- ತಮಿಳು ನಟ ಸಿದ್ದಾರ್ಥ್ ಪತ್ರಿಕಾಗೋಷ್ಠಿ ತಡೆದಿದ್ದ ಕರವೇ ನಡೆಗೆ ಕ್ಷಮೆ ಕೇಳಿದ ಪ್ರಕಾಶ್ ರಾಜ್
- ‘ಬೇರೆ ರಾಜ್ಯಗಳಲ್ಲಿ ನಮ್ಮ ಕಲಾವಿದರಿಗೆ ತೊಂದರೆಯಾದರೆ ಯಾರು ಹೊಣೆ’ ಎಂದ ನೆಟ್ಟಿಗರು
ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ಇಂದು ಕರ್ನಾಟಕ ಬಂದ್ ಆಚರಣೆ ನಡೆಯುತ್ತಿದೆ. ನಿನ್ನೆ ಬೆಂಗಳೂರಿನಲ್ಲಿ ತಮಿಳು ನಟ ಸಿದ್ದಾರ್ಥ್ ಪತ್ರಿಕಾಗೋಷ್ಠಿ ನಡೆಸುತ್ತಿದ್ದುದನ್ನು ತಡೆದ ಕನ್ನಡಪರ ಸಂಘಟನೆಗಳ ನಡೆಯನ್ನು ಬಹುಭಾಷಾ ನಟ ಪ್ರಕಾಶ್ ರಾಜ್ ಖಂಡಿಸಿದ್ದಲ್ಲದೇ, ಕನ್ನಡಿಗರ ಪರವಾಗಿ ಸಿದ್ದಾರ್ಥ್ ಕ್ಷಮೆ ಕೋರಿದ್ದಾರೆ.
ತನ್ನ ಅಭಿನಯದ ಚಿಕ್ಕು ಚಿತ್ರದ ಕನ್ನಡ ಡಬ್ಬಿಂಗ್ ಮಾಡಿರುವ ಹಿನ್ನೆಲೆಯಲ್ಲಿ ಅದರ ಪ್ರಚಾರಕ್ಕೆಂದು ನಟ ಸಿದ್ಧಾರ್ಥ್ ನಿನ್ನೆ (ಸೆ.28) ಬೆಂಗಳೂರಿಗೆ ಬಂದಿದ್ದರು. ನಗರದ ಖಾಸಗಿ ಪ್ರದೇಶವೊಂದರಲ್ಲಿ ಸಿನಿಮಾ ಪ್ರಚಾರದ ನಿಮಿತ್ತ ಸುದ್ದಿಗೋಷ್ಠಿ ನಡೆಸುವಾಗ ಅಲ್ಲಿಗೆ ಮಧ್ಯ ಪ್ರವೇಶ ಮಾಡಿದ್ದ ಕರವೇ ಸ್ವಾಭಿಮಾನಿ ಸೇನೆಯ ಕಾರ್ಯಕರ್ತರು, ನಟ ಸಿದ್ಧಾರ್ಥ್ ಅವರನ್ನು ಬಲವಂತವಾಗಿ ಸುದ್ದಿಗೋಷ್ಠಿಯನ್ನು ನಿಲ್ಲಿಸುವಂತೆ ಸೂಚಿಸಿ, ಹೊರಗಡೆ ಕಳುಹಿಸಿದ್ದ ಘಟನೆ ನಡೆದಿತ್ತು.
#ಕಾವೇರಿನಮ್ಮದು .. ಹೌದು .. ನಮ್ಮದೇ.. ಆದರೆ .. ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲಾರದ ಎಲ್ಲಾ ಅಸಮರ್ಥ ರಾಜಕೀಯ ಪಕ್ಷಗಳನ್ನು .. ನಾಯಕರನ್ನು ಪ್ರಶ್ನಿಸದೆ.. ಕೇಂದ್ರ ಸರ್ಕಾರಕ್ಕೆ ಒತ್ತಡ ತರದ ನಾಲಾಯಕ್ ಸಂಸದರನ್ನು ತರಾಟೆಗೆ ತೆಗೆದುಕೊಳ್ಳದೆ.. ಹೀಗೆ ಅಸಹಾಯಕ ಜನಸಾಮಾನ್ಯರನ್ನು.. ಕಲಾವಿದರನ್ನು ಹಿಂಸಿಸುವುದು ತಪ್ಪು ..ಒಬ್ಬ ಕನ್ನಡಿಗನಾಗಿ… https://t.co/O2E2EW6Pd0
— Prakash Raj (@prakashraaj) September 28, 2023
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ನಡೆಗೆ ಬಹುಭಾಷಾ ನಟ ಪ್ರಕಾಶ್ ರಾಜ್ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ದಶಕಗಳಷ್ಟು ಹಳೆಯದಾದ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿರುವ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಕೇಂದ್ರ ಮಧ್ಯಸ್ಥಿಕೆ ವಹಿಸುವಂತೆ ಒತ್ತಡ ಹಾಕದ ಉಪಯೋಗಕ್ಕೆ ಬಾರದ ಸಂಸದರನ್ನು ಪ್ರಶ್ನಿಸುವ ಬದಲು, ಜನಸಾಮಾನ್ಯ ಹಾಗೂ ಕಲಾವಿದರಿಗೆ ತೊಂದರೆ ಕೊಡುವುದನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡಿಗನಾಗಿ, ಕನ್ನಡಿಗರ ಪರವಾಗಿ ಕ್ಷಮೆ ಇರಲಿ” ಎಂದು ನಟ ಸಿದ್ಧಾರ್ಥ್ ಕ್ಷಮೆಯಾಚಿಸಿದ್ದಾರೆ.
ತಮಿಳು ನಟ ಸಿದ್ಧಾರ್ಥ್ಗೆ ತಟ್ಟಿದ ಕಾವೇರಿ ಹೋರಾಟ
— eedina.com (@eedinanews) September 28, 2023
ತಾನು ನಟಿಸಿದ್ದ ಚಿಕ್ಕು ಸಿನಿಮಾದ ಕನ್ನಡ ಡಬ್ಬಿಂಗ್ ಸಿನಿಮಾ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ತಮಿಳು ನಟ ಸಿದ್ಧಾರ್ಥ್ ಸುದ್ದಿಗೋಷ್ಠಿಗೆ ಅಡ್ಡಿಪಡಿಸಿದ ಕರವೇ ಸ್ವಾಭಿಮಾನಿ ಸೇನೆ. ಸುದ್ದಿಗೋಷ್ಠಿಯಿಂದ ಹೊರನಡೆದ ನಟ. pic.twitter.com/HyuGjZl22V
ಕಾವೇರಿ ವಿಚಾರವಾಗಿ ಕನ್ನಡಪರ ಸಂಘಟನೆಗಳು ಮಾಡಿರುವ ಈ ಕ್ರಮಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದು, ಇದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಯಾರೋ ನೀವು ?? ಎನ್ರೋ ಮಾಡ್ತಾ ಇದಿರಿ ? ಇದ್ರಿಂದ ಮುಂದೆ ಏನೇನು ಆಗುತ್ತೆ ಅನ್ನೋ ಅರಿವು ಇದ್ಯಾ? https://t.co/CD6SHh3pMb
— 👑Che_ಕೃಷ್ಣ🇮🇳💛❤️ (@ChekrishnaCk) September 28, 2023
“ಕನ್ನಡ ಸಿನಿಮಾಗಳು ಇಂದು ಬೇರೆ ಬೇರೆ ರಾಜ್ಯಗಳಲ್ಲಿ ಬಿಡುಗಡೆ ಆಗುತ್ತಿವೆ. ಕೆಜಿಎಫ್, ಕಾಂತಾರ ರೀತಿಯ ಚಿತ್ರಗಳನ್ನು ಬೇರೆ ಭಾಷಿಕರೂ ಗೆಲ್ಲಿಸಿದ್ದಾರೆ. ನಾಳೆ ಇದೇ ರೀತಿ ಬೇರೆ ರಾಜ್ಯಗಳಲ್ಲಿ ನಮ್ಮ ಕಲಾವಿದರಿಗೆ ತೊಂದರೆಯಾದರೆ ಯಾರು ಹೊಣೆ” ಎಂದು ಕೆಲವು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.





