನಲ್ಲಿ ಯಾವುದೇ ಪರಿಹಾರವಿಲ್ಲ. ಇಂದಿಗೂ ಕೂಡ ಖಾಸಗಿ ಆಸ್ಪತ್ರೆಗಳ ಬೆಳವಣಿಗೆಯಿಂದ ಆರೋಗ್ಯವು ಕೇವಲ ಉಳ್ಳವರ ಸೊತ್ತಾಗಿ ಉಳಿದಿದೆಯೇ ಹೊರತು ಜನಸಾಮಾನ್ಯರು ದೊಡ್ಡ ಮಟ್ಟದ ಅರೋಗ್ಯ ಸಮಸ್ಯೆಗೆ ಉತ್ತಮ ಗುಣಮಟ್ಟದ ಆಸ್ಪತ್ರೆಗೆ ಹೋಗುವ ಹಾಗೆ ಇಲ್ಲ. ಒಂದು ಗಂಭೀರ ಅನಾರೋಗ್ಯವು ಮಧ್ಯಮ ವರ್ಗದ ಕುಟುಂಬವನ್ನು ಬಡತನಕ್ಕೆ ತಳ್ಳುವ ದೃಶ್ಯಗಳು ಇಂದು ಸಾಮಾನ್ಯವಾಗಿವೆ. ಮಾನಸಿಕ ಆರೋಗ್ಯ, ಪೋಷಣೆ, ತಡೆಗಟ್ಟುವ ಆರೋಗ್ಯ ಸೇವೆಗಳು – ಇವೆಲ್ಲವೂ ಬಜೆಟ್‌ನಲ್ಲಿ ಕಾಣೆಯಾಗಿರುವ ವಿಷಯಗಳು.
2026–27ರ ಬಜೆಟ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಹಣವು ಮಹಿಳೆಯರ ಆರೋಗ್ಯ, ಸುರಕ್ಷತೆ ಮತ್ತು ಆರ್ಥಿಕ ಸ್ವಾಯತ್ತತೆಯಂತಹ ಮೂಲಭೂತ ಅಗತ್ಯಗಳನ್ನು ಪೂರೈಸಲು ಸಾಕಾಗುತ್ತಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಈ ಮೀಸಲಿಟ್ಟಿರುವ ನಿಧಿಯನ್ನು ಇತರ ದೊಡ್ಡ ಯೋಜನೆಗಳಲ್ಲಿ ಸೇರಿಸಿರುವುದರಿಂದ ಮಹಿಳೆಯರಿಗೆ ಹಾಗೂ ಮಕ್ಕಳ ಕಲ್ಯಾಣಕ್ಕೆ ಈ ಮೊತ್ತ ನಿಜವಾಗಿ ಎಷ್ಟು ಪ್ರಯೋಜನವಾಗುತ್ತಿದೆ ಎಂಬುದನ್ನು ನಿರ್ಧರಿಸುವುದು ಕಷ್ಟ.
ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಸಂಕಟದ ಗಂಭೀರತೆಗೆ ಹೋಲಿಸಿದರೆ, ಸರ್ಕಾರದ ಹೂಡಿಕೆಗಳು ವರ್ಷಗಳಿಂದ ಅಸಮರ್ಪಕವಾಗಿವೆ. WHO ಪ್ರಕಾರ, ವಾಯು ಮಾಲಿನ್ಯದಿಂದ ಭಾರತದಲ್ಲಿ ವರ್ಷಕ್ಕೆ 13 ಲಕ್ಷಕ್ಕೂ ಹೆಚ್ಚು ಜನರು ಅಕಾಲಿಕವಾಗಿ ಸಾವನ್ನಪ್ಪುವುತ್ತಿದ್ದಾರೆ. ವಿಶ್ವ ಬ್ಯಾಂಕ್ ಪ್ರಕಾರ ಇದರಿಂದ ಭಾರತದ GDPಗೆ 1.3–1.7% ನಷ್ಟವಾಗುತ್ತಿದೆ. ಇಂತಹ ಹಿನ್ನೆಲೆಯಲ್ಲಿಯೂ FY 2026–27ರಲ್ಲಿ ‘Control of Pollution’ ಯೋಜನೆಗೆ ಕೇವಲ ₹1,091 ಕೋಟಿ ಮೀಸಲಿಡಲಾಗಿದೆ. ಇದು ಸರ್ಕಾರದ ಹಿಂದಿನ ವರ್ಷದ ಪರಿಷ್ಕೃತ ಅಂದಾಜಿಗಿಂತ ₹209 ಕೋಟಿ ಕಡಿಮೆ. ಇದರಿಂದ ಇವತ್ತು ಜನ ಸಾಮಾನ್ಯ ಕೇಳಲೇ ಬೇಕಾದ ಪ್ರಶ್ನೆ ಎಂದರೆ: ಪ್ರಸ್ತುತ ಸರ್ಕಾರದ ಮೂಲ ಆದ್ಯತೆ ಏನು? ಪರಿಸರ ಮತ್ತು ಸಾರ್ವಜನಿಕ ಆರೋಗ್ಯ, ಸುಸ್ಥಿರ ಅಭಿವೃದ್ಧಿ ಎನ್ನುವ ಶಬ್ದ ಪ್ರಯೋಗ ಭರ್ಜರಿಯಿಂದ ಆಗುತ್ತಿದೆಯೇ ಹೊರತು, ಅದು ಸರ್ಕಾರ ಹೊರ ತರುತ್ತಿರುವ ಯೋಜನೆಗಳಾಗಿ ರೂಪುಗೊಳ್ಳುತ್ತಿಲ್ಲ.
ಖ್ಯಾತ ಆರ್ಥಿಕ ವಿಶ್ಲೇಷಕರಾದ ವಿವೇಕ್ ಕೌಲ್ ಅವರು ಹೇಳುವಂತೆ, ವಾರ್ಷಿಕ ಬಜೆಟ್ ಎನ್ನುವುದು ಆರ್ಥಿಕತೆಯ “ರಿಮೋಟ್ ಕಂಟ್ರೋಲ್” ಅಲ್ಲ; ಅದು ಹೆಚ್ಚೆಂದರೆ – “ವಾಲ್ಯೂಮ್ ಕಂಟ್ರೋಲ್” ಮಾತ್ರ ಎಂದು ಹೇಳಬಹುದು. ಭಾರತದ ಒಟ್ಟಾರೆ ಆರ್ಥಿಕ ಸಂರಚನೆಯಲ್ಲಿ ಕೆಲವು ಮೂಲಭೂತ ಬದಲಾವಣೆ, ಸರ್ಕಾರದ ಆದ್ಯತೆಗಳಲ್ಲಿ ಬದಲಾವಣೆ ಆದರೆ ಮಾತ್ರ ಆರ್ಥಿಕ ಬದಲಾವಣೆ ತರಲು ಸಾಧ್ಯ. ಭಾರತದ ಆರ್ಥಿಕ ಸಮಸ್ಯೆಗಳಾದ – ಕಾರ್ಮಿಕ ಮಾರುಕಟ್ಟೆ, ಉದ್ಯೋಗ ಸೃಷ್ಟಿ, MSME ಸ್ಪರ್ಧಾತ್ಮಕತೆ, ಶಿಕ್ಷಣ–ಕೌಶಲ್ಯ ವ್ಯವಸ್ಥೆ, ಉತ್ಪಾದನಾ ವಲಯದ ಪುನರುಜ್ಜೀವನ, ಇವೆಲ್ಲವೂ ಇವತ್ತು ಒಂದು ವ್ಯವಸ್ಥಿತ ನೀತಿ ಸಂರಚನಾ ಬದಲಾವಣೆಯನ್ನು ಕಾಣಬೇಕಿದೆ. ಈ ಸಮಸ್ಯೆಗಳು ವಾರ್ಷಿಕ ಆರ್ಥಿಕ ಘೋಷಣೆಗಳಿಂದ ಸಾಧ್ಯವಿಲ್ಲ, ಇವನ್ನು ಸರಿದೂಗಿಸಲು ಸದೃಢ ಆರ್ಥಿಕ ನೀತಿ ಮತ್ತು ಮೂಲಭೂತ ಸಂರಚನಾತ್ಮಕ ಸುಧಾರಣೆಗಳು ಅಗತ್ಯ.
ಒಟ್ಟಿನಲ್ಲಿ, ಬಜೆಟ್ 2026 ಮೇಲ್ನೋಟಕ್ಕೆ – ಸಂಖ್ಯೆಗಳ ಮಟ್ಟದಲ್ಲಿ ಒಂದಿಷ್ಟು ಹೆಚ್ಚಳವನ್ನು ತೋರಿಸುತ್ತಿರಬಹುದು; ಆದರೆ ಜನಜೀವನದ ಮಟ್ಟದಲ್ಲಿ ಸ್ಪಷ್ಟ ಬದಲಾವಣೆಯ ಭರವಸೆ ನೀಡುವುದರಲ್ಲಿ ವಿಫಲವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಅಭಿವೃದ್ಧಿಯ ಭಾಷೆ ಮತ್ತು ಜನರ ದೈನಂದಿನ ಅನುಭವಗಳ ನಡುವಿನ ಅಂತರವೇ ಇದರ ಮೂಲ ಸಮಸ್ಯೆ. ಒಂದು ಪ್ರಜಾಪ್ರಭುತ್ವದಲ್ಲಿ ಬಜೆಟ್ ಸಮಾಜದ ಆದ್ಯತೆಗಳ ಪ್ರತಿಬಿಂಬವಾಗಬೇಕು. ಉದ್ಯೋಗ, ಸಮಾನತೆ, ಪರಿಸರ ಮತ್ತು ಮಾನವ ಗೌರವವನ್ನು ಆರ್ಥಿಕ ನೀತಿಯ ಕೇಂದ್ರಕ್ಕೆ ತರುವ ತನಕ, “ಬಜೆಟ್ ಬರುತ್ತದೆ, ಹೋಗುತ್ತದೆ” ಎಂಬ ಜನರ ಭಾವನೆ ಬದಲಾಗುವ ಸಾಧ್ಯತೆ ಕಡಿಮೆ. ಅದು ಕೇವಲ ಬಜೆಟ್‌ನ ವಿಫಲತೆಯಲ್ಲ; ಅದು ಪ್ರಜಾಪ್ರಭುತ್ವಕ್ಕೆ ಒಂದು ಎಚ್ಚರಿಕೆಯ ಸಂಕೇತ.




