ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ಪರಿಶಿಷ್ಟ ಜಾತಿಗಳು(ಎಸ್‌ಟಿ), ಪರಿಶಿಷ್ಟ ಪಂಗಡಗಳು(ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳಿಗೆ(ಒಬಿಸಿ) ಭರ್ತಿಯಾಗದ ಮೀಸಲಾತಿ ಹುದ್ದೆಗಳ ಕುರಿತು ನಿರ್ಣಾಯಕ ಮಾಹಿತಿಯನ್ನು ಮರೆಮಾಚುವ ಪ್ರಯತ್ನವನ್ನು ಮಾಡುತ್ತಿದೆ ಎಂದು ಕಾಮನ್‌ವೆಲ್ತ್ ಮಾನವ ಹಕ್ಕುಗಳ ಉಪಕ್ರಮದ(CHRI) ನಿರ್ದೇಶಕ ಮತ್ತು ಆರ್‌ಟಿಐ ಕಾರ್ಯಕರ್ತ ವೆಂಕಟೇಶ್ ನಾಯಕ್ ಹೇಳಿದ್ದಾರೆ.
2024ರ ಡಿಸೆಂಬರ್ ತಿಂಗಳಲ್ಲಿ ಎಸ್‌ಸಿ/ಎಸ್‌ಟಿಗಳ ಕಲ್ಯಾಣ ಕುರಿತು ಸಂಸದೀಯ ಸಮಿತಿಯ ವರದಿಯನ್ನು ಆಧರಿಸಿ ನಾಯಕ್ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಹಾಗೆಯೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡದಿರುವುದು, ಸಾರ್ವಜನಿಕ ವಲಯದ ಸಂಸ್ಥೆಗಳು, ಸಚಿವಾಲಯಗಳು ಮತ್ತು ಬ್ಯಾಂಕುಗಳಲ್ಲಿ ಎಸ್‌ಸಿ/ಎಸ್‌ಟಿ ಪ್ರಾತಿನಿಧ್ಯ ಮೊದಲಾದವುಗಳ ವಿಚಾರದಲ್ಲಿ ಸರ್ಕಾರವನ್ನು ಟೀಕಿಸಿದ್ದರು.
ಇದನ್ನು ಓದಿದ್ದೀರಾ? ಪಿಎಂ ಕೇರ್ಸ್ ಹಗರಣ | ಆರ್‌ಟಿಐ ಅರ್ಜಿಗೆ ಉತ್ತರಿಸಲು ಕೇಂದ್ರ ಹಿಂಜರಿಯುವುದೇಕೆ?
ಖಾಲಿ ಹುದ್ದೆಗಳ ಕುರಿತು ದತ್ತಾಂಶ ಮತ್ತು ಮೀಸಲಾತಿ ನೀತಿಗಳನ್ನು ಜಾರಿಗೊಳಿಸಲು ಸಂಪರ್ಕ ಅಧಿಕಾರಿಗಳ ನೇಮಕಾತಿಗಾಗಿ ನಾಯಕ್ ವಿವಿಧ ಇಲಾಖೆಗಳಿಗೆ ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗಳು (ಸಿಪಿಐಒಗಳು) ನಾಯಕ್ ಅವರಿಗೆ ಹಿಂದಿನ ವರ್ಷಗಳ ಅಪ್ರಸ್ತುತ ನೇಮಕಾತಿ ಅಂಕಿಅಂಶಗಳನ್ನು ನೀಡಿದ್ದರು. ಹಾಗೆಯೇ ನಿರ್ದಿಷ್ಟ ಪ್ರಶ್ನೆಗಳಿಗೆ ಸರಿಯಾದ ಉತ್ತರವೂ ನೀಡಿಲ್ಲ ಎಂದು ನಾಯಕ್ ಆರೋಪಿಸಿದ್ದಾರೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಖಾಲಿ ಹುದ್ದೆಗಳ ಕುರಿತು ದತ್ತಾಂಶ ಹೊಂದಿಲ್ಲ ಎಂದು ಹೇಳಿಕೊಂಡಿದೆ. ಹಾಗೆಯೇ ಆರ್‌ಟಿಐ ಕಾಯ್ದೆಯ ಕೆಲವು ನಿಬಂಧನೆಗಳನ್ನು ಉಲ್ಲೇಖಿಸಿ ಈ ಮಾಹಿತಿ ಸಂಗ್ರಹಿಸಲಾಗುವುದಿಲ್ಲ ಎಂದು ಕೇಂದ್ರ ಹೇಳಿದೆ. ಇದನ್ನು ಟೀಕಿಸಿರುವ ಆರ್‌ಟಿಐ ಕಾರ್ಯಕರ್ತ, “ಇದು ರಾಜಕೀಯವಾಗಿ ದತ್ತಾಂಶಗಳನ್ನು ಮರೆಮಾಚುವ ಉದ್ದೇಶಪೂರ್ವಕ ಪ್ರಯತ್ನ ನಡೆದಿದೆ. ಡಿಒಪಿಟಿ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆ” ಎಂದು ಆರೋಪಿಸಿದ್ದಾರೆ.
ಸರ್ಕಾರವು ಹೆಚ್ಚಾಗಿ ಎಸ್‌ಸಿ/ಎಸ್‌ಟಿಗಳು ಮತ್ತು ಒಬಿಸಿಗಳ ನೇಮಕಾತಿ ಸಂಖ್ಯೆಯನ್ನು ತೋರಿಸುತ್ತದೆ. ಆದರೆ ಈ ನೇಮಕಾತಿಗಳು ಪ್ರಧಾನವಾಗಿ ಕೆಳಮಟ್ಟದಲ್ಲಿ ನಡೆದಿದೆ. ನಿರ್ಧಾರ ತೆಗೆದುಕೊಳ್ಳುವಂತಹ ಪ್ರಮುಖ ಹುದ್ದೆಗಳಲ್ಲಿ ಎಸ್‌ಸಿ/ಎಸ್‌ಟಿ ಪ್ರಾತಿನಿಧ್ಯವಿಲ್ಲ ಎಂದು ನಾಯಕ್ ಹೇಳಿದ್ದಾರೆ.
ಇನ್ನು ಈ ಆರೋಪಕ್ಕೆ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಕೂಡಾ ಧ್ವನಿಗೂಡಿಸಿದ್ದಾರೆ. “ವರ್ಷದಿಂದ ವರ್ಷಕ್ಕೆ ಒಬಿಸಿಗಳು, ಎಸ್‌ಸಿಗಳು ಮತ್ತು ಎಸ್‌ಟಿಗಳಿಗೆ ಘೋರ ಅನ್ಯಾಯವಾಗುತ್ತಿದೆ. ವರ್ಷಗಳಿಂದ ಖಾಲಿಯಾಗಿರುವ ಈ ಹುದ್ದೆಗಳನ್ನು ಯಾವುದೇ ನೆಪವಿಲ್ಲದೆ ತಕ್ಷಣವೇ ಭರ್ತಿ ಮಾಡಬೇಕಾಗಿದೆ” ಎಂದಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ, “ಸಮಸ್ಯೆ ಕೇಂದ್ರ ಸರ್ಕಾರದ ಚಿಂತನಾ ಪ್ರಕ್ರಿಯೆಯಲ್ಲಿದೆ. ಅದನ್ನು ಮೊದಲು ಸರಿಪಡಿಸಬೇಕು” ಎಂದಿದ್ದಾರೆ.





