ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದ ದನೇ ಆರೋಪಿಯಾಗಿರುವ ಮಾಜಿ ಸಚಿವ, ಕೆ ಆರ್ ಪುರಂನ ಬಿಜೆಪಿಯ ಶಾಸಕ ಬೈರತಿ ಬಸವರಾಜ್ ಸಲ್ಲಿಸಿದ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಇದೀಗ ತಲೆಮರೆಸಿಕೊಂಡಿರುವ ಶಾಸಕ ಬೈರತಿ ಅವರಿಗೆ ಬಂಧನದ ಭೀತಿ ಎದುರಾಗಿದೆ.
ಕಿತ್ತಕನೂರು ಜಾಗದ ವಿಚಾರವಾಗಿ ಕೊಲೆ ಮಾಡಲಾಗಿದೆ. ಬಿಳಿ ಬಣ್ಣದ ಸ್ಕಾರ್ಪಿಯೋದಲ್ಲಿ 8 ರಿಂದ 9 ಮಂದಿ ಬಂದು ಮಚ್ಚಿನಿಂದ ಹೊಡೆದು ಕೊಂದಿದ್ದಾರೆ. ಕೊಲೆ ಮಾಡಿರುವ ಆರೋಪಿಗಳು ಹಲವು ಬಾರಿ ಮಗನಿಗೆ ಬೆದರಿಕೆ ಹಾಕಿದ್ದರು. ಮಾಜಿ ಸಚಿವ ಬೈರತಿ ಬಸವರಾಜ್ , ಜಗದೀಶ್ ಮತ್ತು ಇತರರಿಂದ ನನಗೆ ಪ್ರಾಣ ಬೆದರಿಕೆಯಿದೆ ಎಂದು ಮಗ ಹಲವು ಬಾರಿ ಹೇಳಿದ್ದ. ಬಸವರಾಜ್ ಕುಮ್ಮಕ್ಕಿನಿಂದಲೇ ಕೊಲೆ ನಡೆದಿದೆ ಎಂದು ಶಿವಪ್ರಕಾಶ್ ತಾಯಿ ಆರೋಪಿಸಿದ್ದರು. ಕೊಲೆ ಸಂಬಂಧ ಶಿವಪ್ರಕಾಶ್ ತಾಯಿ ವಿಜಯಕ್ಷ್ಮಿ ಭಾರತಿನಗರ ಠಾಣೆಗೆ ದೂರು ನೀಡಿದ್ದರು.
ಇದನ್ನು ಓದಿದ್ದೀರಾ? ರೌಡಿಶೀಟರ್ ಶಿವಪ್ರಕಾಶ್ ಕೊಲೆ ಪ್ರಕರಣ: ಬಿಜೆಪಿ ಶಾಸಕ ಬೈರತಿ ಬಸವರಾಜ್ ಎ5 ಆರೋಪಿ
ಈ ಪ್ರಕರಣ ದಾಖಲಾಗಿ ಕೆಲವು ದಿನಗಳು ಕಳೆಯುತ್ತಿದ್ದಂತೆ ಬಂಧನದ ಭೀತಿಯಲ್ಲಿ ಬೈರತಿ ಬಸವರಾಜ್ ಅವರು ತಲೆಮರೆಸಿಕೊಂಡಿದ್ದಾರೆ. ಈಗಾಗಲೇ ಬೈರತಿ ಅವರ ಬಂಧನಕ್ಕೆ ಸಿಐಡಿ ಅಧಿಕಾರಿಗಳು ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದಾರೆ. ಇದೀಗ ಮಧ್ಯಂತರ ಜಾಮೀನು ಅರ್ಜಿ ವಜಾಗೊಂಡಿರುವ ಕಾರಣದಿಂದಾಗಿ ಶಾಸಕರನ್ನು ಬಂಧಿಸುವ ಸಾಧ್ಯತೆಯಿದೆ.
ಈ ಫೆಬ್ರವರಿ 21ರಂದು ಬಿಕ್ಲು ಶಿವು ಭಾರತಿ ನಗರ ಠಾಣೆಯಲ್ಲಿ ದೂರು ನೀಡಿದ್ದ. ಕಿತ್ತಕನೂರು ಬಳಿ ನಾನು ಜಾಗವನ್ನು ಖರೀದಿಸಿದ್ದೆ. ಈ ಜಾಗವನ್ನು ಮಾರಾಟ ಮಾಡಬೇಕೆಂದು ಜಗದೀಶ್ ಮತ್ತು ಇತರರು ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರು ನೀಡಿದ್ದ. ಈ ಸಂಬಂಧ ಜಗದೀಶ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಬೆದರಿಕೆ ಹಾಕಿದ್ದ ವಿಡಿಯೋ ಸಹಿತ ಬೈರತಿ ಬಸವರಾಜ್, ಜಗದೀಶ್ ಅಲಿಯಾಸ್ ಜಗ್ಗ ಹಾಗೂ ಕಿರಣ್ ಸಹಚರರ ವಿರುದ್ಧ ಶಿವಪ್ರಕಾಶ್ ದೂರು ನೀಡಿದ್ದ ಎನ್ನಲಾಗಿದೆ. ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ದೂರು ನೀಡಿದ ನಾಲ್ಕು ತಿಂಗಳಲ್ಲಿ ಶಿವಪ್ರಕಾಶ್ ಕೊಲೆಯಾಗಿದ್ದು, ಅದೇ ಗ್ಯಾಂಗ್‌ನಿಂದ ಕೊಲೆಯಾಗಿರುವ ಬಗ್ಗೆ ಪೊಲೀಸರ ಶಂಕೆ ವ್ಯಕ್ತಪಡಿಸಿದ್ದಾರೆ.





