ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದ ಮೇಲೆ ಇಡೀ ದೇಶದ ಗಮನವಿರುವ ಸಮಯಲ್ಲಿಯೇ 7 ರಾಜ್ಯಗಳ 8 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವೂ ಪ್ರಕಟವಾಗಿದೆ. ಈ ಪೈಕಿ, ಕಾಂಗ್ರೆಸ್ ಮತ್ತು ಬಿಜೆಪಿ ತಲಾ 2 ಸ್ಥಾನಗಳನ್ನು ಗೆದ್ದಿವೆ. ಎಎಪಿ ಮತ್ತು ಕೆಲವು ಪ್ರಾದೇಶಿಕ ಪಕ್ಷಗಳು ಉಳಿದ 4 ಸ್ಥಾನಗಳನ್ನು ಗೆದ್ದಿವೆ.
ಜಮ್ಮು ಮತ್ತು ಕಾಶ್ಮೀರದ 2, ಜಾರ್ಖಂಡ್, ಮಿಝೋರಾಮ್, ಒಡಿಶಾ, ಪಂಜಾಬ್, ರಾಜಸ್ಥಾನ ಹಾಗೂ ತೆಲಂಗಾಣದ ತಲಾ 1 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. ಇಂದು ಫಲಿತಾಂಶ ಪ್ರಕಟವಾಗಿದೆ.
ಜಮ್ಮು ಮತ್ತು ಕಾಶ್ಮೀರದ ಬಡಂಗಾವ್ ಮತ್ತು ನಗ್ರೋಟಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದ್ದು, ಈ ಪೈಕಿ, ನಗ್ರೋಟಾದಲ್ಲಿ ಬಿಜೆಪಿ ಮತ್ತು ಬಡಂಗಾವ್‌ನಲ್ಲಿ ಪಿಡಿಪಿ ಗೆಲುವು ಸಾಧಿಸಿವೆ. ಒಡಿಶಾದ ನೌಪಾಡ ಕ್ಷೇತ್ರವನ್ನು ಬಿಜೆಪಿ ಗೆದ್ದಿದೆ.
ತೆಲಂಗಾಣದ ಜುಬಿಲೀ ಹಿಲ್ಸ್ ಮತ್ತು ರಾಜಸ್ಥಾನದ ಅಂಟಾ ಕ್ಷೇತ್ರಗಳನ್ನು ಕಾಂಗ್ರೆಸ್ ಬಾಚಿಕೊಂಡಿದೆ. ಈ ಪೈಕಿ, ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರದ್ದರೆ, ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆಡಳಿತಾರೂಢ ಬಿಜೆಪಿಯನ್ನು ಮಣಿಸಿ, ಅಂಟಾ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದಿದೆ.
ಪಂಜಾಬ್‌ನ ತಂತರಾನ್‌ನಲ್ಲಿ ಎಎಪಿ, ಜಾರ್ಖಂಡ್‌ನ ಘಸ್ತಿಲಾ ಕ್ಷೇತ್ರದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಹಾಗೂ ಮಿಜೋರಾಮ್‌ನ ಡಂಪಾ ಕ್ಷೇತ್ರದಲ್ಲಿ ‘ಮಿಝೋ ನ್ಯಾಷನಲ್ ಫ್ರಂಟ್’ ಗೆಲುವು ಸಾಧಿಸಿದೆ.




