ಇಂಡಿಗೋ ವಿಮಾನಗಳ ಅಡಚಣೆಯ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ವಾಗ್ದಾಳಿ ನಡೆಸಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ಪ್ರಯಾಣವನ್ನು ಸುಗಮಗೊಳಿಸುವ, ಎಲ್ಲರೂ ವಿಮಾನದಲ್ಲಿ ಪ್ರಯಾನಿಸುವಂತೆ ಮಾಡುವ ಭರವಸೆ ನೀಡಿದ್ದರು. ಆದರೆ, ವಿಮಾನಯಾನ ಸಂಸ್ಥೆ ‘ಇಂಡಿಗೋ’ ಬಿಕ್ಕಟ್ಟಿಗೆ ಸಿಲುಕಿದ್ದು, ಸುಮಾರು 1,000 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ. ಈ ಬಿಕ್ಕಟ್ಟಿನ ಹೊಣೆಯನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಮತ್ತು ಮೋದಿ ಹೊರುತ್ತಾರೆಯೇ” ಎಂದು ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು. “ಇಂಡಿಯೋ ಎದುರಿಸುತ್ತಿರುವ ಅವ್ಯವಸ್ಥೆಯು ಅಚಾನಕ್ಕಾಗಿ ಎದುರಾದುದ್ದಲ್ಲ. ಬಿಜೆಪಿ ಸರ್ಕಾರವು ವಿಮಾನಯಾನ ಕ್ಷೇತ್ರದಲ್ಲಿ ಏಕಸ್ವಾಮ್ಯ ತರಲು ಹೇರುತ್ತಿರುವ ನಿರಂತರ ಒತ್ತಡದ ನೇರ ಪರಿಣಾಮವಾಗಿದೆ” ಎಂದು ಆರೋಪಿಸಿದ್ದಾರೆ.
“ಇಂಡಿಗೋ ವಿಮಾನಗಳ ಸಂಚಾರದಲ್ಲಿನ ಅಡಚಣೆಯಿಂದಾಗಿ ಸಾವಿರಾರು ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ. ಇಂಡಿಗೋ ವಿಮಾನಗಳ ಸಂಚಾರ ರದ್ದತಿಯು ದೇಶದ ವಿಮಾನ ಪ್ರಯಾಣವನ್ನು ದುಸ್ಥರಗೊಳಿಸಿದೆ” ಎಂದು ಹೇಳಿದ್ದಾರೆ.
“ಬಿಜೆಪಿ ಸರ್ಕಾರವು ಆರೋಗ್ಯಕರ ಸ್ಪರ್ಧೆಯನ್ನು ಹತ್ತಿಕ್ಕಲು, ತಮಗೆ ಮಿತ್ರರಿಗೆ ಅನುಕೂಲ ಮಾಡಿಕೊಡಲು ಹಾಗೂ ಕಾರ್ಪೊರೇಟ್ ಹಿತಾಸಕ್ತಿಗೆ ಸರಿಹೊಂದುವಂತೆ ಇಡೀ ರಾಷ್ಟ್ರೀಯ ವಿಮಾನಯಾನ ಉದ್ಯಮವನ್ನು ಮರುರೂಪಿಸುತ್ತಿರುವ ಹುನ್ನಾರದ ಭಾಗವಾಗಿದೆ” ಎಂದು ದೂರಿದ್ದಾರೆ.
“ಬಿಜೆಪಿ ಸರ್ಕಾರವು ವಿಮಾನ ಸುರಕ್ಷತೆಯನ್ನು ಅಜಾಗರೂಕತೆಯಿಂದ ನಿರ್ವಹಿಸುತ್ತಿದೆ. 2024ರ ಜನವರಿ 8ರಂದು ವಿಮಾನ ಕರ್ತವ್ಯ ಸಮಯ ಮಿತಿ (ಎಫ್‌ಡಿಟಿಎಲ್) ನಿಯಮಗಳನ್ನು ರೂಪಿಸಿದ ನಂತರ ಮತ್ತು ಜುಲೈ 1ರಂದು ಅವುಗಳನ್ನು ಜಾರಿಗೊಳಿಸಿದ್ದೇ ಬಿಕ್ಕಟ್ಟಿಗೆ ಕಾರಣವೆಂದು ಹೇಳಲಾಗುತ್ತಿದೆ. ಅದೇ ಕಾರಣಕ್ಕೆ, ಈಗ, ಈ ನಿರ್ಣಾಯಕ ಸುರಕ್ಷತಾ ನಿಯಮಗಳನ್ನು ಬಿಜೆಪಿ ಸರ್ಕಾರವು ನಾಚಿಕೆಯಿಲ್ಲದೆ ಹಿಂಪಡೆದುಕೊಂಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇದು ಕೇವಲ ಬೇಜವಾಬ್ದಾರಿಯಲ್ಲ; ಅತಿರೇಕದ ಸಂಗತಿ. ಪೈಲಟ್‌ಗಳ ಆಯಾಸವನ್ನು ತಡೆಗಟ್ಟಲು ರೂಪಿಸಲಾದ ನಿಯಮಗಳನ್ನು ಬಿಜೆಪಿ ಸರ್ಕಾರ ಈಗ ರದ್ದುಗೊಳಿಸಿದೆ. ಆ ಮೂಲಕ, ಪ್ರಯಾಣಿಕರ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸಿದೆ. ಕಾಕ್‌ಪಿಟ್ ಸಿಬ್ಬಂದಿಗಳ ಸುರಕಷತೆಯನ್ನೂ ಅನಿಶ್ಚಿತತೆಗೆ ದೂಡಿದೆ. ಪರಿಸ್ಥಿತಿಯನ್ನು ತಿಳಿಗೊಳಿಸುವ ಬದಲು, ಸರ್ಕಾರವು ಅದನ್ನು ಮತ್ತಷ್ಟು ಜಠಿಲಗೊಳಿಸಿದೆ” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ದ್ವೇಷ ಭಾಷಣ ನಿಷೇಧ ವಿಧೇಯಕ | ಕರ್ನಾಟಕದ ಸೌಹಾರ್ದ ಪರಂಪರೆಗೆ ರಕ್ಷಾ ಕವಚವಾಗಬಲ್ಲದೇ?
“ವಿಮಾನಯಾನ ಕ್ಷೇತ್ರದಲ್ಲಿ ಏಕಸ್ವಾಮ್ಯವನ್ನು ಸೃಷ್ಟಿಸುವ ಬಿಜೆಪಿ ಸರ್ಕಾರದ ಹುನ್ನಾರವು ಬಹಿರಂಗಗೊಂಡಿದೆ. ಒಂದು ಕಾರ್ಪೋರೇಟ್ ಗುಂಪು ಎಲ್ಲ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುಂತೆ ಮಾಡಲಾಗುತ್ತಿದೆ. ಸರ್ಕಾರವು ವಾಯುಯಾನ, ದೂರಸಂಪರ್ಕ, ಬಂದರುಗಳು ಸೇರಿದಂತೆ ಎಲ್ಲ ಮೂಲಸೌಕರ್ಯ ಕ್ಷೇತ್ರಗಳನ್ನು ತಮ್ಮ ಮಿತ್ರರಿಗೆ ಹಸ್ತಾಂತರಿಸಲು ಎದುರು ನೋಡುತ್ತಿದೆ” ಎಂದು ಆರೋಪಿಸಿದ್ದಾರೆ.
“ದೇಶವು ಈಗ ನೋಡುತ್ತಿರುವುದು ಬಿಜೆಪಿ ಸರ್ಕಾರದ ಕ್ರೋನಿ ಕ್ಯಾಪಿಟಲಿಸಂನ ಪೂರ್ಣ ಪ್ರಮಾಣದ ಫಲಿತಾಂಶವಾಗಿದೆ. ಇದು ಅರ್ಹತೆಗಿಂತ ರಾಜಕೀಯ ನಿಷ್ಠೆಯನ್ನು ಪ್ರತಿಫಲಿಸುವ, ಮಾರುಕಟ್ಟೆಗಳ ಮೇಲೆ ಅಧಿಕಾರವನ್ನು ಕೇಂದ್ರೀಕರಿಸುವ ಮಾರದಿಯಾಗಿದೆ. ಸರ್ಕಾರದ ಧೋರಣೆಯು ವಾಯುಯಾನ ಕ್ಷೇತ್ರವನ್ನು ಧ್ವಂಸಗೊಳಿಸಿದೆ. ಪ್ರಯಾಣಿಕರನ್ನು ಅಪಾಯಕ್ಕೆ ಸಿಲುಕಿಸಿದೆ. ಮಾರುಕಟ್ಟೆಗಳನ್ನು ಅಸ್ಥಿರಗೊಳಿಸಿದೆ” ಎಂದು ಸೆಂಥಿಲ್ ದೂರಿದ್ದಾರೆ.
“ಕಳೆದ 11 ವರ್ಷಗಳಲ್ಲಿ ವಿಮಾನಯಾನ ಕ್ಷೇತ್ರವು ಸ್ಪರ್ಧಾತ್ಮಕ, ವೈವಿಧ್ಯಮಯ ವಲಯವನ್ನು ನಿರ್ಮಿಸುವ ಬದಲು ಏಕಸ್ವಾಮ್ಯ ಮತ್ತು ದ್ವಿಪಕ್ಷೀಯತೆಗೆ ಕುಗ್ಗಿಸಿದ್ದು ಯಾಕೆ? ಇತ್ತೀಚೆಗೆ ಜಾರಿಗೆ ತಂದ FDTL ನಿಯಮಗಳನ್ನು ಇಂಡಿಗೋ ಪಾಲಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು DGCA ವಿಫಲವಾಗಿದ್ದು ಯಾಕೆ? ಸರ್ಕಾರ ಎಂದಾದರೂ ಇಂಡಿಗೋಗೆ ಎಚ್ಚರಿಕೆಗಳು, ಅನುಸರಣಾ ಸೂಚನೆಗಳನ್ನು ನೀಡಿದೆಯೇ?” ಎಂದು ಕೇಳಿದ್ದಾರೆ.




